ಇತ್ತೀಚೆಗಷ್ಟೇ ಹಳ್ಳಿಯೊಂದರ ಕಥೆಯನ್ನು ಓದಿದೆವಲ್ಲವೆ! ಅದೇ ಹಳ್ಳಿಯ ರಸ್ತೆಯಲ್ಲಿ ಇತ್ತೀಚೆಗೊಂದು ಫಲಕ ಬಿದ್ದಿದೆ. ದನ, ಎಮ್ಮೆ ಇತ್ಯಾದಿ ಯಾವುದೇ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ಹೊರಗೆ ಬಿಡಕೂಡದು. ಅವುಗಳನ್ನು ಹಾಗೆ ಹೊರಗೆ ಬಿಟ್ಟಲ್ಲಿ ಅವು ರಸ್ತೆಗೆ ಬಂದು, ಓಡಾಡುವ ವಾಹನಗಳಿಗೆ ತೊಂದರೆಯುಂಟಾಗುವುದರಿಂದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದು ಆ ಫಲಕದಲ್ಲಿದ್ದ ಒಕ್ಕಣೆಯ ಸಾರ.
ಒಂದು ಕಾಲದಲ್ಲಿ ಮನುಷ್ಯರಿಗೆ ಓಡಾಡಲೆಂದು ಇದ್ದ ಕಾಲುದಾರಿಯು ಜಾನುವಾರುಗಳ ಓಡಾಟದಿಂದಲೂ ಸವೆದು, ಮುಂದೆ ವಾಹನಗಳೂ ಹೋಗುವುದಕ್ಕನುಕೂಲಿಯಾಗಿ ಅಗಲಗೊಂಡು ರಸ್ತೆಯಾಯಿತು. ಇದೀಗ ವಾಹನಗಳ ಮುಖ್ಯತೆಯ ಮುಂದೆ ಮನುಷ್ಯ ರಸ್ತೆಯ ಪಕ್ಕಕ್ಕೆ ಸರಿಯಬೇಕಾಗಿ ಬಂದಿದೆ, ಪ್ರಾಣಿಗಳ ಓಡಾಟಕ್ಕೆ ನಿಷೇಧ ಬಿದ್ದಿದೆ.
ಅಭಿವೃದ್ಧಿಯ ಅಪಸವ್ಯ
ನಲವತ್ತು ವರ್ಷಗಳ ಹಿಂದೆ ನೂರಾರು ಜಾನುವಾರುಗಳು ಓಡಾಡಿಕೊಂಡು ಇರುತ್ತಿದ್ದ ಪ್ರದೇಶವದು. ರಸ್ತೆಯ ಇಕ್ಕೆಲಗಳೂ ಗೋಮಾಳಗಳೇ ಆಗಿದ್ದುವು. ಆಗ ಬೆರಳೆಣಿಕೆಯ ಸೈಕಲ್ಲುಗಳು ಹಾಗೂ ಒಂದೆರಡು ರಿಕ್ಷಾಗಳ ಓಡಾಟಕ್ಕೆ ಆ ರಸ್ತೆ ಸೀಮಿತಗೊಂಡಿತ್ತು. ಈಗ ಬಸ್ ಸಂಚಾರವಿಲ್ಲದಿದ್ದರೂ ಬಸ್ಸಿಗೆ ಸಂಪರ್ಕ ಕಲ್ಪಿಸುವ ಹತ್ತಾರು ರಿಕ್ಷಾಗಳು ಓಡಾಡುತ್ತವೆ. ಹಲವರ ಮನೆಗೆ ಕಾರುಗಳೂ ಬಂದಿವೆ. ಬೈಕುಗಳಿಲ್ಲದ ಮನೆಯೇ ಇಲ್ಲವಾಗಿದೆ. ಹಳ್ಳಿ ಇಷ್ಟು ಅಭಿವೃದ್ಧಿ ಸಾಧಿಸಿದಾಗ ಮೇಲಿನಂಥ ಫಲಕ ಬೀಳಬೇಕಾದುದೇ. ಅಭಿವೃದ್ಧಿಯ ಹೆಮ್ಮೆಯ ಮಾನದಂಡದಂತೆ ಈ ಫಲಕ ಕೆಲಸ ಮಾಡುತ್ತಿದೆ. ಮತ್ತು ಆಧುನಿಕ ಅಭಿವೃದ್ಧಿಯ ಒಂದು ಮುಖದ ವ್ಯಾಖ್ಯಾನದಂತೆಯೂ ಅದು ತೋರುತ್ತಿದೆ.
ಯಾಂತ್ರೀಕರಣವು ಆಧುನಿಕ ಅಭಿವೃದ್ಧಿಯ ಒಂದು ಸ್ವರೂಪ ತಾನೆ? ಯಂತ್ರೀಕರಣವೆಂದರೆ ಮನುಷ್ಯನೂ ಪ್ರಾಣಿಗಳೂ ಮಾಡುವ ಕೆಲಸವನ್ನು ಯಂತ್ರ ಮಾಡುವುದು. ಮನುಷ್ಯನ ಸ್ಥಿತಿಯನ್ನು ಮೇಲಿರಿಸುವುದಕ್ಕಾಗಿ ಯಂತ್ರದ ಕೈಯಲ್ಲಿ ಮನುಷ್ಯನೇ ಮಾಡಿಸುವುದು ಎಂದು ಬೇಕಿದ್ದರೆ ಹೇಳಬಹುದು.
ಭಾಷೆ ವ್ಯತ್ಯಾಸವಾದರೂ ಸ್ಥಿತಿ ವ್ಯತ್ಯಾಸವಾದೀತೆ? ಯಂತ್ರವೇ ಮನುಷ್ಯನ ಸೇವಕ, ಮನುಷ್ಯನು ಯಂತ್ರದ್ದಲ್ಲ ಎಂದೇ ಯಂತ್ರೀಕರಣದ ತರುವಾಯದಲ್ಲಿ ಕೇಳಿಬರುತ್ತಿದ್ದ ಮಾತು. ನಿಜಕ್ಕಾದರೆ ಮನುಷ್ಯ ಯಂತ್ರದ ಸೇವಕನಾಗುತ್ತಿದ್ದಾನೆ ಎಂಬ ಭಯವೇ ಈ ಮಾತು ಹುಟ್ಟುವುದಕ್ಕೆ ಕಾರಣವಾಗಿತ್ತು.
ತತ್ಕಾಲಕ್ಕೆ ಯಂತ್ರವೇ ಸೇವಕನಾಗಿದ್ದೀತು. ಸದಾಕಾಲಕ್ಕೆ ಇದೇ ಸ್ಥಾಯಿಯಾಗಿದ್ದೀತೆಂದು ಹೇಳಲು ಮನುಷ್ಯಪ್ರವೃತ್ತಿ ಬಿಡಬೇಕಲ್ಲ!
ಸೇವಕನೋ ಮಾಲಕನೋ!
ಯಂತ್ರವು ಸುಖಾಪೇಕ್ಷಿಯೂ ಅಲ್ಲ, ಪ್ರತಿಷ್ಠಾಪೇಕ್ಷಿಯೂ ಅಲ್ಲ. ಸೇವಕತ್ವ- ಮಾಲಕತ್ವಗಳ ಅಂತರವೂ ಅದಕ್ಕಿಲ್ಲ. ಆದರೆ ಇದೆಲ್ಲವೂ ಮನುಷ್ಯನಿಗೆ ಇದ್ದೇ ಇದೆಯಲ್ಲ. ಮನುಷ್ಯಸೇವೆಗೆ ಬಿದ್ದ ಯಂತ್ರವೇ ಮನುಷ್ಯನ ಸುಖಕ್ಕೂ ಪ್ರತಿಷ್ಠೆಗೂ ಸಾಧನವಾದಾಗ; ಹಾಗೆ ಆದ ಬಳಿಕ ಮನುಷ್ಯನ ಹಿಂದೆ ಯಂತ್ರ ಇರುವುದು ಬದಲಾಗಿ ಯಂತ್ರದ ಹಿಂದೆ ಮನುಷ್ಯ ಇರುವುದಾಗುತ್ತದೆ. ಈ ಸ್ಥಾನಾಂತರವು ಮನುಷ್ಯನನ್ನು ಸೇವಕನನ್ನಾಗಿಯೂ ಯಂತ್ರವನ್ನು ಮಾಲಕನನ್ನಾಗಿಯೂ ರೂಪಿಸಿರುತ್ತದೆ.
ಈ ಸ್ಥಿತಿಯಲ್ಲಿ, ಯಂತ್ರಕ್ಕಂತೂ ತಾನು ಮಾಲಕನಾಗಿರುವೆನೆಂದು ಗೊತ್ತಿರುವುದಿಲ್ಲ. ಅಚ್ಚರಿ ಎಂದರೆ ಮನುಷ್ಯನಿಗೆ ತಾನು ಸೇವಕನಾಗಿರುವೆನೆಂದೂ ಗೊತ್ತಿರುವುದಿಲ್ಲ. ತಾನು ಸೇವಕನಾಗಿರುವೆನೆಂದು, ಹಾಗೆ ಆಗಬಾರದಿತ್ತೆಂದು ಗೊತ್ತಾಗದೆ ಮನುಷ್ಯ ಬದಲಾದಾನಾದರೂ ಹೇಗೆ? ತಾನು ಸೇವಕನಾಗಬೇಕಾದೀತೆಂಬ ಎಚ್ಚರವಿದ್ದಾಗ ಯಂತ್ರವನ್ನು ಸೇವಕಸ್ಥಾನದಲ್ಲೇ ಇಟ್ಟುಕೊಳ್ಳಬಲ್ಲ ಸಾಮರ್ಥ್ಯವೂ ಮನುಷ್ಯನಿಗೊದಗೀತು. ಆಗ, ಯಂತ್ರವು ಕೈಕೊಟ್ಟಲ್ಲಿ ತನ್ನ ಪುರುಷಾರ್ಥ ಉಪಯೋಗಕ್ಕೆ ಬಂದೀತು. ತಾನೆಷ್ಟು ಸೇವಕ ಅಥವಾ ಮಾಲಕ ಎಂಬುದು ಒಂದು ನೆಲೆಯಲ್ಲಿ ಒರೆಗೆ ಹಚ್ಚಲ್ಪಡುವುದು ಯಂತ್ರ ಕೈಕೊಟ್ಟಾಗ ತಾನೆ?
ಮಾಲಕನಾಗುವ ಪರಿ
ಪತ್ರಿಕಾ ಸಂಪಾದನೆಯ ಹೊಣೆ ಇದ್ದಾಗ ಪಂ. ದೀನದಯಾಳ ಉಪಾಧ್ಯಾಯರ ಸಾಮರ್ಥ್ಯ ಎಷ್ಟೋ ಬಾರಿ ಹೀಗೆ ಒರೆಗೆ ಹಚ್ಚಲ್ಪಟ್ಟಿದ್ದಿದೆ. ಅವರು, ಸಂಪಾದಕರಾಗಿ ಬರಿಯ ಬರೆಯುವ ಕೆಲಸವನ್ನಷ್ಟೇ ಮಾಡುತ್ತಿದ್ದುದಲ್ಲ; ಮುದ್ರಿಸುವುದರಿಂದ ತೊಡಗಿ ಪತ್ರಿಕೆಯನ್ನು ಕಟ್ಟುಗಳನ್ನಾಗಿ ಅಂಚೆ ಕಚೇರಿಗೆ ಮುಟ್ಟಿಸುವ ತನಕದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು.
ಒಮ್ಮೆಯಂತೂ ತುರ್ತಾಗಿ ಮುದ್ರಣಗೊಳ್ಳಬೇಕಾದ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಹಿಂದೆಮುಂದೆ ನೋಡದೆ ದೀನದಯಾಳ್ಜೀ ಸ್ವತಃ ತಾನೇ ಮುದ್ರಣಯಂತ್ರವನ್ನು ಕೈಯಿಂದ ತಿರುಗಿಸುತ್ತ ಕ್ಲುಪ್ತ ಸಮಯದಲ್ಲಿ ಪತ್ರಿಕೆಯನ್ನು ಹೊರತಂದಿದ್ದರು. ಸೇವಕನಾದ ಯಂತ್ರದ ಮಾಲಕನಾಗುವುದೆಂದರೆ ಇದೇ ತಾನೆ? ವಿದ್ಯುತ್ ಬರುವ ತನಕ ಕಾಯುವುದಲ್ಲವಲ್ಲ! ಉಪಯೋಗಿಸಬೇಕಾದ ಸಾಧನವೊಂದು ಅನುಕೂಲವೆನಿಸಿದಾಗ ಅದರ ಬಳಕೆ ಹೆಚ್ಚುತ್ತ ಹೆಚ್ಚುತ್ತ ಹೋಗಿ ಕ್ರಮೇಣ ಅನಿವಾರ್ಯವಾಗುತ್ತದೆ. ಅನಿವಾರ್ಯವಾದಾಗ ಸೇವಕ – ಮಾಲಿಕನ ಸ್ಥಾನಪಲ್ಲಟ ನಡೆದುಹೋಗುತ್ತದೆ.
ದೂರಗೊಂಡ ಸಂಬಂಧ
ಈಗೊಮ್ಮೆ ಫಲಕ ಪ್ರಕರಣಕ್ಕೆ ಹಿಂದಿರುಗೋಣ.
ಹಿಂದೆ ಸಾಕುಪ್ರಾಣಿಗಳು ಮನೆಯ ಒಂದು ಅವಿಭಾಜ್ಯ ಅಂಗವಾಗಿ, ಮನೆಯ ಸದಸ್ಯರಂತೆಯೇ ಸ್ಥಾನ ಪಡೆದಿದ್ದವು. ಸಾಕುಪ್ರಾಣಿಯೊಂದು ಕರುವೋ ಮರಿಯೋ ಹಾಕಿದರೆ ಮನೆಮಂದಿಗೆಲ್ಲ ಅದು ಸಂಭ್ರಮದ ಕ್ಷಣ. ಸತ್ತು ಹೋದರೆ ಅಷ್ಟೇ ದುಃಖದ ಕ್ಷಣವೂ ಕೂಡಾ. ಹಿಂದೆ ಪತ್ರಗಳನ್ನು ಬರೆಯುತ್ತಿದ್ದಾಗ, ದೂರವಾಣಿ ಬಂದ ಹೊಸತರಲ್ಲಿ ಪರಸ್ಪರ ಮಾತಾಡುತ್ತಿದ್ದಾಗ ಎಲ್ಲರ ಯೋಗಕ್ಷೇಮದ ಜತೆಗೆ ದನ, ಕರುಗಳನ್ನೂ ವಿಚಾರಿಸಲಾಗುತ್ತಿತ್ತು.
ಮನೆಮಂದಿಯಷ್ಟೇ ಮನೆಯ ಸದಸ್ಯರಲ್ಲ, ಸಾಕುಪ್ರಾಣಿಗಳೂ ಕೂಡ. ಪ್ರಾಣಿಗಳು ಕೇವಲ ನಮ್ಮ ಸೇವೆ ಮಾಡಲೆಂದು ಇರುವ ಪರಿಕರಗಳಲ್ಲ. ಮನೆಯ ಸದಸ್ಯರಾಗಿ ಅವುಗಳಿಗೊಂದು ಅಸ್ತಿತ್ವವಿದೆ. ಯಂತ್ರದಂತೆ ಅವು ಕೆಲಸಮಾಡುತ್ತವೇನೋ ಹೌದು. ಆದರವು ಯಂತ್ರಗಳಲ್ಲ. ಮನೆಯ ಸದಸ್ಯರೊಂದಿಗೆ ಅವುಗಳದೊಂದು ಸಂಬಂಧ ಏರ್ಪಟ್ಟಿರುತ್ತದೆ. ಹಾಗೇ ಅವುಗಳ ಜತೆಗೆ ಮನೆಮಂದಿಯದು ಕೂಡ.
ಈಗ ಯಂತ್ರಗಳು ಪ್ರಾಣಿಗಳ ಕೆಲಸವನ್ನೂ ಮನುಷ್ಯನ ಕೆಲಸವನ್ನೂ ಕಸಿದುಕೊಂಡಿವೆ; ಅಷ್ಟೇ ಅಲ್ಲ, ಮನುಷ್ಯ – ಪ್ರಾಣಿ ಸಂಬಂಧವನ್ನೂ ಕಸಿದುಕೊಂಡಿವೆ.
ನಿಶ್ಚಲಗೊಳಿಸಬಲ್ಲ ಜಡ
ಕೆಲಸವನ್ನು ಕಸಿದುಕೊಂಡ ಯಂತ್ರಗಳು ಮನುಷ್ಯನ ಕೈಗಳಿಗೆ ಬಿಡುವು ನೀಡಿ ಸುಖದ ರುಚಿ ತೋರಿಸಿಕೊಟ್ಟು, ಕೆಲಸವಿಲ್ಲದೆ ಪರಿಶ್ರಮವಿಲ್ಲದೆ ಸುಖ ಪಡುವ ಡೋಂಗಿ ಸುಖದ ರುಚಿ ತೋರಿಸಿಕೊಟ್ಟು ಆತನನ್ನು ಸುಖಾಪೇಕ್ಷಿಯನ್ನಷ್ಟೇ ಆಗಿಸಿ ಆ ಮೂಲಕ ತಮ್ಮ ಸೇವಕನನ್ನಾಗಿಸಿದವು; ತಾವು ಮಾಲಕರಾದವು. ಈ ವಾಕ್ಯಗಳನ್ನು ಕರ್ಮಣಿ ಪ್ರಯೋಗದಲ್ಲೇ ಹೇಳಬೇಕಿತ್ತು. ಏಕೆಂದರೆ ಕರ್ತೃವಾಗಿರುವುದು ಯಂತ್ರಗಳಲ್ಲ, ಮನುಷ್ಯನೇ. ಜಡಯಂತ್ರಗಳು ಕರ್ತೃಗಳಾಗಲು ಸಾಧ್ಯವೂ ಇಲ್ಲವೆನ್ನಿ.
ಸೇವಕನಾದ ಮೇಲೆ, ಅದೂ ಯಂತ್ರಗಳ ಸೇವಕನಾದ ಮೇಲೆ ಆತನಿಗೆ ನಿರ್ಣಯಸಾಮರ್ಥ್ಯ ಬಂದೀತಾದರು ಹೇಗೆ? ಅದೂ ಯಂತ್ರಗಳ ವಿರುದ್ಧವೇ ನಿರ್ಣಯವನ್ನು ಕೊಟ್ಟಾನಾದರೂ ಹೇಗೆ?
ಯಂತ್ರಗಳು ಸಾಕುಪ್ರಾಣಿಗಳ ಕೆಲಸವನ್ನಷ್ಟೇ ಕಸಿದುಕೊಳ್ಳಲಿಲ್ಲ. ಅವುಗಳ ಅಸ್ತಿತ್ವವನ್ನೇ ಕಸಿದುಕೊಂಡವು. ಗೋಮಾಳವೆಂಬ, ತಮ್ಮ ಹಕ್ಕಿನದೇ ಎಂದೇ ಹೇಳಬಹುದಾದ, ತಮ್ಮ ಮೇವಿನ ಜಾಗ ತಮ್ಮದಲ್ಲವಾಗಿದೆ ಜಾನುವಾರುಗಳಿಗೆ. ಜತೆಗೆ ಆ ಜಾಗದತ್ತ ಸುಳಿದಾಡಲೂ ಈಗ ನಿಷೇಧ.
ಹಿಂದೆ ರಸ್ತೆ ಎಲ್ಲರದ್ದೂ ಆಗಿತ್ತು. ಜಾನುವಾರುಗಳದ್ದೂ ಕೂಡಾ. ಈಗ ಅವುಗಳ ಪ್ರವೇಶಕ್ಕೆ ನಿರ್ಬಂಧ ಹೇರುವುದರ ಮೂಲಕ, ಎಲ್ಲರದ್ದೂ ಅಲ್ಲ, ಜಾನುವಾರುಗಳದ್ದಂತೂ ಖಂಡಿತಾ ಅಲ್ಲ ಎಂದು ಸಾರಿದಂತಾಗಿದೆ. ಯಂತ್ರಕ್ಕೆ ಜಾನುವಾರೇನು, ಮನುಷ್ಯನೇನು! ಇಂದು ಜಾನುವಾರು, ನಾಳೆ ಮನುಷ್ಯ.
ಸರ್ವಚೇತನ ತತ್ತ್ವ
ಸುಮಾರು ಮೂವತ್ತು ವರ್ಷಗಳ ಹಿಂದೆ ಕೊಲ್ಕತ್ತದಲ್ಲಿ ನಡೆದ ಘಟನೆಯೊಂದು ಸುದ್ದಿಯಾಗಿತ್ತು. ಅದೇನೆಂದರೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳು ಯಾವುದೇ ಸಂಕೇತವಿಲ್ಲದೆ ಒಮ್ಮೆಲೇ ನಿಂತವು. ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ವಿದೇಶೀಯರು ಇದು ಯಾಕೆಂದು ಕೇಳಿದಾಗ ಮುಂದಿನ ವಾಹನದ ಚಾಲಕ ‘ಮುಂದೆ ನಾಯಿ ಮರಿಗಳು ರಸ್ತೆ ದಾಟುತ್ತಿವೆ’ ಎಂದ. ಅದಕ್ಕೆ ವಾಹನಗಳನ್ನೇಕೆ ನಿಲ್ಲಿಸಬೇಕು ಎಂಬುದು ಆ ವಿದೇಶೀಯರ ಪ್ರಶ್ನೆಯಾಗಿತ್ತು.
ಇದು ಕೊಲ್ಕತ್ತವೇಕೆ, ಭಾರತದ ಯಾವುದೇ ಮೂಲೆಯಲ್ಲಿ ನಿತ್ಯ ನಡೆಯಬಹುದಾದ ಘಟನೆ.
ನಾಯಿಮರಿಗಳಂಥ ನಾಯಿಮರಿಗಳಿಗೆ ಭಾರತದ ಮನಸ್ಸು ತನ್ನ ಮುಖ್ಯತೆಯನ್ನು ಬದಿಗಿಟ್ಟು ಬದುಕುವ ಅವಕಾಶ ಕಲ್ಪಿಸುತ್ತದೆ. ಇಲ್ಲಿಯದೇ ವಿಜ್ಞಾನಿ ಜಗದೀಶ್ಚಂದ್ರ ಬೋಸ್ ಸಸ್ಯಗಳಿಗೂ ಜೀವವಿದೆ ಎಂದು ತಮ್ಮ ಪರಂಪರೆಯದೇ ಆದ ತತ್ತ್ವಜ್ಞಾನದ ಸತ್ಯವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದರು. ನಮ್ಮ ತತ್ತ್ವಜ್ಞಾನವಾದರೋ, ಬರೇ ಸಸ್ಯವೇನು ಇಡಿಯ ಚರಾಚರಗಳು ಚೇತನಾತ್ಮಕ ಎಂದಿತು.
ಇಂಥ ಸರ್ವಚೇತನ ತತ್ತ್ವದ ಹಿನ್ನೆಲೆಯಲ್ಲಿ ಇಲ್ಲಿ ನಾವು ಪ್ರಾಣಿಗಳ ಮುಖ್ಯತೆಯನ್ನೂ ಪರಿಗಣಿಸಿದ್ದೆವು. ಈಗ, ಯಂತ್ರೀಕರಣದ ಕಾಲದಲ್ಲಿ, ಮನುಷ್ಯನ ಜತೆಗೆ ಎಲ್ಲ ಚೇತನಗಳನ್ನೂ ಯಂತ್ರಗಳು ಅಮುಖ್ಯವಾಗಿಸಿವೆ. ಅಚ್ಚರಿ ಎಂದರೆ ಅವು ನಮಗೂ ಪ್ರದಾನಿಸಿದ ಅಮುಖ್ಯತೆಯನ್ನು ಆನಂದದಿಂದ ಅನುಭವಿಸುತ್ತಿದ್ದೇವೆ.
ಕಳಕೊಳ್ಳುವ ದುರಂತ
ಪಶ್ಚಿಮದ ಕೆಲವು ಪಂಗಡಗಳು ಮನುಷ್ಯಪ್ರಪಂಚದ ಅರ್ಧದಷ್ಟಕ್ಕೆ ಚೇತನವನ್ನೇ ನಿರಾಕರಿಸುತ್ತವೆ. ಸ್ತ್ರೀಯಲ್ಲಿ ಆತ್ಮವಿದೆಯೆಂಬುದನ್ನವು ಒಪ್ಪಲಾರವು. ಈ ನಿಟ್ಟಿನಲ್ಲಿ ಸ್ತ್ರೀಯರ ಮಾರಣಹೋಮ ನಡೆದುದನ್ನೂ ಇತಿಹಾಸ ದಾಖಲಿಸಿದೆ. ಇನ್ನು ಉಳಿದ ಜೀವಪ್ರಪಂಚದ ಕುರಿತ ಪ್ರಶ್ನೆ ಆಮೇಲೆ. ಅಲ್ಲಿಂದಲೇ ತಾನೇ ಯಂತ್ರನಾಗರಿಕತೆ ಪ್ರಪಂಚಾದ್ಯಂತ ಹಬ್ಬಿರುವುದು.
ಯಂತ್ರವು ಮೊದಲೇ ಜಡ; ಅದು ಹೊರಟ ಸ್ಥಾನವೂ ಜಡವಾದಿ ಚಿಂತನೆಯುಳ್ಳದ್ದು. ಅಂದಮೇಲೆ ಜೀವಪ್ರಪಂಚವನ್ನು ಅದು ಸಹಿಸುವುದು ಕಷ್ಟವೇ ಇದೆ. ಮನುಷ್ಯ ಯಂತ್ರದ ಸೇವಕನಾದ ಎಂಬುದಲ್ಲ ದುರಂತ. ಅದರ ಪ್ರಭಾವದಿಂದ ಜಡವಾದಿಯಾದನಲ್ಲ, ಸಂವೇದನಾಹೀನನಾದನಲ್ಲ, ಇಂಥ ಆತ್ಮಹೀನ ಪ್ರತಿಷ್ಠೆಯಲ್ಲಿ ತನ್ನನ್ನು ಕಳಕೊಂಡು ಎಲ್ಲದರ ಕಳಕೊಳ್ಳುವಿಕೆಗೆ ದಾರಿಯಾದನಲ್ಲ; ಇದು ನಿಜವಾದ ದುರಂತ.
✍️ ನಾರಾಯಣ ಶೇವಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.