ವಿವಾಹ ಎಂಬುದು ಒಂದು ಅಪೂರ್ವ ಅನುಭೂತಿ. ಒಂದು ವಿಶಿಷ್ಟ ಸಂಬಂಧ. ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತದೆ ಎನ್ನುತ್ತಾರೆ. ಹಿರಿಯರ ಆಶೀರ್ವಾದ ಪಡೆದು ಕಿರಿಯರ ಹಾರೈಕೆಗಳೊಂದಿಗೆ ಸಂಪನ್ನವಾಗುತ್ತಿದ್ದ ವಿವಾಹಗಳೀಗ ಆಡಂಬರ ಗೌಜು ಗದ್ದಲಗಳ ಒಂದು ಸಮಾರಂಭವಾಗಿದೆ.
ಬಂಧುಗಳೇ ಬಂದು ವಿವಾಹದ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತ್ತಿದ್ದ ಕಾಲವೊಂದಿತ್ತು. ಅಡುಗೆ, ಆಹಾರ, ಮಂಟಪವನ್ನು ಸಜ್ಜುಗೊಳಿಸುವುದು, ಇತ್ಯಾದಿಗಳಿಂದ ಪ್ರಾರಂಭವಾಗಿ ವಧುವನ್ನು ಅಲಂಕರಿಸುವುದು ಕೂಡಾ ಬಂಧುಗಳು ಹಾಗೂ ಹಿತೈಷಿಗಳೇ ಸರಳ ಸುಂದರವಾಗಿ ನಡೆಸಿಕೊಡುತ್ತಿದ್ದರು. ಪ್ರತಿಯೊಂದು ಶಾಸ್ತ್ರವನ್ನೂ ಸರಳವಾಗಿ, ವಿಧಿವತ್ತಾಗಿ ನಡೆಸುತ್ತಿದ್ದ ಸಮಾರಂಭಗಳು ಎಲ್ಲರ ಮನಸ್ಸಿಗೂ ಹಿತ, ಸಂತೋಷವನ್ನೂ ತರುತ್ತಿತ್ತು.
ಆದರೀಗ ಕಾಲ ಬದಲಾಗಿದೆ. ಶಾಸ್ತ್ರ, ಸಂಪ್ರದಾಯಗಳ ಜಾಗವನ್ನು ಆಡಂಬರ ಮತ್ತು ಪ್ರತಿಷ್ಠೆಗಳು ಆಕ್ರಮಿಸಿಕೊಂಡಿವೆ. ಈಗ ಬಂಧುಗಳೆಲ್ಲ ಎರಡು ದಿನ ಮುಂಚಿತವಾಗಿ ಬಂದು ಜೊತೆಯಲ್ಲಿ ಕುಳಿತು ಭಕ್ಷ್ಯ ಭೋಜ್ಯಗಳನ್ನು ತಯಾರಿಸುವುದಿಲ್ಲ. ಮಂಟಪಗಳನ್ನು ಅಲಂಕರಿಸುವುದಿಲ್ಲ, ಮದುಮಗಳ ಶೃಂಗಾರವೂ ಅಪರಿಚಿತರ್ಯಾರೋ ಮಾಡುತ್ತಾರೆ. ಎಲ್ಲವನ್ನೂ ‘ಕಾಂಟ್ರಾಕ್ಟ್’ ನೀಡುವ ಮೂಲಕ ಮದುವೆಗಳು ನಡೆಯುತ್ತಿವೆ. ಅದಕ್ಕೆ ಪ್ರತಿಯಾಗಿ ನಾವು ಹಣವನ್ನು ನೀಡುವ ಮೂಲಕ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಮದುವೆಗಳು ಹಾಲ್ನಲ್ಲಿ ನಡೆಯುತ್ತವೆ. ಬೆಳಗ್ಗೆ ಒಂದು ಮದುವೆ ಅಲ್ಲಿ ನಡೆದರೆ, ಸಂಜೆ ಇನ್ಯಾರದ್ದೋ ಆರತಕ್ಷತೆ ನಡೆಯುತ್ತದೆ. ಛತ್ರದವರು ಹೇಳಿದ ಸಮಯಕ್ಕೆ ಛತ್ರವನ್ನು ಖಾಲಿಗೊಳಿಸಬೇಕು ಎಂಬುದನ್ನು ತಲೆಯಲ್ಲಿಟ್ಟುಕೊಂಡರಾಯಿತು ಅಷ್ಟೇ. ಇಂತಹ ಅವಸರ, ಗಡಿಬಿಡಿಯ ಈ ಸನ್ನಿವೇಶದಲ್ಲಿ ಊಟ ಮುಗಿಸಿದ ಬಳಿಕ ಇರುವ ಬೆರಳೆಣಿಕೆಯ ಬಂಧುಗಳು ಮದುಮಕ್ಕಳನ್ನು ಅಕ್ಷರಶಃ ಕಳುಹಿಸುವ ಮನಸ್ಥಿತಿಯಲ್ಲಿಯೇ ಇರುತ್ತಾರೆಯೇ ಹೊರತು ಬೀಳ್ಕೊಡುವ ಭಾವನಾತ್ಮಕ ಸನ್ನಿವೇಶ ಎಲ್ಲೂ ಕಾಣಿಸುವುದಿಲ್ಲ.
ಉಡುಪು, ಅಲಂಕಾರ ಮತ್ತು ಆಭರಣಗಳಿಗೆ ಬಹಳಷ್ಟು ಹಣವನ್ನು ವ್ಯಯಿಸಿರುವಾಗ ಆ ದಿನವನ್ನು ಕಾಪಿಡದೆ ಇರುವುದು ಹೇಗೆ? ಅದಕ್ಕಾಗಿಯೇ ಮದುಮಕ್ಕಳಿಗೂ ಪುರೋಹಿತರಿಗೂ ಸ್ಥಳವಿಲ್ಲದಿದ್ದರೂ ಮಂಟಪದಲ್ಲಿ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಗಳಿಗೆ ಮಾತ್ರ ಜಾಗ ನೀಡುತ್ತೇವೆ. ಸಮರಂಭವನ್ನು ಕಣ್ಣುತುಂಬಿಕೊಳ್ಳಬೇಕಾದ ಹಿರಿಯರು ಫೋಟೋಗ್ರಾಫರ್ ಗಳ ಬೆನ್ನನ್ನು ನೋಡಿ ಸುಮ್ಮನಾಗುತ್ತಾರೆ. ಬೇಕಾದಾಗ ಮತ್ತೆ ಕುಳಿತು ವಿಡಿಯೋ ನೋಡಬಹುದಲ್ಲ ಎಂಬ ಭಾವನೆಯಲ್ಲಿ ಕಿರಿಯರು ತಮ್ಮ ತಮ್ಮ ಮೊಬೈಲೆಗಳಲ್ಲೇ ಮೈಮರೆತಿರುತ್ತಾರೆ.
ಈ ಸಮಾರಂಭದ ತೋರಿಕೆಗಳು, ಪ್ರತಿಷ್ಠೆಗಳು ಒಂದೆಡೆಯಾದರೆ, ಪ್ರೀ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ಗಳೆಂಬ ಎರಡು ಕಾರ್ಯಕ್ರಮಗಳು ಇನ್ನೊಂದೆಡೆ. ಬಹಳಷ್ಟು ಜನರಿಗೆ ಶಾರುಖ್ ಖಾನ್, ಕಾಜೋಲ್, ಕರಣ್ ಜೋಹರ್ ಸಿನೆಮಾದಂತೆ ವಿವಾಹವಾಗುವ ಕನಸು. ಆದರೆ ಮದುವೆಯಲ್ಲಿ ಮರ ಸುತ್ತುವುದೆಲ್ಲ ಸಾಧ್ಯವಿಲ್ಲವಷ್ಟೆ? ಅದಕ್ಕಾಗಿಯೇ ಎಂಬಂತೆ ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ಗಳೆಂಬ ಕಾರ್ಯಕ್ರಮವು ಇದೀಗ ಮದುವೆಯ ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ. ಮರ ಸುತ್ತುವುದು, ಒಂದೇ ರೀತಿಯ ಬಟ್ಟೆ ಧರಿಸುವುದು, ತಮಗೆ ಬೇಕಾದ ಭಂಗಿಯಲ್ಲಿ ಭಾವಚಿತ್ರಗಳನ್ನು ತೆಗೆಸಿಕೊಳ್ಳುವುದು, ವಿಡಿಯೋ ಮಾಡುವುದು ಇತ್ಯಾದಿಗಳಿಗೆ ಈ ಕಾರ್ಯಕ್ರಮ ಸೀಮಿತವಾಗಿದ್ದಲ್ಲಿ ಈ ಲೇಖನದ ಅಗತ್ಯತೆ ಇರಲಿಲ್ಲವೇನೋ.
ಇತ್ತೀಚಿಗೆ ಪ್ರೀ ವೆಡ್ಡಿಂಗ್ ಹೆಸರಲ್ಲಿ ಫೋಟೋಶೂಟ್ ನಡೆಸಿದ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅದರಲ್ಲೇನಿದೆ ವಿಶೇಷ ಎಂದುಕೊಳ್ಳಬೇಡಿ. ಸಾಮಾನ್ಯವಾಗಿ ವಿದೇಶಗಳಲ್ಲಿ ನಡೆಸುವ ಹಾಲೋವಿನ್ ಹಬ್ಬಕ್ಕೆ ಮಾಡುವಂತೆ ಭಯಾನಕ ಮೇಕಪ್ ಧರಿಸಿದ ಯುವಕ ಮತ್ತು ಯುವತಿಯರು ಸಾಂಪ್ರದಾಯಕವಾಗಿ ಮದುವೆಗೆ ಧರಿಸುವಂತಹ ವಸ್ತ್ರ ಹಾಗೂ ಆಭರಣಗಳನ್ನು ಧರಿಸಿ ನಡೆಸಿದ ಫೋಟೋಶೂಟ್ ಇದಾಗಿತ್ತು. ಈ ಭಾವಚಿತ್ರಗಳು ಎಷ್ಟೊಂದು ಭೀಭತ್ಸ್ಯವಾಗಿದೆ ಎಂದರೆ ಅವರ ಕುಟುಂಬದ ಹಿರಿಯರು ನೋಡಿದರೆ ಅವರು ಚೇತರಿಸಿಕೊಳ್ಳಲು ಗಂಟೆಗಳು ಸಾಕಾಗದು.
ಮುಖದ ತುಂಬಾ ಗಾಯ, ರಕ್ತ. ಆ ಕೆಟ್ಟ ಕ್ರೂರ ನೋಟಗಳು. ಅಬ್ಬಬ್ಬಾ ಮಕ್ಕಳು ನೋಡಿದರೆ ರಾತ್ರಿ ಖಂಡಿತಾ ನಿದ್ರಿಸಲಾರವು. ಮದುವೆ ಎಂಬ ಸಂಭ್ರಮದ, ಪವಿತ್ರ ಸಮಾರಂಭದ ಹೆಸರಲ್ಲಿ ಇಂತಹ ಭೀಭತ್ಸ್ಯ ಭಾವಚಿತ್ರಗಳಿಂದ ಯಾವ ರೀತಿಯ ಸಂದೇಶ ನೀಡಲು ಯುವ ಪೀಳಿಗೆ ಬಯಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಘಟನೆಯನ್ನು ನೆನಪಿಸಿಕೊಳ್ಳಬಹುದು. ಕೆಲ ದಿನಗಳ ಹಿಂದೆ ಕೇರಳದ ನವ ವಿವಾಹಿತ ಜೋಡಿಯೊಂದು ಪೋಸ್ಟ್ ವೆಡ್ಡಿಂಗ್ ಹೆಸರಿನಲ್ಲಿ ತೆಗೆಸಿಕೊಂಡ ಭಾವಚಿತ್ರಗಳಂತೂ ಸಭ್ಯ ಸಮಾಜದ ಚೌಕಟ್ಟನ್ನು ಮೀರಿತ್ತು. ಇವುಗಳು ತಮ್ಮ ವೈಯಕ್ತಿಕ ಸಂತೋಷಕ್ಕಾಗಿ ನೋಡುಗರಿಗೆ ಸಂಕೋಚವಾಗಬಲ್ಲ ರೀತಿಯ ಭಾವಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅನೇಕರನ್ನು ಮುಜುಗರಕ್ಕೀಡು ಮಾಡಿದ್ದ ಭಾವಚಿತ್ರಗಳಾಗಿತ್ತು. ಸಭ್ಯ ಅಸಭ್ಯ ಎಂದು ವಿಂಗಡಿಸಲು ನೀವ್ಯಾರೆಂಬ ಪ್ರಶ್ನೆ ಉಧ್ಭವಿಸಬಹುದು? ಪರಿಸ್ಥಿತಿ ಹಾಗಿದೆ. ಆದರೂ ಆ ಭಾವಚಿತ್ರಗಳು ಖಂಡಿತವಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಕ್ರಿಯಾಶೀಲತೆ ಎಂಬ ಹೆಸರಲ್ಲಿ ಹರಿಯ ಬಿಡುವಂತಹದ್ದಾಗಿರಲಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ.
ಕೆಲವೇ ದಿನಗಳ ಹಿಂದೆ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಲು ಹೋದ ಭಾವಿ ದಂಪತಿಗಳು ತೆಪ್ಪ ಮಗುಚಿ ನೀರುಪಾಲಾದರು. ಇನ್ನೇನು ನವ ಜೀವನಕ್ಕೆ ಕಾಲಿಡಬೇಕಾಗಿದ್ದ ಜೋಡಿ, ಫೋಟೋ ಶೂಟ್ ಹೆಸರಲ್ಲಿ ಬದುಕು ಮುಗಿಸಿದ್ದರು. ಅಪಾಯಕಾರಿ ಸ್ಥಳಗಳಲ್ಲಿ ಅಪಾಯವನ್ನು ಮೈಗೆಳೆದುಕೊಂಡರೂ ಸರಿ, ಭಾವಚಿತ್ರಗಳು ಉತ್ತಮವಾಗಿ ಬರಬೇಕೆಂಬ ಒತ್ತಡವನ್ನು ನಾವೇಕೆ ಸೃಷ್ಟಿಸಿಕೊಳ್ಳುತ್ತೇವೆ. ಇಂತಹ ಒತ್ತಡವೇ ಈ ಜೋಡಿಯನ್ನು ಸಾವಿನ ಲೋಕಕ್ಕೆ ದೂಡಿದ್ದು ಎನ್ನವುದು ನಿಸ್ಸಂಶಯ. ಯಾವ ಭಾವಚಿತ್ರಗಳನ್ನು ನಾವು ಜೀವನಪರ್ಯಂತ ಜೊತೆಯಲ್ಲಿ ಕುಳಿತು ವೀಕ್ಷಿಸಬೇಕು ಎಂಬ ಕನಸುಗಳಿಂದ ತೆಗೆಸಿಕೊಳ್ಳುತ್ತೇವೆಯೋ ಆ ಭಾವಚಿತ್ರಗಳನ್ನು ನೋಡಲು ನಾವೇ ಇರದಿದ್ದರೆ?. ಯೋಚಿಸಿ. ಆದ್ದರಿಂದ ಕನಸುಗಳು ಬೇಕು. ಆದರೆ ಆ ಕನಸುಗಳೇ ಬದುಕಿಗೆ ಅಪಾಯ ಒಡ್ಡುವಂತಿರಬಾರದು. ನಮಗೆ ಯಾವುದು ಮುಖ್ಯ ಎಂಬುದನ್ನು ನಾವೇ ಅರಿತುಕೊಳ್ಳಬೇಕು. ಸಮಾಜ ಒಂದು ಚೌಕಟ್ಟನ್ನು ರೂಪಿಸಿದೆ, ಒಂದು ಸಂಸ್ಕೃತಿಯನ್ನು ಹೊಂದಿದೆ, ಪ್ರತಿಯೊಂದು ಬಾರಿಯೂ ಚೌಕಟ್ಟನ್ನು ಮೀರುವುದೇ ಆಧುನಿಕತೆಯ ಲಕ್ಷಣ ಎಂದು ಭಾವಿಸುವುದು ಭ್ರಮೆಯಲ್ಲದೆ ಮತ್ತಿನ್ನೇನಲ್ಲ.
ವಿವಾಹಕ್ಕೂ ಮುನ್ನ ಪರಸ್ಪರ ಅರಿಯುವುದು, ಕುಟುಂಬಗಳನ್ನು ಅರಿಯುವುದು, ಪರಸ್ಪರರನ್ನು ಗೌರವಿಸುವುದು, ಸಂಗಾತಿಯ ಕನಸನ್ನು ಅರಿತು ಸಾಧನೆಗೆ ಬೆಂಬಲವಾಗಿ ನಿಲ್ಲುವ ಭಾವನೆಗಳನ್ನು ಮೈಗೂಡಿಸಿಕೊಳ್ಳುವುದು ಜಾಸ್ತಿ ಅವಶ್ಯವಾಗಿದೆ ಹೊರತಾಗಿ ಪ್ರೀ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ಗಳೆಂಬ ವಿಕೃತಿಗಳಲ್ಲ. ಅದೆಷ್ಟೋ ಜೋಡಿಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬಲ್ಲ ಸಭ್ಯ, ಸುಸಂಸ್ಕೃತ ಭಾವಚಿತ್ರಗಳನ್ನು ಪಡೆದಿದ್ದಾರೆ. ಆಧುನಿಕತೆಗೆ ತೆರೆದುಕೊಳ್ಳಬೇಕು ನಿಜ. ಆದರೆ ವಿಕೃತಿಗಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ ನಿಜ,ಆದರೆ ಸ್ವಾತಂತ್ರವು ಸ್ವೇಚ್ಛೆಯಾಗಬಾರದು. ನಮ್ಮ ಸಂತೋಷ ಇತರರಿಗೆ ಮುಜುಗರವನ್ನು ,ನೋವನ್ನೂ ತರಬಾರದು ಎಂಬ ಸಣ್ಣ ಅರಿವು ನಮ್ಮೆಲ್ಲರಲ್ಲೂ ಇರುವುದು ಅಗತ್ಯ. ಸಭ್ಯತೆ- ಅಸಭ್ಯತೆ, ವಿಕೃತಿ – ಸಂಸ್ಕೃತಿಯ ನಡುವೆ ಇರುವ ವ್ಯತ್ಯಾಸವನ್ನು ನಾವೆಲ್ಲಾ ಅರಿತಾಗ ಮಾತ್ರವೇ ಇಂತಹ ಅಭಾಸಗಳಿಗೆ ಕೊನೆ ಸಾಧ್ಯ.
✍️ದೀಪಶ್ರೀ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.