ಭಾರತೀಯ ರೈಲ್ವೆ 16 ಏಪ್ರಿಲ್ 1853 ರಂದು ಅಸ್ತಿತ್ವಕ್ಕೆ ಬಂದಿತು, ಕೋಟ್ಯಾನು ಕೋಟಿ ಜನರನ್ನು ಭಾರತೀಯ ರೈಲ್ವೆ ಹೊತ್ತೊಯ್ದಿದೆ. ಭಾರತೀಯ ರೈಲ್ವೆ ಹಾಗೂ ಭಾರತೀಯ ಅಂಚೆ ಇವೆರಡರ ಸೇವೆ ಅವಿಸ್ಮರಣೀಯ ಹಾಗೂ ಅನಂತ.
ಸುಮಾರು 7 ವರ್ಷಗಳ ಕೆಳಗೆ ಭಾರತೀಯ ರೈಲ್ವೆ ಬಗ್ಗೆ ಜನಸಾಮಾನ್ಯರಿಗಿದ್ದ ಕಲ್ಪನೆಯೇ ಬೇರೆ ಈಗಿರುವ ಕಲ್ಪನೆಯೇ ಬೇರೆ, 2014 ಕ್ಕೂ ಮುಂಚೆ ರೈಲ್ವೆ ಎಂದರೆ ಹಿಂಜರಿಗೆ, ವಾಕರಿಕೆ, ಕೊಳಕು, ನಿಧಾನ, ಗುಜರಿ ಎಂಬಂತಹ ಕಲ್ಪನೆಗಳು ನಮ್ಮಲ್ಲಿ ಸರ್ವೇ ಸಾಮಾನ್ಯವಾಗಿದ್ದವು. ಸರಿಯಾಗಿ ಟಿಕೆಟ್ ಬುಕ್ ಮಾಡಲು ಆಗುತ್ತಿರಲಿಲ್ಲ, ಒಂದು ಆನ್ಲೈನ್ ಟಿಕೆಟ್ ಬುಕ್ ಮಾಡಬೇಕಿದ್ದರೆ ಸುಮಾರು ಗಂಟೆಗಳ ಕಾಲ ಕಾಯಬೇಕಿತ್ತು, ಇನ್ನು ಹಬ್ಬ ಹರಿದಿನಗಳ ಸಮಯದಲ್ಲಂತೂ ಆನ್ಲೈನ್ ಬುಕಿಂಗ್ ಎಂಬುದು ಕನಸಿನ ಮಾತೇ. ಇದಲ್ಲದೇ ಇದ್ದರೆ ಯಾವುದೋ ಏಜೆನ್ಸಿ ಬಳಿಗೆ ತೆರಳಿ ಅವರು ಕೇಳಿದ್ದಷ್ಟು ಹಣ ನೀಡಬೇಕಿತ್ತು. ಇಷ್ಟೆಲ್ಲಾ ಹಣ ನೀಡಿದರೂ ಸುಖಕರ ಪ್ರಯಾಣ ಎಂಬುದು ಕೈಗೆಟುಕದ ಮಾತೇ.!
ಇನ್ನು , ಟಿಕೆಟ್ ಪಡೆದು ರೈಲಲ್ಲಿ ಹೋಗೋಣವೆಂದರೆ ರೈಲುಗಳು 4, 5 ಗಂಟೆಗಳು ತಡ!
ರೈಲ್ವೇ ಪ್ರಯಾಣವೆಂದರೆ ನರಕ ದರ್ಶನವೇ ಸರಿ, ರೈಲ್ವೆ ಸ್ಟೇಷನಿಗೆ ಕಾಲಿಡುತ್ತಿದ್ದಂತೆಯೇ ಗಬ್ಬು ವಾಸನೆ ಎಲ್ಲಿ ನೋಡಿದರೂ ಗಲೀಜು! ರೈಲಿನ ಒಳಗೆ ಹೇಳತೀರದ ಕಥೆ! ರಿಸರ್ವೇಷನ್ ಕೋಚುಗಳಿಗೂ ನಾನ್ ರಿಸರ್ವ್ ಕೋಚ್ಗಳಿಗೂ ವ್ಯತ್ಯಾಸವೇ ಇಲ್ಲದಂತಾಗುತ್ತಿತ್ತು. ಎಲ್ಲೆಲ್ಲಿಯೂ ಜನ ಜಂಗುಳಿ. ಹಸಿವಾದಾಗ ಏನಾದರೂ ತಿನ್ನೋಣವೆಂದರೆ ಆ ವಾಸನೆಯಲ್ಲಿ, ಆ ಅಶುಚಿತ್ವ ಆಹಾರವನ್ನು ತಿನ್ನಲು ಮನಸ್ಸಾದರೂ ಹೇಗೆ ಬರುತ್ತಿತ್ತು.?
ಕಾಲ ಬದಲಾದಂತೆ, ಪರಿಸ್ಥಿತಿ ಬದಲಾಗಿದೆ, ಜೊತೆಗೆ ರೈಲ್ವೆ ಇಲಾಖೆಯೂ ಬದಲಾಗಿದೆ. ಆನ್ಲೈನ್ ಟಿಕೆಟ್ಗಳಿಗಾಗಿ ಯಾವುದೋ ಏಜೆನ್ಸಿಗೆ ಮನಸೋ ಇಚ್ಛೆ ಹಣ ಸಂದಾಯ ಮಾಡಬೇಕಿಲ್ಲ 2 ರಿಂದ 3 ನಿಮಿಷದ ಒಳಗೆ ಕುಳಿತಲ್ಲಿಯೇ ಟಿಕೆಟ್ ಬುಕ್ ಮಾಡಬಹುದಾಗಿದೆ.
ಇನ್ನು ರೈಲ್ವೆ ಸ್ಟೇಷನಿಗೆ ತೆರಳಿದರೆ ಯಾವುದೇ ಗಬ್ಬು ವಾಸನೆಯಿಲ್ಲ, ಗಂಟೆಗೊಮ್ಮೆ ಸ್ವಚ್ಛತೆ ಮಾಡುತ್ತಲೇ ಇರುತ್ತಾರೆ.
ಟ್ರೈನ್ ಬರುವುದು ಸ್ವಲ್ಪ ತಡವಾದರೆ, ವಿರಮಿಸಲು ಸ್ಟೇಷನಿನಲ್ಲೇ ವಿಶ್ರಾಂತಿ ಕೊಠಡಿಗಳು ಇವೆ, ಜೊತೆಗೆ ಹೈ ಸ್ಪೀಡ್ ವೈಫೈ ಕೂಡಾ ಲಭ್ಯವಿದೆ.
10 ರೂ ಕೊಟ್ಟರೆ 150 ML ಶುಚಿಯಾಗಿರುವ ಬಿಸಿ ಬಿಸಿ ಚಹಾ/ಕಾಫಿ/ ಹಾಲು ದೊರೆಯುತ್ತದೆ.
ನಿಮಗೆ ವಯಸ್ಸಾಗಿದೆ ರೈಲ್ವೇ ಬೋಗಿಗೆ ಕರೆದೊಯ್ಯಲು ವಾಹನಗಳು, ಎಸ್ಕಲೇಟರ್, ಲಿಫ್ಟ್ ಗಳು ಸಿಗುತ್ತವೆ ಅದೂ ಉಚಿತವಾಗಿ.
ಇಷ್ಟೆಲ್ಲಾ ಆಗಿ ರೈಲ್ವೇ ಬೋಗಿಯಲ್ಲಿ ಕುಳಿತರೆ ಆ ಕೆಟ್ಟ ವಾಸನೆಯಿಲ್ಲ, ಶೌಚಾಲಯಗಳು ಮಾಡರ್ನ್ ಆಗಿವೆ, ರೈಲ್ವೇ ಹಳಿಯ ಮೇಲೆ ಮಲಿನಗಳಿಲ್ಲ. ಕುಳಿತುಕೊಳ್ಳಲೂ ಕೂಡ ಒಳ್ಳೆಯ ಆಸನಗಳು, ಹವಾ ನಿಯಂತ್ರಿತ ಬೋಗಿಗಳು
ಹಸಿವಾದರೆ ಬಿಸಿ ಬಿಸಿ, ಶುಚಿಯಾದ ಆಹಾರಗಳು ಬರುತ್ತವೆ, ಆಹಾರವನ್ನು ನೀಡುವವರು ಕೈಗೆ ಗ್ಲೌಸ್ ತಲೆಗೆ ಕ್ಯಾಪ್ ಧರಿಸಿಯೇ ಆಹಾರ ನೀಡುತ್ತಾರೆ. ಅಂತರಾಜ್ಯ ಅಥವಾ 2, 3 ದಿನಗಳ ಪ್ರಯಾಣವಾದರೆ ರೈಲ್ವೇಯಲ್ಲೇ ಆಹಾರ ತಯಾರಾಗುತ್ತವೆ. ಸರಿ, ಪ್ರಯಾಣದಲ್ಲಿ ಯಾವುದೇ ತೊಂದರೆ ಆಗುತ್ತಿದೆ ಎಂದು ಭಾಸವಾದರೆ ರೈಲ್ವೆ ಸಹಾಯವಾಣಿ ಅಥವಾ ಟ್ವಿಟರ್ ನಲ್ಲಿ ರೈಲ್ವೇ ಇಲಾಖೆಯನ್ನು ಟ್ಯಾಗ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಲಿದೆ. ಇಷ್ಟು ಮುಂದುವರೆದಿದೆ ಭಾರತೀಯ ರೈಲ್ವೆ.
ಇತ್ತೀಚಿನ ಹಲವು ಭಾರತೀಯ ರೈಲ್ವೇ ಇಲಾಖೆಯ ಮಹತ್ತರ ಯೋಜನೆ ಹಾಗೂ ಸಾಧನೆಗಳನ್ನು ನೋಡುವುದಾದರೆ…
ಭಾರತೀಯ ರೈಲ್ವೆ ಡ್ರೋನ್ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಪರಿಚಯಿಸಿದೆ ಅಪರಾಧ ಚಟುವಟಿಕೆಗಳ ಮೇಲೆ ನಿಗಾ, ರೈಲ್ವೆ ಅಪಘಾತಗಳಿಂದ ಸಾವನ್ನಪ್ಪುವ ಆನೆಗಳ ಸುರಕ್ಷತೆ ಹಾಗೂ ಭದ್ರತಾ ಕಣ್ಗಾವಲು ಇದರ ಉದ್ದೇಶವಾಗಿದೆ.
ಪಿಎಂ ಗರೀಬ್ ಕಲ್ಯಾಣ್ ರೋಜ್ಗಾರ್ ಅಡಿ ರೈಲ್ವೆಯಿಂದ 5.5 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಿದೆ. 2,988 ಕೋಟಿ ರೂ.ಗಳ ಮೌಲ್ಯದ ಸುಮಾರು 165 ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಮುಂದಿನ ಮೂರು ವರ್ಷಗಳಲ್ಲಿ 44 ವಂದೇ ಭಾರತ್ ರೈಲು ಕಾರ್ಯಾರಂಭಗೊಳ್ಳಲಿದೆ.
ಲಾಕ್ಡೌನ್ ನಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರನ್ನು ಮನೆಗೆ ಕರೆದೊಯ್ಯಲು ರೈಲ್ವೆ ಇಲಾಖೆ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿತ್ತು. ಇದಕ್ಕಾಗಿ ರೈಲ್ವೆ ಇಲಾಖೆ ಮಾಡಿರುವ ಒಟ್ಟು ಖರ್ಚು 2,142 ಕೋಟಿ ಖರ್ಚು ಮಾಡಿತ್ತು ಅಲ್ಲದೇ ಸುಮಾರು 50 ಲಕ್ಷ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಸುರಕ್ಷಿತವಾಗಿ ಸೇರಿಸಿತು.
ಭಾರತೀಯ ರೈಲ್ವೆಯು ಮುಂದಿನ 10 ವರ್ಷದೊಳಗೆ ಸಂಪೂರ್ಣವಾಗಿ ಗ್ರೀನ್ ಸಾರಿಗೆಯಾಗಿ ಪರಿವರ್ತನೆಯಾಗುವ ಗುರಿ ಹೊಂದಿದೆ. ರೈಲ್ವೆ ಇಲಾಖೆಯು 2030ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ‘ಪರಿಸರ ಸ್ನೇಹಿ’ ಆಗುವತ್ತ ಹೆಜ್ಜೆ ಇಟ್ಟಿದೆ.
ಕೇವಲ 6-7 ವರ್ಷಗಳಲ್ಲಿ ಈ ಮಹತ್ತರವಾದ ಬದಲಾವಣೆ ರೈಲ್ವೆ ಇಲಾಖೆ ಕಂಡಿದೆ ಎಂದರೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ಅಲ್ಲದೇ ಮತ್ತಿನ್ನೇನೂ ಹೇಳಲು ಸಾಧ್ಯ! ನೀವೇ ಯೋಚಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.