ಬೆಳ್ತಂಗಡಿ : ಸರಕಾರ ಎಷ್ಟೇ ಕಾನೂನು,ಕಾಯಿದೆಗಳನ್ನು ಮಾಡಿದರೇನು. ಮರಳು ಅಕ್ರಮ ದಂಧೆಗೆ ಕಡಿವಾಣವಂತೂ ಬಿದ್ದಿಲ್ಲ. ಅಧಿಕಾರಿಗಳು ನೋಡಿಯೂ ನೋಡದಂತೆ ದಿನ ದೂಡುತ್ತಿದ್ದಾರೆ.ಈ ಮರಳಿನ ಮರುಳುತನ ಮತ್ತು ಅಧಿಕಾರಿಗಳ ನಿಷ್ಕೀಯತೆಯಿಂದಾಗಿ ಶ್ರೀಸಾಮಾನ್ಯನಿಗೆ ಮರಳು ಸಿಗುವುದು ದುಸ್ತರವಾಗುತ್ತಿದೆ.ದ. ಕ.ಜಿಲ್ಲೆಯಿಂದ ದಿನನಿತ್ಯ ಭಾರೀ ಪ್ರಮಾಣದಲ್ಲಿ ಮರಳು ಹೊರ ಜಿಲ್ಲೆಗಳಿಗೆ ರಾಜಾರೋಷವಾಗಿ ರವಾನೆಯಾಗುತ್ತಿದೆ.ಚಾರ್ಮಾಡಿ ಘಾಟಿರಸ್ತೆಯ ಮೂಲಕ ಭಾರೀಗಾತ್ರದ ಲಾರಿಗಳ ಮೂಲಕ ಮರಳು ಸಾಗಾಟ ಮಾಡಲಾಗುತ್ತಿದೆ
.ದ. ಕ.ಜಿಲ್ಲಾಧಿಕಾರಿಗಳು ಚಾರ್ಮಾಡಿ ಘಾಟಿ ಮೂಲಕ ಭಾರೀಗಾತ್ರದ ಲಾರಿಗಳ ಸಂಚಾರಕ್ಕೆ ನಿರ್ಬಂಶಿಸಿದ್ದರೂ ಎಗ್ಗಿಲ್ಲದೆ ಲಾರಿಗಳು ಸಂಚರಿಸುತ್ತಿದೆ. ಶಿರಾಡಿ ಘಾಟಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿಚಾರ್ಮಾಡಿ ಮೂಲಕ ಲಾರಿಗಳ ಓಡಾಟ ದಿನನಿತ್ಯ ಅಧಿಕವಾಗಿದ್ದು ಇತರ ಲಘು ವಾಹನದವರಿಗೇ ಸಂಚರಿಸುವುದು ಕಷ್ಟವಾಗಿದೆ. ಇನ್ನು ಭಾರೀಗಾತ್ರದ ಲಾರಿಗಳು ಕೂಡಾಓಡಾಡಿದರೆ ಸಂಚಾರ ದುಸ್ತರ.
ನಿಯಮಗಳ ಪ್ರಕಾರ ೬ ಚಕ್ರಕ್ಕಿಂತ ಅಧಿಕ ಚಕ್ರದ ವಾಹನಗಳು ಚಾರ್ಮಾಡಿ ಮೂಲಕ ಸಾಗುವಂತಿಲ್ಲ. ಆದರೆಇಲ್ಲಿಎಲ್ಲವೂ ಸರಾಗ. ತಡೆಯಬೇಕಾದವರು ಕಣ್ಮುಚ್ಚಿ ಕುಳಿತಿದ್ದಾರೆ.
ನೇತ್ರಾವತಿ ಒಡಲಿನಿಂದ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಶಂಕೆ ಇದೆ. ಅಕ್ರಮ ಮರಳು ದಂಧೆಯ ಹಿಂದೆ ರಾಜಕಾರಣಿ, ಅಧಿಕಾರಿಗಳ ಕರಿನೆರಳು ಇರುವ ಅನುಮಾನ ಇದೆ.ಸಕ್ರಮ ಮರಳುಗಾರಿಕೆಯೊಳಗೆ ಅಕ್ರಮದ ವಾಸನೆ ಬಡಿಯುತ್ತಿದೆ.
ದಕ್ಷಿಣಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಯಿಂದ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದ ಮರಳು ಹೊರ ಜಿಲ್ಲೆಗಳಿಗೆ ರವಾನೆಯಾಗುತ್ತಿದ್ದು, ಕರಾವಳಿ ಜನರಲ್ಲಿ ಆಶ್ಚರ್ಯವೊಂದುಕಾದಿದೆ. ಕರಾವಳಿಯ ಜನತೆಗೆತಮ್ಮತಮ್ಮ ಸ್ವಂತನಿವೇಶನ ನಿರ್ಮಾಣಕ್ಕೆ ಸಿಗದ ಮರಳು ಈಗ ಹೊರಜಿಲ್ಲೆಯ ಪ್ರತಿಷ್ಠಿತಗುತ್ತಿಗೆದಾರರ ಪಾಲಾಗುತ್ತಿರುವುದು ನಿಜ. ಬಡಜನರು ಮರಳು ಖರೀದಿಸಬೇಕೆಂದರೆ ಹರ ಸಾಹಸ ಪಡಬೇಕಾಗುತ್ತದೆ. ಜನಸಾಮಾನ್ಯರು ಮಾತ್ರ ಅಧಿಕಾರಿಗಳ ಮತ್ತು ಸರ್ಕಾರದದ್ವಂದ್ವ ನಿಲುವಿನಿಂದ ನಲುಗಿ ಹೋದಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿಘಾಟಿಯಲ್ಲಿ ಭಾರೀಗಾತ್ರದ ವಾಹನಗಳು ಸಂಚರಿಸದಂತೆ ದ.ಕಜಿಲ್ಲಾಧಿಕಾರಿಯವರು ಆದೇಶ ನೀಡಿದ್ದು, ಈಗ ಮಾತ್ರ ಮರಳು ದಂಧೆಯಲಿ ತೊಡಗಿರುವರು ಎಂದು ಸಂಶಯಿಸಲಾದ ರಾಜಕಾರಣಿಗಳು, ಅಧಿಕಾರಿಗಳಿಂದ ಹಾಗೂ ಮರಳು ಕೋರರಿಂದ ಈ ಆದೇಶ ಉಲ್ಲಂಘನೆಯಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀಗಾತ್ರದ ವಾಹನಗಳು ಸಂಚರಿಸಲು ನಿರ್ಬಂಧವಿದ್ದರೂ ಸಿ.ಆರ್.ಝಡ್ನಿಂದ ಮರಳು ಸಾಗಾಣಿಕೆಗೆ ಹೇಗೆ ಪರವಾನಿಗೆ ಸಿಕ್ಕಿದೆ ಎನ್ನುವುದೇಯಕ್ಷ ಪ್ರಶ್ನೆ.
ಶಿರಾಡಿ ಘಾಟಿ ಬಂದ್ ಹಿನ್ನಲೆಯಲ್ಲಿಅತೀ ಹೆಚ್ಚು ವಾಹನಗಳು ಚಾರ್ಮಾಡಿಘಾಟಿಯನ್ನು ಅವ ಲಂಬಿಸಿದ್ದು ಇದರ ಬೆನ್ನಲ್ಲೇ ಜಿಲ್ಲಾಡಳಿತದ ದ್ವಂದ್ವ ನಿಲುವಿನಿಂದಾಗಿ ಮರಳು ಲಾರಿಗಳಿಗೆ ಪರವಾನಿಗೆ ನೀಡಿಜನರಿಗೆಆತಂಕ ಸೃಷ್ಟಿಸಿದೆ. ತರಕಾರಿ ಸೇರಿದಂತೆ ಮೂಲಭೂತ ಆವಶ್ಯಕತೆಗಳಿಗೆ ಮೂಡಿಗೆರೆಯಿಂದಕೂಡಾ ಲಾರಿಗಳು ಬರದಂತೆತಡೆ ಹಿಡಿಯಲಾಗಿತ್ತು. ಆದರೆ ಈಗ ಎಗ್ಗಿಲ್ಲದೇ ಲಾರಿಗಳ ಓಡಾಟ ನಡೆದಿದೆ.
ಒಂದು ಲೋಡು ಮರಳಿಗೆ ಇಲ್ಲಿ 7 ಸಾವಿರ ರೂ.ಗಳಿದ್ದರೆ ಘಾಟಿದಾಟಿದ ಕೂಡಲೇ ಅದರ ದರ 30ರಿಂದ 40 ಸಾವಿರ ರೂ.ಗಳಾಗುತ್ತಿದೆ. 1 ಲಾರಿಯಲ್ಲಿ 3 ಯುನಿಟ್ ಮರಳು ತುಂಬಿಸಲಾಗುತ್ತದೆ.ಆದರೆ ಈಗ ಟರ್ಪಾಲುಕಟ್ಟಿ ಲಾರಿಯ ಬಾಡಿಯನ್ನುಎತ್ತರಕ್ಕೆ ಏರಿಸಿ ಇನ್ನೆರಡುಯುನಿಟ್ ಹೆಚ್ಚು ಹಾಕಿ ಅಧಿಕ ದರ ವಸೂಲಿ ಮಾಡಲಾಗುತ್ತಿದೆ.
ಲಾರಿಗೆಒಂದು ದಿನದ ಪರವಾನಿಗೆ ನೀಡಿದ ಪರಿಣಾಮವಾಗಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಾಗುತ್ತಿರುವ ಮರಳು ಲಾರಿಗಳು ದಿನವೊಂದಕ್ಕೆ ಎರಡು ಟ್ರಿಪ್ಗಳನ್ನು ಮಾಡೋ ತವಕದಿಂದ ಅತೀ ವೇಗದ ಚಾಲನೆಯನ್ನು ಮಾಡಿ ಮೂರುಜನ ದ್ವಿಚಕ್ರ ಸವಾರರನ್ನು ಬಲಿ ತೆಗೆದುಕೊಂಡಿದ್ದು ತೀರಾ ಈಚಿನ ಘಟನೆ. ಇನ್ನೇಷ್ಟು ಜೀವಗಳನ್ನು ಯಮನ ಪಾದ ಸೇರಿಸುತ್ತೋದೇವನೇ ಬಲ್ಲ! ಇವರಅತಿವೇಗದ ಚಾಲನೆಗೂ ಕಡಿವಾಣ ಹಾಕಬೇಕಿದೆ.
ಇತ್ತೀಚೆಗೆಅಧಿಕ ಮರಳು ತುಂಬಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸುಮಾರು40 ಕ್ಕೂ ಅಧಿಕ ಲಾರಿಗಳನ್ನು ಬೇಲೂರು ಸಮೀಪ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದ.ಕ. ಪೊಲೀಸರು ಮಾತ್ರ ಬರಿಗೈಯಲ್ಲಿದ್ದಾರೆ.ಎಸ್ಪಿಯವರು ಕ್ರಮ ಕೈಗೊಳ್ಳಲು ಹೇಳಿದರೂ ಇತರರು ರಾಜಾರೋಷವಾಗಿ ಕೈ ಬಿಸಿ ಮಾಡಿಕೊಂಡು ಕೈ ಚೆಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.