ಹಳೆಯ ಅಟ್ಲಾಸ್ ಸೈಕಲ್, ಹೆಗಲಲ್ಲೊಂದು ಜೋಳಿಗೆ, ಅದರಲ್ಲಿ ಅವರೇ ಬರೆದ ಜೀವನ ಪ್ರೀತಿಯನ್ನು ಸಾರುವ ಕವನ ಸಂಕಲನಗಳ ಸಂಗ್ರಹ. ಸರಳತೆ ಅಂದರೇನು? ಎಂಬವರಿಗೆ ಜೀವಂತ ಉದಾಹರಣೆ ಎಂಬಂತಿದ್ದವರು ಡಾ. ವಿ ಸಿ ಐರಸಂಗ ಅವರು. ಧಾರವಾಡದಲ್ಲೆಲ್ಲಾ ಐರಸಸಂಗ ಕಾಕಾ ಎಂದೇ ಪ್ರಖ್ಯಾತಿ ಪಡೆದಿದ್ದ ಆಶು ಕವಿ ಇಂದು ನಮ್ಮನ್ನಗಲಿದ್ದಾರೆ. ಪರಲೋಕ ಯಾತ್ರೆಗೆ ತೆರಳಿದ್ದಾರೆ ಎಂಬುದೇ ಸಾಹಿತ್ಯಾಸಕ್ತರು ಮತ್ತು ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎನ್ನಬಹುದು.
ಧಾರವಾಡದ ಏಲಕ್ಕಿ ಶೆಟ್ಟರ ಕಾಲೊನಿಯಲ್ಲಿನ ತಮ್ಮ ಮಗಳ ಮನೆಯಲ್ಲಿ ಇವರ ವಾಸ. ಇವರ ಜೀವನಾದರ್ಶಗಳ ಬಗ್ಗೆ ಹೇಳುವುದಾದರೆ, ಸರಳತೆಯ ಜೊತೆಗೆ ಅವರಲ್ಲೊಬ್ಬ ಮೃದು ಮನಸ್ಸಿನ ಮುಗ್ಧನಿದ್ದ ಎಂಬುದನ್ನೂ ನಾವಿಲ್ಲಿ ಗಮನಿಸಬೇಕು. ‘ಭಾವನೆಗಳಿದ್ದವರಿಗೆ ಮಾತ್ರ ಬರವಣಿಗೆ ಸಾಧ್ಯ’ ಎಂಬಂತೆ, ಐರಸಂಗ ಅವರ ಕವಿತೆಗಳೂ ಅವರೊಳಗಿನ ಆ ಭಾವನೆಗಳಿಗೆ ಹಿಡಿದ ಕನ್ನಡಿ ಎಂಬುದು ನಿಸ್ಸಂಶಯ. ಇವರು ಬರೆದ ಕವನಗಳಿಗೆ ಜೀವ ನೀಡಿದ್ದು, ಅವರನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಿದ್ದರ ಕೀರ್ತಿಯ ಹೆಚ್ಚಿನ ಪಾಲು ಆಕಾಶವಾಣಿಗೆ ಸಲ್ಲುತ್ತದೆ. ಅವರ ಸಾಹಿತ್ಯವನ್ನು ಭಾವ ಸಂಗಮದ ಮೂಲಕ ದಾಟಿಸಿ, ಅವರನ್ನು ಹೆಚ್ಚಿನ ಜನರಿಗೆ ಪರಿಚಯಿಸುವ ಕೆಲಸ ಮಾಡಿದ್ದು ಬಾನುಲಿ. ಐರಸಂಗ ಅವರಿಗೆ ಬಾನುಲಿ ಕವಿ ಎಂಬ ಜನಪ್ರಿಯತೆ ಬರವುದಕ್ಕೂ ಇದೇ ಕಾರಣ.
ಇವರು 35 ಕ್ಕೂ ಅಧಿಕ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸುಮಾರು ಆರು ದಶಕಗಳಿಂದ ಇವರ ಕಾವ್ಯ ಕಟ್ಟುವ ಸಾಹಿತ್ಯ ಕೃಷಿ ನಡೆದುಕೊಂಡೇ ಬಂದಿದೆ. ಸುಮಾರು 2500ಕ್ಕೂ ಅಧಿಕ ಕವನಗಳು ಇವರಿಂದ ಹುಟ್ಟು ಪಡೆದಿದೆ ಎಂಬುದೇ ಇವರ ಸಾಹಿತ್ಯಾಸಕ್ತಿಗೆ ಸಾಕ್ಷಿ. ಭಾವಕ್ಕೆ ಜೀವ ತುಂಬುವ ಮೂಲಕ ‘ಕಾವ್ಯಸಂತ’ ರಾಗಿದ್ದ ಇವರು ಮಾರುತಿ ಪ್ರಕಾಶನ ಎಂಬ ಸಂಸ್ಥೆಯನ್ನು ಸಹ ಹುಟ್ಟುಹಾಕಿದ್ದರು. 1947 ರಲ್ಲಿ ಬಂದ ಸುಪ್ರಭಾತ ಇವರ ಮೊದಲ ಕವನ ಸಂಕಲನ. ಇವರ ಪ್ರಕಾರ ಕಾವ್ಯ ಎಂದರೆ, ವ್ಯಾಕರಣಗಳನ್ನು ಒಳಗೊಂಡಿರಬೇಕು. ಷಟ್ಪದಿ, ಛಂದಸ್ಸುಗಳ ಅರಿವಿರದವನು ಉನ್ನತ ಕಾವ್ಯ ರಚನೆ ಮಾಡುವುದು ಅಸಾಧ್ಯ. ಜೊತೆಗೆ ಭಾಷಾ ಜ್ಞಾನ, ಪದ ಕಟ್ಟುವ ಬಗೆ ತಿಳಿದವನಷ್ಟೇ ಸುಂದರ ಕಾವ್ಯಗಳನ್ನು ರಚಿಸುತ್ತಾನೆ. ಅಂತಹ ಕಾವ್ಯಕ್ಕೆ ರಾಗ, ತಾಳ, ಲಯಗಳಾದಿ ಸಂಗೀತ ಬೆರೆತಾಗ ಅದರ ಭಾವ ಸ್ಪುರಣ ಮತ್ತಷ್ಟು ಹೆಚ್ಚುತ್ತದೆ. ಹಿತ ನೀಡುತ್ತದೆ ಎಂಬುದು.
ಇವರ ಕೈಚಳಕ, ಭಾವ ಯಾನದಲ್ಲಿ ಅದೆಷ್ಟೋ ನಾಡಗೀತೆ, ದೇಶಭಕ್ತಿ ಗೀತೆಗಳು, ಪ್ರೀತಿ, ಪ್ರೇಮ, ವಿರಹ, ವಿಡಂಬನೆ, ಮಕ್ಕಳ ಸಾಹಿತ್ಯಗಳು ಸೇರಿದಂತೆ ಇನ್ನೂ ಅನೇಕ ಬಗೆಯ ಕಾವ್ಯಗಳು ಹುಟ್ಟಿವೆ. ಇವರ ಕಾವ್ಯ ಮಾಲಿಕೆಗೆ, ಅನೇಕ ಪ್ರಸಿದ್ಧ ಗಾಯಕರು ತಮ್ಮ ಕಂಠದಾನ ಮಾಡುವ ಮೂಲಕ ಐರಸಂಗ ಅವರನ್ನು ಮನೆ ಮನಗಳಿಗೆ ತಲುಪಿಸಿದ್ದಾರೆ ಎಂದರೆ ತಪ್ಪಾಗಲಾರದು.
ಇವರಿಗೆ ಈ ಸಾಹಿತ್ಯ ಕೃಷಿಯ ಜೊತೆಗೆ ಇದ್ದ ಇನ್ನಿತರ ಹವ್ಯಾಸಗಳ ಬಗ್ಗೆ ಹೇಳುವುದಾದರೆ, ಮಕ್ಕಳಿಗೆ ಉಚಿತ ಪಾಠ, ತಬಲಾ ವಾದನ, ಸಂಗೀತ ಸಂಯೋಜನೆ, ಮಲ್ಲಕಂಬ ಏರುವುದು, ಈಜುವುದು, ಸೈಕಲ್ ಹಾಗೂ ಗಡಿಯಾರ ರಿಪೇರಿ ಮೊದಲಾದವುಗಳನ್ನೂ ಇವರು ಮಾಡುತ್ತಿದ್ದರು. ಹೃದಯ ಶ್ರೀಮಂತಿಕೆಯ ಜೊತೆಗೆ ಕಾವ್ಯ ಶ್ರೀಮಂತಿಕೆ ಮೆರೆದ, ಅಪಾರ ಅಭಿಮಾನಿ ಸಂಪತ್ತು ಗಳಿಸಿದ ಐರಸಂಗರ ಜೀವನವೇ ಒಂದು ‘ಮಾದರಿ ಪುಸ್ತಕ’ ಎನ್ನಬಹುದೇನೋ.
ಇಷ್ಟೆಲ್ಲಾ ಸಾಹಿತ್ಯ ಸೇವೆ ಮಾಡಿರುವ ಇವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಪ್ರಶಸ್ತಿ, ಜನಪ್ರಿಯತೆಯ ಬೆನ್ನು ಹತ್ತಿ ಹೋದವರಲ್ಲ. ತಾವಾಯಿತು, ತಮ್ಮ ಕಾವ್ಯ ಕಾಯಕವಾಯಿತು ಎಂಬಂತಿದ್ದು, ಅಜ್ಞಾತವಾಗಿಯೇ ಉಳಿದಿದ್ದ ಐರಸಂಗರನ್ನು ಗುರುತಿಸಿ 2017 ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಪುರಸ್ಕಾರ ಅವರ ಜೀವನ ಪ್ರೀತಿಗೆ ಸಂದ ಮಹೋನ್ನತ ಗೌರವ ಎನ್ನಬಹುದೇನೋ.
ಆಶು ಕವಿ ಐರಸಂಗ ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿ ಇಂದು ಮುಂಜಾನೆ (13/11/2020, ಶುಕ್ರವಾರ) ತಮ್ಮ 91 ನೇ ಇಳಿ ವಯಸ್ಸಿನಲ್ಲಿ ಜೀವನ ಯಾನ ಮುಗಿಸಿ ತೆರಳಿದ್ದಾರೆ. ಹುಟ್ಟು ಉಚಿತ. ಸಾವು ನಿಶ್ಚಿತ. ಈ ನಡುವೆ ನಾವು ಮಾಡುವ ಕೆಲಸಗಳೇನಿದೆಯೋ ಅವುಗಳೇ ಶಾಶ್ವತ. ಜನರು ನೆನಪಿಟ್ಟುಕೊಳ್ಳುವ ಕವನಗಳ ಮೂಲಕ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಮನೆಮಾಡಿರುವ ಐರಸಂಗ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಭಾವಕ್ಕೆ ಜೀವ ತುಂಬಿದ ಕಾವ್ಯ ಸಂತನಿಗೆ ಅಕ್ಷರ ನಮನವೇ ಕೊನೆಯ ಅಶ್ರುತರ್ಪಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.