ಕಣ್ಣು ಮನುಷ್ಯನ ದೇಹದ ಅತೀ ಮುಖ್ಯ ಮತ್ತು ಸೂಕ್ಷ್ಮ ಅಂಗ. ಕಣ್ಣಿರದೆ ಹೋದರೆ ಅಂದರೆ ಮನುಷ್ಯನಿಗೆ ಕಣ್ಣಿನ ದೃಷ್ಟಿಯೇ ಸರಿ ಇರದೇ ಹೋದಲ್ಲಿ ಅವನಿಗೆ ಜಗತ್ತಿನ ಸೌಂದರ್ಯವನ್ನು ಆಸ್ವಾಧಿಸುವ ಭಾಗ್ಯವೇ ಇಲ್ಲವಾಗಿ ಹೋಗುತ್ತದೆ. ಮನುಷ್ಯ ಕುರುಡನಾಗಿದ್ದರೆ ಅಥವಾ ಅವನಿಗೆ ದೃಷ್ಟಿ ದೋಷವಿದ್ದರೆ ಅವನಿಗೆ ಸಾಮಾನ್ಯನಂತೆ ಬದುಕು ನಡೆಸುವುದು ಕಷ್ಟವಾಗುತ್ತದೆ. ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬನನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಕಣ್ಣಿರದೆ ಹೋದರೆ ಅಥವಾ ದೃಷ್ಟಿ ದೋಷವಿದ್ದರೆ ಮನುಷ್ಯ ಬದುಕಿನ ಆಸ್ವಾದವನ್ನೇ ಕಳೆದುಕೊಂಡು ಬಿಡುತ್ತಾನೆ ಎಂಬುದು ಸತ್ಯ.
ಇಂದು ವಿಶ್ವ ದೃಷ್ಟಿ ದಿನ. ಅಂಧತ್ವದ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ 2013 ರ ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಿ, ದೃಷ್ಟಿ ದೋಷ ,ಅಂಧತ್ವ ನಿವಾರಣೆಯ ದೃಷ್ಟಿಯಿಂದ ಅನೇಕ ನಿರ್ಣಯಗಳನ್ನು ಕೈಗೊಂಡಿತು. ಇದರ ಅಂಗವಾಗಿ ಅಕ್ಟೋಬರ್ 8 ನ್ನು ಪ್ರತಿ ವರ್ಷವೂ ‘ವಿಶ್ವ ದೃಷ್ಟಿ ದಿನ’ ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ‘ದೃಷ್ಟಿಯಲ್ಲಿ ಭರವಸೆ’ ಎಂಬ ಘೋಷಣೆಯ ಜೊತೆಗೆ ವಿಶ್ವ ದೃಷ್ಟಿ ದಿನವನ್ನು ವಿಶ್ವದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ.
ಜಗತ್ತಿನಲ್ಲಿ ಅದೆಷ್ಟೋ ಜನರು ದೃಷ್ಟಿದೋಷ, ಅಂಧತ್ವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ವಿಶ್ವ ದೃಷ್ಟಿ ದಿನದಂದು ಜಗತ್ತಿನ ಅನೇಕ ರಾಷ್ಟ್ರಗಳು ಮಾಡಿಕೊಂಡು ಬರುತ್ತಿವೆ. ಜಗತ್ತಿನ ಸುಮಾರು 100 ಕೋಟಿ ಜನರ ದೃಷ್ಟಿ ದೋಷವನ್ನು ವೈದ್ಯಕೀಯ ಚಿಕಿತ್ಸೆಯ ಮೂಲಕ ಸರಿಪಡಿಸುವುದು ಸಾಧ್ಯವಾಗಿದೆ. ಆ ಮೂಲಕ ಈ ಸಮಸ್ಯೆ ಎದುರಿಸುತ್ತಿರುವ ಹಲವರನ್ನು ಶಾಶ್ವತ ಕುರುಡಿನಿಂದ ತಪ್ಪಿಸಬಹುದಾಗಿದೆ. ಇಂತಹ ಭರವಸೆಯನ್ನು ಅಂಧರಲ್ಲಿ ಅಥವಾ ಕಣ್ಣಿಗೆ ಸಂಬಂಧಿಸಿದಂತೆ ಸಮಸ್ಯೆ ಹೊಂದಿರುವವರಲ್ಲಿ ಮೂಡುವಂತೆ ಮಾಡಲು 2020 ರ ವಿಶ್ವ ದೃಷ್ಟಿ ದಿನವನ್ನು ‘ದೃಷ್ಟಿಯಲ್ಲಿ ಭರವಸೆ’ ಎಂಬ ಟ್ಯಾಗ್ಲೈನ್ ಜೊತೆಗೆ ಆಚರಣೆ ಮಾಡಲಾಗುತ್ತಿದೆ.
ಪ್ರಸ್ತುತ ಆಧುನಿಕತೆ ಹೆಚ್ಚಾದಂತೆ ಮನುಷ್ಯನಿಗೆ ವಯೋ ಬೇಧವಿಲ್ಲದೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೃಷ್ಟಿಗೆ ಸಂಬಂಧಿಸಿದಂತೆ ಸಹ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಅನೇಕರು ಸಮಸ್ಯೆ ಅನುಭವಿಸುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆ ಅಂದರೆ ಟಿವಿ, ಕಂಪ್ಯೂಟರ್, ಮೊಬೈಲ್ ಸೇರಿದಂತೆ ಇನ್ನಿತರ ಕಾರಣಗಳಿಂದಲೂ ಜನರು ಕಣ್ಣಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಪುಟಾಣಿ ಮಕ್ಕಳೂ ಸಹ ಕಣ್ಣಿನ ಸಮಸ್ಯೆಗೆ ಸಿಲುಕಿ ಕನ್ನಡಕ ಧರಿಸುವಂತಹ ಘಟನೆಗಳೂ ಸಾಮಾನ್ಯ. ಆದ್ದರಿಂದ ಕಣ್ಣಿಗೆ ಸಂಬಂಧಿಸಿದಂತೆ ನಾವು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಕಣ್ಣಿರದೆ ಹೋದರೆ ಮತ್ತೆ ಯಾವುದನ್ನು ನೋಡುವುದೂ ಸಾಧ್ಯವಿಲ್ಲ. ಜೊತೆಗೆ ಯಾವುದೇ ಕೆಲಸವನ್ನೂ ಸ್ವಾವಲಂಬಿಯಾಗಿ ಮಾಡುವುದು ಅಸಾಧ್ಯವಾಗುತ್ತದೆ. ಆದ್ದರಿಂದ ನಾವು ಕಣ್ಣಿನ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ.
ಕಣ್ಣಿಗೆ ಸಣ್ಣ ಸಮಸ್ಯೆಯಾಗಿರುವುದು ನಮ್ಮ ಗಮನಕ್ಕೆ ಬಂದರೂ ಕೂಡಲೇ ಕಣ್ಣಿನ ತಜ್ಞರನ್ನು ಸಂಪರ್ಕ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳುವಲ್ಲಿ ಗಮನ ಹರಿಸಬೇಕು. ಹಾಗೆಯೇ ತೀವ್ರ ತರದಲ್ಲಿ ಕಣ್ಣಿಗೆ ಸಮಸ್ಯೆ ಬಂದೊದಗಿದೆ ಎಂದಾದರೆ ಅದಕ್ಕೆ ಬೇಕಾದ ಅಗತ್ಯ ಚಿಕಿತ್ಸೆ ಪಡೆಯುವತ್ತ ಮೊದಲು ಆಲೋಚಿಸಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಮುಂದೊಮ್ಮೆ ಶಾಶ್ವತ ಅಂಧತ್ವಕ್ಕೂ ಅದು ಕಾರಣವಾಗುವ ಸಾಧ್ಯತೆಗಳಿರುತ್ತವೆ. ಸದ್ಯ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು ಕಣ್ಣಿನ ಸಮಸ್ಯೆ ಪರಿಹಾರಕ್ಕಾಗಿ ಸಾವಿರಾರು ದಾರಿಗಳನ್ನು ವೈದ್ಯಕೀಯ ಲೋಕ ಸಂಶೋಧಿಸಿದೆ. ಇವೆಲ್ಲವುಗಳ ಸಮರ್ಪಕ ಉಪಯೋಗ ಪಡೆದುಕೊಳ್ಳುವ ಮೂಲಕ ನಾವು ಶಾಶ್ವತ ಅಂಧತ್ವ ಸಮಸ್ಯೆ, ಇತರ ಕಣ್ಣಿನ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇದೇ ಸಂದರ್ಭದಲ್ಲಿ ನಾವು ಮಾಡಬಹುದಾದ ಇನ್ನೊಂದು ಮಹತ್ಕಾರ್ಯವೆಂದರೆ ನೇತ್ರದಾನ. ನಮ್ಮ ಸಾವಿನ ಬಳಿಕವೂ ನಮ್ಮ ಕಣ್ಣುಗಳು ಸಮಾಜವನ್ನು ನೋಡುವಂತೆ ಮತ್ತು ಇನ್ನೊಬ್ಬರ ಬಾಳು ಬೆಳಗುವುದಕ್ಕೆ ಪೂರಕವಾಗುವಂತೆ ನಮ್ಮ ಕಣ್ಣುಗಳನ್ನು ದಾನ ಮಾಡುವತ್ತ ಚಿತ್ತ ಹರಿಸಿದೆವೆಂದಾದಲ್ಲಿ ಜಗತ್ತಿನ ಇಬ್ಬರು ಕುರುಡರು ಪ್ರಪಂಚ ನೋಡಲು ಸಾಧ್ಯವಾಗುತ್ತದೆ. ಜೊತೆಗೆ ಅವರ ನೆನಪಿನಲ್ಲಿ ನಾವೂ ಜೀವಂತವಾಗಿರುತ್ತೇವೆ. ನೇತ್ರದಾನ ಮಹಾದಾನ, ನೆನಪಿರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.