ಪ್ರಧಾನಿ ನರೇಂದ್ರ ಮೋದಿಯವರು “ಆತ್ಮನಿರ್ಭರ ಭಾರತ” ಎಂಬ ಕರೆಯನ್ನು ನೀಡಿದಾಗ ಹಲವರು ಈ ಹೊಸ ವ್ಯಾಖ್ಯಾನಕ್ಕೆ ಬೆರಗಾಗಿದ್ದರು. ಜೊತೆಗೆ ಬಹಳ ಸ್ವಾಭಿಮಾನದಿಂದ ಹೆಮ್ಮೆ ಪಟ್ಟಿದ್ದರು. ಯಾರ ಮೇಲೂ ಅವಲಂಬನೆ ಇಲ್ಲದೆ, ಸಂಪೂರ್ಣ ಸ್ವಾವಲಂಬಿಯಾಗಿ ಭಾರತ ಆಕಾಶದೆತ್ತರಕ್ಕೆ ಬೆಳೆಯಬೇಕೆಂಬ ಕನಸನ್ನು ಒಡಲೊಳಗೆ ಇಟ್ಟುಕೊಂಡ ಮಾತಾಗಿತ್ತದು. ಅದೆಷ್ಟು ಸುಂದರ ಶಬ್ದ…”ಆತ್ಮ ನಿರ್ಭರ ಭಾರತ…” ಈ ಆತ್ಮ ನಿರ್ಭರತೆ ಎನ್ನುವುದು ಅದು ಕೇವಲ ಈ ಬೌಗೋಳಿಕ ದೇಶಕ್ಕಲ್ಲ.ದೇಶವಾಸಿಗಳೆಲ್ಲರಿಗೂ ಅನ್ವಯಿಸುವಂತಹದ್ದು.
ಆತ್ಮ ನಿರ್ಭರತೆ ಅಂದರೆ ಬರಿಯ ಕೃಷಿ, ಉತ್ಪಾದನೆಯ ಕ್ಷೇತ್ರಗಳಿಗೆ ಮಾತ್ರ ಅನ್ವಯಿಸುವುದಲ್ಲ ಎಲ್ಲಾ ರೀತಿಯಿಂದಲೂ ಸ್ವಾವಲಂಬಿಯಾಗಬೇಕು. ಕಲೆ ಸಂಸ್ಕೃತಿ ನಮ್ಮ ಆಚಾರ ವಿಚಾರ ಎಲ್ಲದರಲ್ಲಿಯೂ ಆತ್ಮ ನಿರ್ಭರತೆ ಹೊಂದುವುದು ಉದ್ದೇಶ.
ಹಿಂದೆಯೇ ನಮ್ಮ ಹಿರಿಕರಿಗೆ ಆತ್ಮನಿರ್ಭರತದ ಬಗ್ಗೆ ಅಗಾಧವಾದ ಕಲ್ಪನೆಯಿತ್ತು. ಕೆಲವು ಉದಾಹರಣೆಯನ್ನ ನೋಡೋಣ. ನಮ್ಮ ಮನೆಯಲ್ಲಿರುವ ಹಿರಿಯರು ಯಾವಾಗಲೂ ಒಂದು ಮಾತನ್ನು ಹೇಳುತ್ತಲೇ ಇರುತ್ತಾರೆ ಬೇರೆಯವರ ಮನೆಗೆ ಸುಖಾಸುಮ್ಮನೆ ಹೋಗಬೇಡ, ಬೇರೆಯವರ ಬಳಿಯಲ್ಲಿ ಹಣ ಕೇಳಬೇಡ ಆದಷ್ಟು ಸ್ವಂತ ಆಲೋಚನೆ ಮಾಡಿ ಎಂದು. ಅವರು ಇನ್ನೂ ಮುಂದೆ ಯೋಚಿಸಿ ಅವರು ವಯಸ್ಸಾದ ಮೇಲೆ ಬೇರೆಯವರಿಗೆ ಕಷ್ಟವಾಗಬಾರದೆಂದು ದಿನಾ ದೇವರಲ್ಲಿ ನನ್ನನ್ನು ಯಾವುದೇ ಕಷ್ಟವಿಲ್ಲದ ಸಾವು ಕೊಡು ಎಂದು ಪ್ರಾರ್ಥನೆ ಮಾಡುವುದನ್ನು ಹಲವಾರು ಜನರು ನೋಡಿದ್ದೇವೆ. ಎಂಥಾ ಸ್ವಾವಲಂಬಿಯ ಕಲ್ಪನೆ ನಮ್ಮ ಹಿರಿಯರದ್ದು.
ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ಘೋಷಣೆಯನ್ನು ಮಾಡುವುದಕ್ಕಿಂತ ಮುಂಚೆಯೇ ಮೋದಿಯವರ ಸರ್ಕಾರ ಮೇಕ್ ಇನ್ ಇಂಡಿಯಾ ದ ಘೋಷಣೆಯನ್ನು ಕೂಡಾ ಮಾಡಿತು, ಅಲ್ಲದೇ ಭಾರತದಲ್ಲೇ ತಯಾರಿ ಮಾಡಿ ಇನ್ನು ಅದರ ಅಡಿಯಲ್ಲಿ ಸುಮಾರಷ್ಟು ಯೋಜನೆಗಳನ್ನು, ಸಾಲಗಳನ್ನು ನೀಡಿತು. ಇದೀಗ ಆತ್ಮನಿರ್ಭರ ಭಾರತ ಸಂಕಲ್ಪ ಮಾಡಿದ್ದಾರೆ. ಇದರ ಅಡಿಯಲ್ಲಿ 20 ಲಕ್ಷ ಕೋಟಿ ರೂ ಗಳನ್ನೂ ತೆಗೆದಿಟ್ಟಿದ್ದಾರೆ. ಆತ್ಮ ನಿರ್ಭರ ಭಾರತ ಎಂದರೆ ಇಂದು, ನಾಳೆಗೆ ಆಗುವಂತಹ ಕೆಲಸವೋ, ಯೋಜನೆಯೋ ಅಲ್ಲವೇ ಅಲ್ಲ, ವರ್ಷಗಳು ತೆಗೆದುಕೊಳ್ಳುತ್ತವೆ. ಇದು ಪ್ರಥಮ ಹೆಜ್ಜೆಯಷ್ಟೇ.
ಮೇಕ್ ಇನ್ ಇಂಡಿಯಾ ಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ be local for vocal ಎಂಬ ಮಾತನ್ನೂ ಹೇಳಿದರು, ಲೋಕಲ್ ವಸ್ತುಗಳನ್ನು ಕೊಳ್ಳಿ ಅದಕ್ಕೆ ಉತ್ತೇಜನದ ಜೊತೆಗೆ ಅದರ ಪ್ರಚಾರವನ್ನೂ ಮಾಡಿ ಎಂದು ಹೇಳಿದರು. ಇದು ನಿಜಕ್ಕೂ ಹಳ್ಳಿಗಳನ್ನು ಸಣ್ಣ ಉದ್ಯಮಗಳನ್ನು, ಗೃಹ ಕೈಗಾರಿಕೆಯನ್ನು ಬೆಳೆಸುವ ಯೋಜನೆ. ಲೋಕಲ್ ವಸ್ತುಗಳನ್ನು ಯಥೇಚ್ಛವಾಗಿ ಬಳಸಿ, ಉತ್ತೇಜನ ನೀಡಿದರೆ ಮಾತ್ರ ಆತ್ಮನಿರ್ಭರ ಭಾರತದ ಸಂಕಲ್ಪ ಪೂರ್ಣಗೊಳ್ಳುತ್ತದೆ.
ಒಂದು ಸಣ್ಣ ಉದಾಹರಣೆಯೊಂದನ್ನು ನೋಡೋಣ. ಒಂದು ಪಟ್ಟಣದಲ್ಲಿ 100 ಮನೆಗಳಿರುವ ಒಂದು ಅಪಾರ್ಟ್ಮೆಂಟ್ ಆ ಅಪಾರ್ಟ್ಮೆಂಟ್ ಗೆ ಬೇಕಾದ ಹಾಲು, ತರಕಾರಿ ಕೆಲವು ಗೃಹೋಪಯೋಗಿ ವಸ್ತುಗಳನ್ನು ಒಂದು ಹಳ್ಳಿಯಿಂದ ನಿರಂತರವಾಗಿ ಉತ್ತಮ ಗುಣಮಟ್ಟದ ಹಾಲು, ತರಕಾರಿಗಳನ್ನು ಪ್ರತಿನಿತ್ಯ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡು ಮುಂದುವರೆದರೆ ಹಳ್ಳಿಯಲ್ಲಿರುವ ಜನರ ಜೀವನಮಟ್ಟವೂ ಸುಧಾರಿಸುತ್ತದೆ, ಅಪಾರ್ಟ್ಮೆಂಟ್ ನಲ್ಲಿರುವವರಿಗೆ ಶುಚಿಯಾದ ಹಾಲು, ತರಕಾರಿಗಳು ದೊರೆಯುತ್ತದೆ, ಜೊತೆಗೆ ಅಪಾರ ಪ್ರಮಾಣದಲ್ಲಿ ಕೆಲಸ ಅರಸಿ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಯೋಜನೆ ಸಣ್ಣದೇ ಆದರೆ ಅದರ ಪ್ರಯೋಜನ ಅಪಾರ.
ವೊಕಲ್ ಫಾರ್ ಲೋಕಲ್ ಎಂಬುದು ದೊಡ್ಡ ವಸ್ತುಗಳನ್ನೇ ಖರೀದಿ ಮಾಡಬೇಕೆಂದಿಲ್ಲ. ಒಂದು ಸಣ್ಣ ಸೋಪ್ ಕೂಡ ಅದರಲ್ಲಿ ಬರುತ್ತದೆ. ಇದೆಲ್ಲ ಬಿಟ್ಟು ವಿದೇಶದ ಯಾವುದೋ ಸೋಪ್, ಶಾಂಪೂ ಖರ್ಚಾದ್ರೆ ನಾವು ಅಂಗಡಿಯವನಿಗೆ ಕೊಡೊ ದುಡ್ಡು supplier ಮೂಲಕ ಫ್ಯಾಕ್ಟರಿಗೆ ಹೋಗಿ ಕೊನೆಗೆ ಡಾಲರ್ ಆಗಿಯೋ, ಪೌಂಡ್ ಆಗಿಯೋ ಪರಿವರ್ತನೆಯಾಗಿ ವಿದೇಶಗಳಿಗೆ ಹೋಗುತ್ತೆ. ಹೀಗೆ ಆಗುತ್ತಲಿದ್ದರೆ ಇವತ್ತಿನ ನಮ್ಮ ದೇಶದ ಆರ್ಥಿಕತೆಯಲ್ಲಿ ನೂರು ರೂಪಾಯಿ ಇದ್ದದ್ದು ಮುಂದಿನ ವರ್ಷಕ್ಕೆ ಆ ನೂರು ರೂಪಾಯಿಯ ಬದಲು 90 ರೂಪಾಯಿ ಉಳಿಯುತ್ತೆ. ಈ ಪರಿಣಾಮವಾಗಬಾರದೆಂದೇ ಪ್ರಧಾನಿ ನರೇಂದ್ರ ಮೋದಿಯವರು ವೊಕಲ್ ಫಾರ್ ಲೋಕಲ್ ಎಂಬ ಯೋಜನೆ ರೂಪಿಸಿದ್ದು. ಇದನ್ನು ಜನಕ್ಕೆ ಅರ್ಥ ಮಾಡಿಸದೇ ಬಿಡಬಾರದು.
ಭಾರತದಲ್ಲಿ ಕೊರೊನಾ ಮಹಾಮಾರಿ ಕಾಲಿಡುವುದಕ್ಕಿಂತ ಮುಂಚೆ ಒಂದೇ ಒಂದು ಪಿ.ಪಿ.ಇ ಕಿಟ್ , ಒಂದೇ ಒಂದು ಕೊರೋನಾ ಸೋಂಕು ಪರೀಕ್ಷೆ ಮಾಡುವಂಥಹ ಲ್ಯಾಬ್ ದೇಶದಲ್ಲಿರಲಿಲ್ಲ. ಇದೀಗ 6 ಲಕ್ಷಕ್ಕೂ ಹೆಚ್ಚು ಪಿ.ಪಿ. ಇ ಕಿಟ್ ಪ್ರತಿ ದಿನ ತಯಾರಿಸುತ್ತದೆ, ಅಲ್ಲದೇ ವಿದೇಶಗಳಿಗೆ ರಫ್ತು ಕೂಡಾ ಮಾಡಲು ಪ್ರಾರಂಭಿಸಿದೆ ಇದು ಆತ್ಮ ನಿರ್ಭರ ಭಾರತ. ಇನ್ನು ಕೊರೊನಾ ಪರೀಕ್ಷೆ ಮಾಡುವ ಲ್ಯಾಬ್ ತೆಗೆದುಕೊಂಡರೆ ಸುಮಾರು 1050 ಕ್ಕೂ ಹೆಚ್ಚು ಲ್ಯಾಬ್ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ.
ಸಂಸ್ಕೃತಿ ಗಳಲ್ಲಿ ಆತ್ಮನಿರ್ಭರತೆ ಹೇಗೆ.?
ನಮ್ಮ ದೇಶದಲ್ಲಿ ಎಲ್ಲಾ ಜಾತಿ ಧರ್ಮದವರೂ ಕೂಡ ವಾಸಿಸುತ್ತಿದ್ದೇವೆ, ಎಲ್ಲರಿಗೂ ಹಿಂದಿನಿಂದಲೂ ಪಾಲಿಸಿಕೊಂಡು ಬಂದಂತಹ ಅವರದೇ ಆದಂತಹ ಸಂಸ್ಕೃತಿ, ಆಚರಣೆಗಳು ಇವೆ. ಇದರ ಮಧ್ಯೆ ವಿದೇಶಿ ಸಂಸ್ಕೃತಿ ಕೂಡಾ ನಮ್ಮನ್ನು ಆವರಿಸಿದೆ. ಕುಡಿದು ಕೇಕೆ ಹಾಕುವುದು, ಹಿರಿಯರ ಬಳಿಯಲ್ಲಿ ಅಸಭ್ಯವಾಗಿ ವರ್ತಿಸುವುದು, ಅನಾಗರಿಕರಂತೆ ವರ್ತಿಸುವುದು ಇದೆಲ್ಲಾ ಭಾರತೀಯರ ಸಂಸ್ಕೃತಿಯಲ್ಲ ಇದು ವಿಕೃತಿ. ಇದರಿಂದಲೂ ನಾವು ಮುಕ್ತಿ ಹೊಂದಿ ಸ್ವಾಭಿಮಾನಿ ಭಾರತೀಯನಾಗಬೇಕಾಗಿದೆ.
ಚೀನಾ ಪದೇ ಪದೇ ತನ್ನ ಕುತಂತ್ರ ಬುದ್ಧಿ ತೋರುತ್ತಿದೆ, ಈ ಬಾರಿ ನಮ್ಮ 20 ಜನ ಯೋಧರ ವೀರ ಮರಣಕ್ಕೆ ಕಾರಾಣವಾದರು. ಇದಾದ ನಂತರ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡಬೇಕು ಎಂದು ಭಾರತದಾದ್ಯಂತ ಜನರು ಚೀನಾ ವಿರುದ್ಧ ಆಕ್ರೋಶ ತೋರಿದ್ದಾರೆ.
ಓರ್ವ ಸಣ್ಣ ವ್ಯಾಪಾರಿಯಿಂದ ಹಿಡಿದು ಹೀರೋ ಕಂಪನಿ, ಜೆ.ಎಸ್.ಡಬ್ಲ್ಯೂ ನಂತಹ ದೊಡ್ಡ ಕಂಪನಿಗಳು ನಾವೂ ಚೀನಾವೊಂದಿಗಿನ ವ್ಯವಹಾರವನ್ನು ಹಂತ ಹಂತವಾಗಿ ನಿಲ್ಲಿಸುತ್ತೇವೆ ಎಂದು ಹೇಳಿತು. ಜನರೂ ಕೂಡ ಚೀನಿ ನಿರ್ಮಿತ ವಸ್ತುಗಳನ್ನು ಕೊಳ್ಳಲು ಒಂದು ಹಂತಕ್ಕಾದರೂ ನಿಲ್ಲಿಸಿದ್ದಾರೆ.
ಆತ್ಮನಿರ್ಭರ ಭಾರತ ಎಂದು ಘೋಷಿಸಿ ಸರ್ಕಾರ ಸುಮ್ಮನೆ ಕೂತಿಲ್ಲ, 59 ಚೀನಾ ಒಳಗೊಂಡಂತೆ ವಿದೇಶಿ ನಿರ್ಮಿತ ಮೊಬೈಲ್ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತು,ರಸ್ತೆ ನಿರ್ಮಾಣದ ಟೆಂಡರ್ ನಲ್ಲಿ ಚೀನಾಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿತು. CRPF ಕ್ಯಾoಟೀನ್ ಗಳಲ್ಲಿ ವಿದೇಶಿ ವಸ್ತುಗಳನ್ನು ಮಾರುವುದು ನಿಲ್ಲಿಸಲಾಯಿತು. ಲಡಾಖ್ ನ ಸೌರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಚೀನಾ ಕಂಪನಿಗಳು ಬೇಡ ಎಂದು ಆದೇಶ ಹೊರಡಿಸಿತು. ಹಂತ ಹಂತವಾಗಿ ಭಾರತ ಸರ್ಕಾರ ಕೂಡಾ ಆತ್ಮನಿರ್ಭರತೆ ಎಡೆಗೆ ಹೆಜ್ಜೆ ಹಾಕಲಾರಂಭಿಸಿದೆ.
ಬಾಬಾ ರಾಮದೇವ್
ಮೊದಲು ಇಡಿಯ ಭಾರತಕ್ಕೆ ಯೋಗದ ಮಹತ್ವವನ್ನು ಸಾರಿದವರು, ಅಲ್ಲದೇ ಎಷ್ಟೋ ಖಾಯಿಲೆಗಳನ್ನು ಯೋಗಾಭ್ಯಾಸದಿಂದಲೇ ಕಡಿಮೆ ಮಾಡಿಸಿ ತೋರಿಸಿದವರು. ನಂತರ ನಿಧಾನವಾಗಿ ಆಯುರ್ವೇದದ ಮಹತ್ವ ವನ್ನು ಸಾರಿದವರು.
ಈಗೀಗ ಪತಂಜಲಿ ಆಹಾರ ಉತ್ಪನ್ನಗಳು ಮನೆಮಾತಾಗಿವೆ, ನಿಖರವಾದ ಬೆಲೆಗೆ ಸ್ವದೇಶಿ ಉತ್ಪನ್ನವನ್ನು ತಯಾರು ಮಾಡುವ ಅತ್ಯಂತ ದೊಡ್ಡ ಕೆಲಸಕ್ಕೆ ಕೈ ಹಾಕಿದರು, ಸಾಕಷ್ಟು ಮಟ್ಟಿಗೆ ಅದರಲ್ಲಿ ಯಶಸ್ವಿ ಕೂಡಾ ಆದರು. ಈ ವಿದೇಶಿ ಕಂಪನಿಗಳ ಹಾವಳಿಯ ಮಧ್ಯೆ ಅಷ್ಟೊಂದು ದೊಡ್ಡದಾಗಿ ಸ್ವದೇಶಿ ಕಂಪನಿ ಸ್ಥಾಪಿಸಿ, ಯಶಸ್ವಿಯಾಗುವುದು ಭಾರತದ ಮಟ್ಟಿಗೆ ಸುಲಭವಲ್ಲ.
ಈಗ ಕೊರೊನಾ ಕ್ಕೆ ಔಷಧಿ ಕಂಡುಹಿಡಿಯುವುದರಲ್ಲಿ ಪ್ರಪಂಚದ ಎಲ್ಲಾ ಔಷಧಿ ತಯಾರಿಕಾ ಕಂಪನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಬಾಬಾ ರಾಮ್ ದೇವ್ ಕೊರೊನಾ ಕ್ಕೆ ಆಯುರ್ವೇದ ಔಷಧಿ ಕಂಡು ಹಿಡಿದಿದ್ದೇವೆ ಎಂದು ಆ ಔಷಧಿಯನ್ನು ಕೂಡಾ ಪರಿಚಯ ಮಾಡಿದರು. ಇದರ ಬೆನ್ನಲ್ಲೇ ತುಂಬಾ ವಿರೋಧಗಳೂ ವ್ಯಕ್ತವಾದವು ಜೊತೆಗೆ ಅವರ ಮೇಲೆ ಕೇಸ್ ಗಳು ಕೂಡಾ ದಾಖಲಾದವು.
ಯಾವ ದೇಶವೂ ಇಲ್ಲಿಯವರೆಗೆ ಔಷಧಿ ಕಂಡುಹಿಡಿದಿಲ್ಲ! ಅಂತಹದರಲ್ಲಿ ಭಾರತ ಅಂತಹ ಸಾಹಸ ಮಾಡಿದೆ ಅದಕ್ಕಾದರೂ ನಾವು ಅವರನ್ನು ಪ್ರಶಂಸಿಸುವುದು ಬೇಡವೇ.? ಅಲ್ಲದೆ ಅದರಿಂದ ಕೊರೊನಾ ರೋಗಿಗಳು ಗುಣ ಹೊಂದುತ್ತಾರೆ ಎಂದು ಕೂಡಾ ಹೇಳುತ್ತಿದ್ದಾರೆ.! ಭಾರತೀಯರಾದ ನಾವು ಅವರ ಪರ ಯಾಕೆ ನಿಲ್ಲಬಾರದು.!? ಇದು ಕೂಡಾ ಆತ್ಮ ನಿರ್ಭರ ಭಾರತದ ಭಾಗವೇ.
ಇನ್ನು ಭಾರತೀಯ ಪ್ರಜೆಗಳಾಗಿ ನಾವೇನು ಮಾಡಬೇಕು ಎಂಬುದು ನಮ್ಮೆಲ್ಲರ ಮನಸ್ಸಿನಲ್ಲಿ ಬರುವ ಪ್ರಶ್ನೆ. ಆತ್ಮನಿರ್ಭರ ಭಾರತಕ್ಕೆ ನಮ್ಮ ಕೊಡುಗೆ ನಿಜಕ್ಕೂ ಅವಶ್ಯಕತೆ ಇದೆ. ಆದಷ್ಟು ನಾವುಗಳು ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸಲು ಪ್ರಾರಂಭಿಸಿಬೇಕು, ನಮ್ಮ ಸುತ್ತಮುತ್ತ ಇರುವ ಅಂಗಡಿಗಳಲ್ಲೇ ಹೆಚ್ಚು ವ್ಯವಹಾರ ಮಾಡಬೇಕು. ಲಾಕ್ ಡೌನ್ ಸಂದರ್ಭದಲ್ಲಿ ಯಾವ ಸೂಪರ್ ಮಾರ್ಕೆಟ್ ಗಳೂ ಸಹ ಸಾಲಕ್ಕೆ ಸಾಮಾನು ಕೊಡಲಿಲ್ಲ ಆದರೆ ಮನೆ ಬಳಿಯಲ್ಲಿರುವ, ಬೀದಿ ಕೊನೆಯಲ್ಲಿರುವ ಸಣ್ಣ ಕಿರಾಣಿ ಅಂಗಡಿಯವರು ದುಡ್ಡು ನಿಧಾನಕ್ಕೆ ಕೊಡಿ ಈಗ ದಿನಸಿ ಕೊಂಡು ಹೋಗಿ ಎಂದು ಅದೆಷ್ಟೋ ಲಕ್ಷ ಕಿರಾಣಿ ಅಂಗಡಿ ಮಾಲೀಕರು ಹೇಳಿದ್ದಾರೆ. ಇಂಥವರ ಬಳಿಯಲ್ಲಿ ನಾವು ಖರೀದಿ ಮಾಡಬೇಕು ಅವರಿಗೂ ಖುಷಿ ಜೊತೆಗೆ ಒಂದೆರಡು ರೂಪಾಯಿಗಳು ಕಮ್ಮಿ ಕೂಡಾ ಇರುತ್ತದೆ!
ಆತ್ಮ ನಿರ್ಭರ ಭಾರತ ಎಂದರೆ ಅದೇನೋ ಸರ್ಕಾರದ ಯೋಜನೆ, ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಕೊಂಡರೆ ಅದು ನಮ್ಮ ತಪ್ಪು. ಈ ಸಂಕಲ್ಪ ಈಡೇರಿ ಭಾರತ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಬೇಕೆಂದರೆ ಅದಕ್ಕೆ ಪ್ರತಿಯೊಬ್ಬ ಪ್ರಜೆಯೂ ಸಂಕಲ್ಪ ಮಾಡಬೇಕಿದೆ.
ಕಲಾನಾಥ್✍️
✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.