ಏಕತಾ ದಿವಸ್, ‘ಭಾರತದ ಉಕ್ಕಿನ ಮನುಷ್ಯ’ ಎಂದೇ ಖ್ಯಾತನಾಮರಾದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ರಾಷ್ಟ್ರೀಯ ಏಕತೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಲು, ಅವರ ಏಕತಾ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ, ಆ ಮೂಲಕ ಜಾಗೃತ ಸಮಾಜವನ್ನು ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗುತ್ತಿದೆ.
ಅಕ್ಟೋಬರ್ 31, 2014 ರಿಂದ ದೇಶದಲ್ಲಿ ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯ ಪ್ರಯುಕ್ತ ದೇಶದೆಲ್ಲೆಡೆ ಏಕತಾ ದಿನದ ಆಚರಣೆ ನಡೆಯುತ್ತಿದೆ. ಈ ದಿನದಂದು ದೇಶದೆಲ್ಲೆಡೆ ರನ್ ಫಾರ್ ಯುನಿಟಿ ಎಂಬ ಧ್ಯೇಯದ ಜೊತೆಗೆ ಮ್ಯಾರಥಾನ್ ಸಹ ನಡೆಯುತ್ತದೆ. ಒಟ್ಟಿನಲ್ಲಿ ದೇಶಕ್ಕೆ ಏಕತೆಯ ಸಾರವನ್ನು ತಿಳಿಸಿದ ಮಹಾತ್ಮ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಸವಿ ನೆನಪು, ಸಂಸ್ಮರಣೆಯ ಹಿನ್ನೆಲೆಯಲ್ಲಿ ಏಕತಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ಮಹತ್ವಪೂರ್ಣ ವಿಚಾರ.
ಪಟೇಲರು ಜನಿಸಿದ್ದು 1875, ಅಕ್ಟೋಬರ್ 31 ರಂದು. ಸ್ವಾತಂತ್ರ್ಯ, ಖಂಡ ತುಂಡವಾಗಿದ್ದ ಭಾರತವನ್ನು ಒಗ್ಗೂಡಿಸುವಲ್ಲಿ ಪಟೇಲರು ಪಟ್ಟ ಶ್ರಮ, ಅವರ ಇಚ್ಛಾಶಕ್ತಿಯ ಕಾರಣದಿಂದಲೇ ಅವರಿಂದು ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸ್ಥಾನ ಪಡೆದಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಬ್ರಿಟಿಷರ ರೈತ ವಿರೋಧಿ ನೀತಿಗಳನ್ನು ಪ್ರತಿಭಟಿಸಿ, ರೈತರಿಂದಲೇ ಚಳುವಳಿ ಮಾಡಿಸಿ ಪರಕೀಯರಿಗೆ ಭಾರತೀಯರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವುದು ಸುಲಭದ ಮಾತಲ್ಲ ಎಂಬುದನ್ನು ಕೃತಿಯ ಮೂಲಕವೇ ತೋರಿಸಿಕೊಟ್ಟವರು ಪಟೇಲರು. ಆ ಬಳಿಕ ರೈತರಿಂದಲೇ ಸರ್ದಾರ್ (ನಾಯಕ) ಎಂದು ಕರೆಸಿಕೊಂಡ ಕೀರ್ತಿಯೂ ಪಟೇಲರದ್ದು.
ಭಾರತದ ಏಕೀಕರಣಕ್ಕೆ ಹೋರಾಡಿ, ಶ್ರಮ ವಹಿಸಿ ಕಾಯಕದ ಮೂಲಕವೇ ಹೆಸರಾಗಿದ್ದವರು ಸರ್ದಾರ್ ಪಟೇಲ್ ಅವರು. 1917 ರಲ್ಲಿ ಪಟೇಲರು ಬೋರ್ಸಾದ್ನಲ್ಲಿ ಮಾಡಿದ ಭಾಷಣ ಅನೇಕ ಮಂದಿ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿತ್ತು. ನಾಪುರದಲ್ಲಿ 1923 ರಲ್ಲಿ ನಡೆದ ಸತ್ಯಾಗ್ರಹದ ನೇತೃತ್ವ ವಹಿಸಿದ ಇವರು ಆ ಕಾಲದಲ್ಲೇ ಜನಮನ ಗೆದ್ದಿದ್ದರು ಎಂದರೆ ತಪ್ಪಾಗಲಾರದು. ಆ ಬಳಿಕ ಗುಜರಾತ್ನ ಪ್ರದೇಶ (ಆಗಿನ) ಕಾಂಗ್ರೆಸ್ ಸಮಿತಿ ಅಧ್ಯಕ್ಷತೆ, ಬಳಿಕ ಕೇಂದ್ರ ಮಂತ್ರಿ, ಉಪ ಪ್ರಧಾನಿಗಳಾಗಿಯೂ ಸೇವೆ ಸಲ್ಲಿಸಿದವರು ಪಟೇಲರು. ಈ ಎಲ್ಲವೂ ಇವರ ಕಾರ್ಯ ವೈಖರಿ, ಕಠಿಣ ಶ್ರಮ, ಏಕತೆಯ ಆಶಯದ ಕಾರಣದಿಂದಲೇ ಇವರಿಗೆ ಒಲಿದು ಬಂದ ಮಹೋನ್ನತ ಹುದ್ದೆಗಳು ಎಂದರೂ ತಪ್ಪಾಗಲಾರದು.
ಆದರೆ ಇತ್ತೀಚಿನ ಕೆಲ ದಶಕಗಳಲ್ಲಿ ಸರ್ದಾರ್ ಪಟೇಲರಿಗೆ ದೊರೆಯಬೇಕಾದ ನಿಜವಾದ ಗೌರವವನ್ನು ಒದಗಿಸಿ ಕೊಡುವಲ್ಲಿ ಆಗಿನ ಸರ್ಕಾರಗಳು ವಿಫಲವಾಗಿದ್ದವು ಎಂಬುದು ನೋವಿನ ವಿಚಾರ. ಆದರೆ 2014 ರ ಬಳಿಕ ಏಕತೆಯ ಮಾನವತಾವಾದಿ ಸರ್ದಾರ್ ಪಟೇಲ್ರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೈಜಾರ್ಥದ ಗೌರವ ನೀಡಲು ಮುಂದಾಯಿತು. ದೇಶಕ್ಕೆ ಸಮರ್ಪಣಾ ಭಾವದಿಂದ ದುಡಿದ ಉಕ್ಕಿನ ಮನುಷ್ಯನಿಗೆ ಗೌರವ ಸಮರ್ಪಣೆ ಮಾಡುವ ಜೊತೆಗೆ ಅವರ ಸಾಧನೆಗಳನ್ನು ದೇಶ, ವಿದೇಶಗಳಲ್ಲಿ ಹಬ್ಬಿಸುವ, ಅವರ ಕೆಲಸಗಳನ್ನು ತಿಳಿಸುವ ಪ್ರಯತ್ನವನ್ನು ಮೋದಿ ಸರ್ಕಾರ ಮಾಡಿದೆ. ಇದಕ್ಕೆ ಸಾಕ್ಷಿ ಉಕ್ಕಿನ ಮನುಷ್ಯ ಹುಟ್ಟಿದ ಗುಜರಾತ್ನಲ್ಲಿ ಅವರ ಸವಿ ನೆನಪಿಗಾಗಿ ಉಕ್ಕಿನ ಬೃಹತ್ ಸ್ಮಾರಕ ನಿರ್ಮಾಣ ಮಾಡಿ ಅವರಿಗೆ ಗೌರವ ನೀಡಿರುವುದು. ಪಟೇಲರ ಸಾಧನೆಗಳನ್ನು ಆ ಮೂಲಕ ಜೀವಂತವಾಗಿರಿಸುವ ಪ್ರಯತ್ನ ಮಾಡಿರುವುದು.
ಭಾರತದ ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯಲ್ಲಿರುವ ಕೆವಾಡಿಯಾದಲ್ಲಿ ಉಕ್ಕಿನ ಮನುಷ್ಯನ 597 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗಿದೆ. ಉಕ್ಕಿನ ಮನುಷ್ಯನ ಉಕ್ಕಿನ ಪ್ರತಿಮೆಯನ್ನು 2018 ರ 31 ಅಕ್ಟೋಬರ್ನಂದು ಪ್ರಧಾನಿ ನರೇಂದ್ರ ಮೋದಿ ಅವರೇ ಅನಾವರಣ ಮಾಡಿದ್ದಾರೆ. ಈ ಪ್ರತಿಮೆಯು ಸದ್ಯ ದೇಶದ ಬೃಹತ್ ಪ್ರವಾಸಿ ತಾಣವಾಗಿದ್ದು ದಿನಕ್ಕೆ 15 ಸಾವಿರಕ್ಕೂ ಅಧಿಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಪ್ರತಿಮೆ ಸರ್ದಾರ್ ಸರೋವರದ ಅಣೆಕಟ್ಟಿನ ದಕ್ಷಿಣ ಭಾಗಕ್ಕಿದೆ. ಈ ಬಾರಿ ಏಕತಾ ಪ್ರತಿಮೆಯ ಸ್ಥಳವಿರುವ ಸಮೀಪದಲ್ಲಿ ಬೃಹತ್ ಔಷಧ ವನವನ್ನೂ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಜನ್ಮದಿನಾಚರಣೆ ಅಥವಾ ಏಕತಾ ದಿನ ಸರಳವಾಗಿ ಆಚರಣೆಯಾಗುತ್ತಿದೆ. ಪ್ರತಿ ವರ್ಷ ಏಕತಾ ದಿನದಂದು ದೇಶದೆಲ್ಲೆಡೆ ದೊಡ್ಡ ಮಟ್ಟದ ಮ್ಯಾರಥಾನ್ಗಳು ನಡೆಯುತ್ತವೆ. ಆದರೆ ಕೊರೋನಾ ಸೋಂಕಿನ ಭಯದಿಂದ ಸರಳವಾಗಿ ಆಚರಣೆ ನಡೆಸಲಾಗುತ್ತಿದೆ.
ರಾಷ್ಟ್ರದ ಏಕತೆ, ಸಮಗ್ರತೆಗಾಗಿ ದುಡಿದ ಸರ್ದಾರ್ ಪಟೇಲ್ ಅವರು ಡಿಸೆಂಬರ್ 15, 1950 ರಂದು ಜೀವನ ಯಾತ್ರೆ ಮುಗಿಸುತ್ತಾರೆ. ವ್ಯಕ್ತಿ ಇಲ್ಲದಿರಬಹುದು. ಆದರೆ ಅವರ ಆದರ್ಶಗಳು ಸರ್ವಕಾಲಕ್ಕೂ ಜೀವಂತ ಮತ್ತು ಶ್ರೀಮಂತ. ಸರ್ದಾರ್ ವಲ್ಲಭ್ ಭಾಯಿ ಪಟೇಲ್ ನಮ್ಮೊಂದಿಗಿಲ್ಲ. ಆದರೆ ಅವರ ಸಂದೇಶಗಳನ್ನು ಯುವ ಮನಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿದೆ ಎಂಬುದು ಸ್ತುತ್ಯರ್ಹ. ಉಕ್ಕಿನ ಮನುಷ್ಯನ ನೆನಪಲ್ಲಿ ಏಕತಾ ದಿನ ಆಚರಣೆಯಾಗುತ್ತಿದೆ ಎಂಬುದೇ ದೇಶ ಸರ್ದಾರ್ ಪಟೇಲ್ ಅವರನ್ನು ಮನಸ್ಸಿನಲ್ಲಿ ಜೀವಂತವಾಗಿಟ್ಟುಕೊಂಡಿದೆ ಎಂಬುದಕ್ಕೆ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.