ಸರ್ಕಾರಿ ನೌಕರರಿಗೆ ನಿವೃತ್ತಿ ದಿನ ಎಂಬುದು ಹೇರಳವಾದ ಆರಾಮ ಸಮಯವನ್ನು, ಹಾಗೇ ಮನಸೋ ಇಚ್ಛೆ ಜೀವಿಸುವ ಪುರುಸೊತ್ತಿನ ಸಮಯವನ್ನೂ ಹೊತ್ತು ತರುತ್ತದೆ. ಆದರೆ, ಕೆಲವರು ಲವಲವಿಕೆಯಿಂದ, ಯುವ ಮನಸ್ಸಿನಿಂದ ಕೂಡಿರುತ್ತಾರೆ. ಅಂಥವರು ತಮ್ಮ ಜೀವನದ ಅಂತಿಮ ಉಸಿರಿರುವರೆಗೂ ಕೆಲಸ ಮಾಡುತ್ತಲೇ ಇರುತ್ತಾರೆ. ಸ್ವರ್ಗೀಯ ಕಿಶಾಭಾವೂ ಪಟವರ್ಧನ್ ಅವರೂ ಹೀಗೆಯೇ ಒಬ್ಬ ಅಪರೂಪದ ವ್ಯಕ್ತಿಯಾಗಿದ್ದರು.
ಪೂನಾದ ಒಂದು ಸರ್ಕಾರಿ ಶಾಲೆಯ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಕೂಡಲೇ ಅವರು ತಮಗೋಸ್ಕರ ಒಂದು ಹೊಸ ಕಾರ್ಯಕ್ಷೇತ್ರವನ್ನು ಆರಿಸಿಕೊಂಡರು. ಜೀವನದ ಈ ಎರಡನೇ ಘಟ್ಟದಲ್ಲಿ ಕಿಶಾಭಾವೂ ಅವರು ಬಡ ಮೇಧಾವಿ ಮಕ್ಕಳನ್ನು ಓದಿಸಲು ಮತ್ತು ಅವರ ಅಭಿವೃದ್ಧಿಗೋಸ್ಕರ “ಸ್ವರೂಪವರ್ಧಿನಿ” ಹೆಸರಿನ ಸಂಸ್ಥೆಯನ್ನು ಪ್ರಾರಂಭಿಸಿದರು. ತಮ್ಮ ಜೀವನದ 10 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಕಿಶಾಭಾವೂ ಅವರು ಸ್ವರೂಪವರ್ಧಿನಿಯ ಶಾಖೆಯಲ್ಲಿ ಶಿಕ್ಷಣದ ಆಯಾಮವನ್ನು ವ್ಯವಸ್ಥಿತವಾಗಿ ಸೇರಿಸಿ, ಅದನ್ನು ಬಹುಮುಖಿಯನ್ನಾಗಿ ಮಾಡಿದರು.
1920ರ ಡಿಸೆಂಬರ್ 25ರಂದು ಪುಣೆಯಲ್ಲಿ ಹುಟ್ಟಿದ ಕಿಶಾಭಾವೂ ಚಿಕ್ಕಂದಿನಿಂದಲೂ ಬಹುಮುಖಿ ಪ್ರತಿಭಾವಂತರಾಗಿದ್ದರು. ಯೌವನದಲ್ಲಿ ಕಾಲೇಜು ಓದನ್ನು ಅರ್ಧಕ್ಕೇ ಬಿಟ್ಟು, ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಸಮಯ ನೀಡುವುದಕ್ಕೋಸ್ಕರ, ಗುರು ಗೋಳ್ವಲ್ಕರ್ ಜೀ ಅವರ ಆಹ್ವಾನದ ಮೇರೆಗೆ ಸಂಘದ ಪ್ರಚಾರಕರಾದರು. ಸುಮಾರು 10 ವರ್ಷಗಳ ಕಾಲ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ, ಎಂಎಸ್ಸಿ. ಮತ್ತು ಬಿ.ಎಡ್. ಪೂರೈಸಿ, ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾದರು.
ಶಿಕ್ಷಕರಾಗಿದ್ದರೂ ಸಹ ಅವರು ತಮ್ಮೊಳಗಿನ ವಿಜ್ಞಾನದ ದಾಹವನ್ನು ಸದಾಕಾಲವೂ ಜೀವಂತವಾಗಿಟ್ಟುಕೊಂಡರು. ಬಹುಶಃ ಅದರಿಂದಲೇ ಅವರು ಜೀವನವಿಡೀ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. ನೌಕರಿಯಲ್ಲಿದ್ದಾಗಲೂ, ಅವರು ಪ್ರತಿಭಾವಂತ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮತ್ತು ಅವರನ್ನು ಸಮಾಜಮುಖಿಯಾಗಿ ಸಂವೇದನಾಶೀಲರನ್ನಾಗಿ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜ್ಞಾನಪ್ರಬೋಧಿನಿಯ ಒಂದು ಅವಿಭಾಜ್ಯ ಅಂಗವಾಗಿದ್ದರು. ಅಲ್ಲಿ ಕೆಲಸ ಮಾಡುವಾಗ, ಯೋಗ್ಯತೆ ಎಂಬುದು ಯಾವುದೇ ಒಂದೇ ವರ್ಗಕ್ಕೆ ಸೀಮಿತವಾಗಿಲ್ಲ ಎಂಬ ವಿಚಾರ ಅವರ ಮನಸ್ಸಿಗೆ ಬಂದಿತು. ಕೊಳಕಾದ ವಸತಿಗಳಲ್ಲಿ ಇರುವ ನಿರ್ಗತಿಕ ಪರಿವಾರಗಳಲ್ಲಿರುವ ಯೋಗ್ಯ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವವರು ಯಾರೂ ಇಲ್ಲ ಎಂಬ ಕಾರಣಕ್ಕಾಗಿಯೇ ಸರಿಯಾದ ದಾರಿಯಲ್ಲಿ ಮುಂದೆ ಸಾಗುತ್ತಿಲ್ಲ ಎಂಬುದನ್ನು ಮನಗಂಡರು. ಫೀಸು ಕಟ್ಟಲಾಗದ ಕಾರಣ ಬೇರೆ ದಾರಿಯಿಲ್ಲದೆ ಅವರು ಓದನ್ನು ಬಿಡಬೇಕಾಗಿತ್ತು, ಇದು ಅವರ ಪ್ರತಿಭೆಗೆ ಆದ ಅನ್ಯಾಯವೇ ಸರಿ.. ಒಬ್ಬ ಶಿಕ್ಷಕನ ಈ ಆಲೋಚನೆಯ ಫಲವಾಗಿ 1979ರ ಮೇ 13ರಂದು ಸ್ವರೂಪವರ್ಧಿನಿಯ ಜನ್ಮಕ್ಕೆ ಕಾರಣವಾಯಿತು.
ಪುಣೆಯ ಮಂಗಳವಾರ ಪೇಠ ಗ್ರಾಮದಲ್ಲಿ ರಾಮಕೃಷ್ಣ ಥ್ರೆಡ್ ವೈಂಡಿಂಗ್ ಇಂಡಸ್ಟ್ರೀಸ್ ವರ್ಕ್’ಶಾಪ್ ನ ಶೆಡ್ಡಿನಲ್ಲಿ 12 ಮಕ್ಕಳೊಂದಿಗೆ ಸಂಸ್ಥೆಯ ಮೊದಲ ಶಾಖೆಯು ಪ್ರಾರಂಭವಾಯಿತು. ಇಂದು ಪೂನಾದಲ್ಲಿ ಸ್ವರೂಪವರ್ಧಿನಿಯ 16 ಶಾಖೆಗಳು ಇವೆ, ಇವುಗಳಲ್ಲಿ 800ಕ್ಕೂ ಅಧಿಕ ಮಕ್ಕಳು ದಂಡಾಭ್ಯಾಸ, ದೇಶಭಕ್ತಿಗೀತೆಗಳ ಜೊತೆ ಜೊತೆಗೇ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಗಳನ್ನು ಓದುತ್ತಿದ್ದಾರೆ. ಇದರ ಹೊರತಾಗಿಯೂ ಸಂಸ್ಥೆಯು ಅನೇಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
1988ರಲ್ಲಿ ಸಂಸ್ಥೆಯು ತನ್ನದೇ ಕಟ್ಟಡ ನಿರ್ಮಿಸಿದ ನಂತರ ಕಿಶಾಭಾವೂ ಅವರು ಪರಿಸರದಲ್ಲಿ ಪಾಕೋಲೀ ಹೆಸರಿನ ಶಿಶುಮಂದಿರವನ್ನು ಪ್ರಾರಂಭಿಸಿದರು. ಇದರಲ್ಲಿ 3ರಿಂದ 5 ವರ್ಷದ ಮಕ್ಕಳು (ಕೂಲಿಯಾಳುಗಳ ಮಕ್ಕಳು) ಪ್ರಾಥಮಿಕ ಹಂತದ ಜ್ಞಾನವನ್ನು ಪಡೆಯುತ್ತಿದ್ದರು. ವಯಸ್ಸಾಗುತ್ತಿದ್ದಂತೆ ಕಿಶಾಭಾವೂ ಅವರ ಉತ್ಸಾಹವೂ ಇಮ್ಮಡಿಯಾಯಿತು, ಮತ್ತು ಸ್ವರೂಪವರ್ಧಿನಿಯಲ್ಲಿ ಹೊಸ ಹೊಸ ಆಯಾಮಗಳು ಸೇರಿಕೊಂಡವು. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಲು ಹೊಲಿಗೆ, ಅಡುಗೆ, ಕಸೂತಿ ಇವುಗಳ ಜೊತೆಗೆ ನರ್ಸಿಂಗ್ ನ ವೃತ್ತಿಪರ ತರಬೇತಿಯನ್ನೂ ನೀಡಿದರು. ಅಕ್ಕಪಕ್ಕದ ಹಳ್ಳಿಗಳಲ್ಲಿ ಕಳೆದ 10 ವರ್ಷಗಳಲ್ಲಿ 3000 ಕ್ಕೂ ಅಧಿಕ ಹುಡುಗಿಯರು ನರ್ಸುಗಳಾಗಿದ್ದಾರೆ.
ಪಟವರ್ಧನ್ ಅವರ ಯಾತ್ರೆ ಇಲ್ಲಿಗೇ ಮುಗಿಯಲಿಲ್ಲ. ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೀಡುವ ಕೋಚಿಂಗ್ ತರಗತಿಗಳನ್ನು ಅತಿ ಕಡಿಮೆ ಶುಲ್ಕದಲ್ಲಿ ಪ್ರಾರಂಭಿಸಿದರು. 17 ವರ್ಷಗಳಿಂದ ಈ ತರಗತಿಗಳಿಂದ 200ಕ್ಕೂ ಅಧಿಕ ಆಫೀಸರುಗಳು ಹೊರಹೊಮ್ಮಿದ್ದಾರೆ.
ಕಿಶಾಭಾವೂ ಅವರ ಸಂಘಟನೆಯ ಗಟ್ಟಿತನವನ್ನು ಅವರ ವಿರೋಧಿಗಳೂ ಒಪ್ಪುತ್ತಿದ್ದರು. ಸ್ವರೂಪವರ್ಧಿನಿಯ ಕಟ್ಟಡದ ಶಿಲಾನ್ಯಾಸವನ್ನು ಸಂಘದ ಸರಸಂಘಚಾಲಕರ ಸ್ವಹಸ್ತದಿಂದ ಮಾಡಿಸುವ ಈ ಸ್ವಯಂಸೇವಕ, ಸಂಘದ ಘೋರ ವಿರೋಧಿಯಾಗಿದ್ದ ಜನರನ್ನೂ ಸ್ವರೂಪವರ್ಧಿನಿಯೊಂದಿಗೆ ಬೆಸೆದರು.
ಸಂಘದ ಸೇವಾ ವಿಭಾಗದ ಪಾಲಕ ಅಧಿಕಾರಿ ಶ್ರೀ ಸುಹಾಸರಾವ್ ಹಿರೇಮಠ ಜೀ ಅವರು ಹೇಳುವಂತೆ, ಕಿಶಾಭಾವೂ ಒಬ್ಬ ಸಮರ್ಪಿತ ಮತ್ತು ಧ್ಯೇಯನಿಷ್ಠ ಕಾರ್ಯಕರ್ತರಾಗಿದ್ದರು, ತಮ್ಮ ಆಚರಣೆ ಮತ್ತು ವ್ಯವಹಾರಗಳಿಂದ ಅವರು ಜನರನ್ನು ಬಹು ಬೇಗ ತಮ್ಮವರನ್ನಾಗಿ ಮಾಡಿಕೊಂಡುಬಿಡುತ್ತಿದ್ದರು.
✍️ರೂಪಶ್ರೀ ನಾಗರಾಜ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.