ಭಾರತ ಎಂದಿಗೂ ಇತರ ರಾಷ್ಟ್ರಗಳ ವಿರುದ್ಧ ದಂಡೆತ್ತಿ ಹೋಗುವುದಿಲ್ಲವಾದರೂ ಅದರ ವಿರುದ್ಧ ಕತ್ತಿ ಮಸೆಯುವ ರಾಷ್ಟ್ರಗಳು ಸುತ್ತಮುತ್ತ ಇವೆ. ಕುತಂತ್ರಿ ಚೀನಾ ಮತ್ತು ಅದರ ಸ್ನೇಹಿತ ಪಾಕಿಸ್ಥಾನ ನಿರಂತರವಾಗಿ ಭಾರತವನ್ನು ಹಣಿಯಲು ಪ್ರಯತ್ನ ನಡೆಸುತ್ತಲೇ ಇವೆ. ಗಡಿಯಲ್ಲಿ ಇವುಗಳು ನಡೆಸುತ್ತಿರುವ ಉಪಟಳವನ್ನು ಭಾರತ ಕಿಚ್ಚೆದೆಯಿಂದ ಹಿಮ್ಮೆಟ್ಟುತ್ತಲೇ ಬಂದಿದೆ. ಆದರೂ ಇವುಗಳೊಂದಿಗಿನ ಗಡಿ ಸಂಘರ್ಷ ತಾರಕಕ್ಕೇರಿದ ಬಳಿಕ ಭಾರತ ತನ್ನ ರಕ್ಷಣಾ ವ್ಯವಸ್ಥೆಯ ಸುಧಾರಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಲೇ ಬಂದಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಸರಕಾರ ರಕ್ಷಣೆಯ ವಿಷಯದಲ್ಲಿ ಹೆಚ್ಚು ಮುತುವರ್ಜಿ ವಹಿಸಿದೆ. ಯುಪಿಎ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಪ್ರಸ್ತಾಪವನ್ನು ಮೋದಿ ಸರಕಾರ ಹೆಚ್ಚು ಕಾಳಜಿ ವಹಿಸಿ ಕಾರ್ಯಗತಗೊಳಿಸಿದೆ.
ಇದೀಗ ಮೊದಲ ಬ್ಯಾಚ್ನ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದೆ. ಹರಿಯಾಣದ ಅಂಬಾಲದಲ್ಲಿ ಇದು ಅಧಿಕೃತವಾಗಿ ಭಾರತೀಯ ವಾಯುಸೇನೆಯನ್ನು ಸೇರಿದೆ. ರಫೇಲ್ ಯುದ್ಧ ವಿಮಾನದ ಆಗಮನ ಮೋದಿ ಸರಕಾರದ ಇಚ್ಚಾಶಕ್ತಿಯ ದ್ಯೋತಕ ಎಂದರೆ ತಪ್ಪಾಗಲಾರದು. ಯಾಕೆಂದರೆ, ರಫೇಲ್ ಖರೀದಿ ವಿಷಯದಲ್ಲಿ ಪ್ರತಿಪಕ್ಷಗಳು ದೊಡ್ಡ ರಾದ್ಧಾಂತವನ್ನೇ ಮಾಡಿದ್ದವು. ಈ ಒಪ್ಪಂದದಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಬಿಂಬಿಸಲು ಹರಸಾಹಸಪಟ್ಟವು. ಆದರೆ ಈ ಎಲ್ಲಾ ತಂತ್ರಗಳನ್ನು ಹಿಮ್ಮೆಟ್ಟಿ ನಿಂತ ಸರ್ಕಾರ ಇಂದು ರಫೇಲ್ ಕನಸನ್ನು ನನಸಾಗಿಸಿದೆ. ಈ ಮೂಲಕ ಭಾರತೀಯ ರಕ್ಷಣಾ ವಲಯಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿದೆ.
ರಫೇಲ್ ಯುದ್ಧ ವಿಮಾನಗಳಿಗೆ ಭಾರತದ ರಕ್ಷಣಾ ವ್ಯವಸ್ಥೆಯ ಗತಿಯನ್ನು ಬದಲಿಸಬಲ್ಲ ಶಕ್ತಿ ಇದೆ. ಪ್ರಸ್ತುತ ಕಾಲಘಟ್ಟದ ಯುದ್ಧ ವಿಮಾನಗಳು ಹೊಂದಿರುವ ಅತ್ಯುನ್ನತವಾದ ತಂತ್ರಜ್ಞಾನಗಳನ್ನು ರಫೇಲ್ ಒಳಗೊಂಡಿದೆ. ಈ ಯುದ್ಧ ವಿಮಾನ ಮೀಟಿಯಾರ್ ಬಿಯಾಂಡ್ ವಿಶ್ಯುವಲ್ ರೇಂಜ್ ಅಂದರೆ ಕಣ್ಣಿಗೆ ಕಾಣಿಸದಷ್ಟು ದೂರ ಗುರಿಯನ್ನು ತಲುಪಬಲ್ಲ ಶಸ್ತ್ರಗಳು, ಆಗಸದಿಂದ ಚಿಮ್ಮಿ ಭೂಮಿಯ ಗುರಿಯನ್ನು ನಿಖರವಾಗಿ ಧ್ವಂಸ ಮಾಡಬಲ್ಲ ಏರ್ ಟು ಗ್ರೌಂಡ್ ಶಸ್ತ್ರಗಳಿಂದ ಅಳವಡಿಸಲ್ಪಡುತ್ತದೆ. ಮುಂದಿನ ತಲೆಮಾರಿನ ಬ್ರಹ್ಮೋಸ್ ಕ್ಷಿಪಣಿಯನ್ನು ಕೂಡ ಇದರಲ್ಲಿ ಅಳವಡಿಸಲಾಗುತ್ತದೆ.
ಆಗಸದಲ್ಲಿ ಹಾರುತ್ತಲೇ ಶತ್ರುಗಳ ವಿಮಾನಗಳ ಮೇಲೆ ಬಾಂಬ್ ಅನ್ನು ಎಸೆಯಬಲ್ಲ ಸಾಮರ್ಥ್ಯ ರಫೇಲ್ಗೆ ಇದೆ. ಇದು ಆಕಾಶದಿಂದಲೇ ಭೂಮಿಯ ಮೇಲಿರುವ ತನ್ನ ಗುರಿಗೆ ಬಾಂಬ್ ಹಾಕಬಲ್ಲದು. ಭಾರತದ ವೈವಿಧ್ಯಮಯ ಹವಾಮಾನದಲ್ಲೂ ಕಾರ್ಯನಿರ್ವಹಿಸಬಲ್ಲಂತಹ ಶಕ್ತಿ ಇದಕ್ಕಿದೆ. ಕಣ್ಣಿಗೆ ಕಾಣಿಸದಷ್ಟು ದೂರ ದಾಳಿ ನಡೆಸಬಲ್ಲದು. ಶತ್ರುಗಳ ಹಲವು ಗುರಿಗಳನ್ನು ಏಕ ಕಾಲದಲ್ಲಿ ನಾಶಪಡಿಸಬಲ್ಲದು. ಒಂದು ರಫೇಲ್ ಎದುರಿಸಲು ಶತ್ರುಗಳು ಹಲವು ಯುದ್ಧ ವಿಮಾನಗಳ ಅವಶ್ಯಕತೆ ಖಂಡಿತಾ ಇದೆ.
ಪಾಕಿಸ್ಥಾನವು ಒಂದು ರಫೇಲ್ ಅನ್ನು ಎದುರಿಸಲು ಎರಡು ಎಫ್-16 ಯುದ್ಧ ವಿಮಾನವನ್ನು ನಿಯೋಜನೆ ಮಾಡಬೇಕಾಗುತ್ತದೆ.
ವಿಶೇಷವೆಂದರೆ, ಸೇನೆಯ ಬಲದಿಂದಲೇ ಜಗತ್ತನ್ನು ಗೆಲ್ಲಲು ಹೊರಟಿರುವ ಕೆಂಪು ರಾಷ್ಟ್ರ ಚೀನಾದ ಬಳಿಯೂ ರಫೇಲ್ ಯುದ್ಧ ವಿಮಾನಕ್ಕೆ ಸಮಾನಾಗಿ ನಿಲ್ಲಬಲ್ಲ ಯುದ್ಧವಿಮಾನ ಇಲ್ಲ. ಒಂದು ವೇಳೆ ಉಭಯ ದೇಶಗಳ ನಡುವೆ ಯುದ್ಧ ಏರ್ಪಟ್ಟರೆ ರಫೇಲ್ ಚೀನಾಗೆ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡಬಲ್ಲದು.
ಪ್ರಸ್ತುತ ರಫೇಲ್ ಯುದ್ಧ ವಿಮಾನಗಳನ್ನು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗಿದೆ. ಈ ವಾಯುನೆಲೆ ಮಿಲಿಟರಿ ಇತಿಹಾಸದ ದೃಷ್ಟಿಯಿಂದ ಹೆಚ್ಚು ಮಹತ್ವಪೂರ್ಣವಾಗಿದೆ. ಸ್ವಾತಂತ್ರ್ಯದ ನಂತರ ಎರಡು ಬಾರಿ ಈ ನೆಲೆಯ ಮೇಲೆ ವಾಯು ದಾಳಿಯಾಗಿತ್ತು. ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ಇದು ಸನಿಹದಲ್ಲಿದೆ. ದೇಶದ ಅತ್ಯಂತ ಸುಸಜ್ಜಿತ ವಾಯು ರಕ್ಷಣಾ ವ್ಯವಸ್ಥೆ ಇರುವ ವಾಯುನೆಲೆ ಎಂಬ ಕೀರ್ತಿ ಇದಕ್ಕೆ ಇದೆ.
ಚೀನಾ ಗಡಿಯಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜನೆಗೊಳಿಸುವ ಬಗ್ಗೆಯೂ ಗಂಭೀರ ಚಿಂತನೆಗಳನ್ನು ನಡೆಸಲಾಗಿದೆ.
ಒಟ್ಟಿನಲ್ಲಿ ಹೇಳಬೇಕಾದರೆ, ರಫೇಲ್ ಭಾರತದ ರಕ್ಷಣಾ ಕ್ಷೇತ್ರದ ಬಲಭೀಮ. ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಶಕ್ತಿಶಾಲಿ. ನರೇಂದ್ರ ಮೋದಿ ಸರ್ಕಾರದ ಇಚ್ಛಾಶಕ್ತಿಯ ದ್ಯೋತಕ.
ಶರಣ್ಯ ಶೆಟ್ಟಿ ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.