ಗೆಲು ದನಿಯು ಗುಡುಗುಡುಗಿ, ಸೋಲು ಸೊಲ್ಲಡಗಿ… ನಾಳೆಗಳು ನಮದೆನಿಸಿವೆ… ಜಯದ, ನಾಳೆಗಳು ನಮದೆನಿಸಿವೆ.. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿ ನೋಡಿದಾಗ ಈ ಹಾಡಿನ ಸಾಲುಗಳು ನೆನಪಾಗುತ್ತವೆ. ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದನ್ನು, ಜನರಿಗೆ ನೀಡಿದ ವಾಗ್ದಾನವನ್ನು ಮರೆಯದೆ ಪೂರೈಸುವ ಸಲುವಾಗಿ ಮೋದಿ ಪಡೆಯ ಕಾರ್ಯವೈಖರಿ ಎಲ್ಲರಿಗೂ ಮಾದರಿ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ಕೋಟ್ಯಾನುಕೋಟಿ ಭಕ್ತರ ಕನಸಿನ ರಾಮ ಮಂದಿರ ನಿರ್ಮಾಣಕ್ಕೆ ಸಿಕ್ಕ ಐತಿಹಾಸಿಕ ಜಯ.
ರಾಜಕಾರಣಿಗಳು ಎಂದರೆ ಕೇವಲ ಸುಳ್ಳುಗಳ ಮೂಲಕವೇ, ಪೊಳ್ಳು ಭರವಸೆ ನೀಡುವುದರ ಮೂಲಕವೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾಲವೊಂದಿತ್ತು. ಆದರೆ ಇದಕ್ಕೆ ವಿರುದ್ಧ ಎಂಬಂತೆ ಮೋದಿ ಮತ್ತವರ ತಂಡ ಈಡೇರಿಸುವ ಭರವಸೆಗಳನ್ನೇ ನೀಡುವುದು ಮತ್ತು ನೀಡಿದ ಭರವಸೆಗಳನ್ನು ಈಡೇರಿಸುವತ್ತ ಚಿತ್ತ ನೆಟ್ಟಿರುವುದು. ಭಾರತ ಬದಲಾಗುತ್ತಿದೆ, ಅಭಿವೃದ್ಧಿಯ ದೆಸೆಯತ್ತ ದಾಪುಗಾಲಿಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ನಿಷ್ಠೆಯಿಂದ ಕಾಯಕ ಮಾಡುವವನಿಗೆ ಇಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ಜನಮಾನಸದಲ್ಲಿ ನರೇಂದ್ರ ಮೋದಿ ಅವರು ಅಚ್ಚೊತ್ತಿದ್ದಾರೆ ಎಂದರೆ ಅದು ತಪ್ಪಾಗಲಾರದು.
ಮೋದಿ ಒಬ್ಬ ವ್ಯಕ್ತಿಯಲ್ಲ, ಭವ್ಯ ಭಾರತದ ಬದಲಾವಣೆಯ ಶಕ್ತಿ
ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶ ಕಂಡು ಕೇಳರಿಯದ ಬದಲಾವಣೆಗಳ ಪರ್ವಗಳನ್ನು ಕಂಡಿದೆ. ಯಾವ ಕೆಲಸಗಳು ಭಾರತದಲ್ಲಿ ನಡೆಯುವುದು ಸಾಧ್ಯವೇ ಇಲ್ಲ ಎಂಬುದಾಗಿ ಜನರು ತಿಳಿದುಕೊಂಡಿದ್ದರೋ, ಇಂದು ಅದೇ ಜನರು ಮೂಗಿನ ಮೇಲೆ ಬೆರಳೇರಿಸಿ ಮನಸ್ಸು ಮಾಡಿದರೆ ಯಾವ ಸಾಧನೆಯನ್ನು ಬೇಕಾದರೂ ಸಾಧಿಸುವುದು ಸಾಧ್ಯ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಯ ನವ ಯುಗದ ಆರಂಭವಾಗಿದೆ ಎಂಬುದಕ್ಕೆ ಮುಖ್ಯ ಉದಾಹರಣೆಯಾಗಿ 2 ಐತಿಹಾಸಿಕ ಘಟನೆಗಳನ್ನು ನಾವು ಗಮನಿಸಬಹುದು.
ನೆಹರೂ ಅವರ ಆಡಳಿತದಲ್ಲಿ ಅಖಂಡ ಭಾರತ ಇಬ್ಭಾಗವಾಗಿ ಭಾರತ ಮತ್ತು ಪಾಕಿಸ್ಥಾನಗಳು ಹುಟ್ಟಿಕೊಂಡವು. ಈ ಸಂದರ್ಭದಲ್ಲಿ ಭಾರತದ ಮುಕುಟ ಮಣಿ ಜಮ್ಮು ಮತ್ತು ಕಾಶ್ಮೀರ ಭಾರತದೊಳಗೇ ಇದ್ದರೂ, ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡುವ ಮೂಲಕ ಅದು ಭಾರತದೊಳಗಿನ ಮತ್ತೊಂದು ದೇಶ ಎಂಬಂತೆ ಬಿಂಬಿಸಲಾಯಿತು. ಕಣಿವೆ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ, ಪ್ರತ್ಯೇಕ ಪ್ರಧಾನಿಯನ್ನು ಹೊಂದುವ ಅವಕಾಶದ ಜೊತೆಗೆ ಇನ್ನಿತರ ಪ್ರತ್ಯೇಕತೆಗಳನ್ನೂ ನೀಡಲಾಯಿತು.
ಆ ಕಾಲದಲ್ಲೇ ಭಾರತದ ಅನೇಕ ಮಂದಿ ದೇಶಭಕ್ತರು ಈ ಪ್ರತ್ಯೇಕತೆಯ ವಿರುದ್ಧ ಧ್ವನಿ ಎತ್ತಿದರಾದರೂ, ಅದರಿಂದಾದ ಉಪಯೋಗ ಮಾತ್ರ ಶೂನ್ಯವಾಗಿಯೇ ಉಳಿಯಿತು. ಒಟ್ಟಾರೆಯಾಗಿ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕತೆಯನ್ನು ನೀಡಿದ ಆರ್ಟಿಕಲ್ 370 ಕಾಯ್ದೆ 2019 ಆಗಸ್ಟ್ 5 ರ ವರೆಗೂ ಭಾರತದೊಳಗಿನ ರಾಷ್ಟ್ರವಾಗಿ ಕಾಶ್ಮೀರವನ್ನು ಭಿನ್ನ ಎಂಬಂತೆ ಚಿತ್ರಿಸಿತ್ತು. ಆ ವರೆಗೆ ಜಮ್ಮು ಕಾಶ್ಮೀರ ಭಾರತದ ಭಾಗವೇ ಆಗಿದ್ದರೂ ಭಾರತದೊಳಕ್ಕೆ ಸೇರದಂತಿತ್ತು.
ಆದರೆ ಮೋದಿ ಆಡಳಿತಕ್ಕೆ ಬಂದ ಬಳಿಕ ಕಾಶ್ಮೀರದ ಪ್ರತ್ಯೇಕತೆಯನ್ನು ಕಿತ್ತು, ಅದನ್ನು ಭಾರತದ ಇತರ ರಾಜ್ಯಗಳಂತೆಯೇ ಎಂಬುದನ್ನು ಜನರಿಗೆ ತೋರಿಸಿಕೊಡುವ ಕೆಲಸವನ್ನು ಮಾಡುತ್ತಾರೆ. ಕಳೆದ ವರ್ಷ ಕಣಿವೆ ರಾಜ್ಯಕ್ಕೆ ಪ್ರತ್ಯೇಕತೆಯನ್ನು ನೀಡಿದ್ದ ಆರ್ಟಿಕಲ್ 370 ಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶವನ್ನು ನೀಡುತ್ತದೆ. ಆ ಮೂಲಕ ಕೇವಲ ಹೆಸರಿಗಷ್ಟೇ ಭಾರತದ ಭೂಭಾಗವಾಗಿದ್ದ ಕಾಶ್ಮೀರವನ್ನು ಆ ಪ್ರತ್ಯೇಕತೆಯಿಂದ ಹೊರ ತರುವ ಕೆಲಸ ಮಾಡಿತು. ಸ್ವಾತಂತ್ರ್ಯದ ಬಳಿಕ ಯಾವ ನಾಯಕನೂ ಮಾಡದ ಮಹತ್ವದ ಬೆಳವಣಿಗೆಯೊಂದು 2019 ರ ಆಗಸ್ಟ್ 5 ರಂದು ನಡೆದೇ ಬಿಟ್ಟಿತು.
ಯಾವ ಕಾಶ್ಮೀರದ ಜನರನ್ನಿಟ್ಟುಕೊಂಡು ಪಾಕಿಸ್ಥಾನ ಕುತಂತ್ರದ ಚೇಷ್ಟೆಗಳಲ್ಲಿ ತೊಡಗಿತ್ತೋ ಅದೇ ಪ್ರದೇಶವನ್ನು ಧೈರ್ಯದಿಂದ ಭಾರತದ ಸಂವಿಧಾನದೊಳಕ್ಕೆ, ಆಡಳಿತದೊಳಕ್ಕೆ ತರುವ ಮೂಲಕ ಶತ್ರು ರಾಷ್ಟ್ರಕ್ಕೂ ಚಮಕ್ ನೀಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿ ಮುಗಿಸಿತ್ತು. ಈ ಘಟನೆ ನಡೆದು ನಾಳೆಗೆ 1 ವರ್ಷ.
ಈ ಒಂದು ವರ್ಷದ ಬಳಿಕ ಮತ್ತೆ ಅದೇ ದಿನದಂದು ಅಂದರೆ ಆಗಸ್ಟ್ 5, 2020 ರಂದು ಮೋದಿ ನೇತೃತ್ವದಲ್ಲಿ ಮತ್ತೊಂದು ಅವಿಸ್ಮರಣೀಯ ಘಟನೆ ನಡೆಯಲಿದೆ. ಹಲವು ವರ್ಷಗಳಿಂದ ಕೋಟ್ಯಂತರ ಭಾರತೀಯರ ಭಾವನೆಯಾಗಿದ್ದ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ‘ರಾಮ ಮಂದಿರ’ ನಿರ್ಮಾಣ ಮಾಡಲು ಭೂಮಿ ಪೂಜೆ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಮೋದಿ ಅವರೇ ತಮ್ಮ ಕೈಯಾರೆ ನಡೆಸಿ ಕೊಡಲಿದ್ದಾರೆ. ಆ ಮೂಲಕ ಭಾರತದಲ್ಲಿ ಯಾವುದು ಸಾಧ್ಯವೇ ಇಲ್ಲ ಎಂದು ನಂಬಲಾಗಿತ್ತೋ, ಅವೆಲ್ಲವನ್ನೂ ಸಾಧಿಸುವ ಮೂಲಕ ಇಲ್ಲಿ ಯಾವುದೂ ಅಸಾಧ್ಯವಲ್ಲ. ಆದರೆ ಸಾಧಿಸುವ ಗುಂಡಿಗೆ ನಮ್ಮಲ್ಲಿರಬೇಕಷ್ಟೇ ಎಂಬುದನ್ನು ಜಗತ್ತಿಗೆ ತಮ್ಮ ಕೆಲಸದ ಮೂಲಕವೇ ಮೋದಿ ತೋರಿಸಿಕೊಟ್ಟಿದ್ದಾರೆ.
ಹಿರಿಯ ದೇಶಭಕ್ತ ನಾಯಕರು, ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಜೀವ ತೆತ್ತ ಅನೇಕ ಜನರ ಮನದ ಆಶಯ, ಘೋಷಣೆ ‘ಮಂದಿರ್ ವಹೀ ಬನಾಯೇಂಗೆ’ ಗೆ ಪೂರಕವಾಗಿ ಮೋದಿ ಸರ್ಕಾರ ಮರ್ಯಾದಾ ಪುರುಷೋತ್ತಮ ರಾಮನ ಜನ್ಮ ಸ್ಥಾನ ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣಕ್ಕೆ ನಾಳೆ ಶಂಕು ಸ್ಥಾಪನೆ ಮಾಡಲಿದೆ. ಆ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಜೀವ ತುಂಬುವ ಕೆಲಸವನ್ನು ಈ ಸರ್ಕಾರ ಮಾಡಲಿದೆ ಎಂದರೂ ಅತಿಶಯೋಕ್ತಿಯಾಗಲಾರದು.
ಒಂದು ರಾಷ್ಟ್ರ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಓರ್ವ ಸಮರ್ಥ ನಾಯಕನಿರಬೇಕು. ಪ್ರಸ್ತುತ ಭಾರತ ಓರ್ವ ಸಮರ್ಥ ನಾಯಕನ ಕೈಯಲ್ಲಿ ವಿಶ್ವಪ್ರಿಯ, ವಿಶ್ವವಂದ್ಯವಾಗುತ್ತಿದೆ ಎಂದು ಯಾವುದೇ ಸಂದೇಹವಿಲ್ಲದೆ ಹೇಳಬಹುದು. ದೇಶದ ಸೈನಿಕರಿಗೆ ಬೇಕಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ, ಸೇನೆಗೆ ಅಗತ್ಯವಾದ ಸೌಲಭ್ಯಗಳು, ಹೊಸ ಶಿಕ್ಷಣ ನೀತಿ, ಕೊರೋನಾ ಸಂದರ್ಭವನ್ನು ಎದುರಿಸಿದ ರೀತಿ, ಸ್ವಾವಲಂಬಿ, ಆತ್ಮನಿರ್ಭರ ಭಾರತದ ಕನಸು ನನಸಾಗಿಸುವ ಗುರಿ ಹೀಗೆ ಹತ್ತು ಹಲವು ಸಾಧನೆಗಳ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ದೇಶದ ಜನರಲ್ಲಿ ನಾಳೆಯ ಭರವಸೆಯನ್ನು ತುಂಬುತ್ತಿದೆ. ಸೋಲು ಸೊಲ್ಲಡಗಿದೆ, ಭಾರತದ, ಭಾರತೀಯರ ಗೆಲು ದನಿಯ ಮಾರ್ಧನಿ ವಿಶ್ವದ ಮೂಲೆ ಮೂಲೆಗೂ ಕೇಳುವಂತಹ ದಿನಗಳು ನಮ್ಮದಾಗಿವೆ. ಈ ಸಾಧನೆಗೆ ಭಾರತ ತೆಗೆದುಕೊಂಡದ್ದು ಕೇವಲ 6 ವರ್ಷ ಮತ್ತು ಓರ್ವ ಸಮರ್ಥ ನಾಯಕನ ಆಡಳಿತ ಎಂದರೆ ಅತಿಶಯವಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.