ಭಾರತೀಯ ಸಂಸತ್ತು ಕೃಷಿಗೆ ಸಂಬಂಧಿಸಿದ 3 ಮಸೂದೆಗಳನ್ನು ಅಂಗೀಕರಿಸಿದ್ದು, 1991 ರಲ್ಲಿ ಆಗಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಪಿ.ವಿ. ನರಸಿಂಹ ರಾವ್ ಸರ್ಕಾರದ ನೇತೃತ್ವದಲ್ಲಿ ಮಂಡಿಸಿದ ಬಜೆಟ್ಗೆ ಇದನ್ನು ಹೋಲಿಸಬಹುದು. ಯಾಕೆಂದರೆ ರಾವ್ ಅವರ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲವಿರಲಿಲ್ಲ. ರಾಜಕೀಯ ವಲಯದಲ್ಲಾಗಿ, ಅವರ ಪಕ್ಷದಲ್ಲಾಗಲಿ ಅವರಿಗೆ ಯಾವುದೇ ಬೆಂಬಲ ಸಿಗುತ್ತಿರಲಿಲ್ಲ. ಆದರೆ ಇಂದು ಅವರ ಬಜೆಟ್ ಅನ್ನು ಭಾರತದ ಹಾದಿಯನ್ನು ಸಂಪೂರ್ಣವಾಗಿ ಬದಲಿಸಿದ ಆರ್ಥಿಕ ಸುಧಾರಣೆಗಳ ಬಜೆಟ್ ಎಂದು ನಾವು ಪ್ರಶಂಸಿಸುತ್ತೇವೆ.
ಇದೇ ರೀತಿ, 2020 ರ ವರ್ಷವು ಭಾರತದ ಇತಿಹಾಸದಲ್ಲಿ ಸ್ಮರಣೀಯವಾಗಲಿದೆ, ಬಹುಶಃ 1991 ಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ. ಏಕೆಂದರೆ ಕೃಷಿ ಭಾರತದ ಜೀವನಾಧಾರ. ಯಾವುದೇ ಪಕ್ಷದ ಸರ್ಕಾರ ಕೂಡ ಬಹುಪಾಲು ಮತದಾರರ ಕೋಪಕ್ಕೆ ಗುರಿಯಾಗುವ ಅಪಾಯಗಳನ್ನು ತೆಗೆದುಕೊಳ್ಳುವುದಿಲ್ಲ. ನಿರಂತರವಾಗಿ ಸರ್ಕಾರಗಳು ರೈತರನ್ನು ಅಲ್ಪಾವಧಿಯ ಲಾಭಗಳಿಗೆ ಸೀಮಿತಗೊಳಿಸಲು ಆದ್ಯತೆ ನೀಡಿವೆ. ರೈತರ ಭಾವನೆಗಳೊಂದಿಗೆ ಆಟವಾಡುವ ಅಪಾಯವನ್ನು ಯಾವುದೇ ಸರ್ಕಾರ ತಾನಾಗಿಯೇ ತಂದುಕೊಳ್ಳಲಾರದು. ಹೀಗಾಗಿಯೇ ರೈತರಿಗೆ ಒಳಿತಿನ ಕ್ರಮ ತೆಗೆದುಕೊಳ್ಳಲು ಕೂಡ ಹಿಂಜರಿದಿವೆ. ಭಾರತೀಯ ಕೃಷಿಯನ್ನು ಈಗ ಇರುವ ಅಡೆತಡೆಯಿಂದ ಹೊರಗೆ ತರಲು ಸ್ಪಷ್ಟ ದೃಷ್ಟಿ, ದೃಢ ಸಂಕಲ್ಪ ಮತ್ತು ಬದ್ಧತೆಯ ಅಗತ್ಯವಿದೆ. ಕಳೆದುಹೋದ ಮತ್ತು ತುಂಡು- ತುಂಡಾದ ನಿರ್ವಹಣಾ ವಿಧಾನಗಳು ಹೊಲಸು ಸಂಗ್ರಹಗೊಳ್ಳಲು ಅವಕಾಶ ಮಾಡಿಕೊಡುತ್ತದೆ ಮತ್ತು ಇದು ಬದಲಾಗಲೇ ಬೇಕು. ಇದನ್ನು ಮೋದಿ ಸರ್ಕಾರದ ಮೂರು ರೈತ ಮಸೂದೆಗಳು ಮಾಡುತ್ತವೆ. ಇದರ ಫಲಿತಾಂಶವಾಗಿ, ರೈತರು ವಿಶ್ವಾಸ ಪಡೆಯುತ್ತಾರೆ.
ಈ ಮಸೂದೆಯಿಂದ ರೈತನ ಉತ್ಪನ್ನಗಳಿಗೆ ಇಡೀ ದೇಶವೇ ಕ್ಷೇತ್ರವಾಗಲಿದೆ. ಅನೇಕ ವ್ಯಾಪಾರಿಗಳು / ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ರೈತನ ಮೇಲೆ ಅವಲಂಬಿತರಾಗುತ್ತಾರೆ. ರೈತ ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.
ಆದರೆ ಕೆಲವರು ರೈತ ಮಸೂದೆಗಳ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡುತ್ತಿದ್ದಾರೆ. ದೊಡ್ಡ ಉದ್ಯಮಿಗಳೊಂದಿಗೆ ರೈತರನ್ನು ಒಪ್ಪಂದ ಮಾಡಿಕೊಳ್ಳುವಂತೆ ಮಾಡಿ ಸರ್ಕಾರ ರೈತರನ್ನು ಅಧಃಪತನಕ್ಕೆ ದೂಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಸತ್ಯವೆಂದರೆ, ಕೃಷಿ ಒಪ್ಪಂದವನ್ನು ಈ ಹಿಂದೆಯೂ ಹಲವು ರಾಜ್ಯಗಳು ಅನೇಕ ದಶಕಗಳಿಂದ ಅನುಷ್ಠಾನಗೊಳಿಸಿವೆ. ಇತರ ರಾಜ್ಯಗಳೂ ಹಲವು ಒಪ್ಪಂದದ ಕೃಷಿ ಕಾಯ್ದೆಯನ್ನು ಅಂಗೀಕರಿಸಿವೆ.
ರೈತರಿಗೆ ಯಾವುದೇ ರಕ್ಷಣೆಯನ್ನು ಹೊಂದದ ಈ ಮಸೂದೆಗಳು ರೈತ ವಿರೋಧಿ ಆಗಿವೆ ಎಂಬ ಆರೋಪವನ್ನು ಈ ಮಸೂದೆಯ ಮೇಲೆ ಹೊರಿಸಲಾಗಿದೆ. ಆದರೆ ಎಂಎಸ್ಪಿಯ ರಕ್ಷಾ ಕವಚ ಮುಂದುವರೆಯಲಿದೆ. ಈ ಮಸೂದೆಗಳು ರೈತರಿಗೆ ಆಯ್ಕೆಗಳನ್ನು ನೀಡಲಿವೆ. ಆಹಾರ ಉತ್ಪನ್ನ ಕಂಪನಿಗಳು ಮುಂತಾದವುಗಳೊಂದಿಗೆ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ನೇರ ಒಪ್ಪಂದಕ್ಕೆ ಒಳಪಡಲು ಸಾಧ್ಯವಾಗಲಿದೆ.
ರೈತರು ತಮ್ಮ ಭೂಮಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಬೇಕು ಎಂದು ಸರ್ಕಾರ ಬಯಸುತ್ತಿದೆ ಎಂದು ಪ್ರತಿಪಕ್ಷಗಳು ಸುಳ್ಳನ್ನು ಹರಡಿವೆ. ಆದರೆ ಮಸೂದೆಯಲ್ಲಿ ರೈತರಿಗೆ ಸಮರ್ಪಕ ರಕ್ಷಣೆಯನ್ನು ಒದಗಿಸಲಾಗಿದೆ. ರೈತರ ಭೂಮಿಯ ಮಾರಾಟ, ಲೀಸ್ ಅಥವಾ ಅಡವು ಇಡುವಿಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಯಾವುದೇ ರಿಕವರಿಗಳಿಂದ ರೈತರ ಭೂಮಿಯನ್ನು ರಕ್ಷಿಸಲಾಗಿದೆ. ನಿಗದಿತ ಸಮಯದೊಳಗೆ ಕುಂದುಕೊರತೆಗಳನ್ನು ಸಮರ್ಪಕವಾಗಿ ನಿರ್ಣಯಿಸಲು ಯಾಂತ್ರಿಕತೆಯನ್ನು ಒದಗಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯ ರಕ್ಷಾ ಕವಚದಿಂದ ರೈತರನ್ನು ಹೊರಗಿಡುವ ಕುತಂತ್ರವನ್ನು ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ಎಂಎಸ್ಪಿ ಮೇಲೆ ರೈತ ಮಸೂದೆಗಳು ಯಾವುದೇ ರೀತಿಯಲ್ಲೂ ಪ್ರಭಾವ ಬೀರುವುದಿಲ್ಲ. ಎಂಎಸ್ಪಿ ವ್ಯವಸ್ಥೆ ಮುಂದುವರೆಯಲಿದೆಉತ್ತಮ ಬೆಲೆ ದೊರಕುವಂತೆ ಮಾಡಲು ರೈತ ಮಸೂದೆಗಳು ಎಪಿಎಂಸಿ ಮಾರುಕಟ್ಟೆಯ ಹೊರಗೆ ರೈತರಿಗೆ ವ್ಯಾಪಾರದ ಅವಕಾಶಗಳನ್ನು ಒದಗಿಸಿಕೊಡುತ್ತಿದೆ.
ಈ ಮಸೂದೆಗಳು ಉದ್ಯಮಿಗಳನ್ನು ಕೃಷಿ ಭೂಮಿ ಸ್ವಾಧೀನಪಡಿಸುವಂತೆ ಮಾಡುತ್ತದೆ ಮತ್ತು ರೈತರನ್ನು ಆಳುಗಳನ್ನಾಗಿ ಮಾಡುತ್ತದೆ ಎಂದು ರೈತರನ್ನು ಭಯಭೀತಗೊಳಿಸಲಾಗಿದೆ. ಆದರೆ ಮಸೂದೆಯು ರೈತರ ಭೂಮಿಯ ಮಾರಾಟ, ಲೀಸ್ ಮತ್ತು ಅಡವು ಇಡುವಿಕೆಯನ್ನು ನಿಷೇಧಿಸುತ್ತದೆ ಮತ್ತು ರೈತರ ಭೂಮಿಯ ಮೇಲೆ ಪ್ರಾಯೋಜಕರು ಮಾಲೀಕತ್ವ ಹೊಂದುವುದನ್ನು ಅಥವಾ ಕಾಯಂ ತಿದ್ದುಪಡಿಗಳನ್ನು ತರುವುದನ್ನು ನಿರ್ಬಂಧಿಸುತ್ತದೆ.
ಉದ್ಯಮಿಗಳ ವಿರುದ್ಧ ಮಸೂದೆಯು ಯಾವುದೇ ರೀತಿಯಲ್ಲೂ ರೈತರಿಗೆ ಕಾನೂನು ಸುರಕ್ಷತೆಯನ್ನು ನೀಡುವುದಿಲ್ಲ ಎಂಬ ಆರೋಪವನ್ನು ಹೊರಿಸಲಾಗಿದೆ, ಆದರೆ ಮಸೂದೆಯು ವಿವಾದ ಕುಂದುಕೊರತೆಗಳ ಪರಿಹಾರಕ್ಕೆ ಯಾಂತ್ರಿಕ ವ್ಯವಸ್ಥೆಯನ್ನು ಒದಗಿಸುತ್ತದೆ, ಇಲ್ಲಿ ರೈತರು ಸಂಬಂಧಿತ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸಿ ಕೃಷಿ ಒಪ್ಪಂದದಡಿಯಲ್ಲಿನ ಯಾವುದೇ ವಿವಾದವನ್ನು ಇತ್ಯರ್ಥಪಡಿಸಬಹುದು. ರೈತರ ಕೃಷಿ ಭೂಮಿಯ ವಿರುದ್ಧ ಯಾವುದೇ ಬಾಕಿಗಳನ್ನು ಮರುಪಡೆಯಲು ಯಾವುದೇ ಕ್ರಮವನ್ನೂ ಕೈಗೊಳ್ಳುವುದಿಲ್ಲ ಎಂಬುದನ್ನು ಮಸೂದೆ ಖಾತ್ರಿಪಡಿಸುತ್ತದೆ.
ಮಸೂದೆಯು ರೈತರಿಗೆ ಯಾವುದೇ ಬೆಲೆ ಖಾತ್ರಿಯನ್ನು ನೀಡುವುದಿಲ್ಲ. ಎಫ್ಸಿಐನಂತಹ ಕೇಂದ್ರೀಯ ಸಂಸ್ಥೆಗಳಿಂದ ಎಂಎಸ್ಪಿ ಮೂಲಕ ಆಹಾರ ಧಾನ್ಯಗಳನ್ನು ಖರೀದಿ ಮಾಡುವ ಪದ್ಧತಿ ನಿಂತು ಹೋಗುತ್ತದೆ ಎಂದು ಪ್ರತಿಪಕ್ಷಗಳು ರೈತರಲ್ಲಿ ಭಯ ಹುಟ್ಟಿಸುತ್ತಿವೆ. ಆದರೆ ಒಪ್ಪಂದದಡಿಯಲ್ಲಿ ಮಸೂದೆಯು ರೈತರಿಗೆ ಬೆಲೆ ಖಾತ್ರಿಯನ್ನು ಒದಗಿಸುತ್ತದೆ ಮತ್ತು ಪಾವತಿ ವೈಫಲ್ಯಕ್ಕೆ ಸಂಬಂಧಿಸಿದಂತೆ ದಂಡ ವಿಧಿಸುವ ನಿಬಂಧನೆಯೂ ಇದೆ. ಅಲ್ಲದೇ, ಎಂಎಸ್ಪಿಯು ಸ್ವತಂತ್ರ ರಚನೆಯಾಗಿದ್ದು, ಮಸೂದೆಯಿಂದ ಇದಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.
ಎಪಿಎಂಸಿ ಅಡಿಯಲ್ಲಿನ ಕಮಿಷನ್ ಏಜೆಂಟ್ ಮಾನ್ಯೀಕೃತವಾಗಿರುತ್ತದೆ ಮತ್ತು ಪಾವತಿ ಭದ್ರವಾಗಿರುತ್ತದೆ. ಆದರೆ ಈ ಮಸೂದೆ ರೈತರ ಪಾವತಿಯನ್ನು ರಕ್ಷಿಸುವುದಿಲ್ಲ ಎನ್ನಲಾಗುತ್ತಿದೆ, ಆದರೆಈ ಮಸೂದೆಯ ಅನ್ವಯ ವ್ಯಾಪಾರಿಯು ಅದೇ ದಿನ ಅಥವಾ ಮೂರು ದಿನಗಳ ಒಳಗೆ ರೈತರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ.
ಮಸೂದೆಯು ಎಪಿಎಂಸಿ (ರಾಜ್ಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ) ಹಕ್ಕುಗಳನ್ನು ಅತಿಕ್ರಮಿಸುತ್ತದೆ ಎಂಬ ಆರೋಪ ಸುಳ್ಳು. ಎಪಿಎಂಸಿ ಕಾಯ್ದೆಯ ವ್ಯಾಪ್ತಿಯನ್ನು ಈ ಮಸೂದೆ ಅತಿಕ್ರಮಿಸುದಿಲ್ಲ ಮತ್ತು ಎಪಿಎಂಸಿಗಳು ರಾಜ್ಯಗಳಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಿವೆ.ಎಪಿಎಂಸಿ ವ್ಯಾಪ್ತಿಯ ಹೊರಗಡೆಯೂ ವ್ಯಾಪಾರ ಮಾಡುವ ಹೆಚ್ಚುವರಿ ಅವಕಾಶವನ್ನು ಈ ಮಸೂದೆ ನೀಡುತ್ತದೆ.
ಕೃಷಿ ರಾಜ್ಯಗಳ ವಿಷಯವಾಗಿದೆ, ಹೀಗಾಗಿ ಈ ಮಸೂದೆ ಕಾನೂನುಬಾಹಿರ. ರೈತರಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಪ್ರಯೋಜನ ನೀಡುವ ಬದಲು ಇದು ಉದ್ಯಮಿಗಳಿಗೆ ಪ್ರಯೋಜನ ನೀಡುತ್ತದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಆದರೆ ಸತ್ಯವೇನೆಂದರೆ ಸಂವಿಧಾನದ 7ನೇ ಪರಿಚ್ಛೇದವು ರಾಷ್ಟ್ರೀಯ ಹಿತಾಸಕ್ತಿಯ ಅಡಿ ಕೇಂದ್ರ ಸರಕಾರವು ಕೃಷಿ ಕಾನೂನುಗಳನ್ನು ರಚಿಸಬಹುದು ಎಂದು ಹೇಳುತ್ತದೆ. ಹೆಚ್ಚಿನ ಆದಾಯ ಖಾತರಿ ಸೇರಿದಂತೆ ಒಪ್ಪಂದದಡಿ ರೈತರಿಗೆ ಬಹು ಪ್ರಯೋಜನಗಳು ಸಿಗಲಿವೆ.
ಮಸೂದೆಯು ಕೃಷಿ ಆದಾಯಗಳನ್ನು ಗಳಿಸುವುದರಿಂದ ರಾಜ್ಯಗಳನ್ನು ನಿರ್ಬಂಧಿಸುತ್ತದೆ, ಇದು ಎಪಿಎಂಸಿ ಮುಚ್ಚುವಿಕೆಗೆ ಕಾರಣವಾಗುತ್ತದೆ, ಉದ್ಯಮಿಗಳಿಗೆ ಕೃಷಿ ವ್ಯಾಪಾರದಲ್ಲಿ ಏಕಸ್ವಾಮ್ಯತೆಯನ್ನು ನೀಡುತ್ತದೆ ಎಂದು ಆರೋಪಿಸಲಾಗಿದೆ. ಆದರೆ ಎಪಿಎಂಸಿ ಮಾರುಕಟ್ಟೆಗಳ ಕಾರ್ಯಾಚರಣೆ ಮುಂದುವರೆಯಲಿದೆ ಮಸ್ತು ರೈತರನ್ನು ಆಕರ್ಷಿಸಲಿದೆ ಹಾಗೂ ಆದಾಯವನ್ನು ಗಳಿಸಲಿದೆ. ಫಾರ್ಮ್ ಗೇಟ್ಗೆ ಸನಿಹದಲ್ಲಿ ಹೊಸ ಮಂಡಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಸೂದೆ ಅನುವು ಮಾಡಿಕೊಡಲಿದೆ, ಇದರಿಂದ ಮಾರುಕಟ್ಟೆ ಲಭ್ಯತೆ ಸುಧಾರಣೆ ಗೊಳ್ಳಲಿದೆ ಮತ್ತು ರೈತರಿಗೆ ಸರಕುಗಳ ದರಗಳೂ ಇಳಿಕೆಯಾಗಲಿವೆ.
ವಿವಿಧ ರಾಜ್ಯಗಳು ಜಾರಿಗೆ ತಂದಿರುವ ಎಪಿಎಂಸಿ ಕಾನೂನನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿದೆ ಎಂಬ ಆರೋಪವೂ ಸತ್ಯಕ್ಕೆ ದೂರವಾಗಿದೆ. ಯಾಕೆಂದರೆ ಕೃಷಿ ಮಸೂದೆಯು ಯಾವುದೇ ರೀತಿಯಲ್ಲೂ ರಾಜ್ಯಗಳ ಕಾಯ್ದೆಯಾಗಿರುವ ಎಪಿಎಂಸಿ ಕಾಯ್ದೆಯನ್ನು ಅತಿಕ್ರಮಿಸುವುದಿಲ್ಲ. ಕೃಷಿ ಮಾರುಕಟ್ಟೆಯಿಂದ ಹೊರಗೆ ನಡೆಯುತ್ತಿರುವ ವ್ಯಾಪಾರವನ್ನು ಹೊಸ ಕಾನೂನು ಒಳಗೊಳ್ಳುತ್ತದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.