ಚೀನಾದ ಕೊರೋನಾ ಭಾರತದ ಜನಜೀವನ, ಅರ್ಥ ವ್ಯವಸ್ಥೆಯ ಜೊತೆಗೆ ಸಾಂಪ್ರದಾಯಿಕ ಹಬ್ಬ ಹರಿದಿನಗಳ ಮೇಲೆಯೂ ತನ್ನ ಕರಾಳತೆಯ ಪ್ರದರ್ಶನವನ್ನು ಮಾಡಿದೆ. ಕೊರೋನಾ ಪೂರ್ವದಲ್ಲಿ ಮನೆಯವರು, ಅಕ್ಕಪಕ್ಕದ ಮನೆಯವರು, ಊರವರು, ನೆಂಟರಿಷ್ಟರು ಎಂಬಂತೆ ಆಚರಣೆಯಾಗುತ್ತಿದ್ದ ಹಬ್ಬ, ಕೊರೋನಾ ನಡುವೆ ಕೇವಲ ಕುಟುಂಬಕ್ಕೆ, ಮನೆಯೊಳಗೆ ಮಾತ್ರ ಸೀಮಿತ ಎಂಬಂತಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇನ್ನೇನು ಕೆಲವೇ ದಿನಗಳಲ್ಲಿ ದೇಶವನ್ನು ಬೆಳಗುವ ದೀಪಗಳ ಹಬ್ಬ ದೀಪಾವಳಿ ಸಹ ಬರಲಿದೆ. ದೀಪಾವಳಿ ಎಂದರೆ ಸಾಂಪ್ರದಾಯಿಕ ದೀಪಾವಳಿ ಅಂದರೆ ಹಚ್ಚಬೇಕಾದ ದೀಪಗಳಿಂದಲೂ ಹೆಚ್ಚು ನೆನಪಾಗುವುದು ಪಟಾಕಿಗಳು. ಒಂದರ್ಥದಲ್ಲಿ ಪಟಾಕಿಗಳಿಲ್ಲದೆ ದೀಪಾವಳಿ ಆಚರಣೆಯೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ನಮ್ಮಲ್ಲಿ ಕೆಲವರು ಅಂದುಕೊಂಡಿದ್ದಾರೆ ಎಂದರೂ ಅದು ಸುಳ್ಳಲ್ಲ. ನಾವೆಷ್ಟು ದೀಪ ಹಚ್ಚಿ ಅಂಧಕಾರದ ಕತ್ತಲೋಡಿಸುವ ಜ್ಞಾನಿಗಳಾಗುತ್ತೇವೆ ಎಂಬುದಕ್ಕಿಂತ ಹೆಚ್ಚಾಗಿ, ನಾವೆಷ್ಟು ಪಟಾಕಿ ಸಿಡಿಸುತ್ತೇವೆ ಎಂಬುದರ ಮೇಲೆ ನಾವು ದೀಪಾವಳಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದೇವೆ ಎಂದು ಅಳೆಯುವ ಮಾನದಂಡವನ್ನು ಇಟ್ಟುಕೊಂಡಿದ್ದೇವೆ. ಏನೇ ಇರಲಿ, ಈ ಬಾರಿ ಮಾತ್ರ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಕನಸಿಟ್ಟುಕೊಂಡವರಿಗೆ ಸರ್ಕಾರ ಪಟಾಕಿ ನಿಷೇಧ ಮಾಡುವ ಮೂಲಕ ಒಂದು ಶಾಕ್ ನೀಡಿದೆ.
ಪಟಾಕಿ ಇಲ್ಲದೆ ದೀಪಾವಳಿ ಇಲ್ಲವೇ?
ಭಾರತೀಯ ಸಂಸ್ಕೃತಿಯಲ್ಲಿ ಪಟಾಕಿ ಎಂಬ ವಸ್ತುವೊಂದು ಸೃಷ್ಟಿಯಾಗುವುದಕ್ಕೂ ಮೊದಲೇ ಹಬ್ಬಗಳ ಆಚರಣೆ ಇತ್ತು. ದೀಪಾವಳಿಯಲ್ಲಿ ದೀಪಗಳಿಗೇ ಮಹತ್ವವೇ ಹೊರತು ಪಟಾಕಿಗಲ್ಲ. ದೀಪವಾಳಿ ಎಂದರೆ ‘ತಮ ಸೋಮಾ ಜ್ಯೋತಿರ್ಗಮಯ’ ಎಂಬ ಸಂದೇಶವನ್ನು ಸಾರುವ ವಿಚಾರ. ಅಜ್ಞಾನದ ಕತ್ತಲು ಕಳೆದು ಜ್ಞಾನದ ಬೆಳಕು ಪಸರಿಸುವಂತಾಗಲಿ ಎಂಬ ಆಶಯದ ಜೊತೆಗೆ, ಸಂಪ್ರದಾಯ ಬದ್ಧವಾಗಿ ಆಚರಿಸುವ ದೀಪಾವಳಿಗೆ ಯಾವುದೇ ಪಟಾಕಿಯ ಹಂಗಿಲ್ಲ ಎಂಬುದನ್ನು ನಾವು ನೆನಪಿಟ್ಟುಕೊಂಡರೆ ಉತ್ತಮ.
ಪಟಾಕಿ ಎಂಬ ರಾಸಾಯನಿಕ, ಅದರ ಹೊಗೆ, ತ್ಯಾಜ್ಯಗಳು ನಮ್ಮ ಪರಿಸರದ ಮೇಲೂ ದುಷ್ಪರಿಣಾಮ ಬೀರುವುದಲ್ಲದೆ, ಕೊರೋನಾ ಸಂದರ್ಭದಲ್ಲಿ ಸೋಂಕು ವ್ಯಾಪಿಸುವ ತೀವ್ರತೆ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಅಂಶದ ಬಗ್ಗೆ ಈಗಾಗಲೇ ಅನೇಕ ತಜ್ಞರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಪಟಾಕಿಯ ಧೂಮ, ತ್ಯಾಜ್ಯಗಳು ಕೊರೋನಾ ಮತ್ತಷ್ಟು ವ್ಯಾಪಿಸಲು ಕಾರಣವಾಗಬಹುದು ಎಂಬ ಭಯವನ್ನು ಸಹ ಈಗಾಗಲೇ ಹೊರ ಹಾಕಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಉಡಾಫೆಯಿಂದ ಪಟಾಕಿ ಸಿಡಿಸುತ್ತೇವೆ, ಯಾರೇನು ಮಾಡುತ್ತಾರೆ ನೋಡೋಣ ಎಂಬಂತೆ ವರ್ತಿಸಿದರೆ ‘ನಿದ್ದೆ ಬರುವವನಿಗೆ ಹಾಸಿಗೆ ಹಾಸಿಕೊಟ್ಟಂತಾಯಿತು’ ಎಂಬ ಗಾದೆಯಂತೆ, ಕೊರೋನಾ ಮತ್ತಷ್ಟು ತನ್ನ ಕ್ರೂರತನವನ್ನು ಪ್ರದರ್ಶನ ಮಾಡಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂದ ಹಾಗೆ ದೀಪಾವಳಿಯ ಪಟಾಕಿ ಎಂಬುದು ನಮ್ಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ, ಹಬ್ಬದ ನೆಪದಲ್ಲಿ ಮತ್ತೊಂದಷ್ಟು ಖುಷಿ ಪಡುವ ನಿಟ್ಟಿನಲ್ಲಿ ಆಯ್ಕೆ ಮಾಡಿಕೊಂಡ ವಸ್ತುವೇ ಹೊರತು, ಅದಿಲ್ಲದೆ ದೀಪಾವಳಿಯೇ ಇಲ್ಲ ಎಂಬಂತೆ ಯೋಚಿಸುವುದು ತಪ್ಪು. ಪಟಾಕಿಯಲ್ಲಿ ಆರೋಗ್ಯಕ್ಕೆ ಪೂರಕವಾದ ಯಾವುದೇ ಅಂಶಗಳಿಲ್ಲ ಎಂಬುದನ್ನು ನಾವು ಅರ್ಥಮಾಡಿಖೊಳ್ಳಬೇಕು. ಹಾಗೆಯೇ ಪಟಾಕಿಗಳಂತಹ ರಾಸಾಯನಿಕಗಳನ್ನು ಬಳಸಿ ನಮ್ಮ ಆರೋಗ್ಯದ ಮೇಲೆ ನಾವೇ ಆಟವಾಡುತ್ತೇವೆ ಎಂಬುದನ್ನೂ ಮರೆಯದೆ ವರ್ತಿಸಿದಾಗ ಖಂಡಿತವಾಗಿಯೂ ‘ಪಟಾಕಿ ನಿಷೇಧ’ ನಮಗೆ ಆಪ್ತವಾಗಿಯೇ ಗೋಚರಿಸುತ್ತದೆ. ಹಾಗೆಯೇ ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ ಎಂಬ ಅರಿವು ನಮಗಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿಯಾದರೂ ನಾವು ಸರ್ಕಾರದ ಈ ಆದೇಶಕ್ಕೆ ಮನಸ್ಪೂರ್ವಕವಾಗಿ ಸಮ್ಮತಿ ನೀಡುತ್ತೇವೆ. ಒಟ್ಟಾರೆ ಹೇಳುವುದಾದರೆ ಈ ಕ್ರಮವನ್ನು ನಾವು ಪಾಲಿಸಲು ಮುಂದಾಗುತ್ತೇವೆ ಮತ್ತು ಈ ಬಗ್ಗೆ ಇನ್ನೂ ಗೊಂದಲಗಳನ್ನು ಇರಿಸಿಕೊಂಡವರಲ್ಲಿ ಪಟಾಕಿಯಿಂದಾಗಬಹುದಾದ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಸಹ ಮಾಡುತ್ತೇವೆ.
ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ಪಟಾಕಿ ನಿಷೇಧದ ಜೊತೆಗೆ ಹಸಿರು ಪಟಾಕಿ ಹಚ್ಚಬಹುದು ಎಂಬ ವಿಚಾರವನ್ನು ಸರ್ಕಾರ ಆದೇಶದಲ್ಲಿ ತಿಳಿಸಿದೆ. ‘ಹಸಿರು’ ಪಟಾಕಿ ಎಂದರೆ ಪರಿಸರಕ್ಕೆ ಹಾನಿಯುಂಟು ಮಾಡದ ಪಟಾಕಿ ಎಂದರ್ಥ. ಆದರೆ ಪಟಾಕಿ ಎಂದರೆಯೇ ರಾಸಾಯನಿಕ. ಪಟಾಕಿ ಹಸಿರೇ ಇರಲಿ, ಕೆಂಪೇ ಇರಲಿ. ಅದು ರಾಸಾಯನಿಕ ಎಂದಾದ ಬಳಿಕ ಪ್ರಕೃತಿಯ ಮೇಲೆ ಮತ್ತು ಇಂತಹ ಕೊರೋನಾ ಸಂದರ್ಭದಲ್ಲಿ ಮನುಷ್ಯನ ಮೇಲೆಯೂ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದರಲ್ಲಿ ಸಂಶಯವೇ ಬೇಡ. ಹಾಗಾಗಿ ಪಟಾಕಿ ಬಳಕೆ ಬೇಡ ಎಂಬುದೇ ನಮ್ಮ ನಿರ್ಧಾರವಾಗಿರಲಿ.
ಇನ್ನು ಈ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಕೊರೋನಾ ನಮಗೆ ಅವಕಾಶ ನೀಡಿದೆ ಎಂಬುದಾಗಿ ತಿಳಿದುಕೊಳ್ಳೋಣ. ಸ್ವದೇಶೀ ಹಣತೆಗಳು, ಗೋಮಯ ಹಣತೆಗಳನ್ನು ಬಳಸಿ ಮನೆಗಳನ್ನು, ಮನಸ್ಸಿನ ಅಂಧಕಾರ ಕಳೆಯುವ ಜ್ಞಾನದ ಬೆಳಕಲ್ಲಿ ಮನಗಳನ್ನು ಸಿಂಗರಿಸೋಣ. ಮನೆಯವರೇ ಸೇರಿ ಹಬ್ಬದಡುಗೆ, ಉಡುಗೆಯ ಸಂಭ್ರಮದಲ್ಲಿ ‘ಪಟಾಕಿ’ ಎಂಬ ಭೂತದಿಂದ ದೂರವಿದ್ದು, ಪ್ರಕೃತಿಯ ಜೊತೆಗೆ ನಮ್ಮನ್ನೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸೋಣ. ಈ ಬಾರಿ ಸಂಪ್ರದಾಯಬದ್ಧ ದೀಪಾವಳಿ ನಮ್ಮೆಲ್ಲರ ಆಶಯವಾಗಲಿ. ಕೊರೋನಾ ಸಂಕಷ್ಟ ದೂರವಾಗಲಿ ಎಂಬ ಪ್ರಾರ್ಥನೆ ನಮ್ಮದಾಗಲಿ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.