ಭಾರತ ಔಷಧಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಭಾರತೀಯ ಔಷಧಿಗಳು ರಫ್ತು ಆಗುತ್ತವೆ. ಆದರೆ ಭಾರತೀಯ ಜನರಿಗೆ ಅದರಲ್ಲೂ ಬಡವರಿಗೆ ಕೆಲವು ನಿರ್ಣಾಯಕ ಔಷಧಿಗಳು ಗಗನ ಕುಸುಮ. ಕ್ಯಾನ್ಸರ್ ಮುಂತಾದ ದೊಡ್ಡ ಕಾಯಿಲೆಗಳು ಬಡವರನ್ನು ಆರ್ಥಿಕವಾಗಿ ಜರ್ಜರಿತರನ್ನಾಗಿ ಮಾಡಿಬಿಡುತ್ತವೆ. ಇಂತಹ ಸಂದರ್ಭದಲ್ಲಿ ಔಷಧಿಗಳ ದುಬಾರಿ ಬೆಲೆ ಅವರನ್ನು ಬದುಕುವುದಕ್ಕಿಂತ ಸಾಯುವುದೇ ಮೇಲು ಎನ್ನುವುದು ದುಃಸ್ಥಿತಿಗೆ ತಂದು ಬಿಡುತ್ತದೆ. ಜನರನ್ನು ಈ ಸಂಕಷ್ಟದಿಂದ ಪಾರು ಮಾಡುವ ಸಲುವಾಗಿಯೇ ಜನ ಔಷಧಿ ಕೇಂದ್ರ ಗಳನ್ನು ಸ್ಥಾಪನೆ ಮಾಡಲಾಗಿದೆ. ಇತರ ಕಂಪನಿಗಳು ಮಾರಾಟ ಮಾಡುವ ಔಷಧಿಗಳಿಗೆ ಹೋಲಿಸಿದರೆ ಜನ ಔಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುವ ಔಷಧಿಗಳ ಬೆಲೆ ತುಂಬಾ ಕಡಿಮೆ.
ಕೊರೋನಾ ಲಾಕ್ಡೌನ್ ಸಂದರ್ಭದಲ್ಲೂ ಕೂಡ ಜನ ಔಷಧಿ ಕೇಂದ್ರಗಳು ದಾಖಲೆ ಮಟ್ಟದಲ್ಲಿ ಔಷಧಿಗಳನ್ನು ಮಾರಾಟ ಮಾಡಿವೆ. 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 146.59 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಅಗ್ಗದ ಮತ್ತು ಗುಣಮಟ್ಟದ ಔಷಧಿಗಳನ್ನು ಇಲ್ಲಿ ಮಾರಾಟ ಮಾಡಲಾಗಿದೆ. 2019-20ರ ಮೊದಲ ತ್ರೈಮಾಸಿಕದಲ್ಲಿ ಜನ ಔಷಧಿ ಕೇಂದ್ರಗಳಲ್ಲಿ 75.48 ಕೋಟಿ ರೂಪಾಯಿಗಳ ಔಷಧಿಗಳು ಮಾರಾಟವಾಗಿತ್ತು.
ಪ್ರಸ್ತುತ ಜನ ಔಷಧಿ ಕೇಂದ್ರಗಳಲ್ಲಿ ಇತರ ಕಂಪನಿಗಳ ಔಷಧಿಗಳಿಗಿಂತ 50-60% ಕಡಿಮೆ ಬೆಲೆಯಲ್ಲಿ 1,250 ಬಗೆಯ ಔಷಧಿಗಳು ದೊರಕುತ್ತಿವೆ. 204 ಶಸ್ತ್ರಚಿಕಿತ್ಸಾ ಉಪಕರಣಗಳು ಲಭ್ಯವಿದೆ.
ದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಅತ್ಯಗತ್ಯ ಔಷಧಿಗಳನ್ನು ಒದಗಿಸುತ್ತಿರುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಮಹತ್ವದ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಅವರು ಹೇಳಿದ್ದಾರೆ. 2024ರ ಮಾರ್ಚ್ ಅಂತ್ಯದ ವೇಳೆಗೆ ಜನ ಔಷಧಿ ಕೇಂದ್ರಗಳ ಸಂಖ್ಯೆಯನ್ನು 10500ಕ್ಕೆ ಏರಿಸಲಾಗುವುದು ಇಂದು ಅವರು ಮಾಹಿತಿಯನ್ನು ನೀಡಿದ್ದಾರೆ. ದೇಶದ ಪ್ರತಿಯೊಂದು ಜಿಲ್ಲೆ ಕೂಡ ಜನ ಔಷಧಿ ಕೇಂದ್ರಗಳನ್ನು ಹೊಂದಿರುವಂತೆ ನೋಡಿಕೊಳ್ಳಲಾಗುವುದು. ಇದರಿಂದ ದೇಶದ ಮೂಲೆ ಮೂಲೆಯ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ಲಭ್ಯವಾಗುತ್ತವೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
2020ರ ಸಪ್ಟೆಂಬರ್ 15ರ ವೇಳೆಗೆ ದೇಶದಲ್ಲಿನ ಜನ ಔಷಧಿ ಕೇಂದ್ರಗಳ ಒಟ್ಟು ಸಂಖ್ಯೆ 6603 ಆಗಿದೆ.
2020-21 ರಿಂದ 2024- 25ರ ಅವಧಿಯಲ್ಲಿ ರೂ. 490 ಕೋಟಿ ರೂಪಾಯಿಗಳ ಅನುಮೋದಿತ ಬಜೆಟ್ನೊಂದಿಗೆ, ಪಿಎಂಬಿಜೆಪಿ ಯೋಜನೆಯು ಗುಣಮಟ್ಟದ ಔಷಧಿಗಳ ಬೆಲೆಯನ್ನು ತೀವ್ರವಾಗಿ ತಗ್ಗಿಸುತ್ತಿದೆ ಮತ್ತು ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ, ವಿಶೇಷವಾಗಿ ಬಡವರಿಗೆ ಔಷಧಿಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದೆ. ಹೀಗಾಗಿ ಒಂದು ಅರ್ಥದಲ್ಲಿ ಇದು ಬಡವರ ಪಾಲಿಗೆ ಸಂಜೀವಿನಿಯೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.