ಅಸ್ಸಾಂ ಸರ್ಕಾರ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರವೊಂದು ದೇಶದ ಗಮನವನ್ನು ಸೆಳೆದಿದೆ. ಅದೇನೆಂದರೆ, ಸರ್ಕಾರಿ ಹಣದಿಂದ ನಡೆಯುವ ಮದರಸಗಳನ್ನು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ನಿರ್ಧಾರ. ಕೆಲವರು ಈ ನಿರ್ಧಾರಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ನಿರ್ಧಾರಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇದೆ. ಸರ್ಕಾರದ ನಿರ್ಧಾರವನ್ನು ಟೀಕಿಸುವ ಬೆಂಬಲಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಕೆಲವೊಂದು ವಿಷಯದಲ್ಲಿ ವಿತ್ತಂಡ ವಾದ ಮಂಡಿಸುವುದು ಸೂಕ್ತ ಎನಿಸುವುದಿಲ್ಲ.
ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ, ಹಾಗಾಗಿ ಸಹಜವಾಗಿಯೇ ಅದು ಹಿಂದುತ್ವದ ಪರವಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಕೆಲವೇ ಸಂಖ್ಯೆಯಲ್ಲಿರುವ ಸಂಸ್ಕೃತ ಶಾಲೆಗಳನ್ನು ಮುಚ್ಚುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ, ಆದರೆ ಮದರಸಗಳು ಸಾವಿರಾರು ಇದೆ, ಹೀಗಾಗಿ ಮುಸ್ಲಿಂರನ್ನು ಹತ್ತಿಕ್ಕುವ ನಿರ್ಧಾರ ಇದಾಗಿದೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಆದರೆ ಇದು ನಿಜಕ್ಕೂ ತಪ್ಪು ಅಭಿಪ್ರಾಯವಾಗಿದೆ.
ಕುರಾನ್ ಅನ್ನು ಖಾಸಗಿಯಾಗಿ ಕಲಿಸುವುದಕ್ಕೆ ಅಸ್ಸಾಂ ಸರ್ಕಾರ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಆದರೆ ಮದರಸಗಳಿಗೆ ಸರ್ಕಾರದ ಹಣ ವಿನಿಯೋಗ ಮಾಡುವುದಿಲ್ಲ ಎಂದಷ್ಟೇ ಹೇಳಿದೆ. ಮದರಸ ಮತ್ತು ಸಂಸ್ಕೃತ ಶಾಲೆಗಳನ್ನು ಅದು ಮುಖ್ಯವಾಹಿನಿಯ ಶೈಕ್ಷಣಿಕ ಶಾಲೆಗಳಾಗಿ ಪರಿವರ್ತಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ಧಾರ್ಮಿಕ ಶಿಕ್ಷಣವನ್ನು ಖಾಸಗಿಯಾಗಿ ಕಲಿಸಬೇಕೇ ಹೊರತು ಅದಕ್ಕೆ ಸರಕಾರದ ಅನುದಾನವನ್ನು ನಿರೀಕ್ಷೆ ಮಾಡುವುದು ಸಮಂಜಸವಲ್ಲ. ಭಾರತದಲ್ಲಿ ಅನೇಕ ಧರ್ಮಗಳು ಇವೆ. ಎಲ್ಲಾ ಧರ್ಮಗಳ ಜನರಿಗೆ ಧಾರ್ಮಿಕ ಶಿಕ್ಷಣವನ್ನು ನೀಡಲು ಹಣ ವಿನಿಯೋಗ ಮಾಡಿದರೆ ಮುಖ್ಯವಾಹಿನಿಯ ಶಿಕ್ಷಣಕ್ಕೆ ವಿನಿಯೋಗಿಸಲು ಹಣ ತರುವುದು ಎಲ್ಲಿಂದ? ನಮ್ಮ ದೇಶಕ್ಕೆ ತಂತ್ರಜ್ಞರು, ವೈದ್ಯರು, ಇಂಜಿನಿಯರುಗಳು, ಸೈನಿಕರ ಅಗತ್ಯವಿದೆ. ಇವರನ್ನು ಸೃಷ್ಟಿಸಲು ಸರಕಾರ ಕೋಟಿಗಟ್ಟಲೆ ಹಣವನ್ನು ವಿನಿಯೋಗ ಮಾಡಬೇಕಾದ ಅಗತ್ಯ ಇದೆ. ಹೀಗಿರುವಾಗ ಮದರಸ ನಡೆಸಲು ಹಣ ವಿನಿಯೋಗ ಮಾಡುವುದರಲ್ಲಿ ಅರ್ಥವಿಲ್ಲ. ಮದರಸಗಳಿಂದ ಯಾವುದೇ ಎಂಜಿನಿಯರ್ ಅಥವಾ ಡಾಕ್ಟರ್ ಹುಟ್ಟಿ ಬರುವುದಿಲ್ಲ.
ಇನ್ನು ಮದರಸಾಗಳನ್ನು ಮುಚ್ಚುವ ಅಸ್ಸಾಂ ಸರ್ಕಾರದ ನಿರ್ಧಾರದ ಬಗ್ಗೆ ಕೆಲವರು ವಿತ್ತಂಡ ವಾದ ಮಂಡಿಸಿದ್ದಾರೆ. ಮಹಾಕುಂಭಮೇಳಕ್ಕೆ ಕೂಡ ಸರಕಾರ ಹಣ ವಿನಿಯೋಗ ಮಾಡುವುದನ್ನು ನಿಲ್ಲಿಸಬೇಕು ಎಂದು ವಾದಿಸಿದ್ದಾರೆ. ದೇಶ ಮತ್ತು ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಕುಂಭಮೇಳದಂತಹ ಕಾರ್ಯಕ್ರಮಗಳು ಒಂದು ರಾಜ್ಯದ ಹೆಮ್ಮೆ ಆಗಿರುತ್ತದೆ. ಕರ್ನಾಟಕದ ದಸರಾ ಹಬ್ಬವನ್ನು ಕೂಡ ಇದಕ್ಕೆ ಹೋಲಿಸಬಹುದು. ಇಂತಹ ದೊಡ್ಡ ಸಮಾವೇಶಗಳಿಂದ ರಾಜ್ಯದ ಪ್ರವಾಸೋದ್ಯಮ ಬೆಳೆಯುತ್ತದೆ. ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸಿಗುತ್ತದೆ. ಮೂಲಸೌಕರ್ಯ ವೃದ್ಧಿಯಾಗುತ್ತದೆ. ಆ ರಾಜ್ಯದ ಹೆಸರು ದೇಶ ಮತ್ತು ವಿದೇಶದಲ್ಲಿ ಖ್ಯಾತಿ ಪಡೆಯುತ್ತದೆ. ಸರ್ಕಾರ ಹೂಡಿಕೆ ಮಾಡಿದ ಹಣ ಒಂದಲ್ಲ ಇನ್ನೊಂದು ರೂಪದಲ್ಲಿ ವಾಪಸ್ ಬರುತ್ತದೆ. ಹೀಗಿರುವಾಗ ಮದರಸ ಮತ್ತು ಕುಂಭಮೇಳಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ.
ಇನ್ನು ಧಾರ್ಮಿಕ ಶಿಕ್ಷಣ ಬೇಡವೇ ಎನ್ನುವ ಪ್ರಶ್ನೆ ಬಂದರೆ, ಖಂಡಿತವಾಗಿಯೂ ಬೇಕು. ಒಬ್ಬ ಮನುಷ್ಯನನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಲು ಧಾರ್ಮಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ಧಾರ್ಮಿಕ ಶಿಕ್ಷಣವನ್ನು ನೀಡುವ ಕಾರ್ಯ ಮನೆಯಿಂದ ನಡೆಯಬೇಕು. ದೇವರು ಮತ್ತು ಧರ್ಮಗಳ ಅಪಾರ ಜ್ಞಾನವನ್ನು, ಅದರ ನಿಜವಾದ ಅರ್ಥವನ್ನು ಪಸರಿಸುವ ಕಾರ್ಯವನ್ನು ಧಾರ್ಮಿಕ ಸಂಸ್ಥೆಗಳು ನಡೆಸಬೇಕು. ಇದಕ್ಕಾಗಿ ಸರ್ಕಾರದಿಂದ ಹಣವನ್ನು ಅಪೇಕ್ಷೆ ಮಾಡುವುದು ಸರಿಯಲ್ಲ.
✍️ ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.