ಸುಳ್ಯ : ರಿಕ್ಷಾ, ಟೂರೀಸ್ಟ್ ವ್ಯಾನ್ ಮತ್ತಿತರ ವಾಹನಗಳ ಚಾಲಕರು ಯಾವುದೇ ಕಾರಣಕ್ಕೂ ಸಂಚಾರಿ ಕಾನೂನನ್ನು ಉಲ್ಲಂಘಿಸಬಾರದು. ನಗರದಲ್ಲಿ ವಾಹನ ಚಾಲನೆ ಮಾಡುವಾಗ ಸುರಕ್ಷತೆಗೆ ಮತ್ತು ಕಾನೂನು ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ನಡೆದ ರಿಕ್ಷಾ ಚಾಲಕರ ಹಾಗು ಟೂರೀಸ್ಟ್ ವಾಹನ ಚಾಲಕರ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಸುಳ್ಯ ಎಸ್ಐ ಹೆಚ್.ವಿ.ಚಂದ್ರಶೇಖರ ಎಲ್ಲಾ ವಾಹನಗಳ ಚಾಲಕರು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು ಮತ್ತು ಸಂಚಾರಿ ನಿಯಮ ಪಾಲನೆಗೆ ಹೆಚ್ಚು ಒತ್ತು ನೀಡಬೇಕು ಎಂದರು. ತಮ್ಮ ವಾಹನಕ್ಕೆ ನಿಗದಿಪಡಿಸಿದ ಸಂಖ್ಯೆಯಷ್ಟೇ ಪ್ರಯಾಣಿಕರನ್ನು ವಾಹನದಲ್ಲಿ ಕರೆದೊಯ್ಯಬೇಕು ಮತ್ತು ನಗರದಲ್ಲಿ ನಿಗದಿತ ವೇಗದಲ್ಲಿ ಮಾತ್ರ ಸಂಚರಿಸಬೇಕು. ಅಲ್ಲದೆ ವಾಹನಗಳ ದಾಖಲೆಗಳು ಸಮರ್ಪಕವಾಗಿರಬೇಕು ಎಂದು ಅವರು ಸಲಹೆ ನೀಡಿದರು.
ಅಪರಾಧ ವಿಭಾಗದ ಎಸ್ಐ ಸಂಜಯ ಕಲ್ಲೂರ ಮಾತನಾಡಿ `ನಗರದಲ್ಲಿ ವಾಹನಗಳ ವೇಗ ಮಿತಿಯನ್ನು ನಿಗದಿ ಪಡಿಸಲಾಗಿದೆ. ವೇಗವನ್ನು ನಿಯಂತ್ರಣ ಮಾಡಲು ಇನ್ನಷ್ಟು ಕ್ರಮ ಕೈಗೊಳ್ಳುವುದಾಗಿ ಹೇಳಿದರು.ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ರಿಕ್ಷಾಗಳು ಖಡ್ಡಾಯವಾಗಿ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ ದಾಖಲೀಕರಣ ಮಾಡಬೇಕು, ರಿಕ್ಷಾದ ಎದುರಿನ ಸೀಟಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಬಾರದು ಎಂದು ಪೊಲೀಸ್ ಅಧಿಕಾರಿಗಳು ಸೂಚಿಸಿದರು.
ನಗರದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು ಮತ್ತು ದಾಖಲೆ ಇಲ್ಲದೆ ಕಾರ್ಯಾಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಕ್ಷಾ ಚಾಲಕರ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು. ಖಾಸಗೀ ವಾಹನಗಳಲ್ಲಿ ಜನರ ಸಾಗಾಟ ಮಾಡುವುದರ ಬಗ್ಗೆ ಮತ್ತು ಖಾಸಗೀ ವಾಹನಗಳು ಬಾಡಿಗೆಗೆ ಓಡಾಟ ನಡೆಸುತ್ತಿರುವ ಬಗ್ಗೆ ಚಾಲಕರು ಸಭೆಯ ಗಮನಕ್ಕೆ ತಂದರು. ಖಾಸಗೀ ವಾಹನಗಳ ಹಾವಳಿಯಿಂದ ಬಸ್, ರಿಕ್ಷಾ, ವ್ಯಾನ್ಗಳಿಗೆ ಪ್ರಯಾಣಿಕರು ದೊರೆಯದೆ ಸಮಸ್ಯೆ ಉಂಟಾಗುತಿದೆ ಎಂದು ಚಾಲಕರು ಹೇಳಿದರು.
ಗೂಡ್ಸ್ ಕ್ಯಾರಿಯರ್ ವಾಹನಗಳಲ್ಲಿಯೂ ಜನರನ್ನು ಕರೆದೊಯ್ಯುವ ಪ್ರಸಂಗ ಕಂಡು ಬರುತಿದೆ ಎಂದು ಚಾಲಕರು ಹೇಳಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು. ರಥಬೀದಿಯ ರಸ್ತೆಯಲ್ಲಿಯೇ ಬಸ್ಗಳು ತುಂಬಾ ಹೊತ್ತು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ ಎಂದು ರಥಬೀದಿಯ ರಿಕ್ಷಾ ಚಾಲಕರು ಹೇಳಿದರು. ಅಸಮರ್ಪಕ ಪಾರ್ಕಿಂಗ್ ನಿಂದಲೂ ಸಮಸ್ಯೆ ಉಂಟಾಗುತಿದೆ, ಪಾರ್ಕಿಂಗ್ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಚಾಲಕರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.