ಇಂದು ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ ದಿನ. ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿಯಿಂದ ಜರ್ಜರಿತರಾಗಿದ್ದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಂದ ದಿನ. ವಿಚ್ಛೇದನ ಎಂದರೆ ಆಟದ ವಸ್ತು ಎಂಬಂತೆ ವರ್ತಿಸುತ್ತಿದ್ದ, ಪತ್ನಿಗೆ ಯಾವಾಗ ಬೇಕೋ ಆವಾಗ, ಎಲ್ಲಿ ಬೇಕೋ ಅಲ್ಲಿ ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದು ಹೇಳುವ ಮೂಲಕ ಸಂಬಂಧ ಕಡಿದುಕೊಳ್ಳುತ್ತಿದ್ದ ಪುರುಷರ ಅಹಂಕಾರಕ್ಕೆ ಪೆಟ್ಟು ಬಿದ್ದ ದಿನ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಇಚ್ಛಾಶಕ್ತಿಯ ಫಲವಾಗಿ ಇಂದು ಮುಸ್ಲಿಂ ಮಹಿಳೆಯರ ವೈವಾಹಿಕ ಬದುಕಿಗೆ ಭದ್ರತೆ ಸಿಕ್ಕಿದೆ. ಪತಿಯಿಂದ ಕ್ಷುಲ್ಲಕ ಕಾರಣಕ್ಕೆ ನಿಂತ ಜಾಗದಲ್ಲೇ ವಿಚ್ಛೇದನಕ್ಕೆ ಒಳಗಾಗುವ ಭಯ ಅವರಿಗೆ ಈಗ ಇಲ್ಲ. ಹಾಗೊಂದು ವೇಳೆ ಪತಿ ವಿಚ್ಛೇದನ ನೀಡಿದರೆ ಅದನ್ನು ಕಾನೂನು ಮೂಲಕ ಎದುರಿಸುವ ಅಸ್ತ್ರ ಮುಸ್ಲಿಂ ಮಹಿಳೆಯರ ಕೈಗೆ ಸಿಕ್ಕಿದೆ.
2019ರ ಆಗಸ್ಟ್ 1ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ಸಂರಕ್ಷಣೆ) ಮಸೂದೆಗೆ ಅಂಕಿತವನ್ನು ಹಾಕಿದ್ದರು. ಒಂದು ಮಹತ್ವದ ಮಸೂದೆ ಕಾನೂನು ಆಗಿ ರೂಪುಗೊಂಡಿತು. ಮೋದಿ ಸರ್ಕಾರದ ಹಲವು ಜನಪರ ಕಾರ್ಯಗಳಲ್ಲಿ ಈ ಕಾಯ್ದೆಯ ಜಾರಿ ಕೂಡ ಒಂದು. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಲು ಪಟ್ಟುಬಿಡದೆ ಶ್ರಮಿಸಿತ್ತು ಮೋದಿ ಸರ್ಕಾರ.
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಮೂಲೆಗುಂಪು ಮಾಡಿದ್ದ ಕೆಲವು ಪಕ್ಷಗಳು ತ್ರಿವಳಿ ತಲಾಖ್ ಕಾಯ್ದೆಯ ವಿರುದ್ಧ ದೊಡ್ಡ ಮಟ್ಟದಲ್ಲೇ ಧ್ವನಿ ಎತ್ತಿದ್ದವು. ಈ ಪಕ್ಷಗಳು ಮುಸ್ಲಿಂ ಮಹಿಳೆಯರು ತಮ್ಮ ಪುರುಷರ ಆದೇಶದಂತೆ ಮತ ಚಲಾಯಿಸುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಂತೆ ವರ್ತಿಸಿದವು. ಇವುಗಳಿಗೆ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಾಡುವ ಯಾವ ಇಚ್ಛಾಶಕ್ತಿಯೂ ಇದ್ದಂತೆ ಕಾಣುವುದಿಲ್ಲ. ಆದರೆ ಪ್ರತಿಪಕ್ಷಗಳ ತಂತ್ರವನ್ನು ಮಣಿಸಿ ಮೋದಿ ಸರ್ಕಾರ ತ್ರಿವಳಿ ತಲಾಖ್ ಕಾಯ್ದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸುವಲ್ಲಿ ಯಶಸ್ಸನ್ನು ಪಡೆದುಕೊಂಡಿತು.
ದೊಡ್ಡ ದೊಡ್ಡ ಮುಸ್ಲಿಂ ರಾಷ್ಟ್ರಗಳು ತ್ರಿವಳಿ ತಲಾಖ್ ಅನಿಷ್ಟ ಪದ್ಧತಿಯನ್ನು ಯಾವಾಗಲೋ ನಿಷೇಧ ಮಾಡಿವೆ. ಆದರೆ ನಮ್ಮ ದೇಶದ ಅತಿಬುದ್ದಿವಂತರು ಎಂದು ಸ್ವಯಂ ಕರೆಸಿಕೊಳ್ಳುವ ಕೆಲವರು ಜಾತ್ಯತೀತತೆಯ ಹೆಸರು ಹೇಳಿ ಈ ಪದ್ಧತಿಯನ್ನು ಜೀವಂತವಾಗಿ ಇರಿಸಿದ್ದರು. ಈ ಪದ್ಧತಿ ಎಷ್ಟರ ಮಟ್ಟಿಗೆ ಮುಂದುವರೆದಿತ್ತು ಎಂದರೆ, ಕೆಲವರು ಮೊಬೈಲ್ ಫೋನ್ ಮೂಲಕ ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಇನ್ನು ಕೆಲವರು ವಾಟ್ಸಪ್ ಮೆಸೇಜ್ ಮೂಲಕ ವಿಚ್ಛೇದನ ನೀಡಿದ್ದಾರೆ. ಪತ್ರದ ಮೂಲಕ ಮೂರು ತಲಾಖ್ ಎಂದು ಬರೆದು ವಿಚ್ಛೇದನ ನೀಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಕಾನೂನು ಮೊರೆ ಹೋಗಲು ಮುಸ್ಲಿಂ ಮಹಿಳೆಯರಿಗೆ ಯಾವುದೇ ದಾರಿ ಇರಲಿಲ್ಲ. ಇದೇ ಕಾರಣಕ್ಕಾಗಿ ಮೋದಿ ಸರಕಾರವು ತ್ರಿವಳಿ ತಲಾಖ್ ಕಾಯ್ದೆಯನ್ನು ತರುವ ದೃಢ ನಿರ್ಧಾರವನ್ನು ಕೈಗೊಂಡಿತು.
ಈ ಕಾಯ್ದೆಯ ಪ್ರಕಾರ, ತ್ರಿವಳಿ ತಲಾಖ್ ನೀಡಿದ ಪುರುಷನಿಗೆ ಮೂರು ವರ್ಷ ಜೈಲು ಶಿಕ್ಷೆ ಸಿಗುತ್ತದೆ. ಒಂದು ವೇಳೆ ಈತ ಜಾಮೀನು ಪಡೆದುಕೊಳ್ಳಬೇಕಾದರೆ, ನ್ಯಾಯಾಧೀಶರು ಸಂತ್ರಸ್ಥ ಮಹಿಳೆಯ ಜೊತೆ ಸಮಾಲೋಚನೆ ನಡೆಸಬೇಕು. ಸಂತ್ರಸ್ಥ ಮಹಿಳೆಯರು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಪರಿಹಾರ ಅಥವಾ ಭತ್ಯೆಯ ಮೊತ್ತವನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ. ತ್ರಿವಳಿ ತಲಾಖ್ ಬಗೆಗೆ ಸಂತ್ರಸ್ತ ಮಹಿಳೆ ಅಥವಾ ಆಕೆಯ ಸಂಬಂಧಿಕರು ದೂರು ನೀಡಿದರೆ ಮಾತ್ರ ಪ್ರಕರಣ ಮಾನ್ಯವಾಗುತ್ತದೆ.
ಕಳೆದ ಒಂದು ವರ್ಷದಿಂದ ಅಂದರೆ ತ್ರಿವಳಿ ತಲಾಕ್ ಕಾಯ್ದೆ ಜಾರಿಯಾದ ಆಗಸ್ಟ್ 1, 2019ರ ಬಳಿಕ ದೇಶದಲ್ಲಿ ಕೇವಲ 1,039 ತ್ರಿವಳಿ ತಲಾಖ್ ಪ್ರಕರಣಗಳು ವರದಿಯಾಗಿದೆ. 1985ರಿಂದ 2019 ರವರೆಗೆ ದೇಶದಲ್ಲಿ ಬರೋಬ್ಬರಿ 3,82,964 ತ್ರಿವಳಿ ತಲಾಕ್ ಪ್ರಕರಣಗಳು ವರದಿಯಾಗಿದ್ದವು. ಅಂದರೆ ತಲಾ ವರ್ಷಕ್ಕೆ ಸುಮಾರು 11,264 ಪ್ರಕರಣಗಳು ದಾಖಲಾಗಿವೆ. ಇದರ ಅರ್ಥ ಮುಸ್ಲಿಂ ಮಹಿಳೆಯರು ಈಗ ನಿರಾಳವಾಗಿ ಬದುಕುತ್ತಿದ್ದಾರೆ.
ಶರಣ್ಯ ಶೆಟ್ಟಿ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.