ಸುಖ ನಿದ್ರೆ ಹತ್ತದವನಿಗೆ ರಾತ್ರಿ ದೀರ್ಘ, ಬಳಲಿದವನಿಗೆ ದಾರಿ ದೀರ್ಘ, ಅಂತೆಯೇ ಜ್ಞಾನೋದಯವಾಗದವನಿಗೆ ಜೀವನ ಚಕ್ರವು ದೀರ್ಘವಾಗಿರುತ್ತದೆ. ಏಕೆಂದರೆ ಜ್ಞಾನವು ಜೀವನ ಪರ್ಯಂತ ನಮ್ಮೊಳಗಿರಬೇಕಾದ ಸತ್ಯತೆಯಾಗಿದೆ. ಜ್ಞಾನವು ಪರಬ್ರಹ್ಮ ರೂಪ. ನಮ್ಮ ಹಿರಿಯರು ಪೂರ್ವ ಕಾಲದಿಂದಲೂ ಜ್ಞಾನ ಸಂಪನ್ನಕ್ಕೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ನಹಿ ಜ್ಞಾನೇನ ಸದೃಶಂ ಎಂಬಂತೆ ಪ್ರಪಂಚದಲ್ಲಿ ಜ್ಞಾನಕ್ಕೆ ಸಮನಾದ ವಸ್ತು ಬೇರೊಂದಿಲ್ಲ. ವಿದ್ಯೆ ಎಂಬುವುದು ಜ್ಞಾನದ ಪ್ರತಿರೂಪ. ಇದು ವ್ಯಕ್ತಿಯ ಕುಶಲತೆ, ಯೋಗ್ಯತೆ, ಒಳನೋಟ, ವೈಜ್ಞಾನಿಕ ದೃಷ್ಟಿಕೋನ ಮತ್ತು ಆಂತರಿಕ ಏಳಿಗೆಯನ್ನು ಬೆಳೆಸುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಒಟ್ಟಾಗಿ ವಿದ್ಯೆಯು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಎನ್ನಬಹುದು. ವಿದ್ಯೆಯನ್ನು ಸರಿಯಾದ ರೀತಿಯಲ್ಲಿ ಜನತೆಗೆ ತಲುಪಿಸುವುದೇ ನಾವು ಕಂಡುಕೊಂಡಿರುವ ಶಿಕ್ಷಣ ಪದ್ಧತಿಯಾಗಿದೆ. ಶಿಕ್ಷಣವು ವ್ಯಕ್ತಿ ವಿಕಸನದ ಒಂದು ಶ್ರೇಷ್ಠ ಸಾಧನೆ ಎನ್ನಬಹುದು. ಭಾರತದ ಶಿಕ್ಷಣ ಪದ್ಧತಿಯು ಭೂತಕಾಲದಿಂದ ವರ್ತಮಾನದವರೆಗೂ ಹಲವಾರು ಹಂತಗಳನ್ನು ದಾಟಿ ಬಂದಿದೆ. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ವಿಹಾರ, ಪಾಠ ಶಾಲೆ, ಗುರುಕುಲಗಳಲ್ಲಿ ಶಿಕ್ಷಣವನ್ನು ನೀಡುತ್ತಿದ್ದರು. ಭಾರತಕ್ಕೆ ಬ್ರಿಟಿಷರ ಆಗಮನದ ನಂತರ ಆಂಗ್ಲ ಶಿಕ್ಷಣ ಪದ್ಧತಿಯನ್ನು ತಳಪಾಯವನ್ನಾಗಿಸಿ ವಿದ್ಯೆ ಕಲಿಸುತಿದ್ದರು. ಭಾರತ ಸ್ವಾತಂತ್ರ್ಯದ ನಂತರ, ನೈಜ ಶಿಕ್ಷಣ ಪದ್ಧತಿಗೆ ಮರಳಲು ಸಾಧ್ಯವಾಗಲಿಲ್ಲ. ಅಸಾಧ್ಯವೆಂಬುದನ್ನು ಪ್ರಧಾನಿ ಮೋದಿ ಸರ್ಕಾರ ಸಾಧಿಸಿ ತೋರಿಸಿದೆ. ಬರೋಬ್ಬರಿ 34 ವರ್ಷಗಳ ಬಳಿಕ ಭಾರತ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿಗೊಳಿಸಿದೆ.
ಹೊಸ ಶಿಕ್ಷಣ ನೀತಿಯಡಿ ಅಡಕವಾಗಿರುವ ಅಂಶಗಳನ್ನು ವಿಶ್ಲೇಷಿಸಿದಾಗ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ನೀತಿಯು ಪ್ರಸಂಶನೀಯ. ಇದರಿಂದಾಗಿ ಯುವ ಪೀಳಿಗೆಯು ಯಾವುದೇ ಚಿಂತೆಯಿಲ್ಲದೆ ಸಾಕ್ಷರರಾಗಬಹುದು. ಅನಾದಿ ಕಾಲದಲ್ಲಿ ಜನರು ತಮಗೆ ಇಷ್ಟವೆಂದೆನಿಸಿದ ಕಾರ್ಯವನ್ನು ಕರಗತ ಮಾಡಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಕಾಣುತ್ತಿದ್ದರು. ಅದೇ ರೀತಿಯಾಗಿ ಸರ್ಕಾರ ವೃತ್ತಿಪರ ಶಿಕ್ಷಣದ ಯೋಜನೆಗೆ ಹಸಿರು ನಿಶಾನೆ ನೀಡಿರುವುದು ಶ್ಲಾಘನೀಯ. ಜನರಿಗೆ ಅವರಾಡುವ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಅವರ ಜ್ಞಾನ ವೃದ್ಧಿಯಾಗುತ್ತದೆ ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ವಿದ್ಯಾರ್ಥಿಗಳಿಗೆ ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಪದ್ದತಿಯು ಮೆಚ್ಚುಗೆ ಪಡೆಯಬೇಕಾದ ಅಂಶವಾಗಿದೆ. ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಬೋಧನೆಗೆ ಜೀವನವನ್ನು ಸಮರ್ಥವಾಗಿ ಎದುರಿಸುವ ಕೌಶಲಗಳ ಬೋಧನೆಯೂ ಜಾರಿಗೊಳ್ಳಲಿದೆ. ಪ್ರತಿ ವರ್ಷವೂ ಇಂಥ ವಿಷಯಗಳ ಬೋಧನೆ ಇರಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಕ್ರೀಡೆ, ವೃತ್ತಿಪರ, ಕಲೆ, ವಾಣಿಜ್ಯ, ವಿಜ್ಞಾನದಂಥ ವಿಷಯಗಳಿಗೆ ಸಂಬಂಧಿಸಿದ ಹೆಚ್ಚುವರಿ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ.
ನೂತನ ಶಿಕ್ಷಣ ನೀತಿಯು ಶೈಕ್ಷಣಿಕ ಕ್ರೆಡಿಟ್ ಬ್ಯಾಂಕ್ ಸ್ಥಾಪನೆ, ಬಹು ವಿಷಯಗಳ ಶಿಕ್ಷಣಕ್ಕೆ ಆದ್ಯತೆ, ಒಂದೇ ಕೇಂದ್ರಿಯ ನಿಯಂತ್ರಕ ವ್ಯವಸ್ಥೆ, ಸಾಮಾನ್ಯ ಪ್ರವೇಶ ಪರೀಕ್ಷೆಗಳು ಮೊದಲಾದ ಅಂಶಗಳು ಭಾರತಕ್ಕೆ ಸಮರ್ಥ ಶಿಕ್ಷಣದ ತಳಹದಿಯನ್ನು ಹಾಕುವಲ್ಲಿ ಸಂಶಯವಿಲ್ಲ ಎಂದು ಹೇಳಬಹುದು. ಉತ್ತಮ ಶಿಕ್ಷಣವು ಅತ್ಯುನ್ನತ ಮಾನವ ಸಂಪನ್ಮೂಲಗಳನ್ನು ಬೆಳೆಸಲು ಕಾರಣವಾಗುತ್ತದೆ. ಹಾಗೆಯೇ ದೇಶವು ಉತ್ತುಂಗ ತಲುಪಲು ಮಾರ್ಗದರ್ಶನ ನೀಡುವಲ್ಲಿ ಈ ವಿದ್ಯಾವಂತ ನಾಗರಿಕರ ಪಾತ್ರವೂ ಹೆಚ್ಚುತ್ತದೆ. ಈ ನವ ಶಿಕ್ಷಣ ನೀತಿಯಿಂದಾಗಿ ಪ್ರತಿಯೊಂದು ಮಗುವೂ ತನ್ನ ಬದುಕಲ್ಲಿ ಸಾಕ್ಷರತೆಯನ್ನು ಕಾಣುವಂತಾಗಲಿ. ಯುವಜನತೆಯು ದೇಶದ ಎಲ್ಲಾ ವಲಯಗಳಲ್ಲೂ ಅತ್ಯುತ್ತಮ ಕಾರ್ಯಗಳನ್ನು ಗೈದು ಭಾರತ ದೇಶವು ಪ್ರಬಲ ರಾಷ್ಟ್ರವಾಗಿ ಪರಿವರ್ತನೆ ಹೊಂದಲಿ.
✍️ ಲಿಖಿತಾ ಜಿ. ಎನ್., ಕಲ್ಲಡ್ಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.