ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಟಾಗ್ರಾಂ ಪರಿಚಯ ಯಾರಿಗಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಿಶ್ವದಾದ್ಯಂತ ಹೆಚ್ಚಿನ ಜನರಿಗೆ ಅದರ ಬಳಕೆ ಗೊತ್ತು. ಜೊತೆಗೆ ಅದನ್ನು ಹೇಗೆ ಬಳಸಿದರೆ ಯಾವ ಪರಿಣಾಮವಾಗಬಹುದು ಎಂಬುದರ ಅರಿವೂ ಇದೆ. ಸಾಮಾಜಿಕ ಜಾಲತಾಣಗಳಿಂದ ಒಳಿತು, ಕೆಡುಕು ಎರಡೂ ಇದೆ. ಹಲವಾರು ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾವು ಅರಿತೋ, ಅರಿಯದೆಯೋ ಮಾಡಿದ ಕೆಲವು ಕೆಲಸಗಳಿಂದ ನಮಗೆ ಅಥವಾ ಸಮಾಜಕ್ಕೆ ಕೆಡುಕಾಗಿರಲೂ ಬಹುದು. ಅಂದ ಮಾತ್ರಕ್ಕೆ ಸೋಷಿಯಲ್ ಮೀಡಿಯಾದಿಂದ ಏನೂ ಉಪಯೋಗವೇ ಇಲ್ಲ. ಆಗುವುದೆಲ್ಲವೂ ಕೆಡುಕೇ ಎಂದೆಲ್ಲ ಬಗೆದರೆ ಆ ಶಂಕೆ ಸರಿಯಲ್ಲ. ಕಾರಣ ಇತ್ತೀಚಿನ ಕೆಲವು ವರ್ಷಗಳಿಂದ ಅನೇಕರ ಬದುಕು ಸಕಾರಾತ್ಮಕವಾಗಿ ಬದಲಾಗುವುದಕ್ಕೂ ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣಗಳು ಸಹಾಯಕಾರಿಯಾಗಿವೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ತಮ್ಮ ಪ್ರತಿಭೆಗಳ ಪ್ರದರ್ಶನಕ್ಕೂ ವೇದಿಕೆಗಳಾಗಿವೆ ಎಂದರೆ ತಪ್ಪಾಗಲಾರದು. ಹಲವು ಸುಪ್ತ ಪ್ರತಿಭೆಗಳ ಅನಾವರಣಕ್ಕೂ ಸೋಷಿಯಲ್ ಮೀಡಿಯ ಸೂಕ್ತ ವೇದಿಕೆಯಾಗಿ ಬದಲಾಗಿದೆ. ಅದೆಷ್ಟೋ ಜನರು ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದಲೇ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂಬುದು ನಿಸ್ಸಂಶಯ. ಹಲವರು ತಮ್ಮ ಪ್ರತಿಭೆಗಳನ್ನು ತಾವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ಪ್ರತಿಭಾ ಪ್ರದರ್ಶನ ಮಾಡಿದರೆ, ಇನ್ನು ಕೆಲವರ ಪ್ರತಿಭೆಗಳನ್ನು ಮತ್ಯಾರೋ ತಮ್ಮ ಕೆಮರಾ, ಮೊಬೈಲ್ಗಳಲ್ಲಿ ಸೆರೆ ಹಿಡಿದು, ಅದನ್ನು ಅಪ್ಲೋಡ್ ಮಾಡುವ ಮೂಲಕ, ಕೆಲವೊಮ್ಮೆ ಆ ಕಲಾಕಾರನಿಗೂ ಅರಿವಿಗೆ ಬಾರದಂತೆ ಹಂಚುವ ಮೂಲಕ ಅವರನ್ನು ಸಮಾಜ ಗುರುತಿಸುವಷ್ಟರವರೆಗಿನ ಕೆಲಸವನ್ನು ಮಾಡುತ್ತಾರೆ.
ಕೊರೋನಾ ಸಂಕಷ್ಟದ ಅವಧಿಯಲ್ಲಂತೂ ಸಭೆ ಸಮಾರಂಭಗಳಿಂದ ಹಿಡಿದು ಪ್ರತಿಯೊಂದಕ್ಕೂ ಸಾಮಾಜಿಕ ಜಾಲತಾಣಗಳು ವೇದಿಕೆಯಾದದ್ದು ಸುಳ್ಳಲ್ಲ. ಈ ಸಂದರ್ಭದಲ್ಲಿ ಹೆಚ್ಚು ಸಮಯ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾದಾಗಿನಿಂದ ಜನರ ಪ್ರತಿಭೆಗಳೂ ಹೊರಬರಲಾರಂಭಿಸಿದ್ದು, ಕೊರೋನಾ ನಿಯಂತ್ರಣಕ್ಕೆ ಪೂರಕವಾಗುವ ಹೊಸ ವಿಚಾರ, ಅನ್ವೇಷಣೆಗಳ ಜೊತೆಗೂ ದೇಶ ವಿದೇಶದ ಸಾಮಾನ್ಯ ಜನರು ಸದ್ದು ಮಾಡಿ ಸುದ್ದಿಯಾಗಿದ್ದಾರೆ ಎಂದರೆ ಅದಕ್ಕೆಲ್ಲಾ ವೇದಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲದೆ ಬೇರೇನೂ ಅಲ್ಲ.
ಸಾಮಾಜಿಕ ಜಾಲತಾಣದಲ್ಲಿ ಈ ವರೆಗೆ ಹಲವು ದೇಸೀ ಪ್ರತಿಭೆಗಳೂ ಬೆಳಕಿಗೆ ಬಂದಿವೆ. ಈಗ ಇಂತಹದ್ದೇ ಒಂದು ವಿಡಿಯೋವನ್ನು ಭಾರತದ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರೈತನೋರ್ವ ತನ್ನ ಮೋಟಾರ್ ಬೈಕ್ನ ಚಕ್ರಗಳನ್ನು ಬಳಸಿ ಜೋಳದ ಕಾಳುಗಳನ್ನು ಸರಳ, ಸುಲಭವಾಗಿ ಬೇರ್ಪಡಿಸುವ ವಿಡಿಯೋ ಇದಾಗಿದೆ. ಈ ವಿಡಿಯೋಗೆ ಸುಂದರವಾದ ಕ್ಯಾಪ್ಷನ್ ಸಹ ನೀಡಿರುವ ಮಹೀಂದ್ರಾ ಅವರು ‘ನಮ್ಮ ದೇಶದ ರೈತರು ಬೈಕ್ ಮತ್ತು ಟ್ರ್ಯಾಕ್ಟರ್ ಅನ್ನು ಹೇಗೆ ಮಲ್ಟಿ ಟಾಸ್ಕಿಂಗ್ ಯಂತ್ರಗಳಾಗಿ ಸೃಜನಾತ್ಮಕವಾಗಿ ಪರಿವರ್ತಿಸುತ್ತಾರೆ ನೋಡಿ. ಈ ರೀತಿಯ ಅನ್ವೇಷಣೆಯೂ ಸಾಧ್ಯ ಎಂಬುದನ್ನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಇಂತಹ ಪ್ರತಿಭೆಗಳ ವಿಡಿಯೋಗಳನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ರೈತನೋರ್ವ ಮಾಡಿರುವ ಈ ಸಿಂಪಲ್ ಎನಿಸುವ ಐಡಿಯಾಗೆ ಮಹೀಂದ್ರಾ ಅವರಂತೆಯೇ ಸಾವಿರಾರು ಜನ ಮನಸೋತಿದ್ದಾರೆ. ಈ ವಿಡಿಯೋವನ್ನು ಹಲವಾರು ಮಂದಿ ಲೈಕ್, ಶೇರ್ ಮಾಡುವ ಮೂಲಕ ರೈತನ ಸಖತ್ ತಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಡಿಕೆಯಂತೆ ಈ ವಿಡಿಯೋಗೆ ಕೆಲವರು ಆಹಾರದ ವಿಚಾರದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಕಾಮೆಂಟ್ ಮಾಡಿದ್ದರೂ, ರೈತನ ತಲೆ ಖರ್ಚಿಗೆ ಮೆಚ್ಚುಗೆ ಸೂಚಿಸಿದ್ದಂತೂ ಸತ್ಯ. ( https://twitter.com/anandmahindra/status/1298964375709995008?s=19 )
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣ ಇಂತಹ ಹಲವು ಗ್ರಾಮೀಣ ಜನರ ಸಂಶೋಧನೆಗಳನ್ನು ವಿಶ್ವ ಮಟ್ಟಕ್ಕೆ ತಲುಪಿಸುವ ನೆಲೆಯಲ್ಲಿ ಸಹಾಯ ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಸಾಮಾನ್ಯರ ಅಸಮಾನ್ಯ ಸಾಧನೆಗೆ ಜೀವ ನೀಡುವ ಸಾಮಾಜಿಕ ಜಾಲತಾಣಗಳನ್ನು ಇಂತಹ ಪಾಸಿಟಿವ್ ವಿಚಾರಗಳಿಗಾದರೂ ನಾವು ಒಪ್ಪಿಕೊಳ್ಳಬೇಕು ಮತ್ತು ಶ್ಲಾಘಿಸಲೇ ಬೇಕು. ಏಕೆಂದರೆ ಇಂತಹ ಹಲವು ಪ್ರತಿಭೆಗಳು ಇಂದು ಸಮಾಜದ ಜನರನ್ನು ತಲುಪುತ್ತಿರುವುದು ಸಾಮಾಜಿಕ ಜಾಲತಾಣಗಳಿರುವುದರಿಂದಲೇ.
ಸಾಮಾಜಿಕ ಜಾಲತಾಣವೇ ಇರಲಿ, ಇನ್ನೇನೇ ಇರಲಿ ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರಿಂದ ಅದರ ಪರಿಣಾಮ ಸಕಾರಾತ್ಮಕ ಇರಬಹುದೋ ಅಥವಾ ನಕರಾತ್ಮಕ ಪರಿಣಾಮಗಳನ್ನು ಎದುರಿಸಬೇಕೋ ಎಂಬುದು ನಿರ್ಧರಿತವಾಗುತ್ತದೆ. ಹಿತ, ಮಿತವಾಗಿ, ಸಾಮಾಜಿಕ ಸ್ವಾಸ್ಥ್ಯ ಕೆಡದಂತೆ ಬಳಸಿದರೆ ಅದರಿಂದ ಇಂತಹ ಅನೇಕ ಉಪಯೋಗಗಳೂ ಇವೆ. ಅದರ ಪರಿಣಾಮಗಳ ಫಲ ಅದನ್ನು ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತ ಅಷ್ಟೇ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.