ಇತ್ತೀಚೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದ ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಮಂದಿ ರೈತರಲ್ಲಿ ತಪ್ಪು ಕಲ್ಪನೆಗಳು ಉದ್ಭವವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಭರವಸೆಯನ್ನು ಹಿಂದಿನ ಬಾರಿಯ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿತ್ತು. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವೋಟಿನ ಭೇಟೆಯನ್ನಾಡಿತ್ತು ಎಂಬುದು ಜನಸಾಮಾನ್ಯರಿಗೆ ತಿಳಿದಿರುವ ವಿಚಾರ.
ಇದೀಗ ಅದೇ ವಿಚಾರಗಳನ್ನು ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದೆ. ಆ ಮೂಲಕ ದೇಶದ ಬೆನ್ನೆಲುಬು ಕೃಷಿ ವರ್ಗಕ್ಕೆ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯವನ್ನು ಒದಗಿಸಲು ಮುಂದಾಗಿದೆ. ಆದರೆ ದುರಂತ ಎಂಬಂತೆ ಈ ಹಿಂದೆ ಈ ಇಂತಹ ತಿದ್ದುಪಡಿ ನಡೆಯಬೇಕು ಎಂದು ಹೇಳುತ್ತಿದ್ದ ಪ್ರತಿಪಕ್ಷಗಳು ಬಿಜೆಪಿ ಸರ್ಕಾರವನ್ನು, ನಾಯಕರನ್ನು ವಿರೋಧಿಸುವ ಭರದಲ್ಲಿ ಇಂತಹ ಒಂದು ಉತ್ತಮ ತಿದ್ದುಪಡಿಯನ್ನು ವಿರೋಧಿಸುತ್ತಿರುವುದು ಕಂಡುಬರುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬೇಕಾಗಿ ಇದರಿಂದ ರೈತರಿಗಾಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡದೆ, ಅರಿವು ಮೂಡಿಸದೆ ಆ ಕಾಯ್ದೆಯಿಂದ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವಾಗುತ್ತದೆ ಎಂಬ ಸುಳ್ಳುಗಳನ್ನು ಬಿತ್ತುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿರುವುದು ನಿಜಕ್ಕೂ ಶೋಚನೀಯ.
ಹಾಗಾದರೆ ಎಪಿಎಂಸಿ ಕಾಯ್ದೆ ಹೇಗೆ ಕೃಷಿಕರಿಗೆ ಪೂರಕವಾಗಿದೆ ಎಂಬುದನ್ನು ಹೇಳುವುದಾದರೆ, ಈ ಬಗ್ಗೆ ಸರ್ಕಾರವೇ ನೀಡಿರುವ ಸ್ಪಷ್ಟ ಮಾಹಿತಿಯನ್ನು ನಾವು ಗಮನಿಸಬಹುದಾಗಿದೆ. ಈ ಕಾಯ್ದೆಯ ತಿದ್ದುಪಡಿಯಿಂದ ಸರ್ಕಾರ ರೈತರಿಗೆ ತಮ್ಮ ಉತ್ಪನ್ನಗಳ ವಿಚಾರದಲ್ಲಿ ಒದಗಿಸಿರುವ ನ್ಯಾಯದ ಬಗ್ಗೆ ತಿಳಿದುಕೊಳ್ಳಲೇ ಬೇಕು.
ಎಪಿಎಂಸಿ ಕಾಯ್ದೆ ತಿದ್ದುಪಡಿಯ ಉದ್ದೇಶ ಮತ್ತು ಪ್ರಯೋಜನಗಳು
* ರಾಜ್ಯ ಸರ್ಕಾರವು ಕೃಷಿ ಮಾರಾಟ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳು, ಸ್ಪರ್ಧಾತ್ಮಕತೆ, ರೈತರ ಹಿತಾಸಕ್ತಿ ಮೊದಲು ಎಂಬ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿ ಮಾಡಿದೆ. ರೈತರಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತೇಜಿಸುವ ಮತ್ತು ಸರಳೀಕರಿಸುವ ಉದ್ದೇಶದೊಂದಿಗೆ ತಿದ್ದುಪಡಿ ಮಾಡಿ ಜಾರಿಗೊಳಿಸಿದೆ.
* ತಿದ್ದುಪಡಿ ಪೂರ್ವದಲ್ಲಿ ಎಪಿಎಂಸಿ ಕಾಯ್ದೆಯ ನಿಯಂತ್ರಣ ರಾಜ್ಯ ವ್ಯಾಪ್ತಿಯಲ್ಲಿತ್ತು. ಅದರಂತೆ ಎಪಿಎಂಸಿ ಪ್ರಾಂಗಣದಲ್ಲಿಯೇ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂಬ ಕಡ್ಡಾಯ ನಿಯಮವಿತ್ತು.
* ಈ ತಿದ್ದುಪಡಿಯ ಬಳಿಕ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣ ಮತ್ತು ಹೊರಗಡೆಯೂ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
* ಈ ತಿದ್ದುಪಡಿಗೆ ಮುನ್ನ ಸರ್ಕಾರ ದೂರದೃಷ್ಟಿಯನ್ನಿಟ್ಟುಕೊಂಡು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಧ್ಯತೆ, ಭಾದ್ಯತೆಗಳ ಕುರಿತು ಚರ್ಚೆ ನಡೆಸಿ ಬಳಿಕ ತಿದ್ದುಪಡಿ ತಂದಿದೆ. ರೈತರಿಗೆ ಸಮಸ್ಯೆಯಾಗುವ ಯಾವ ಅಂಶವೂ ಈ ತಿದ್ದುಪಡಿಯಲ್ಲಿ ಇಲ್ಲ.
* ಈ ತಿದ್ದುಪಡಿಗೂ ಮುನ್ನ ಲೈಸನ್ಸ್ ಇಲ್ಲದೆ ರೈತರು ಎಪಿಎಂಸಿ ವ್ಯಾಪ್ತಿಯ ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ದಂಡ ಅಥವಾ ಶಿಕ್ಷೆಗೆ ಆವಕಾಶ ಇತ್ತು. ಆದರೆ ತಿದ್ದುಪಡಿಯ ಬಳಿಕ ಮುಕ್ತ ರೈತರಿಗೆ ಎಲ್ಲೆಂದರಲ್ಲಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ದಂಡ, ಶಿಕ್ಷೆ ವಿಧಿಸುವುದನ್ನು ಕೈಬಿಡಲಾಗಿದೆ.
* ತಿದ್ದುಪಡಿಯಿಂದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪಾತ್ರವನ್ನು ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಯುವ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಉಳಿದಂತೆ ಮಾರುಕಟ್ಟೆ ಸಮಿತಿಗಳು ನಿರ್ವಹಿಸಬೇಕಾದಂತಹ ಎಲ್ಲಾ ಕಾರ್ಯಗಳು ಹಾಗೂ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾರುಕಟ್ಟೆ ಸಮಿತಿಗಳಿಗೆ ಅಧಿಕಾರವಿರುತ್ತದೆ.
* ರೈತರಿಗೆ ಸ್ಪರ್ಧಾತ್ಮಕ ವಾತಾವರಣ ಕಲ್ಪಿಸುವುದು, ರೈತರೇ ಮೊದಲು ಎಂಬ ತತ್ವಕ್ಕೆ ಪ್ರೋತ್ಸಾಹ ನೀಡುತ್ತದೆ ಈ ತಿದ್ದುಪಡಿ.
* ರೈತರು ತಾವು ಬೆಳೆದ ಬೆಳೆಯನ್ನು ತಮ್ಮ ಇಚ್ಛೆಯಂತೆ ಮಾರುಕಟ್ಟೆ ಪ್ರಾಂಗಣ, ರಾಜ್ಯ, ಅಂತರರಾಜ್ಯಗಳಲ್ಲಿ ಎಲ್ಲಿ ಬೇಕಾದರೂ ತಾವೇ ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ಈ ತಿದ್ದುಪಡಿ ಅವಕಾಶ ನೀಡಿದೆ.
* ನಮ್ಮ ಬೆಳೆ ನಮ್ಮ ಹಕ್ಕು ಎಂಬಂತೆ ರೈತರಿಗೆ ತಮ್ಮ ಬೆಳೆಯ ಮೇಲೆ ಸಂಪೂರ್ಣ ಸ್ವಾತಂತ್ರ್ಯ. ರೈತರಿಗೆ ತಮ್ಮ ಬೆಳೆಯ ಸಂಪೂರ್ಣ ಹಕ್ಕನ್ನು ಸರ್ಕಾರ ಒದಗಿಸಿದೆ.
* ರೈತರು ತಾವು ಬೆಳೆದ ಬೆಳೆಗೆ ತಾವೇ ದರ ನಿಗದಿ ಮಾಡಿ ಎಪಿಎಂಸಿ ಪ್ರಾಂಗಣದ ಒಳಗೆ ಅಥವಾ ಹೊರಗೆ ಮಾರಾಟಕ್ಕೆ ಮುಕ್ತ ಅವಕಾಶ. ಉತ್ತಮ ಧಾರಣೆ ಪಡೆಯಲು ಅವಕಾಶ ಕಲ್ಪಿಸಿದೆ.
* ರೈತರು ಯಾವುದೇ ವ್ಯಾಪಾರಿಗಳಿಗೆ ಬೆಳೆ ಮಾರಾಟ ಮಾಡಬಹುದು. ವ್ಯಾಪಾರಿಗಳೂ ರೈತರ ಮನೆ ಬಾಗಿಲಿಗೇ ತೆರಳಿ ಖರೀದಿ ಮಾಡುವ ಅವಕಾಶ ನೀಡಿದೆ. ಜೊತೆಗೆ ಯಾವುದೇ ರಾಜ್ಯದಲ್ಲಿಯೂ ಯಾವುದೇ ಅಡೆತಡೆ ಇಲ್ಲದೆ ಬೆಳೆ ಮಾರಾಟಕ್ಕೆ ರೈತರಿಗೆ ಸರ್ಕಾರ ಅವಕಾಶ ನೀಡಿದೆ.
* ಕೃಷಿ ಉತ್ಪನ್ನಗಳ ಮಾರಾಟ ಸರಪಳಿ ನಿರ್ವಹಣೆ ಸರಳವಾಗಲಿದೆ. ಜೊತೆಗೆ ತಿದ್ದುಪಡಿಯಿಂದಾಗಿ ರೈತರಿಗೆ ತಮ್ಮ ಬೆಳೆ ಮಾರಾಟದ ಬೆಲೆಯ ಹೆಚ್ಚಿನ ಪಾಲು ದೊರೆಯಲು ಸಾಧ್ಯವಾಗಲಿದೆ.
* ರೈತ ಮಾರಾಟಗಾರರಿಗೆ ಪ್ರಸ್ತುತ ಇರುವ ವಿವಿಧ ಮಾರುಕಟ್ಟೆ ವ್ಯವಸ್ಥೆಗಳ ಜೊತೆಗೆ ಮತ್ತೊಂದು ಬದಲಿ ಮಾರಾಟ ವ್ಯವಸ್ಥೆ ಒದಗಿಸಿಕೊಟ್ಟಿದೆ ಸರ್ಕಾರ.
* ಈ ಹಿಂದೆ ರೈತರು ತಮ್ಮ ಉತ್ಪನ್ನಗಳನ್ನು ಬೇರೆ ಕಡೆ ಮಾರಾಟ ಮಾಡಲು ಪಹಣಿ, ಅಗತ್ಯ ದಾಖಲೆಗಳು ಬೇಕಾಗಿತ್ತು. ಆದರೆ ಈ ತಿದ್ದುಪಡಿಯಿಂದ ಯಾವುದೇ ದಾಖಲೆಗಳಿಲ್ಲದೆ ಉತ್ಪನ್ನಗಳನ್ನು ಮುಕ್ತವಾಗಿ ದೇಶದೆಲ್ಲೆಡೆ ಎಲ್ಲಿ ಬೇಕಾದರೂ ಮಾಡಲು ಅವಕಾಶ.
* ಸರ್ಕಾರ ಈ ತಿದ್ದುಪಡಿ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಅನುಕೂಲ ಮಾಡಿಕೊಟ್ಟಿದೆ. ಸಾಗಾಣಿಕೆ ವೆಚ್ಚ ಮತ್ತು ಉತ್ಪನ್ನಗಳ ಸವಕಳಿ ತಪ್ಪಿಸಲು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಪೂರಕ ವ್ಯವಸ್ಥೆ ಮಾಡಿಕೊಟ್ಟಿದೆ.
* ಯಾವುದೇ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿ ಪ್ರಕ್ರಿಯೆ ಮುಂದುವರೆಯಲಿದೆ.
* 2014 ರಿಂದ ತೊಡಗಿದಂತೆ ಆನ್ಲೈನ್ ಟ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಎಪಿಎಂಸಿ ಹೊರಗೆ ಖಾಸಗಿ ಕಂಪೆನಿಗಳು ನೇರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ದೊಡ್ಡ ದೊಡ್ಡ ಕಂಪೆನಿಗಳು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ಮಾರಾಟ ಮಾಡುತ್ತಿವೆ. ತಿದ್ದುಪಡಿ ಏನೂ ಹೊಸತಲ್ಲ.
ಒಟ್ಟಿನಲ್ಲಿ ಹೇಳಬೇಕಾದರೆ, ಸರ್ಕಾರ ರೈತನ ಹಿತಾಸಕ್ತಿಯ ರಕ್ಷಣೆಗೆ ಮುಂದಾಗಿದ್ದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ವಿಪಕ್ಷಗಳು ಜನರ ದಾರಿ ತಪ್ಪಿಸುವ, ಜನರಲ್ಲಿ ಸರ್ಕಾರದ ವಿರುದ್ಧ ಮತ್ತು ಈ ತಿದ್ದುಪಡಿಯ ಬಗ್ಗೆ ತಪ್ಪು ತಿಳುವಳಿಕೆಯನ್ನು ಬಿತ್ತುತ್ತಿವೆ ಎಂಬುದು ಕಣ್ಣೆದುರಿನ ಸತ್ಯ. ಕೇವಲ ಅಧಿಕಾರ ಲಾಲಸೆಯಿಂದ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ರಾಜ್ಯದ ರೈತರ, ಜನರ ದಾರಿತಪ್ಪಿಸುತ್ತಿರುವುದು ಮುಂದೊಂದು ದಿನ ವಿಪಕ್ಷಗಳಿಗೇ ಮುಳುವಾಗಲಿದೆ ಎಂಬುದಂತೂ ನಿಸ್ಸಂಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.