‘ಭಾರತೀಯರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ, ದೇಶದ ಸೇವೆಯ ಕೈಂಕರ್ಯಕ್ಕಾಗಿ ಕಂಕಣ ಬದ್ಧರಾಗಿದ್ದಾರೆ, ದೇಶದ ಪ್ರತಿಯೊಬ್ಬರೂ ರಕ್ತದ ಕಣಕಣದಲ್ಲಿ, ಮಾಂಸ ಖಂಡಗಳಲ್ಲಿ ಬೆರೆತು ಹೋಗಿದ್ದಾರೆ. ಈ ದೇಶದಲ್ಲಿ ಜೀವ ಪಡೆದಿರುವ ಪ್ರತಿಯೋರ್ವರಲ್ಲಿಯೂ ತಾವು ಭಾರತಾಂಬೆಯ ಮಕ್ಕಳು ಎಂಬ ಭಾವ ಸೃಜಿಸುವಂತೆ ಮಾಡಬೇಕಾಗಿದೆ. ಈ ಕೆಲಸ ಸಂಪೂರ್ಣವಾಗುವವರೆಗೂ ನಮಗೆ ವಿಶ್ರಾಂತಿ ಇಲ್ಲ. ತಾಯಿ ದುರ್ಗೆ ಹತ್ತು ಕೈಗಳ ಮೂಲಕ ಹೇಗೆ ದುಷ್ಟ ಸಂಹಾರ ಮಾಡುತ್ತಿರುವಳೋ, ತಾಯಿ ಲಕ್ಷ್ಮೀ ಹೇಗೆ ನಾಡನ್ನು ಸಂಪದ್ಭರಿತವನ್ನಾಗಿ ಮಾಡುತ್ತಿದ್ದಾಳೋ, ಹೇಗೆ ತಾಯಿ ಸರಸ್ವತಿ ವಿದ್ಯೆ ಎಂಬ ರಕ್ಷಣೆಯ ಮೂಲಕ ಅಜ್ಞಾನದ ಕತ್ತಲು ಹೋಗಲಾಡಿಸುತ್ತಿದ್ದಾಳೋ ಇವರೆಲ್ಲರ ಹಾಗೆ ನಾವೂ ತುಂಬಿಕೊಂಡಿರುವ ಅಜ್ಞಾನವನ್ನು ಹೊಡೆದೋಡಿಸಲು, ಅ ಮೂಲಕ ದೇಶದೆಲ್ಲೆಡೆ ಭಾರತೀಯತೆಯ ಘಮ ಪಸರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಆ ದೃಢ ನಿರ್ಣಯದ ಜೊತೆಗೆ ಹೆಜ್ಜೆ ನೆಡಬೇಕಾಗಿದೆ. ಮತ್ತು ನಾವು ಇದರಲ್ಲಿ ಗೆದ್ದೇ ಗೆಲ್ಲುವೆವು ಎಂಬ ನಂಬಿಕೆಯೂ ಇದೆ’.
ಹೀಗೆಂದವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು. ಇವರೊಬ್ಬ ಮಾದರಿ ಸ್ವಾತಂತ್ರ್ಯ ಹೋರಾಟಗಾರ. ವಿದ್ವಾಂಸ, ಚತುರ ಸಂಘಟನಕಾರ ಎಂದೇ ಹೇಳಬಹುದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ, ವ್ಯವಸ್ಥಾಪಕರಾಗಿ, ಜನಸಂಘದ ಅಧ್ಯಕ್ಷರಾಗಿ ಪಂಡಿತ್ ಜೀ ಅವರು ಮಾಡಿರುವ ಕಾರ್ಯಗಳು ಇಂದಿಗೂ ಮಾದರಿ. ಯುವ ಮನಸ್ಸುಗಳಿಗೆ ಸ್ಫೂರ್ತಿದಾಯಕವೇ ಸರಿ.
ಪಂಡಿತ್ ಜೀ ಜನಿಸಿದ್ದು ಸೆ. 25,1916. ಮಥುರೆಯ ನಾಗ್ಲಾ ಚಂದ್ಲಬಾನ್ ಎಂಬ ಗ್ರಾಮದಲ್ಲಿ. ಇವರಿಗೆ 3 ವರ್ಷವಿರುವಾಗ ಇವರ ತಂದೆ ಇಹಲೋಕ ತ್ಯಜಿಸುತ್ತಾರೆ. 8 ನೇ ವರ್ಷಕ್ಕೆ ಹೆತ್ತಮ್ಮ ಬಾರದೂರಿಗೆ ಯಾತ್ರೆ ಹೋಗುತ್ತಾರೆ. ಅನಂತರದಲ್ಲಿ ತಮ್ಮ ಸೋದರ ಮಾವನ ಮನೆಯಲ್ಲಿ ಇವರು ಮತ್ತು ಇವರ ಸಹೋದರ ಆಶ್ರಯ ಪಡೆಯುತ್ತಾರೆ. ಇವರ ಅತ್ತೆ ಪಂಡಿತ್ ಜೀ ಮತ್ತು ಅವರ ಸಹೋದರನನ್ನು ತಮ್ಮ ಸ್ವಂತ ಮಕ್ಕಳಂತೆಯೇ ಪೋಷಣೆ ಮಾಡುತ್ತಾರೆ. ಹೀಗಿರುವಾಗ ಕೆಲವು ವರ್ಷಗಳಲ್ಲಿ ಇವರು ಒಡಹುಟ್ಟಿದ ಸೋದರ ವಿಯೋಗಕ್ಕೂ ತುತ್ತಾಗುತ್ತಾರೆ.
ಇವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ, ಇವರು ಸೀಕಾರ್ ಶಾಲೆಗೆ ಸೇರುತ್ತಾರೆ. ಇವರಿಗೆ ಅಲ್ಲಿನ ಮಹಾರಾಜ ಚಿನ್ನದ ಪದಕ, ಪುಸ್ತಕ, ಹತ್ತು ರೂ. ವಿದ್ಯಾರ್ಥಿ ವೇತನವನ್ನು ನೀಡುತ್ತಾರೆ. ಪಿಲನಿಯಲ್ಲಿ ತಮ್ಮ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾಗುತ್ತಾರೆ. ಬಳಿಕ ಸನಾತನ ಧರ್ಮ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆಯಲು ಸೇರಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಅವರ ಸ್ನೇಹಿತನ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂಟು ಬೆಳೆಯುತ್ತದೆ. ಬಳಿಕ ಆಗ್ರಾಕ್ಕೆ ತೆರಳಿ ಎಂ.ಎ. ಪದವಿ ಪಡೆಯಲು ಕಾಲೇಜು ಸೇರುತ್ತಾರೆ. ಈ ಸಂದರ್ಭದಲ್ಲಿಯೂ ಅವರು ತಮ್ಮ ಆರೆಸ್ಸೆಸ್ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಬಿಗಿಗೊಳಿಸುತ್ತಾರೆ.
ಎಂ.ಎ. ಪದವಿ ಅಧ್ಯಯನ ಮಾಡುವ ಸಂದರ್ಭದಲ್ಲಿಯೇ ನಾನಾಜೀ ದೇಶ್ಮುಖ್ ಮತ್ತು ಭಾವ್ ಜುಗಾದೆ ಅವರ ಒಡನಾಟದಲ್ಲಿ ಸಂಘದ ಚಟುವಟಿಕೆಗಳಲ್ಲಿ ಮತ್ತಷ್ಟು ತೊಡಗಿಕೊಳ್ಳುತ್ತಾರೆ. ಇನ್ನೇನು ಎಂ.ಎ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅವರ ಸಹೋದರಿ ರಮಾ ದೇವಿ ಇಹಲೋಕ ಯಾತ್ರೆ ಮುಗಿಸುತ್ತಾರೆ. ಇದರಿಂದ ಪಂಡಿತ್ ಜೀ ಅವರು ದುಃಖಿತರಾಗುತ್ತಾರೆ. ಪದವಿ ಪರೀಕ್ಷೆ ಕೈತಪ್ಪಿ ಹೋಗುತ್ತದೆ. ಆ ಬಳಿಕ ಮಹಾರಾಜರಿಂದ ಬರುತ್ತಿದ್ದ ವಿದ್ಯಾರ್ಥಿ ವೇತನ ನಿಲುಗಡೆಯಾಗುತ್ತದೆ.
ಇದಾದ ಬಳಿಕ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾಗುತ್ತಾರೆ. ಇದು ಅವರ ಚಿಕ್ಕಮ್ಮನ ಒತ್ತಾಸೆಯೂ ಹೌದು. ಈ ಪರೀಕ್ಷೆ ಬರೆಯಲು ತೆರಳುವಾಗ ಇವರು ಭಾರತೀಯ ಉಡುಗೆಯಲ್ಲಿ ತೆರಳಿದ್ದರು. ಪಂಚೆ, ಜುಬ್ಬಾ, ಟೋಪಿ ಧರಿಸಿ ಬಂದ ಇವರನ್ನು ಉಳಿದ ಅಭ್ಯರ್ಥಿಗಳು ಅಪಹಾಸ್ಯ ಮಾಡಿದ್ದರು. ‘ಪಂಡಿತ್ ಜೀ’ ಬಂದ ಎಂದು ಅಣಕಿಸಿದ್ದರು. ಆದರೆ ಅಣಕಿಸಿದವರ ಬಾಯಿ ಮುಚ್ಚಿಸುವಂತೆ ಆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಂಡಿತ್ ಜೀ ಪ್ರಥಮ ಸ್ಥಾನ ಪಡೆದಿದ್ದರು. ಮುಂದೆ ಅವರನ್ನು ಹಾಸ್ಯ ಮಾಡುವ ನಿಟ್ಟಿನಲ್ಲಿ ಕರೆದಿದ್ದ ಹೆಸರು ‘ಪಂಡಿತ್ ಜೀ’ ದೇಶದ ಕೋಟ್ಯಂತರ ಭಾರತೀಯರ ಮನದಲ್ಲಿ ಗೌರವ ಸೂಚಕವಾಗಿ ಅಚ್ಚೊತ್ತಿ ಬಿಟ್ಟಿತ್ತು. ಅಂದಿಗೆ ಮಾತ್ರವಲ್ಲ. ಇಂದಿಗೂ ಸಹ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ದೇಶಪ್ರೇಮಿಗಳ ಹೃದಯದಲ್ಲಿ ‘ಪಂಡಿತ್ ಜೀ’ ಆಗಿಯೇ ಚಿರಸ್ಥಾಯಿಯಾಗಿದ್ದಾರೆ.
ಇದಾದ ಬಳಿಕ ಬಿ.ಟಿ. ಅಧ್ಯಯನಕ್ಕೆ ಪ್ರಯಾಗ್ಗೆ ತೆರಳಿ ಅಲ್ಲಿಯೂ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಬಿ.ಟಿ. ಪದವಿ ಬಳಿಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಬಳಿಕ ಉತ್ತರ ಪ್ರದೇಶದ ಲಕಿಂಪುರದ ಆರೆಸ್ಸೆಸ್ ವ್ಯವಸ್ಥಾಪಕರಾಗಿ, 1955 ರಲ್ಲಿ ಉತ್ತರ ಪ್ರದೇಶದ ಸಂಘದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಆ ಬಳಿಕ ಲಕ್ನೋದಲ್ಲಿ ರಾಷ್ಟ್ರಧರ್ಮ ಪ್ರಕಾಶನ ಸಂಸ್ಥೆ ಆರಂಭ ಮಾಡುತ್ತಾರೆ. ಆ ಪ್ರಕಾಶನದ ಮೂಲಕ ರಾಷ್ಟ್ರ ಧರ್ಮ ಮಾಸಿಕ, ಪಾಂಚಜನ್ಯ ಎಂಬ ಸಾಪ್ತಾಹಿಕ, ಸ್ವದೇಶ ಎಂಬ ದಿನಪತ್ರಿಕೆ ಪ್ರಕಟಿಸುತ್ತಾರೆ. ಆ ಮೂಲಕ ಜನರಲ್ಲಿ ರಾಷ್ಟ್ರೀಯತೆಯ ಚಿಂತನೆಗಳನ್ನು ಪಸರಿಸುವ ಕಾರ್ಯ ಮಾಡುತ್ತಾರೆ.
ಇದೇ ಸಂದರ್ಭದಲ್ಲಿ ನೆಹರೂ ಆಡಳಿತ ವಿರೋಧಿಸಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಮಂತ್ರಿ ಪದವಿ ಬಿಟ್ಟು ಹೊರಬರುತ್ತಾರೆ. ಇದಾದ ಬಳಿಕ ಜನಸಂಘ ಸ್ಥಾಪನೆಯಾಗುತ್ತದೆ. ಈ ಸಂದರ್ಭದಲ್ಲಿ ಪಂಡಿತ್ ಜೀ ಅವರು ರಾಜ್ಯ ಮಟ್ಟದಲ್ಲಿ ಜನಸಂಘ ಸ್ಥಾಪಿಸಿ ತಮ್ಮ ಕಾರ್ಯ ವೈಖರಿ, ಉತ್ಸಾಹದ ಮೂಲಕವೇ ತಮ್ಮ ಶಕ್ತಿಯ ಪ್ರದರ್ಶನ ಮಾಡುತ್ತಾರೆ. ಇವರ ಈ ಸಂಘಟನಾ ಸಾಮರ್ಥ್ಯದ ಕಾರಣಕ್ಕೆ ಮುಂದೆ 1968 ರಲ್ಲಿ ಇವರು ಜನಸಂಘದ ಅಧ್ಯಕ್ಷತೆ ವಹಿಸುವಂತಾಗುತ್ತದೆ. ಇವರ ಈ ಚಾತುರ್ಯ ಗಮನಿಸಿದ್ದ ಮುಖರ್ಜಿ ಅವರು ‘ ನನಗೆ ಇನ್ನೊಬ್ಬ ದೀನ ದಯಾಳ್ ಉಪಾಧ್ಯಾಯನಂತಹ ಶಕ್ತಿ ಜೊತೆಯಾಗುತ್ತಿದ್ದರೆ ಈ ಭಾರತದ ಭವಿಷ್ಯವನ್ನೇ ಬದಲಾಯಿಸುತ್ತಿದ್ದೆ’ ಎಂದು ಹೇಳುತ್ತಿದ್ದರು ಎಂದಾದರೆ ಪಂಡಿತ್ ಜೀ ಅವರ ಕಾರ್ಯ ವೈಖರಿ, ಒಗ್ಗೂಡಿಸುವ ಚಾತುರ್ಯ, ರಾಷ್ಟ್ ಭಕ್ತಿ ಅದೆಷ್ಟು ಪ್ರೇರಣಾದಾಯಕವಾಗಿರಬಹುದಲ್ಲವೇ.
ದೇಶದ ಇಂತಹ ಅದ್ಭುತ ಶಕ್ತಿ, ಚೈತನ್ಯ ಸ್ವರೂಪವಾಗಿದ್ದ ಆದರಣೀಯ ಪಂಡಿತ್ ಜೀ 1968 ಫೆಬ್ರವರಿ 11 ರಂದು ಬಾರದ ಲೋಕಕ್ಕೆ ತೆರಳುತ್ತಾರೆ. ಅವರ ಮರಣಾ ನಂತರದಿಂದ ಈ ವರೆಗೂ ಅವರು ಬಿಟ್ಟು ಹೋದ ಆದರ್ಶಗಳು ರಾಷ್ಟ್ರೀಯವಾದಿ ಭಾರತೀಯರ ಮನದಲ್ಲಿ ಇಂದಿಗೂ ಅಚ್ಚೊತ್ತಿದೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ತಮ್ಮ ಆದರ್ಶಗಳ ಮೂಲಕ ಬಿತ್ತಿದ್ದ ರಾಷ್ಟ್ರೀಯತೆಯ ಬೀಜ ಇಂದು ದೇಶದೆಲ್ಲೆಡೆ ತನ್ನ ನೆರಳನ್ನು ಹಬ್ಬಿಸಿದೆ. ಬೃಹತ್ ಮರವಾಗಿ ಬೆಳೆಯುವ ಮೂಲಕ ಇಂದಿನ ಕಾಲದ ದೇಶ ಭಕ್ತ ಯುವ ಮನಗಳೆಂಬ ಹಕ್ಕಿಗಳಿಗೆ ಆಶ್ರಯ ನೀಡಿದೆ. ಪಂಡಿತ್ ಜೀ ಎಂಬ ಹಳೆ ಬೇರಿನ ಹೊಸ ಚಿಗುರುಗಳು ದೇಶದ ಚಿಂತನೆಯಲ್ಲಿ ತೊಡಗಿಕೊಂಡಿವೆ. ಆರೆಸ್ಸೆಸ್ ನಂತಹ ದೇಶಪ್ರೇಮದ ಸಂಘಟನೆಯ ಕಾರ್ಯಕರ್ತರ ಮೂಲಕ ಇಂದಿಗೂ ಅವರ ಜೀವನಾದರ್ಶಗಳು ಚಿರಸ್ಥಾಯಿಯಾಗಿದೆ ಎಂದರೆ ಅತಿಶಯವಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.