ಕಾಲ ಬದಲಾಗಿದೆ. ಹೆಣ್ಣು ಈಗ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರಲಾರಳು, ಅವಳ ಕನಸುಗಳಿಗೂ ರೆಕ್ಕೆ ಮೂಡುತ್ತಿವೆ, ಗರಿ ಬಿಚ್ಚಿ ಹಾರುತ್ತಿವೆ. ಹೆಣ್ಣು ಪುರುಷನ ಸ್ವತ್ತಲ್ಲ, ಆತನ ಆಸ್ತಿಯೂ ಅಲ್ಲ. ಆತನ ಭೋಗಕ್ಕೆ ಮೀಸಲಾದವಳಂತು ಅಲ್ಲವೇ ಅಲ್ಲ. ತಾಯಿಯ ಉದರದಲ್ಲೇ ಆಕೆಗೆ ಸಮಾನತೆಯ ಸಂವಿಧಾನದತ್ತ ರಕ್ಷಣೆ ಸಿಕ್ಕಿದೆ. ಪ್ರಕೃತಿದತ್ತ ಬುದ್ಧಿವಂತಿಕೆ, ಹೃದಯವಂತಿಕೆ, ಸ್ವಂತಿಕೆ ಸಿಕ್ಕಿದೆ. ಹೆಣ್ಣಿನ ಸ್ವಾತಂತ್ರ್ಯವನ್ನು, ಆಕೆಯ ಸ್ವಚ್ಛಂದ ಬದುಕನ್ನು ಕಸಿಯುವ ಹಕ್ಕನ್ನು ಪುರುಷನಿಗೆ ಯಾರು ನೀಡಿಲ್ಲ. ಆದರೆ ದೇಹ ಬಲದಿಂದ ಹೆಣ್ಣನ್ನು ಮಟ್ಟ ಹಾಕುವೆನೆಂಬ ಅಹಂ ಅನ್ನು ಕೆಲ ಪುರುಷರ ಆಲೋಚನೆಗೆ ತುಂಬಿದವರಾರು? ತಾಯಿ ಎಂಬ ಹೆಣ್ಣಿನ ಉದರದಲ್ಲಿ ಅಸ್ತಿತ್ವ ಪಡೆದುಕೊಂಡು ಬಂದ ಪುರುಷನಲ್ಲಿ ಗಂಡೆಂಬ ಅಹಂಕಾರಿ ವಿಷ ಭಾವ ಚಿಗುರುತ್ತಿರುವುದು ನಿಜಕ್ಕೂ ನಮ್ಮ ಸಮಾಜದ ದುರಂತ.
ಅಕ್ಕರೆಯ ಅಪ್ಪುಗೆಯಲ್ಲಿ ಬೆಳೆಸಿದ ಅಪ್ಪ, ಮಮತೆ ನೀಡಿದ ಅಣ್ಣ, ವಾತ್ಸಲ್ಯಕ್ಕೆ ಅನುರೂಪವಾಗಿದ್ದ ಗೆಳೆಯ ಇವರಂತೆಯೇ ಸಮಾಜದ ಪ್ರತಿ ಪುರುಷನೂ ಇರುತ್ತಾನೆ ಎಂದು ನಂಬಿದ್ದ ಹೆಣ್ಣಿಗೆ ಸಮಾಜದ ಸಾಲು ಸಾಲು ಅತ್ಯಾಚಾರ ಕೃತ್ಯಗಳು ಘಾಸಿ ಮಾಡುತ್ತಲೇ ಇವೆ. ನಮ್ಮ ದೇಶ ಇನ್ನೆಷ್ಟು ನಿರ್ಭಯಾರನ್ನು ನೋಡಬೇಕೋ ಎಂದು ಮನ ಮರಗುತ್ತಿದೆ. ಹೆಣ್ಣಿನ ದೇಹಕ್ಕಾಗಿ ರಣಹದ್ದುಗಳು ಹಾರಾಡುತ್ತಿವೆ ಎಂಬ ಕಟು ಸತ್ಯ ಅರಗಿಸಲೂ ಸಾಧ್ಯವಾಗದ್ದು. ರಣಹದ್ದುಗಳ ಬೇಟೆಯಾಡಬೇಕಾದವರು ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅವರಿಗೆ ವೋಟು ಮತ್ತು ನೋಟಿನ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯೂ ಅರ್ಥವಾದಂತೆ ಕಾಣುತ್ತಿಲ್ಲ.
ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಸಾಲು ಸಾಲು ಯೋಜನೆಗಳನ್ನು ತಂದಿದೆ. ಭ್ರೂಣ ಹತ್ಯೆ ತಡೆಯಲು ಒಂದು ಕಾನೂನು, ಹೆಣ್ಣಿನ ಕಡ್ಡಾಯ ಶಿಕ್ಷಣಕ್ಕೆ ಒಂದು ಕಾನೂನು ಹೀಗೆ ಸಾಲು ಸಾಲು ಕಾನೂನುಗಳಿವೆ. ಅತ್ಯಾಚಾರ ತಡೆಗಟ್ಟುವ ಕಾನೂನೂ ಇದೆ. ಆದರೇನು ಪ್ರಯೋಜನ? ಒಂಟಿ ಹೆಣ್ಣು ಬಿಡಿ ಕುಟುಂಬದೊಳಗಿದ್ದ ಹೆಣ್ಣೂ ಇಂದು ಸುರಕ್ಷಿತಳಾಗಿಲ್ಲ. ಹಿಂದೆಯೂ ಸುರಕ್ಷಿತಳಾಗಿರಲಿಲ್ಲ. ಪ್ರತಿನಿತ್ಯ ನಡೆಯುತ್ತಿರುವ ಘಟನೆಗಳೇ ಇದಕ್ಕೆ ಸಾಕ್ಷಿ. ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದಾಗ ದೇಶ ದೊಡ್ಡ ಮಟ್ಟದಲ್ಲಿ ಎದ್ದು ನಿಂತಿತ್ತು. ಆದರೂ ಪರಿಸ್ಥಿತಿಯಲ್ಲಿ ಬದಲಾಗಲಿಲ್ಲ.
ಪ್ರಸ್ತುತ ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನೂ ರಾಜಕೀಯಗೊಳಿಸಲಾಗುತ್ತಿದೆ. ಆಕೆ ಯಾವ ಧರ್ಮಕ್ಕೆ ಸೇರಿದವಳು, ಅತ್ಯಾಚಾರಿ ಯಾವ ಧರ್ಮಕ್ಕೆ ಸೇರಿದವನು, ಯಾವ ಜಾತಿ, ಎಡವೋ ಅಥವಾ ಬಲವೋ, ಅತ್ಯಾಚಾರ ನಡೆದ ರಾಜ್ಯ ಕಾಂಗ್ರೆಸ್ ಆಡಳಿತದ್ದೋ ಅಥವಾ ಬಿಜೆಪಿಯದ್ದೋ ಎಂಬುದನ್ನು ನೋಡಿಯೇ ಖಂಡಿಸಲಾಗುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿನ ಸ್ಥಿತಿಗತಿ ಇನ್ನೂ ಶೋಚನೀಯ. ನೀವು ಅಲ್ಲಿ ನಡೆದ ಅತ್ಯಾಚಾರವನ್ನು ಯಾಕೆ ಖಂಡಿಸಿಲ್ಲ, ಇದನ್ಯಾಕೆ ಖಂಡಿಸುತ್ತಿದ್ದೀರಿ. ಆ ಜಾತಿಯವರು ಮಾಡಿದ್ದನ್ನು ಯಾಕೆ ಖಂಡಿಸಲಿಲ್ಲ, ಈ ಸರ್ಕಾರದಲ್ಲಿ ನಡೆದುದ್ದನ್ನು ಯಾಕೆ ಖಂಡಿಸಲಿಲ್ಲ..ಹೀಗೆ ಖಂಡನೆಗಳಿಗೂ ಸಮರ್ಥನೆ ನೀಡಬೇಕಾದ ಅನಿವಾರ್ಯತೆ. ಸತ್ತು ಬಿದ್ದವಳು ಹೆಣ್ಣು ಎಂಬುದು ಯಾರಿಗೂ ಮುಖ್ಯವಾಗುವುದಿಲ್ಲ, ಯಾವ ಜಾತಿಗೆ, ಯಾವ ಪಕ್ಷದ ಆಡಳಿತದ ರಾಜ್ಯಕ್ಕೆ ಸೇರಿದವಳು ಎಂಬುದು ಮುಖ್ಯವಾಗುತ್ತದೆ. ಇನ್ನೂ ಕೆಲವರು ಸಂತ್ರಸ್ಥ ಹೆಣ್ಣಿನ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೋಗಿ ಅಧ್ವಾನ ಸೃಷ್ಟಿ ಮಾಡುತ್ತಾರೆ. ಅಲ್ಲೂ ರಾಜಕೀಯದ ಬೇಳೆ ಬೇಯಿಸುವ ಆತುರ. ಅತೀ ಬುದ್ಧಿವಂತರು ಅನಿಸಿಕೊಂಡವರೂ ತಮ್ಮ ಮೂಗಿನ ನೇರಕ್ಕೆ ಬೇಕಾದ ಹೇಳಿಕೆಯನ್ನು ನೀಡುತ್ತಾರೆ.
ಹೆಣ್ಣಿನ ಮೇಲಾಗುತ್ತಿರುವ ಅತ್ಯಾಚಾರವನ್ನು, ದೌರ್ಜನ್ಯವನ್ನು ಎಂತಹ ಪರಿಸ್ಥಿತಿಯಲ್ಲೇ ಆದರೂ ಖಂಡಿಸುವ, ಅದರ ವಿರುದ್ಧ ವಿರುದ್ಧ ಸೆಟೆದು ನಿಲ್ಲುವ ಗಟ್ಟಿತನ ಪ್ರತಿಯೊಬ್ಬರಲ್ಲೂ ಮೂಡಬೇಕು. ಇಂತಹ ಘಟನೆಗಳನ್ನು ಖಂಡಿಸಲು ಜಾತಿ, ಧರ್ಮ, ಸಿದ್ಧಾಂತ, ಪಕ್ಷದ ಹಂಗು ಇರಬಾರದು. ಹೆಣ್ಣಿನ ಅಸ್ತಿತ್ವ ಇರುವುದು ಆಕೆಯ ಅಂತಃಶಕ್ತಿಯ ಮೇಲೆ, ಅದನ್ನು ಕುಗ್ಗಿಸುವ ಕೃತ್ಯವನ್ನು ಸಮಾಜ ಮಾಡಬಾರದು. ಅತ್ಯಾಚಾರಿಗೆ ನೇಣು ದೇಶದ ಕಾನೂನು ಆಗಬೇಕು, ಇದಕ್ಕಾಗಿ ದೇಶ ಒಗ್ಗೂಡಬೇಕು.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.