ಅವರ ಬಾಲ್ಯವೇ ಅವರ ಜೀವನದ ದಿಶೆಯನ್ನು ರೂಪಿಸಿತ್ತು. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೆಲ್ಲ ಪಾಠ, ಪುಸ್ತಕಗಳಲ್ಲಿ ಕಳೆದು ಹೋಗಿದ್ದಾಗ ಅವರು ಇತರರಿಗಿಂತ ಭಿನ್ನವಾಗಿ ಕುದುರೆ ಸವಾರಿ, ಕುಸ್ತಿ ಇತ್ಯಾದಿಗಳಲ್ಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಇತರ ಕೌಶಲ ವಿದ್ಯೆಗಳಲ್ಲಿ ಅವರಿಗಿದ್ದ ಆಸಕ್ತಿಯಿಂದ ಅವರು ಪ್ರೌಢಶಾಲೆಯ ಹಂತದಲ್ಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ಸ್ವರಾಜ್ಯ ಅವರ ಕನಸಾಗಿತ್ತು. ಬ್ರಿಟೀಷರ ದಬ್ಬಾಳಿಕೆಯ ಸಂಕಷ್ಟದಿಂದ ರೈತರನ್ನು ಹೊರತರಲು ಸ್ವರಾಜ್ಯದಿಂದ ಮಾತ್ರವೇ ಸಾಧ್ಯ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಅವರನ್ನು ಸ್ವಾತಂತ್ರ ಹೋರಾಟದ ಸಶಸ್ತ್ರ ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಬೇರಾರೂ ಅಲ್ಲ .. “ವಾಸುದೇವ ಬಲವಂತ ಫಡಕೆ”
1845ರ ನವೆಂಬರ್ 4ರಂದು ಮಹಾರಾಷ್ಟ್ರದ ರತ್ನಗಿರಿಯ ಶಿರ್ಧಾನ್ ಗ್ರಾಮದಲ್ಲಿ ಜನಿಸಿದ ವಾಸುದೇವ ಬಲವಂತ ಫಡಕೆ, ಪಠ್ಯಕ್ಕಿಂತಲೂ ಹೆಚ್ಚಾಗಿ ಕುಸ್ತಿ, ಕುದುರೆ ಸವಾರಿಗಳಂತಹ ಸಾಹಸಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಮುಂದೆ ಇದೆ ಆಸಕ್ತಿಯ ಕಾರಣದಿಂದಾಗಿ ಅವರು ತಮ್ಮ ವಿದ್ಯಾಭ್ಯಾಸವನ್ನು ಪ್ರೌಢಶಾಲೆಯಲ್ಲೇ ಮೊಟಕುಗೊಳಿಸಿದರು. ಮುಂದೆ 15 ವರ್ಷಗಳ ಕಾಲ ಪುಣೆಯಲ್ಲಿ ಮಿಲಿಟರಿ ಖಾತೆಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದ ಫಡಕೆಯವರು ಮಹಾದೇವ ಗೋವಿಂದ ರಾನಡೆಯವರ ಉಪನ್ಯಾಸಗಳನ್ನು ಕೇಳಿ ಬ್ರಿಟೀಷರ ದಬ್ಬಾಳಿಕೆಯಿಂದಾಗಿ ಭಾರತೀಯರ ಅರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಅರಿತುಕೊಂಡರು. ಮುಂದೆ ಫಡಕೆಯವರು ಯುವಕರಿಗೆ ಶಿಕ್ಷಣವನ್ನು ನೀಡುವ ಉದ್ದೇಶದಿಂದ ‘ಐಕ್ಯ ವರ್ಧಿನಿ ಸಭಾ ‘ ಎಂಬ ಸಂಸ್ಥೆಯೊಂದನನ್ನು ಪ್ರಾರಂಭಿಸಿದರು..
ಬರೋಡಾದ ಅರಸರನ್ನು ಪದಚ್ಯುತಗೊಳಿಸಿದ ಆಡಳಿತವನ್ನು ಕೈಗೆತ್ತಿಕೊಂಡ ಬಳಿಕ ಬರಗಾಲದಿಂದ ಬಳಲುತ್ತಿದ್ದ ರೈತರ ಕುರಿತಾಗಿ ಬ್ರಿಟೀಷ್ ಸರಕಾರದ ನಿರಾಸಕ್ತ ಧೋರಣೆಯನ್ನು ಗಮನಿಸಿದ್ದ ಫಡಕೆಯವರಲ್ಲಿ ರೈತರ ಎಲ್ಲಾ ಸಮಸ್ಯೆಗಳಿಗೂ ಸ್ವರಾಜ್ಯವೊಂದೇ ಪರಿಹಾರ ಎಂಬ ನಂಬಿಕೆ ಬಲವಾಗಿ ಮೂಡಿತು. ಸ್ವರಾಜ್ಯದ ಕನಸಿಗೆ ಸುಶಿಕ್ಷಿತರ ಬೆಂಬಲವು ಲಭಿಸದಾಗ ಸ್ವತಃ ಕತ್ತಿವರಸೆ, ಶೂಟಿಂಗ್, ಕುದುರೆ ಸವಾರಿ ಇತ್ಯಾದಿ ವಿದ್ಯೆಗಳನ್ನು ಬಲ್ಲವರಾಗಿದ್ದ ಫಡಕೆ ರಾಮೋಶಿ ಜನರೊಂದಿಗೆ ಸೇರಿ ಸೈನ್ಯವೊಂದನ್ನು ಕಟ್ಟಿದರು ಮುಂದೆ ಕೊಲಿಸ್, ಭಿಲ್ ಯೋಧರು ಹಾಗೂ ಧಾಂಗರ್ ಪಂಗಡದ ಜನರೂ ಈ ಸೈನ್ಯದ ಸದಸ್ಯರಾದರು. ತಮ್ಮದೇ ಆದ ಸೈನ್ಯ ಕಟ್ಟಲು ಹಣ ಸಂಗ್ರಹಿಸುವ ಸಲುವಾಗಿ ಸರ್ಕಾರಿ ಖಜಾನೆಗಳಿಂದ ಲೂಟಿಗೈದ ಸಂಪತ್ತನ್ನು ಇವರು ಬರಪೀಡಿತ ಹಳ್ಳಿಗಳಲ್ಲಿ ಜನರಿಗಾಗಿ ವಿನಿಯೋಗಿಸುತ್ತಿದ್ದರು.
ಸೂರ್ಯ ಮುಳುಗದ ಸಾಮ್ರಾಜ್ಯವೆಂಬ ಹೆಮ್ಮೆಯನ್ನು ಹೊತ್ತಿದ್ದ ಬ್ರಿಟೀಷ್ ಸರಕಾರಕ್ಕೆ ವಾಸುದೇವ ಬಲವಂತ ಫಡಕೆ ದುಃಸ್ವಪ್ನವಾಗಿ ಕಾಡಲಾರಂಭಿಸಿದ್ದರು. ವಾಸುದೇವರನ್ನು ಸೆರೆಹಿಡಿಯಬೇಕೆಂಬ ಬಿಟೀಷರ ಪ್ರಯತ್ನವು ಫಲವನ್ನು ನೀಡದ ಕಾರಣ ವಾಸುದೇವರನ್ನು ಬಂಧಿಸಲು ಸಹಕಾರ ನೀಡುವ ವ್ಯಕ್ತಿಗೆ 4000 ರೂಪಾಯಿಗಳ ಬಹುಮಾನವನ್ನೂ ಘೋಷಿಸಲಾಯಿತು. ತಮ್ಮ ಹೋರಾಟವನ್ನು ಬಲಪಡಿಸಿಕೊಳ್ಳುತ್ತಾ ಸಾಗಿದ ವಾಸುದೇವರು ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟದ ಯೋಜನೆಯನ್ನು ರೂಪಿಸಿದರು, ಆದರೆ ದುರ್ಭ್ಯಾಗ್ಯವಶಾತ್ ಈ ಯೋಜನೆಯ ಸುಳಿವನ್ನು ಪಡೆದ ಬ್ರಿಟೀಷರು ದಾಳಿ ನಡೆಸಿ ವಾಸುದೇವರ ಸಹ ಹೋರಾಟಗಾರರನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ವಾಸುದೇವರು ಕಾಲ್ಗಡಿ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದರಾದರೂ, ಇದರ ಕುರಿತಾದ ಸುಳಿವು ಬ್ರಿಟೀಷರಿಗೆ ದೊರಕಿ ಅವರು ಬಂಧನಕ್ಕೊಳಪಡಬೇಕಾಯಿತು. ನ್ಯಾಯಾಲಯದಲ್ಲಿ ವಾಸುದೇವರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಲಾಯಿತು. ಇವರು ಕ್ರಾಂತಿಯನ್ನು ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರಗಳು ಲಭಿಸದಿದ್ದರೂ, ಶಸ್ತ್ರಗಳನ್ನು ಹೊಂದಿದ್ದ ಹಾಗೂ ಜನರನ್ನು ಹೋರಾಟಕ್ಕೆ ಪ್ರೇರೇಪಿಸಿದ ಪ್ರಕರಣಗಳಲ್ಲಿ ಅವರಿಗೆ ಕರಿ ನೀರಿನ ಶಿಕ್ಷೆಯನ್ನು ವಿಧಿಸಲಾಯಿತು. ಮುಂದೆ ಏಡನ್ನಲ್ಲಿ ಕರಿ ನೀರಿನ ಶಿಕ್ಷೆಯನ್ನು ಅನುಭವಿಸುತ್ತಿದ್ದ ವಾಸುದೇವರು ಕಾರಾಗೃಹದಿಂದ ಪಲಾಯನಗೈದರು. ಇದೀಗ ಮತ್ತೊಂದು ಬಾರಿ ಪಲಾಯನಗೈದ ವಾಸುದೇವರ ಸುಳಿವು ನೀಡಿದ ವ್ಯಕ್ತಿಗಾಗಿ 2000 ರೂಪಾಯಿ ಬಹುಮಾನವನ್ನು ಘೋಷಿಸಲಾಯಿತು. ಈ ಬಾರಿ ಹಣದ ಮೇಲಿನ ಆಸೆಯಿಂದ ಅರಬ್ ಹಾಗೂ ಸೊಮಾಲಿಯನ್ನರು ಪಲಾಯನಗೈದ ವಾಸುದೇವರನ್ನು ಮತ್ತೆ ಬ್ರಿಟೀಷರ ಕೈಗೊಪ್ಪಿಸಿದರು. ಈ ಬಾರಿ ಸೆರೆವಾಸಕ್ಕೊಳಪಟ್ಟ ವಾಸುದೇವರು ಉಪವಾಸ ಪ್ರಾರಂಭಿಸಿದರು. ಇದರಿಂದ ಅಸೌಖ್ಯಕ್ಕೊಳಗಾದ ವಾಸುದೇವ ಬಲವಂತ ಫಡಕೆ 1883ರ ಫೆಬ್ರವರಿ 17ರಂದು ಕೊನೆಯುಸಿರೆಳೆದರು.
ತಮಟೆಯನ್ನು ಬಾರಿಸುತ್ತಾ ಭಾರತೀಯರಲ್ಲಿ ಸ್ವದೇಶೀ ಬಳಕೆಯ ಕುರಿತಾಗಿ ಜಾಗೃತಿಯನ್ನು ಮೂಡಿಸಿದ್ದ ಮೊದಲ ಕ್ರಾಂತಿಕಾರಿ ಚೈತನ್ಯವೊಂದು ತಾಯಿ ಭಾರತೀಯ ಸ್ವಾತಂತ್ರಕ್ಕಾಗಿ ಅರ್ಪಿತವಾಯಿತು. ಭಾರತೀಯ ಸ್ವಾತಂತ್ರ ಸಂಗ್ರಾಮ ಇತಿಹಾಸದ ಪುಟದಲ್ಲಿ ತನ್ನ ಹೆಸರನ್ನು ಅಮರವಾಗಿಸಿದ ಚಿರಂಜೀವಿ ವಾಸುದೇವ ಬಲವಂತ ಫಡಕೆ ಅವರ ಜನ್ಮ ಜಯಂತಿಯಂದು ಶತ ಶತ ನಮನಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.