ಅಂತರಂಗದ ಅಂಧಕಾರವನ್ನು ಕಳೆದು ಹೃದಯದಲ್ಲಿ ಜ್ಞಾನದ ಬೆಳಕನ್ನು ತುಂಬುವ ಹಬ್ಬವೇ ದೀಪಾವಳಿ. ದೀಪಾವಳಿಯಂದು ಸಾಲಾಗಿ ದೀಪಗಳನ್ನು ಬೆಳಗಿಸುವುದು ಭಾರತೀಯರ ಸಂಪ್ರದಾಯ. ಇತ್ತೀಚಿನ ದಿನಗಳಲ್ಲಿ ದೀಪಗಳ ಸ್ಥಾನವನ್ನು ಕ್ಯಾಂಡಲ್ಗಳೂ, ಚೈನಾ ನಿರ್ಮಿತ ಲೈಟಿಂಗ್ಗಳೂ ಆಕ್ರಮಿಸುತ್ತಿರುವ ಕುರಿತಾದ ಅರಿವು ನಮ್ಮೆಲ್ಲರಿಗೂ ಇದೆ.
ಆದರೆ ತೀರಾ ಇತ್ತೀಚಿಗಿನ ಬೆಳವಣಿಗೆಗಳಿಂದ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ ಹಾಗೂ ದೇಶದ ಗಡಿಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಚೀನಾ ನಡೆಸಿದ ದುಷ್ಕೃತ್ಯ ದೇಶಪ್ರೇಮಿಗಳನ್ನು ಎಚ್ಚರಿಸಿದೆ ಎಂದರೆ ತಪ್ಪಲ್ಲ. ಆದ್ದರಿಂದಲೇ ಬಹಳಷ್ಟು ಜನರು ಈ ಬಾರಿಯ ದೀಪಾವಳಿಯನ್ನು ವಿಭಿನ್ನವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ.
ನಮ್ಮ ದೇಶದ ಅನೇಕ ಕುಟುಂಬಗಳು ವಂಶ ಪಾರಂಪರಿಕವಾಗಿ ಕುಂಬಾರಿಕೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ, ನಾವು ಅವರಿಂದ ಖರೀದಿಸಿ ಬೆಳಗುವ ಒಂದೊಂದು ಹಣತೆಗಳೂ ಕೇವಲ ನಮ್ಮ ಮನೆಗಳಲ್ಲಿ ಮಾತ್ರವಲ್ಲದೆ ಅವರ ಮನೆಗಳಲ್ಲೂ ಬೆಳಕನ್ನು ತರಬಲ್ಲದು. ಈ ಹಣತೆಗಳು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯುಂಟು ಮಾಡಲಾರವು. ಮಣ್ಣಿನ ಹಣತೆಗಳು, ಪ್ರಕೃತಿಗೆ ಎಂದೂ ಭಾರವಾಗಲಾರದು. ಈ ಬಾರಿ ನೂತನ ಪ್ರಯತ್ನವಾಗಿ ಗೋಮಯದಿಂದ ಹಣತೆಗಳನ್ನು ತಯಾರಿಸಲಾಗುತ್ತಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ ಸಂಪೂರ್ಣವಾಗಿ ಗೋಮಯದಿಂದ ತಯಾರಿಸಲ್ಪಟ್ಟ ದೀಪಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಗೋವನ್ನು ಮಾತೆ ಎಂದು ಪೂಜಿಸುವ ನಮ್ಮ ಸಂಸ್ಕೃತಿಯಲ್ಲಿ ಗೋಮಯಕ್ಕೆ ಅದರದ್ದೇ ಆದ ವಿಶಿಷ್ಟ ಸ್ಥಾನವಿದೆ. ಇದರಿಂದ ತಯಾರಿಸಲ್ಪಟ್ಟ ದೀಪಗಳು ರಾಸಾಯನಿಕ ಮುಕ್ತವಾದ ಕಾರಣದಿಂದಾಗಿ ಪರಿಸರಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವ ಭಯವಿಲ್ಲ. ಬದಲಾಗಿ ಈ ದೀಪಗಳು ಅತೀವ ಸರಳವಾಗಿ ಪ್ರಕೃತಿಯೊಂದಿಗೆ ಒಂದಾಗಿ ಸೇರಿಕೊಳ್ಳುತ್ತದೆ. ರಾಜಸ್ಥಾನದಲ್ಲಿ ನೂರಾರು ಮಹಿಳೆಯರು ಈ ರೀತಿಯ ದೀಪಗಳನ್ನು ತಯಾರಿಸುವ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆಯಿಟ್ಟಿದ್ದಾರೆ. ಮಾತ್ರವಲ್ಲದೆ, ಈ ಮಹಿಳೆಯರು ತಾವು ಪ್ರಧಾನ ಮಂತ್ರಿಗಳ “ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ” ಎಂಬ ಕರೆಯಿಂದ ಪ್ರೇರಿತರಾಗಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ಸ್ಥಳೀಯ ಉತ್ಪನ್ನಗಳೊಂದಿಗೆ ನಮ್ಮ ಸಾಂಪ್ರದಾಯಿಕ ಹಬ್ಬವನ್ನು ಆಚರಿಸುವ ಸಂಭ್ರಮವೇ ಭಿನ್ನ ಎಂಬುದು ಅವರ ಅಭಿಮತವಾಗಿದೆ.
ಈ ಬಾರಿ ದೀಪಾವಳಿಯನ್ನು ನಾವೂ ಭಿನ್ನವಾಗಿ ಆಚರಿಸಬಹುದು. ಕೋವಿಡ್ -19ನ ಕಾರಣ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಸ್ಥಳೀಯ ಉತ್ಪನ್ನಗಳ ತಯಾರಕರು ಹಾಗೂ ಸಣ್ಣ ಮಾರಾಟಗಾರರ ಕುಟುಂಬದ ಮುಖದಲ್ಲಿ ನಗುವರಳಿಸಲು ಸಣ್ಣ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ. ನಮ್ಮಲ್ಲಿ ಮಾರುಕಟ್ಟೆಯನ್ನು ಕಂಡುಕೊಂಡು, ನಮ್ಮ ವಿರುದ್ಧ ಸದಾಕಾಲ ನಂಜನ್ನು ಕಾರುವ ಚೀನಾ ದೇಶಕ್ಕೆ ಪಾಠ ಕಲಿಸಬಹುದು. ದಾರಿ ಬಹಳ ಉದ್ದವಾಗಿರಬಹುದು, ಆದರೆ ಮೊದಲ ಹೆಜ್ಜೆಯನ್ನು ಊರಿದಾಗಲೇ ಪಯಣ ಸಾಧ್ಯ. ಮೊದಲ ಹೆಜ್ಜೆ ನಮ್ಮದೇ ಆಗಲಿ ಅಲ್ಲವೇ?.
ನಾವು ಈ ಬಾರಿ ದೀಪಾವಳಿಯನ್ನು ಸ್ಥಳೀಯ ಉತ್ಪನ್ನಗಳಿಗೆ ದನಿಯಾಗುವ ಮೂಲಕ ಆಚರಿಸುವುದಾಗಿ ಪಣ ತೊಟ್ಟಿದ್ದೇವೆ… ಮತ್ತೆ ನೀವು?
✍️ದೀಪಶ್ರೀ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.