ಕಾರ್ಕಳ : ಮಣಿಪಾಲದ ಮಹಾಶಿಲ್ಪಿ ಡಾ| ಟಿ.ಎಂ.ಎ. ಪೈ ಅವರು 1960ರಲ್ಲಿ ಸ್ಥಾಪಿಸಿದ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿಗೆ ಈಗ 55 ವರ್ಷ. ವಿಜ್ಞಾನ ಮತ್ತು ವಾಣಿಜ್ಯ ಪಠ್ಯ ವ್ಯವಸ್ಥೆಯನ್ನು ಒಳಗೊಂಡು 140 ವಿದ್ಯಾರ್ಥಿ ಸಂಖ್ಯೆಯೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಈಗ ಕೆಜಿಯಿಂದ ಪಿಜಿ ವರೆಗೆ ಶಿಕ್ಷಣ ನೀಡುತ್ತಿದೆ.
ಪ್ರಸ್ತುತ ಪಿಯು ಮತ್ತು ಪದವಿ ತರಗತಿಗಳಲ್ಲಿ 16 ಪಠ್ಯ ವಿಷಯಗಳಿದ್ದು, ಅಧ್ಯಯನ ನಿರತ ವಿದ್ಯಾರ್ಥಿಗಳ ಸಂಖ್ಯೆ 2,500. ಎಲ್ಕೆಜಿಯಿಂದ ತೊಡಗಿ, ಸಿಬಿಎಸ್ಇ ಪಠ್ಯಕ್ರಮವನ್ನು ಅಳವಡಿಸಿರುವ ಶ್ರೀ ಭುವನೇಂದ್ರ ವಸತಿ ಪ್ರೌಢಶಾಲೆ ಕಳೆದ 15 ವರ್ಷಗಳಿಂದಲೂ ಶೇ. 100 ತೇರ್ಗಡೆಯ ದಾಖಲೆ ಮಾಡಿದೆ. ಪದವಿ ಪೂರ್ವ, ಪದವಿ ತರಗತಿಗಳಲ್ಲೂ ಅತ್ಯುತ್ತಮ ಫಲಿತಾಂಶ ದಾಖಲಾಗುತ್ತಿದೆ.
ಸೌಲಭ್ಯಗಳು:ಪ್ರೌಢಶಾಲೆ, ಪದವಿ, ಪ.ಪೂ. ಮತ್ತು ಸ್ನಾತಕೋತ್ತರ ಕೇಂದ್ರದ ಸುಮಾರು 800 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಐದು ಹಾಸ್ಟೆಲ್ಗಳಿವೆ. 2009ರಿಂದ ಅರ್ಹರಿಗೆ ಸ್ಕಾಲರ್ಶಿಪ್ ಪ್ರೋತ್ಸಾಹವಿದೆ. ಪ್ರತಿವರ್ಷ ಸರಾಸರಿ 15 ಲ.ರೂ. ಮೊತ್ತ ವಿದ್ಯಾರ್ಥಿ ಕಲ್ಯಾಣಕ್ಕಾಗಿ ವ್ಯಯವಾಗುತ್ತಿದೆ. ಪಠ್ಯಪೂರಕ ಕಾರ್ಯಕ್ರಮಗಳೂ ವಿಫುಲವಾಗಿವೆ. ಸುಮಾರು 75,000 ಪುಸ್ತಕಗಳನ್ನು ಒಳಗೊಂಡ ಸಮೃದ್ಧ ಗ್ರಂಥಾಲಯವಿದೆ. ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘ ಸ್ಥಾಪಕ ಪ್ರಾಚಾರ್ಯ ಪ್ರೊ| ಕೆ. ದಾಮೋದರ ಕಿಣಿ ಹೆಸರಲ್ಲಿ ಒಂದು ಕೋ.ರೂ. ವೆಚ್ಚದಲ್ಲಿ ಒಳಕ್ರೀಡಾಂಗಣ ಕಟ್ಟಿಸಿ ಕೊಟ್ಟಿದೆ. ಎನ್ಸಿಸಿ, ಎನ್ಎಸ್ಎಸ್, ಸಂಗೀತ, ನೃತ್ಯ ಕಲೆ, ಯಕ್ಷಗಾನ ಪ್ರಶಿಕ್ಷಣ, ವಾಣಿಜ್ಯ-ಮಾನವಿಕ ಸಂಘಗಳ ಕ್ರಿಯಾಶೀಲತೆ ಇಲ್ಲಿದೆ. ಯಕ್ಷಗಾನ ಮ್ಯೂಸಿಯಂ – “ಇಂದ್ರಪ್ರಸ್ಥ’ – ಶ್ರೀ ಭುವನೇಂದ್ರದ ವೈಶಿಷ್ಟ್ಯ”. ಕಳೆದ 42 ವರ್ಷಗಳಿಂದ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರವನ್ನು ನಿರ್ವಹಿಸುತ್ತಿದೆ.
1964ರಲ್ಲಿ ಕಾಲೇಜಿನಿಂದ ಹೊರಹೋದ ಪದವಿ ವಿದ್ಯಾರ್ಥಿಗಳ ಮೊದಲ ತಂಡದಲ್ಲಿ ಬಿ.ಕಾಂ. ವಿದ್ಯಾರ್ಥಿಯೊಬ್ಬನ ಮುಡಿಯಲ್ಲಿ ಅಂದಿನ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ಪ್ರಥಮ ರ್ಯಾಂಕಿನ ಚಿನ್ನದ ಗರಿ. 2010ರಲ್ಲಿ ಪ್ರಾರಂಭವಾದ ಶ್ರೀ ಬಿ. ಮಂಜುನಾಥ ಪೈ ಸ್ಮಾರಕ ಸ್ನಾತಕೋತ್ತರ ಕೇಂದ್ರದಲ್ಲೂ ಉನ್ನತ ಫಲಿತಾಂಶ. ಎಂ.ಎ. ಮೊದಲ ತಂಡದ ಒಬ್ಬ ವಿದ್ಯಾರ್ಥಿನಿಗೆ ಮಂಗಳೂರು ವಿ.ವಿ.ಯಲ್ಲಿ ತೃತೀಯ ರ್ಯಾಂಕ್ ಲಭಿಸಿದೆ. ಹೀಗೆ 1964ರಿಂದ ಮೊದಲಾಗಿ 2014ರ ಅವಧಿಯಲ್ಲಿ ನೂರನ್ನು ಅಧಿಕ ರ್ಯಾಂಕುಗಳ ಸರಮಾಲೆ ಶ್ರೀ ಭುವನೇಂದ್ರದ ಕೊರಳನ್ನು ಅಲಂಕರಿಸಿದೆ.
ಒಂದು ಸದೃಢ ಪರಂಪರೆಯನ್ನೂ ಕಟ್ಟಿ ಬೆಳೆಸಿದವರು ಧೀಮಂತ ಸ್ಥಾಪಕ ಪ್ರಾಚಾರ್ಯ ಪ್ರೊ| ಕೆ. ದಾಮೋದರ ಕಿಣಿಯವರು. ಮಣಿಪಾಲದ “ಅಕಾಡೆಮಿ’ಯಿಂದ ಪೋಷಿತವಾಗುತ್ತಿರುವ ಶ್ರೀ ಭುವನೇಂದ್ರ ಕಾಲೇಜಿನ ವಿಶ್ವಸ್ತ ಸಮಿತಿಗೆ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾಗಿದ್ದಾರೆ. ಮಣಿಪಾಲ ಅಕಾಡೆಮಿ ವರಿಷ್ಠರಾಗಿರುವ ಡಾ| ರಾಮದಾಸ ಎಂ. ಪೈ ಮತ್ತು ಡಾ| ಎಚ್.ಎಸ್. ಬಲ್ಲಾಳ್ ಅವರ ಸೂಕ್ತ ಮಾರ್ಗದರ್ಶನವಿದೆ. ಹಿರಿಯ ನ್ಯಾಯವಾದಿ ಎಸ್. ರಾಜಗೋಪಾಲಾಚಾರ್ಯ ಅಧ್ಯಕ್ಷತೆಯ ಆಡಳಿತ ಮಂಡಳಿ ಕಾಲೇಜಿನ ಆಡಳಿತವನ್ನು ನೋಡಿಕೊಳ್ಳುತ್ತಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.