ಬದುಕು ಇಂದಿದ್ದಂತೆ ನಾಳೆ ಇಲ್ಲ. ಮನುಷ್ಯನಲ್ಲಿ ಒಳ್ಳೆಯತನ ಮತ್ತು ಕೆಟ್ಟತನ ಇವೆರಡು ಸಹಜ ಗುಣ. ಸದಾ ಕಾಲ ದಂಗೆಯ ಮೂಲಕವೇ ಬದುಕು ಕಂಡುಕೊಂಡಿದ್ದವರ ಮನಸ್ಸು ಬದಲಾಗುವಂತೆ ಮಾಡಿ, ಸರಿಯಾದ ಮಾರ್ಗದಲ್ಲಿ ಅವರ ಬದುಕು ಸಾಗಲು ಪೂರಕ ವ್ಯವಸ್ಥೆಯನ್ನು ಮಾಡಿಕೊಟ್ಟ ‘ಭಾರತೀಯ ಸೇನೆ’ಯ ಯಶಸ್ಸಿನ ಕಥೆ ಇದು. ಅಂದ ಹಾಗೆ ಈ ಅಭೂತಪೂರ್ವ ಬದಲಾವಣೆ ನಡೆದಿರುವುದು ನಮ್ಮ ದೇಶದ ಅಸ್ಸಾಂನಲ್ಲಿ.
ಅಸ್ಸಾಂನ ತೇಜ್ಪುರದಲ್ಲಿ ಹಿಂದೆ ಬಂಡುಕೋರರಾಗಿದ್ದು, ಈಗ ಬದಲಾಗಿರುವವರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಭಾರತೀಯ ಸೇನೆ ಮುಂದಾಗಿದೆ. ಅವರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹಾಳೆ ತಟ್ಟೆ(ಟಮುಲ್ ಪ್ಲೇಟ್) ಗಳನ್ನು ತಯಾರಿಸುವ ಘಟಕಗಳನ್ನು ಆರಂಭ ಮಾಡಿದೆ. ಮಹಾರಾಷ್ಟ್ರದ ಪುಣೆ ಮೂಲದ ಅಸೀಮ್ ಫೌಂಡೇಷನ್ ಮೂಲಕ ಈ ಯೋಜನೆಗೆ ರೂಪುರೇಶೆಗಳನ್ನು ನೀಡಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಭಾರತೀಯ ಸೇನೆ, ಪರಿಸರ ಸ್ನೇಹಿ, ಜೈವಿಕ ವಿಘಟನೀಯ ಮತ್ತು ಕಡಿಮೆ ವೆಚ್ಚದಲ್ಲಿ ಇದನ್ನು ತಯಾರಿಸಲು ಸಾಧ್ಯವಿದೆ. ಈ ಯೋಜನೆಗೆ ಘಟಕಗಳಲ್ಲಿ ಪೈಲಟ್ ಯೋಜನೆಯ ಎಕ್ಸ್ ಕೇಡ್ರಸ್ಗಳನ್ನೂ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ ಎಂದು ತಿಳಿಸಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ಕೀರ್ತಿ ಭಾರತೀಯ ಸೇನೆಗೆ ಸಲ್ಲುತ್ತದೆ.
ಈ ಯೋಜನೆಯ ಮೂಲಕ ಹಿಂದೆ ದಂಗೆಗಳಲ್ಲಿ ಭಾಗವಹಿಸುತ್ತಿದ್ದ, ಈಗ ತಿದ್ದಿಕೊಂಡಿರುವ ಜನರಿಗೆ ಉದ್ಯೋಗಾವಕಾಶವನ್ನು ನೀಡಲಾಗಿದೆ. ಸ್ವ ಉದ್ಯೋಗದ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡುವ ದೃಷ್ಟಿಯಿಂದಲೂ ಈ ಯೋಜನೆ ಪರಿಣಾಮಕಾರಿಯಾಗಿದೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿಯೂ ಚಿಂತನೆಗಳನ್ನು ನಡೆಸಲಾಗುತ್ತಿದೆ. ಈ ಸಂಬಂಧ ಹೆಚ್ಚು ಉತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆಯೂ ರೂಪುರೇಶೆಗಳನ್ನು ಹಾಕಿಕೊಳ್ಳಲಾಗುತ್ತಿರುವುದಾಗಿ ಭಾರತೀಯ ಸೇನೆ ಮಾಹಿತಿ ನೀಡಿದೆ.
ಇಲ್ಲಿ ತಯಾರಾದ ಉತ್ಪನ್ನಗಳನ್ನು ಮಹಾರಾಷ್ಟ್ರ ಮತ್ತು ಅಸ್ಸಾಂಗಳಲ್ಲಿ ಮಾರಾಟ ಮಾಡುವ ಗುರಿ ಇರುವುದಾಗಿಯೂ ಸಂಸ್ಥೆ ತಿಳಿಸಿದೆ. ಆ ಮೂಲಕ ಮಾರಾಟ ವ್ಯಾಪ್ತಿಯನ್ನು ಹೆಚ್ಚಿಸಿ, ಅದರಿಂದ ಬಂದ ಮೊತ್ತದಲ್ಲಿ ಕಾರ್ಮಿಕರ ಆರ್ಥಿಕ ಸ್ಥಿತಿ ಮೇಲೆತ್ತಲು ಪ್ರಯತ್ನ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ. ಅಲ್ಲದೆ ಈ ರೀತಿಯ ತಟ್ಟೆಗಳ ತಯಾರಿಕೆಗೆ ಬೇಕಾದ ಕಚ್ಛಾವಸ್ತುವಾದ ಹಾಳೆಗಳನ್ನು ಹಳ್ಳಿಗಳಲ್ಲಿರುವ ತೋಟಗಳಿಂದ ಸಂಗ್ರಹ ಮಾಡಲಾಗುತ್ತದೆ. ಅವುಗಳಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ಸಂಸ್ಥೆಗಳಿಗೆ ತಲುಪಿಸುವ ಮೂಲಕ ಮಾರಾಟ ಮಾಡಲಾಗುವುದಾಗಿಯೂ ಸಂಸ್ಥೆ ಹೇಳಿದೆ.
ಈ ಕೇಂದ್ರದ ಯಶಸ್ಸನ್ನು ಕಂಡು ಸ್ಥಳೀಯರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂತಹ ಯೋಜನೆಗಳನ್ನು ಮತ್ತಷ್ಟು ಸ್ಥಾಪಿಸುವಂತೆಯೂ ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಈ ಹಿಂದೆ ತ್ಯಾಜ್ಯ, ಉಪಯೋಗ ಶೂನ್ಯ ವಸ್ತು ಎಂದೆಣಿಸಿಕೊಂಡು ಅವಗಣನೆಗೆ ಒಳಗಾಗಿದ್ದ ಹಾಳೆಗಳಿಂದ ಪ್ರಕೃತಿಗೆ ಪೂರಕವಾಗುವಂತೆ ಉತ್ಪನ್ನಗಳನ್ನು ತಯಾರಿಸುವ ಈ ಉದ್ಯೋಗವನ್ನು ಮಾಡಲು ಜನರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಸ್ಥಳೀಯ ಅನೇಕ ಮಂದಿ ಯುವಕರು ಹಾಳೆಗಳ ಸಂಗ್ರಹ, ತಟ್ಟೆಗಳ ತಯಾರಿ, ಮಾರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಈ ಯೋಜನೆಯ ಯಶಸ್ವಿ ಅನುಷ್ಠಾನದಿಂದ ಮತ್ತು ಅದರಿಂದ ಸಾಧ್ಯವಾದ ಆರ್ಥಿಕ ಸಬಲೀಕರಣದ ಕಾರಣದಿಂದ ಅಣಬೆ ಬೆಳೆ ಸೇರಿದಂತೆ ಮತ್ತಷ್ಟು ಹೊಸ ಉದ್ಯೋಗಗಳತ್ತ ಜನರು ಚಿತ್ತ ನೆಟ್ಟಿದ್ದಾರೆ. ಇದು ಹೆಚ್ಚಿನ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿಯೂ ಹೆಚ್ಚು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಯೋಜನೆ ಸುರಕ್ಷತೆ, ವಿಕಾಸ ಮತ್ತು ಅಸ್ಸಾಂ ಅನ್ನು ಸರ್ವಶ್ರೇಷ್ಟವನ್ನಾಗಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ. ಸದ್ಯ ಈ ಯೋಜನೆಯ ಫಲಿತಾಂಶ ಎಂಬಂತೆ ಹಿಂದೆ ಬಂಡುಕೋರರಾಗಿದ್ದ ಅನೇಕರ ಬದುಕು ಸಕಾರಾತ್ಮಕವಾಗಿ ಅಭಿವೃದ್ಧಿಯತ್ತ ಸಾಗಿದೆ ಎಂದರೂ ಸುಳ್ಳಾಗಲಾರದು.
ಮನುಷ್ಯರು ಎಂದಾದ ಮೇಲೆ ತಪ್ಪುಗಳು ಸಂಭವಿಸುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಮುಂದಿನ ಭವಿಷ್ಯದ ಕಡೆಗೆ ಹೆಜ್ಜೆ ಇಟ್ಟಾಗ ಬದುಕು ಹೆಚ್ಚು ಸುಂದರ ಎನಿಸುತ್ತದೆ. ಪಕ್ವವಾಗುತ್ತದೆ. ಇದಕ್ಕೆ ಸಾಕ್ಷಿ ಮಾಜಿ ಬಂಡುಕೋರರ ಬದುಕನ್ನು ಬದಲಾಯಿಸಿದ ‘ಭಾರತೀಯ ಸೈನ್ಯ’ದ ಹಾಳೆ ತಟ್ಟೆಗಳನ್ನು ಸಿದ್ಧಪಡಿಸುವ ಯೋಜನೆ. ಸೇನೆ ತಪ್ಪಿತಸ್ಥರನ್ನು ಶಿಕ್ಷಿಸುವ ಜೊತೆಗೆ, ಅವರಿಗೆ ಬದಲಾವಣೆಯಾಗಲು ಅವಕಾಶ ಮತ್ತು ಬದುಕುವುದನ್ನು ಕಲಿಸುವ ನಿಟ್ಟಿನಲ್ಲಿಯೂ ಸಮರ್ಥ ಹೆಜ್ಜೆಗಳನ್ನಿಡುತ್ತದೆ ಎಂಬುದಕ್ಕೆ ಸಾಕ್ಷಿ ಅಸ್ಸಾಂನ ಈ ಅರ್ಥಪೂರ್ಣ ಯೋಜನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.