ಕಾಲ ಬದಲಾಗಿದೆ. ಆದರೂ ನಮ್ಮ ದೇಶದಲ್ಲಿ ಇನ್ನೂ ಅದೆಷ್ಟೋ ಆರ್ಥಿಕವಾಗಿ, ಸಾಕ್ಷರತೆಯಲ್ಲಿ, ಬದಲಾವಣೆಗೆ ತೆರೆದುಕೊಳ್ಳುವಲ್ಲಿ ಹಿಂದುಳಿದಿರುವ ಅನೇಕ ಆದಿವಾಸಿ, ಬುಡಕಟ್ಟು ಜನಾಂಗಗಳಿವೆ. ಕಾಡಿನ ಸಂಸ್ಕೃತಿಯ ಜೊತೆಗೇ ಬದುಕು ಕಟ್ಟಿಕೊಂಡಿರುವ ಇಂತಹ ಜನರು ಕನಿಷ್ಟ ಮೂಲಭೂತ ಸೌಲಭ್ಯಗಳನ್ನೂ ಸಹ ಹೊಂದಿರುವುದಿಲ್ಲ. ಕಾಡಿನೊಂದಿಗೇ ಬದುಕುತ್ತಾ ಬಂದಿದ್ದರೂ, ಕೃಷಿ ಸಂಸ್ಕೃತಿಯ ಜೊತೆಗೆ ಮಿಳಿತಗೊಳ್ಳದೇ ಇರುವ ಇಂತಹ ಜನಾಂಗಗಳು ಅಭಿವೃದ್ಧಿ ಎಂಬುದರಿಂದ ಬಹಳಷ್ಟು ಹಿಂದುಳಿದಿವೆ. ಜಾರ್ಖಂಡ್ ನಲ್ಲಿಯೂ ಇಂತಹ ಒಂದು ಬುಡಕಟ್ಟು ಜನಾಂಗ ಇಂದಿಗೂ ವಾಸಿಸುತ್ತಿದೆ. ಇಲ್ಲಿನ ಸಂತಲ್ ಪರಗಣದ ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಈ ಜನಾಂಗದ ಹೆಸರು ಪಹರಿಯಾ. ಜನಸಂಖ್ಯೆ, ಆರ್ಥಿಕತೆ ಮತ್ತು ಸಾಕ್ಷರತೆ ಇವೆಲ್ಲದರಲ್ಲಿಯೂ ಈ ಜನಾಂಗ ಇಂದಿಗೂ ಹಿಂದೆ ಉಳಿದಿದ್ದು, ಸದ್ಯ ಇಂತಹ ಜನಾಂಗಗಳಿಗೆ ಮೃಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯ 10 ಬ್ಲಾಕ್ ಗಳ 610 ಹಳ್ಳಿಗಳಲ್ಲಿ ಪಹರಿಯಾ ಜನಾಂಗ ವಾಸವಿದೆ. ಕನಿಷ್ಟ ಮೂಲಸೌಲಭ್ಯಗಳೂ ಇಲ್ಲದೆ ಜೀವನ ನಡೆಸುತ್ತಿದೆ. 31,550 ರಷ್ಟು ಜನಸಂಖ್ಯೆಯನ್ನೂ ಈ ಜನಾಂಗ ಹೊಂದಿದ್ದು, ಸದ್ಯ ಈ ಜನಾಂಗವನ್ನು ಗುರುತಿಸಿರುವ ದುಮ್ಕಾ ಜಿಲ್ಲೆಯ ಜಿಲ್ಲಾಧಿಕಾರಿ ರಾಜೇಶ್ವರಿ ಬಿ. ಅವರು ತಮ್ಮ ಬಾಟಂ ಅಪ್ ಯೋಜನೆಯ ಮೂಲಕ ಈ ಜನಾಂಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ, ಅವರಿಗೆ ತೀರಾ ಅಗತ್ಯ ಎನಿಸಿದ ಮೂಲ ಸೌಕರ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸಿದ್ದಾರೆ. ಗೋಪಿಖಂದರ್ ಪ್ರದೇಶದ 62 ಗ್ರಾಮಗಳ ಪೈಕಿ 57 ಗ್ರಾಮಗಳನ್ನು ಇದಕ್ಕಾಗಿ ಗುರುತಿಸಲಾಗಿದ್ದು, ಅಲ್ಲಿ ನೆಲೆಸಿರುವ ಪಹರಿಯಾ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.
ಜಿಲ್ಲಾಡಳಿತದ ಈ ಯೋಜನೆಯೊಂದಿಗೆ ಟಾಟಾ ಟ್ರಸ್ಟ್ ನ ಹಳ್ಳಿಗಳ ಪರಿವರ್ತನೆಯ ಮಹತ್ವಾಕಾಂಕ್ಷಿ ಯೋಜನೆಯಡಿ ನೇಮಕ ಮಾಡಲಾದ ಆಸ್ಪಿರೇಶನಲ್ ಡಿಸ್ಟ್ರಿಕ್ಟ್ ಫೆಲೋ ಸುಶ್ಮಿತಾ ಸಹ ಕೈಜೋಡಿಸಿದ್ದಾರೆ. ಆ ಮೂಲಕ ಜನಾಂಗದ ಜನರಿಗೆ ಸಾಮಾಜಿಕ- ಆರ್ಥಿಕವಾಗಿ ಭದ್ರತೆಯನ್ನು ಸೃಷ್ಟಿಸಿಕೊಳ್ಳುವ ಸಂದರ್ಭೋಚಿತ ಕೌಶಲಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ನಡೆಸಲಾಗಿದೆ. ಜನರಿಗೆ ಸ್ವತಃ ಈ ಅನುಭವವನ್ನು ಪಡೆದುಕೊಳ್ಳುವುದು ಅಸಾಧ್ಯವಾದರೆ, ಜಿಲ್ಲಾಡಳಿತದ ಪ್ರತಿನಿಧಿಗಳೇ ಜನರ ಬಳಿಗೆ ತೆರಳಿ ಅವರಿಗೆ ಬೇಕಾದ ಅಗತ್ಯ ಅವಶ್ಯಕತೆಗಳನ್ನು ನೀಡಿ, ಆ ಮೂಲಕ ಅರಿವು ಮೂಡಿಸುವ ಕಾರ್ಯಕ್ಕೂ ಮುಂದಾಯಿತು.
ಈ ಕೆಲಸಕ್ಕಾಗಿ ನೀಲ ನಕ್ಷೆಗಳನ್ನೂ ಜಿಲ್ಲಾಡಳಿತ ಮತ್ತು ಟಾಟಾ ಸಂಸ್ಥೆಯ ಪ್ರತಿನಿಧಿಗಳು ಜಂಟಿಯಾಗಿ ಸಿದ್ಧಪಡಿಸುತ್ತಾರೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳಾದ ರಸ್ತೆ, ವಿದ್ಯುತ್, ನೀರು ಮೊದಲಾದ ಸಮಾಜ ಕಲ್ಯಾಣ ಯೋಜನೆಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಅದಕ್ಕೆ ಪೂರಕ ಕ್ರಿಯೆಗಳನ್ನು ಸಿದ್ಧ ಮಾಡುತ್ತಾರೆ. ಡಕಿಯಾ ಯೋಜನೆ, ಆಯುಷ್ಮಾನ್ ಭಾರತ್, ಆವಾಸ್ ಯೋಜನೆ, ವಿದ್ಯಾರ್ಥಿ ವೇತನ, ಉಜ್ವಲಾ ಯೋಜನೆ ಮೊದಲಾದವುಗಳ ಪರಿಚಯವನ್ನೂ ಜನರಿಗೆ ಮಾಡಿಕೊಡುತ್ತಾರೆ. ಈ ಯೋಜನೆ ಜನರಿಗೆ ಅನೇಕ ಜೀವನೋಪಾಯದ ಮಾರ್ಗಗಳನ್ನು ತೆರೆದು ಕೊಟ್ಟಿತು.
ಗೋಪಿಖಂದರ್ ಪ್ರದೇಶದ ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿಗಳು ಸರ್ಕಾರದ ಅನೇಕ ಯೋಜನೆಗಳನ್ನು ಇಲ್ಲಿನ ಜನರಿಗೆ ಶೀಘ್ರ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಫಲಾನುಭವಿಗಳಿಗೆ ಪಡಿತರ ಚೀಟಿ, ಸಿಲಿಂಡರ್, ವಿದ್ಯುತ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಯಿತು. ಪಿಎಂ ಕಿಸಾನ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಗಳಡಿಯಲ್ಲಿ ಅರ್ಹರ ಮಾಹಿತಿಗಳನ್ನು ದಾಖಲಿಸುವ ಕೆಲಸವನ್ನೂ ಮಾಡಲಾಯಿತು. ಸೌರ ಶಕ್ತಿಯಿಂದ ಬಳಸಲ್ಪಡುವ ಕುಡಿಯುವ ನೀರಿನ ಮೂಲಸೌಕರ್ಯ ಗಳ ಸ್ಥಾಪನೆ, ನಿರ್ವಹಣೆ ಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು.
ಅಂಗನವಾಡಿ ಕೇಂದ್ರಗಳ ನವೀಕರಣ, ನಿರ್ವಹಣೆಯತ್ತ ಗಮನ ಹರಿಸಲಾಯಿತು. ಅಂಗನವಾಡಿ ಕೇಂದ್ರಗಳಿಗೆ ಆಹಾರ ಬೇಯಿಸಲು ಗ್ಯಾಸ್ ವ್ಯವಸ್ಥೆ, ಪೌಷ್ಟಿಕ ಆಹಾರಗಳ ವಿತರಣೆ, ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಬೇಕಾದ ಎಲ್ಲಾ ರೀತಿಯ ಪೂರಕ ಕ್ರಮಗಳನ್ನು ಜಿಲ್ಲಾಡಳಿತ ಅನುಷ್ಠಾನ ಗೊಳಿಸಿತು. ಸಾಮಾಜಿಕ ಕಲ್ಯಾಣ, ತೋಟಗಾರಿಕೆ, ಕೃಷಿ, ಶಿಕ್ಷಣ ಮತ್ತು ಆರೋಗ್ಯದಂತಹ ವಿಚಾರಗಳನ್ನು ಸಹ ಆರಂಭ ಮಾಡಲಾಗುತ್ತದೆ. ಜಿಲ್ಲೆಯ ಆಡಳಿತ ಮತ್ತು ಸಿವಿಲ್ ಸೊಸೈಟಿ ಸಂಸ್ಥೆಗಳಾದ ಚೈಲ್ಡ್ ಇನ್ಡೀಡ್ ಇನ್ಸ್ಟಿಟ್ಯೂಶನ್, ವರ್ಲ್ಡ್ ವಿಷನ್ ಸಮುದಾಯದಿಂದ ಎಸ್ ಎ ಎಂ, ಎಂಎಎಂ ಮಕ್ಕಳನ್ನು ಗುರುತಿಸುವಲ್ಲಿ, ಅವರಿಗೆ ಪೂರಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಎಡಬ್ಲ್ಯುಸಿ ಕಾರ್ಮಿಕರ ಸಾಮರ್ಥ್ಯ ವೃದ್ಧಿಗಾಗಿ ಕಾರ್ಯಾಗಾರಗಳನ್ನೂ ನಡೆಸಲಾಗುತ್ತದೆ.
ಇನ್ನು ಇಲ್ಲಿನ ಜನರಿಗೆ ಸ್ವ ಉದ್ಯೋಗ, ಆರ್ಥಿಕ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಸಾಗುವಾನಿ ಮರದ ಎಲೆಗಳಿಂದ ತಟ್ಟೆಗಳ ತಯಾರಿಯನ್ನು ಮನೆ ಮನೆಗಳಲ್ಲಿ ಆರಂಭ ಮಾಡಲಾಗುತ್ತದೆ. ಇವುಗಳ ಉತ್ಪಾದನೆ ಹೆಚ್ಚಿಸಿ ಆರ್ಥಿಕತೆಯನ್ನು ಸಬಲಗೊಳಿಸುವ ನಿಟ್ಟಿನಲ್ಲಿ ಸಹ ಪೂರಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ತಾಳೆ ತೋಟಗಾರಿಕೆ, ಚಾಪೆ ತಯಾರಿಕೆ ಮತ್ತು ಇನ್ನಿತರ ಕರಕುಶಲ ವಸ್ತುಗಳ ತಯಾರಿಕೆಯ ನಿಟ್ಟಿನಲ್ಲಿಯೂ ಈ ಪ್ರದೇಶದಲ್ಲಿ ಜನರಿಗೆ ಕೌಶಲಗಳನ್ನು ಕಲಿಸಿಕೊಡುತ್ತಾರೆ. ಜೊತೆಗೆ ಕೊರೋನಾ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡು ಇಲ್ಲಿನ ಜನರಿಗೆ ಜೀವನೋಪಾಯದ ಮಾರ್ಗಗಳನ್ನು ಕಲಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಜೆಎಸ್ಎಲ್ಪಿಎಸ್ ,ಕುಠೀರ್ ಉದ್ಯೋಗ ಇಲಾಖೆ, ಕೈಗಾರಿಕಾ ಇಲಾಖೆಗಳ ಸಹಭಾಗಿತ್ವದಲ್ಲಿ ಯಂತ್ರೋಪಕರಣಗಳನ್ನು ಬಳಸಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಹಲವಾರು ಸ್ಥಳೀಯ ಸಂಸ್ಥೆಗಳು ಸಹ ಕೈಜೋಡಿಸಿವೆ.
ಇವೆಲ್ಲದರ ಜೊತೆಗೆ ಜಾರ್ಖಂಡ್ ರಾಜ್ಯದ ಗ್ರಾಮೋಥನ್ ಯೋಜನೆಯಡಿಯಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಯಿತು. ಆಯ್ದ ಪಹರಿಯಾ ಪ್ರದೇಶಗಳಿಗೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸಲಾಯಿತು. ಇಂದು ಇಎಸ್ಎಎಫ್ ಸಂಘಟನೆಯ ಮಹಿಳಾ ಸದಸ್ಯರು ತಾಳೆ ಎಲೆಗಳನ್ನು ಬಳಸಿ ಕರಕುಶಲ ವಸ್ತುಗಳನ್ನು ತಯಾರು ಮಾಡುವ ಮೂಲಕವೇ ಜೀವನ ನಿರ್ವಹಿಸುವ ಸಶಕ್ತ ಸ್ಥಿತಿಯನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಕೊರೋನಾ ಸಂದರ್ಭದಲ್ಲಿ ಇಲ್ಲಿನ ಅಶಕ್ತರಿಗೆ ಆಹಾರ ಒದಗಿಸುವ ಕೆಲಸವನ್ನು ದೀದಿ ಕಿಚನ್ ಮೂಲಕ ಮಆಡಲಾಯಿತು. ಪ್ರತಿನಿತ್ಯ 500 ಕ್ಕೂ ಅಧಿಕ ಜನರಿಗೆ ದೀದಿ ಕಿಚನ್ ಮೂಲಕ ಆಹಾರ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಆ ಮೂಲಕವೂ ಅಶಕ್ತರ ಸೇವೆ ಮಾಡುವಲ್ಲಿಯೂ ಜಿಲ್ಲಾಡಳಿತ ಮಾದರಿ ಕ್ರಮ ಕೈಗೊಂಡಿದೆ.
ಸಾಮಾಜಿಕವಾಗಿ ಹಿಂದುಳಿದು, ಸರ್ಕಾರಗಳ, ಆಡಳಿತ ವ್ಯವಸ್ಥೆಗಳ ಕಣ್ಣಿಗೆ ಕಾಣದೆಯೇ ಬದುಕು ಸಾಗಿಸುವ ಅದೆಷ್ಟೋ ಬಡ, ಹಿಂದುಳಿದ ಕುಟುಂಬಗಳು ನಮ್ಮ ದೇಶದಲ್ಲಿದೆ. ಆದರೆ ಅವುಗಳನ್ನು ಮುನ್ನೆಲೆಗೆ ತರುವಲ್ಲಿ ಮಾತ್ರ ಸಂಬಂಧಿಸಿದ ಅಧಿಕಾರಿಗಳು ಗಮನ ವಹಿಸುವುದಿಲ್ಲ. ಆದರೆ ಜಾರ್ಖಂಡ್ ನ ಗೋಪಿಖಂದರ್ ನ ಜಿಲ್ಲಾಡಳಿತ ಮಾತ್ರ ಆರ್ಥಿಕ, ಸಾಮಾಜಿಕ ಮತ್ತು ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಇಂದಿಗೂ ಹಿಂದುಳಿದಿರುವ ಪಹರಿಯಾ ಜನಾಂಗವನ್ನು ಮುನ್ನೆಲೆಗೆ ತರುವ, ಮೂಲ ಸೌಕರ್ಯಗಳನ್ನು ನೀಡಿ, ಅವರಿಗೆ ಜೀವನ ನಡೆಸಲು ಬೇಕಾದ ಎಲ್ಲಾ ಕೌಶಲಗಳನ್ನು ಕಲಿಸಿಕೊಡುವ ಮೂಲಕ ದೇಶಕ್ಕೇ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.