ಭಾರತೀಯರು ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದ ಪುಣ್ಯ ಕ್ಷಣವೊಂದಕ್ಕೆ ಸಜ್ಜಾಗಲು ಅಯೋಧ್ಯೆ ಕ್ಷಣಗಣನೆ ಮಾಡುತ್ತಿದೆ. ರಾಮಾಯಣ ಕಾಲದಲ್ಲಿ 14 ವರುಷ ವನವಾಸ ಅನುಭವಿಸಿದ್ದ ರಾಮ, ಕಳೆದ ಹಲವು ವರ್ಷಗಳಿಂದ ಮಾನವರು ನೀಡುವ ತೀರ್ಪಿಗಾಗಿ ಕಾದು ಕುಳಿತಿದ್ದ. ರಾಮ ಇಂದು ಕೇವಲ ದೇವರಾಗಿ ಮಾತ್ರವೇ ಜನ ಮಾನಸದ ಮುಂದಿಲ್ಲ. ಬದಲಾಗಿ ಕೋಟ್ಯಂತರ ಭಕ್ತರ ಮನಸ್ಸಿನ ಭಾವನೆಯಾಗಿ, ರಾಷ್ಟ್ರದ ಮರ್ಯಾದೆಯಾಗಿ ಶ್ರೀ ರಾಮ ಜನಮಾನಸದಲ್ಲಿ ನೆಲೆಯಾಗಿದ್ದಾನೆ.
ಇಂದು ಭಾರತಕ್ಕೆ ಪುಣ್ಯ ದಿನ. ಯಾವ ರಾಮನ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿತ್ತೋ, ಆ ಭೂಮಿ ರಾಮನಿಗೇ ಸೇರಿದ್ದು ಎಂಬ ತೀರ್ಪು ಸುಪ್ರೀಂಕೋರ್ಟ್ ನೀಡಿದ ಬಳಿಕ ಇದೀಗ ಸರಯೂ ತೀರದಲ್ಲಿ ದಿವ್ಯವಾದ ರಾಮ ಮಂದಿರ ತಲೆ ಎತ್ತಲು ಸಿದ್ಧವಾಗಿದೆ. ಮತ್ತೆ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಪ್ರಭು ಶ್ರೀ ರಾಮಚಂದ್ರನ ಭವ್ಯ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಮತ್ತೊಂದು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ ಭಾರತ. ಈ ಸಂದರ್ಭದಲ್ಲಿ ಇಡೀ ಪ್ರಪಂಚವೇ ಭಾರತದ ಅಯೋಧ್ಯೆಯತ್ತ ದೃಷ್ಟಿ ನೆಟ್ಟಿದೆ ಎಂಬುದೂ ಸುಳ್ಳಲ್ಲ.
ರಾಜ ದಶರಥ ಮತ್ತು ಕೌಸಲ್ಯೆ ದಂಪತಿಯ ಪುತ್ರನಾಗಿ ಜನಿಸಿದ ರಾಮನ ಜನುಮ ದಿನದ ಬಗ್ಗೆ ಉಲ್ಲೇಖಗಳಿಲ್ಲದೇ ಹೋದರೂ, ಆತ ಕ್ರಿ.ಪೂ. 1450ರ ಆಸುಪಾಸಿನಲ್ಲಿ ವಿಷ್ಣುವಿನ ಏಳನೇಯ ಅವತಾರವಾಗಿ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದ ಎಂಬ ನಂಬಿಕೆಗಳಿವೆ. ಇದಕ್ಕೆ ಪೂರಕವಾಗಿ ಅನೇಕ ಪುರಾವೆಗಳು, ನಿದರ್ಶನಗಳೂ ನಮಗೆ ಸಿಗುತ್ತವೆ. ಇನ್ನು ರಾಮ ಜನ್ಮಭೂಮಿಯ ಬಗ್ಗೆ ಹೇಳುವುದಾದರೆ ಇಲ್ಲಿ ಸೀತಾ ಕಿ ರಸೋಯಿ, ಹನುಮಾನ್ ಮಂದಿರ ಮೊದಲಾದವುಗಳ ಕುರುಹುಗಳಿದ್ದು ಈ ಪ್ರದೇಶವನ್ನು ಪುರಾತನ ಕಾಲದಿಂದಲೂ ತೀರ್ಥಕ್ಷೇತ್ರ, ಪುಣ್ಯ ಭೂಮಿ ಎಂದೇ ನಂಬಿಕೊಂಡು ಬರಲಾಗಿದೆ.
ರಾಮ ಜನ್ಮಭೂಮಿಯ ರಾಮ ಮಂದಿರದ ಬಗ್ಗೆ ಹೇಳುವುದಾದರೆ, ಇಲ್ಲಿ ಶ್ರೀ ರಾಮನ ಮಂದಿರವಿತ್ತು. 1527ರಲ್ಲಿ ಮೊಘಲ್ ದೊರೆ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ ಭಾರತದ ಮೇಲೆ ದಾಳಿ ಮಾಡುತ್ತಾನೆ. 1528 ರಲ್ಲಿ ಬಾಬರ್‌ನ ಆದೇಶದಂತೆ ಮಿರ್ ಅಯೋಧ್ಯೆಯಲ್ಲಿದ್ದ ರಾಮ ಮಂದಿರವನ್ನು ನೆಲಸಮಗೊಳಿಸಿ, ಅದರ ಮೇಲೆ ‘ಬಾಬ್ರಿ ಮಸೀದಿಯನ್ನು’ ನಿರ್ಮಾಣ ಮಾಡಿದ. ಆ ಬಳಿಕ 1885 ರಲ್ಲಿ ಮಹಂತಾ ರಘುವರ ದಾಸ್ ಎಂಬವರು ರಾಮ ಜನ್ಮಸ್ಥಾನಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶವನ್ನು ಕೋರಿ ಮೊದಲ ಬಾರಿಗೆ ಈ ಪ್ರಕರಣವನ್ನು ನ್ಯಾಯಾಲಯದ ಮುಂದಿಟ್ಟರು.
ಇದಾದ ಬಳಿಕ ಅಯೋಧ್ಯೆಯ ರಾಮ ಮಂದಿಯ ಕೆಡಹಿ ಕಟ್ಟಲಾದ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರೆ, ಮತ್ತೊಂದು ಬದಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಆರಂಭಿಸುತ್ತಾರೆ. ಭಾರತಕ್ಕೆ ಬ್ರಿಟಿಷರ ಆಗಮನವಾದ ಬಳಿಕ ಅಯೋಧ್ಯೆಯಲ್ಲಿ ಹಿಂದೂ- ಮುಸಲ್ಮಾನರ ನಡುವೆ ಪೂಜಾ ಸ್ಥಳಕ್ಕೆ ಸಂಬಂಧಿಸಿದಂತೆ ವಿವಾದಗಳೇರ್ಪಡುತ್ತಿರುವುದನ್ನು ಗಮನಿಸಿ, ಗೋಡೆಗಳನ್ನು ನಿರ್ಮಿಸುವ ಮೂಲಕ ಎರಡೂ ಧರ್ಮೀಯರಿಗೆ ಪ್ರತ್ಯೇಕ ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ.
ಇದಾದ ಬಳಿಕ ರಾಮ ಜನ್ಮ ಪಡೆದ ಪುಣ್ಯ ಭೂಮಿಯಲ್ಲಿ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಸಿವಿಲ್ ಮೊಕದ್ದಮೆ ದಾಖಲಾಗಿ ಆಗಿನ ಸರ್ಕಾರ ಮಧ್ಯ ಪ್ರವೇಶ ಮಾಡಿ, ಇದನ್ನು ವಿವಾದಿತ ಸ್ಥಳ ಎಂದು ಘೋಷಿಸಿ ಬೀಗ ಜಡಿಯುವ ಕೆಲಸ ಮಾಡಿತು. ಇದಾದ ಬಳಿಕ ಈ ಸ್ಥಳವನ್ನು ಬಿಟ್ಟು ಕೊಡುವಂತೆ ಹಿಂದೂ, ಮುಸ್ಲಿಂ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.
1984 ರಲ್ಲಿ ವಿಶ್ವ ಹಿಂದೂ ಪರಿಷತ್‌ನ ನೇತೃತ್ವದಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಮಿತಿಯನ್ನು ರಚನೆ ಮಾಡಲಾಯಿತು. 1985 ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಪ್ರತಿಭಟನೆಗೆ ಮಣಿದ ಅಂದಿನ ಸರ್ಕಾರ ಜಡಿದಿದ್ದ ಬೀಗವನ್ನು ತೆಗೆಯಲು ಅನುಮತಿ ನೀಡಿತು.
1990 ರಲ್ಲಿ ಮಹತ್ವದ ಘಟನೆಯೊಂದಕ್ಕೆ ಭಾರತ ಸಾಕ್ಷಿಯಾಯಿತು. 1990ರ ಸೆಪ್ಟೆಂಬರ್25 ರಂದು ಬಿಜೆಪಿಯ ನಾಯಕ ಅಡ್ವಾಣಿ ಅವರು ಗುಜರಾತಿನ ಸೋಮನಾಥ ಮಂದಿರರದಿಂದ 10,000 ಕಿ.ಮೀ. ರಥಯಾತ್ರೆ ನಡೆಸುತ್ತಾರೆ. ಈ ಘಟನೆ ದೇಶದ ಹಿಂದೂ ಧರ್ಮೀಯರಲ್ಲಿ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೇ ವರ್ಷ ನವೆಂಬರ್‌ನಲ್ಲಿ ಅಡ್ವಾಣಿ ಅವರನ್ನು ಬಂಧಿಸಲಾಗುತ್ತದೆ.
1991 ರಲ್ಲಿ ರಾಮ ಮಂದಿರದ ಪರವಾಗಿ ಚಳುವಳಿ ಮತ್ತಷ್ಟು ಚುರುಕಾಗುತ್ತದೆ. ಸಂಘ ಪರಿವಾರದ ಕಾರ್ಯಕರ್ತರು ಅಯೋಧ್ಯೆಗೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಾರೆ. ದೇಶದೆಲ್ಲೆಡೆಯಿಂದ ಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳ ಸಂಗ್ರಹ ಮಾಡಲಾಗುತ್ತದೆ. 1992 ರ ಮಾರ್ಚ್ 20: ಕಲ್ಯಾಣ್ ಸಿಂಗ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಿವಾದಿತ ಜಾಗದ ಸುತ್ತಮುತ್ತಲಿನ 42.09 ಎಕರೆ ಪ್ರದೇಶವನ್ನು ರಾಮ ಜನ್ಮಭೂಮಿ ಶಿಲಾನ್ಯಾಸಕ್ಕೆ ನೀಡಿತು. ಅದೇ ವರ್ಷದ ನವೆಂಬರ್ 27 ರಂದು ಸಾಂಕೇತಿಕ ಕರಸೇವೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿತು.
6 ಡಿಸೆಂಬರ್ 1992 ರಂದು ರಾಮ ಜನ್ಮಭೂಮಿಯ ಮಂದಿರವನ್ನು ಕೆಡವಿ ನಿರ್ಮಿಸಲಾಗಿದ್ದ ‘ಬಾಬ್ರಿ’ ಮಸೀದಿಯನ್ನು ಧ್ವಂಸ ಮಾಡಲಾಗುತ್ತದೆ. ಅಯೋಧ್ಯೆ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗುತ್ತದೆ.
2001 ರಲ್ಲಿ ವಿವಾದಿತ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂಬ ಸಂಕಲ್ಪವನ್ನು ವಿಹಿಪ ಮಾಡುತ್ತದೆ. 2002 ರಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದ ಬಗೆಹರಿಸಲು ಆಗಿನ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಯೋಧ್ಯಾ ಸಮಿತಿ ರಚಿಸುತ್ತದೆ. ಅಲಹಾಬಾದ್ ಹೈಕೋರ್ಟ್‌ನ ತ್ರಿಸದಸ್ಯ ಪೀಠ ಈ ಭೂಮಿಯ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ತೀರ್ಮಾನಿಸಲು ಕ್ರಮ ಕೈಗೊಳ್ಳುತ್ತದೆ.
‘ಮುಲ್ಲಾ ಸಿಂಗ್’ ಎಂದೇ ಖ್ಯಾತರಾಗಿದ್ದ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿದ್ದ ಕರಸೇವಕರ ಮೇಲೆ ದಾಳಿ ನಡೆಸಿದ್ದ ವಿಚಾರವನ್ನೂ ನಾವಿಲ್ಲಿ ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ಅದೆಷ್ಟೋ ಜನರು ತಮ್ಮ ಜೀವವನ್ನೇ ಆಹುತಿ ನೀಡಿದ್ದರು. ಸುಮಾರು 134 ವರ್ಷಗಳ ಕಾಲ ನ್ಯಾಯಾಲಯದಲ್ಲಿ ನಾನಾ ಹಂತವಾಗಿ ವಿಚಾರಣೆಗೆ ಒಳಪಟ್ಟಿದ್ದ ರಾಮ ಜನ್ಮಭೂಮಿ ವಿವಾದಕ್ಕೆ ತಾರ್ಕಿಕ ಅಂತ್ಯ ದೊರೆತದ್ದು, ನಿಜವಾದ ಒಡೆಯರಿಗೆ ಆ ಭೂಮಿ ಸೇರಿದ್ದು ನರೇಂದ್ರ ಮೋದಿ ಆಡಳಿತದ 2019 ರಲ್ಲಿ.
2019 ನವೆಂಬರ್ 9 ರಂದು ಸುಪ್ರೀಂಕೋರ್ಟ್‌ನ ಐವರು ಸದಸ್ಯರನ್ನೊಳಗೊಂಡ ಪೀಠ ಈ ಸಂಬಂಧ ಹಲವು ವರ್ಷಗಳಿಂದ ನಡೆದುಕೊಂಡ ಬಂದ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಪುರಾತತ್ವ ಇಲಾಖೆಯ ಮಾಹಿತಿಯನ್ನಾಧರಿಸಿ, ಅಯೋಧ್ಯೆ ರಾಮ ಲಲ್ಲಾನಿಗೆ ಸೇರಬೇಕೆಂದು ತೀರ್ಪು ನೀಡುತ್ತದೆ. ಈ ತೀರ್ಪಿನ ಬಳಿಕ 2020 ಆಗಸ್ಟ್ 5 ರಂದು ಬಹುಜನ ಪೂಜಿತ ರಾಮನ ದೇವಾಲಯ ನಿರ್ಮಾಣಕ್ಕೆ ಸಂಭ್ರಮದ ಭೂಮಿ ಪೂಜೆಯೂ ನಡೆಯುತ್ತದೆ.
ಭಾರತ ಬೆಳಗುತ್ತಿದೆ
ಹೌದು ಅದೆಷ್ಟೋ ವರ್ಷಗಳಿಂದ ತನ್ನ ಜನ್ಮ ಸ್ಥಾನದಲ್ಲೇ ನ್ಯಾಯ ಕಂಡುಕೊಳ್ಳಲಾಗದ ರಾಮ, ಮಸೀದಿಯ ಕೆಳಗೆ ನ್ಯಾಯದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ. ಆದರೆ ಈಗ ವಿವಾದಗಳ ಮೂಲಕವೇ ಹೆಸರು ಪಡೆದಿದ್ದ ಅಯೋಧ್ಯೆಯ ಸರಯೂ ನದಿ ಮತ್ತೆ ತನ್ನ ರಾಮನನ್ನು ನೋಡುವ ಹೊಸ ಉಲ್ಲಾಸದೊಂದಿಗೆ ಹರಿಯಲಾರಂಭಿಸಿದ್ದಾಳೆ. ಎಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಿಲ್ಲ ಎಂದು ಜನರು ತಿಳಿದಿದ್ದರೋ, ಇಂದು ಅಲ್ಲಿಯೇ ಯಾವ ವಿವಾದಗಳೂ ಇಲ್ಲದೆ ರಾಮನ ದೇಗುಲಕ್ಕೆ ಶಿಲಾನ್ಯಾಸವೂ ನಡೆಯುತ್ತಿದೆ. ಇದಕ್ಕೆ ಕಾರಣ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಪ್ರಯತ್ನ, ಎಲ್.ಕೆ. ಅಡ್ವಾಣಿಯವರಂತಹ ಮಹಾನ್ ನಾಯಕರ ಹೋರಾಟದ ಫಲ, ಹಿಂದೊಮ್ಮೆ ಮುಲಾಯಂ ಸಿಂಗ್ ಆಡಳಿತದಲ್ಲಿ ಅಯೋಧ್ಯೆಯಲ್ಲಿ ಪ್ರಾಣತೆತ್ತ ನೂರಾರು ಕರಸೇವಕರ ಬಲಿದಾನದ ಫಲ. ಜೊತೆಗೆ ಭಾರತದ ಅದೆಷ್ಟೋ ಜನರ ಆಶಯ ಮತ್ತು ಕೆಂಡದಂತೆ ಅಸತ್ಯಗಳನ್ನು ಸುಟ್ಟು ಹಾಕಿ, ರಾಮ ಜನ್ಮಭೂಮಿ ರಹಸ್ಯಗಳನ್ನು ಜಗತ್ತಿಗೆ ಸಾಕ್ಷಿ ಸಮೇತ ನೀಡಲು ಸಾಧ್ಯವಾಗಿಸಿದ ಶ್ರೀ ರಾಮನ ಆಶೀರ್ವಾದದ ಫಲ ಎನ್ನಬಹುದು.
ಭರತ ಭೂಮಿ ಪರಮ ಪಾವನ ಭೂಮಿಯಲ್ಲಿನ ಅನೇಕ ಇತಿಹಾಸ ಆಕ್ರಮಣಕಾರರ ಅಟ್ಟಹಾಸಕ್ಕೆ ಕೊಚ್ಚಿಕೊಂಡು ಹೋಗಿದೆ. ಅದೆಷ್ಟೋ ದೇವಾಲಯಗಳು ಕುರುಹುಗಳೇ ಇಲ್ಲದಂತೆ ನಾಶವಾಗಿವೆ. ಅಂತಹ ಸ್ಥಳಗಳ ಮೇಲೆ ಇನ್ಯಾವುದೋ ಕಟ್ಟಡಗಳು ರಾರಾಜಿಸುತ್ತಿವೆ. ರಾಮ ಜನ್ಮಭೂಮಿಯ ಕಥೆಯೂ ಇದೇ ಆಗಿದೆ. ಆದರೆ ಇದೀಗ ಜನ್ಮಭೂಮಿಯ ಸತ್ಯ ದರ್ಶನ ಜಗತ್ತಿಗೆ ಆಗಿದೆ. ಅಲ್ಲಿ ರಾಮ ಮಂದಿರ ಇತ್ತು ಎಂಬುದಕ್ಕೆ ಅನೇಕ ಕುರುಹುಗಳೂ ದಕ್ಕಿವೆ. ಸದ್ಯ ಎಲ್ಲಾ ವಿವಾದಗಳು ಬಗೆಹರಿದು ಮತ್ತೆ ಭಾರತದ ಗರಿಯಲ್ಲಿ ರಾಮ ಮಂದಿರ ತಲೆ ಎತ್ತಲಿದೆ. ರಾಷ್ಟ್ರದ ಮರ್ಯಾದೆ ಯಾಗಿರುವ ರಾಮ ಮತ್ತೆ ರಾರಾಜಿಸಲಿದ್ದಾನೆ. ಈ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಗಳಾಗುತ್ತಿದ್ದೇವೆ. ಇದಕ್ಕಿಂತ ಪುಣ್ಯ ಇನ್ನೇನಿದೆ. ಈ ಸಾರ್ಥಕ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿರುವ ನಮ್ಮೆಲ್ಲರ ಬದುಕೂ ಸಾರ್ಥಕ.
ಹಿಂದೆ ರಾಮಾಯಣ ಕಾಲದಲ್ಲಿ ಪ್ರಭು ಶ್ರೀ ರಾಮನ ದರ್ಶನಕ್ಕಾಗಿ ಆ ಶಬರಿ ಕಾಯುತ್ತಿದ್ದಳು. ಆಕೆಯ ಆಸೆಯನ್ನು ಶ್ರೀ ರಾಮ ಈಡೇರಿಸಿದ್ದ. ಇಂದು ಕೋಟಿ ಕೋಟಿ ಜನರು ರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಶಬರಿಯಂತೆ ಕಾಯುತ್ತಿದ್ದಾರೆ. ಇನ್ನೇನು ಕೆಲವು ಸಮಯದಲ್ಲೇ ಈ ಆಶಯವೂ ಕೈಗೂಡಲಿದೆ ಎಂಬುದಕ್ಕೆ ಭರವಸೆ ತುಂಬುತ್ತಿದೆ ಇಂದಿನ ಈ ಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭ. ಆದಷ್ಟು ಬೇಗ ಸರಯೂ ತಟದಲ್ಲಿ ವಿರಾಜಮಾನನಾಗುವ ಶ್ರೀ ರಾಮನನ್ನು, ಸೀತೆ, ಲಕ್ಷ್ಮಣ, ಹನುಮಂತನನ್ನು ಕಂಡು ಪುನೀತರಾಗುವ ಭಾಗ್ಯ ಎಲ್ಲರದ್ದಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.