ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಬೆಂಗಳೂರು ನಗರದಲ್ಲಂತೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆಯೂ ಕಂಡು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬೆಡ್ಗಳು ಖಾಲಿ ಇದೆ ಎಂದು ತಿಳಿದುಕೊಳ್ಳಲು ಸಹಾಯವಾಗುವಂತೆ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಆ್ಯಪ್ ಓಲಾ, ಊಬರ್ ಆ್ಯಪ್ಗಳಂತೆ ಕಾರ್ಯನಿರ್ವಹಿಸಲಿದ್ದು, ರೋಗಿಗಳಿಗೆ ಹಾಸಿಗೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಲ್ಲಿ ಸಹಾಯ ಮಾಡಲಿರುವುದಾಗಿ ಐಎಎಸ್ ಅಧಿಕಾರಿ ಹಾಗೂ ಕೊರೋನಾ ವಾರ್ ರೂಂ ಮುಖ್ಯಸ್ಥ ಮುನೇಶ್ ಮೌದ್ಗಿಲ್ ತಿಳಿಸಿದ್ದಾರೆ. ಇನ್ನು ಈ ಆ್ಯಪ್ ಅನ್ನು ಅಭಿವೃದ್ಧಿ ಮಾಡುವ ಹೊಣೆಯನ್ನು ವಾರ್ ರೂಂನ ಸಾಫ್ಟ್ವೇರ್ ಅಭಿವೃದ್ಧಿ ತಂಡಕ್ಕೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಸೂಕ್ತ ತಪಾಸಣೆಯ ನಂತರವೇ ಹಾಸಿಗೆಗಳ ಹಂಚಿಕೆ ಮಾಡಲಾಗುವುದಾಗಿ ತಿಳಿಸಿರುವ ಮೌದ್ಗಿಲ್, ಈಗಾಗಲೇ ಈ ಬಗ್ಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸುವ್ಯವಸ್ಥೆ ನೋಡಿಕೊಳ್ಳುವ ತುಷಾರ್ ಗಿರಿನಾಥ್ ಅವರೊಂದಿಗೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಆ್ಯಪ್ನ ಮೂಲ ಮಾದರಿ ಅಭಿವೃದ್ಧಿ ಹಂತದಲ್ಲಿ ಇರುವುದಾಗಿಯೂ ಅವರು ತಿಳಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಯ ಕುರಿತಂತೆ ಡಾಟಾ ಗಳು ಸ್ಪ್ರೆಡ್ ಶೀಟ್ ನಲ್ಲಿದ್ದು, ಅವುಗಳನ್ನು ಸಾರ್ವಜನಿಕವಾಗಿ ನೀಡುವ ಮೂಲಕ ಜನರಿಗೆ ಚಿಕಿತ್ಸೆಗೆ ಪೂರಕವಾಗುವಂತೆ ವ್ಯವಸ್ಥೆ ಮಾಡಲಾಗುವುದಾಗಿಯೂ ಗಿರಿನಾಥ್ ಈ ವೇಳೆ ಮಾಹಿತಿ ನೀಡಿದ್ದಾರೆ. ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳನ್ನು ಹುಡುಕುವುದಕ್ಕೆ ಇರುವ ಸಮಸ್ಯೆಗಳನ್ನು ಬಗೆಹರಿಸಿ, ಸಹಾಯ ಮಾಡುವಂತೆ ಈ ಆ್ಯಪ್ ಅನ್ನು ಬಳಕೆ ಮಾಡುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಖಾಸಗಿ ಆಸ್ಪತ್ರೆಗಳು 50% ಹಾಸಿಗೆಗಳನ್ನು ಸರ್ಕಾರದಿಂದ ಸೂಚಿಸಲ್ಪಟ್ಟ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡುವಂತೆ ಆದೇಶಿಸಿದ್ದರೂ ಸಹ, ಕೆಲವು ಖಾಸಗಿ ಅಸ್ಪತ್ರೆಗಳು ಇನ್ನೂ ಈ ಕ್ರಮಕ್ಕೆ ಮುಂದಾಗಿಲ್ಲ. ಇಂತಹ ಸಂದರ್ಭದಲ್ಲಿ ಈ ಆ್ಯಪ್ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡುವುದರಿಂದ ಸರ್ಕಾರದ ನಿಯಮವೂ ಸರಿಯಾಗಿ ಪಾಲನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.