ಲಾಕ್ಡೌನ್ ಸಮಯದಲ್ಲಿ ನಮ್ಮ ಚಿಕ್ಕಪ್ಪ ತೀರಿದ್ದರು ಆ ಸಮಯದಲ್ಲಿ ನೆರೆಹೊರೆಯವರು ಯಾರೂ ಅಂತ್ಯಸಂಸ್ಕಾರಕ್ಕೆ ಬರೋಕೆ ಆಗಿರಲಿಲ್ಲ. ಇವಾಗ ಸಡಿಲಿಕೆ ಆಗಿರುವುದರಿಂದ ಸಂಬಂಧಿಗಳೆಲ್ಲ ಮನೆಗೆ ಬಂದು ಹೋಗುತ್ತಿದ್ದಾರೆ. ಮೊನ್ನೆ ಸಂಬಂಧಿಕರಲ್ಲಿ ಒಬ್ಬರು ಅಜ್ಜನಾದವರು ಸುಮಾರು 80 ಆಸುಪಾಸಿನ ವಯಸ್ಸಿನವರು ಅವರ ಜೊತೆಗೆ ಹರಟೆ ಹೊಡೆಯುತ್ತಾ ಕುಳಿತಿದ್ದಾಗ ಅಚಾನಕ್ಕಾಗಿ ಇಂದಿರಾಗಾಂಧಿ ಅವರ ಹೆಸರು ಪ್ರಸ್ತಾಪವಾಯಿತು. ಅಜ್ಜನಿಗೆ ಅಷ್ಟೋತ್ತು ಕೋಪ ಎಲ್ಲಿತ್ತೋ ಗೊತ್ತಿಲ್ಲ ಇಂದಿರಾಗಾಂಧಿ ಅವರ ಬಗ್ಗೆ ಏನು ಗೊತ್ತು ನಿನಗೆ? ಅವರ ಸ್ವಾರ್ಥಕ್ಕಾಗಿ ದೇಶವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು. ಹಾಗೆ ಹೀಗೆ ಅಂತೆಲ್ಲ ಪ್ರಶ್ನೆ ಮಾಡಿದರು. ನಮ್ಮ ಅಜ್ಜನವರೇನು ರಾಜಕೀಯ ನಾಯಕರಲ್ಲ, ಸಂಘ ಸಂಸ್ಥೆಗಳ ಕಾರ್ಯಕರ್ತರಲ್ಲ, ದಿನದ ಊಟಕ್ಕಾಗಿ ದುಡಿದು ತಿನ್ನುವ ಸಾಮಾನ್ಯ ಬಡವ ಕುಟುಂಬ. ಸಾಮಾನ್ಯರಿಗೆ ಇಷ್ಟು ತೊಂದರೆಯಾಗಿದೆ ಎಂದರೆ ಇನ್ನೂ ಪಕ್ಷಗಳ ನಾಯಕರಿಗೆ, ಕಾರ್ಯಕರ್ತರಿಗೆ, ಸಂಘದ ಸ್ವಯಂಸೇವಕರಿಗೆ, ದೇಶಭಕ್ತ ಮಾದ್ಯಮದವರಿಗೆ ಎಷ್ಟೇಲ್ಲ ತೊಂದರೆಯಾಗಿದೆ ಅನ್ನೋದನ್ನು ಊಹಿಸಲು ಅಸಾಧ್ಯ.
ಆ ಅಜ್ಜನವರೇ ಮುಂದುವರೆದು, ನಿಮ್ಮ ಜೀವನದಲ್ಲಿ ಅವಿಸ್ಮರಣೀಯ ಕರಾಳ ದಿನಗಳು ಯಾವೆಂದರೆ ನಿಮ್ಮ ಉತ್ತರ ಈ ಕೊರೋನಾ ಸಮಯದಲ್ಲಿನ ದಿನಗಳು ತಾನೇ! ಹಾಗೇನೆ ನಮ್ಮ ಜೀವನದಲ್ಲಿ ಅತೀ ಅವಿಸ್ಮರಣೀಯ ಕೆಟ್ಟ ದಿನಗಳೆಂದರೆ 1975 ರ ತುರ್ತುಪರಿಸ್ಥಿತಿಯ ದಿನಗಳು. ಕೊರೋನಾ ಯಾವುದೇ ಒಬ್ಬ ವ್ಯಕ್ತಿಯಿಂದ ತೊಂದರೆ ಅನುಭವಿಸುತ್ತಿರೋದಲ್ಲ. ಆದರೆ ತುರ್ತುಪರಿಸ್ಥಿತಿ ಒಬ್ಬಳೆ ಒಬ್ಬಳು ವ್ಯಕ್ತಿ ಇಂದಿರಾಗಾಂಧಿಯ ಅಧಿಕಾರಕ್ಕಾಗಿ ಇಡೀ ದೇಶವನ್ನೆ ಕಪಿಮುಷ್ಠಿಯಲ್ಲಿ ಇಟ್ಟಿದ್ದರು.
ಹಿಂದೆ ಕೇಳುತ್ತಿದ್ದೇವು ಹಿಟ್ಲರ, ಮುಸ್ಸೋಲಿನ್ರಂತಹ ಸರ್ವಾಧಿಕಾರಿಗಳು ಅವರ ದೇಶವನ್ನೆ ತಮ್ಮ ಕದಂಬಬಾಹು ಬಂಧನದಲ್ಲಿಟ್ಟುಕೊಂಡಿದ್ದರಂತೆ ಆದರೆ ನಮ್ಮ ದೇಶದಲ್ಲೆ ಪ್ರತ್ಯಕ್ಷ ಕಂಡಿದ್ದು ಆಯ್ತು, ಅನುಭವಿಸಿದ್ದು ಆಯ್ತು ಅಂತ ಆ ಅಜ್ಜನವರು ಗದ್ಗದಿತರಾದರು. ಈ ಘಟನೆಯೂ ನನ್ನಲ್ಲಿ ಕುತೂಹಲ ಹೆಚ್ಚಾಯಿತು. ಈ ಕುರಿತು ಸಾಕಷ್ಟು ವಿಷಯಗಳ ಮಾಹಿತಿ ಪಡೆದು ಚಿಕ್ಕ ಲೇಖನದ ಮೂಲಕ ತಿಳಿಸುವ ಪ್ರಯತ್ನ ಮಾಡುವೆ.
ಭಾರತ ಸಂವಿಧಾನದ ಕಾಯ್ದೆ 352ರ ಪ್ರಕಾರ ತುರ್ತು ಪರಿಸ್ಥಿತಿಯನ್ನ ಘೋಷಿಸುವ ಸಂಧರ್ಭಗಳೆಂದರೆ 1) ಯುದ್ಧ ಘೋಷಣೆ 2) ಬಾಹ್ಯ ಆಕ್ರಮಣ 3) ಶಸಸ್ತ್ರ ದಂಗೆ ಆದರೆ ಇಂದಿರಾ ಗಾಂಧಿಯವರ ಕಾಂಗ್ರೇಸ್ ಸರ್ಕಾರ ಅಧಿಕಾರದ ಲೋಭೆಯಿಂದ ದೇಶದಲ್ಲಿ ತುರ್ತುಪರಿಸ್ಥಿತಿಯನ್ನ {352(1)ರನ್ವಯ} ಹೇರುತ್ತೆ .
ಅದಕ್ಕೆ ಸಾಕ್ಷಿ : 1971 ರ ಲೋಕಸಭೆಯ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಇಂದಿರಾಗಾಂಧಿಯ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ರಾಜ್ ನಾರಾಯಣ್ ಅನ್ನುವವರು ಸ್ಪರ್ಧೆ ಮಾಡ್ತಾರೆ. ಆ ಚುನಾವಣೆಯಲ್ಲಿ ಇಂದಿರಾಗಾಂಧಿ ಪ್ರಪ್ರಥಮ ಬಾರಿಗೆ ಭಾರತದಲ್ಲಿ ಅಡ್ಡಮತದಾನ ಹಾಗೂ ಚುನಾವಣೆ ಅಕ್ರಮಗಳ ಮೂಲಕ ಚುನಾವಣೆಯಲ್ಲಿ ಆರಿಸಿಬರುತ್ತಾರೆ. ಆದರೆ ಇದನ್ನ ಅಲಹಾಬಾದ್ ಹೈಕೊರ್ಟಿನಲ್ಲಿ ರಾಜ್ ನಾರಾಯಣ್ ಅಡ್ಡಮತದಾನದ ಸಾಕ್ಷಿಸಮೇತ ಪ್ರಶ್ನೆ ಮಾಡಲಾಗಿ ಕೇಸಿನ ತಿರ್ಪು ರಾಜ್ ನಾರಾಯಣ್ ಅವರ ಪರವಾಗಿ ಬರುತ್ತೆ , ಆದರೆ ಅಧಿಕಾರದ ದುರಾಸೆ ನೋಡಿ , ಇಂದಿರಾ ಗಾಂಧಿ ಅದನ್ನ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತಾರೆ. ಅಲ್ಲಿಯೂ ಕೂಡ ತೀರ್ಪು ನಾರಾಯಣ್ ಅವರ ಪರವಾಗಿ ಬರಲಾಗಿ , ತೀರ್ಪಿನ ಪ್ರತಿ ತನ್ನ ಕೈಸೇರುವುದರೊಳಗಾಗಿ ಇಂದಿರಾಗಾಂಧಿ ದೇಶದಲ್ಲಿ ಎಂದೂ ಮರೆಯಲಾಗದ ಘನಘೋರ ತುರ್ತುಪರಿಸ್ಥಿತಿಗೆ ಸಾಕ್ಷಿಯಾದರು.
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಚುನಾವಣೆ ಅಕ್ರಮ ಎಸಗಿದ್ದು ಹೌದು ಎಂದು ಸುಪ್ರೀಂ ಕೋರ್ಟಿನಲ್ಲೂ ಸಾಬೀತಾದ ಮರುದಿನವೇ ಜಯಪ್ರಕಾಶ್ ನಾರಾಯಣ್, ರಾಜ್ ನಾರಾಯಣ್, ಸತ್ಯೇಂದ್ರ ನಾರಾಯಣ್ ಸಿನ್ಹಾ, ಮೊರಾರ್ಜಿ ದೇಸಾಯಿ ನಾಯಕತ್ವದಲ್ಲಿ ದೆಹಲಿಯಲ್ಲಿ ಭಾರೀ ಹೋರಾಟ ಆರಂಭಿಸಿದ್ದರು. ನೈತಿಕವಾಗಿ ಇಂದಿರಾ ಅವರು ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ದನಿ ಎತ್ತಿದ್ದರು. ಪ್ರಧಾನಿ ನಿವಾಸ, ಸಂಸತ್ತಿನ ಎದುರಿಗೆ ಜನರ ಭಾರೀ ಗುಂಪು ಸೇರಿತ್ತು.
ಇನ್ನೊಂದು ವಿಚಾರವಾಗಿ, ಇಂದಿರಾ ವಿರುದ್ಧದ ಹೋರಾಟ ಬಲವಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಗ ದೇಶದ ಏಕೈಕ ಪ್ರಬಲ ಪಕ್ಷ. ಆದರೆ ಅಂದು ಭಾರತದಾದ್ಯಂತ ಜಯಪ್ರಕಾಶ್ ನಾರಾಯಣ್ ಅವರು ಕಾಂಗ್ರೆಸ್ಗೆ ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವತ್ತ ಪ್ರಬಲ ಹೋರಾಟ ನಡೆಸಿದ್ದರು. ಅಲ್ಲದೇ, ಗುಜರಾತ್ನಲ್ಲಿ ನವ ನಿರ್ಮಾಣ ಚಳವಳಿಯೂ ಹುಟ್ಟಿಕೊಂಡಿದ್ದು, ಕಾಂಗ್ರೆಸ್ ವಿರುದ್ಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷದ ಹೆಸರಲ್ಲಿ ಕಾಂಗ್ರೆಸ್ಸನ್ನು ಸೋಲಿಸಿದವು. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಗೆ ಇದರಿಂದ ತೀವ್ರ ಮುಖಭಂಗವಾಗಿದ್ದು, ಇಂದಿರಾ ಗಾಂಧಿಯವರನ್ನು ತೀವ್ರ ಚಿಂತೆಗೀಡು ಮಾಡಿತ್ತು. ಈ ಹೋರಾಟವನ್ನು ಹತ್ತಿಕ್ಕಲು ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಎಂಬ ಬ್ರಹ್ಮಾಸ್ತ್ರ ಬಳಸಿದರು.
ತುರ್ತು ಪರಿಸ್ಥಿತಿ ದಿಢೀರನೇ ಬಂದಿರಲಿಲ್ಲ. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭೆಯ 283 ಸ್ಥಾನಗಳನ್ನು ಮಾತ್ರ ಗಳಿಸಿ ಎಂಟು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತ್ತು. 1969ರಲ್ಲಿ ಇಂದಿರಾ ಗಾಂಧಿ ತಮ್ಮ ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡಿ ಲೋಕಸಭೆಯಲ್ಲಿ ಬಹುಮತವಿಲ್ಲದಿದ್ದರೂ ಕಮ್ಯುನಿಸ್ಟರ ಸಹಾಯದಿಂದ ಅಧಿಕಾರದಲ್ಲಿ ಮುಂದುವರೆದಿದ್ದರು. 1971ರಲ್ಲಿ ಮಧ್ಯಾವಧಿ ಚುನಾವಣೆ ಘೋಷಿಸಿ ‘ಗರೀಬಿ ಹಟಾವೊ’ ಎಂಬ ಘೋಷಣೆ ನೀಡಿ ಚುನಾವಣೆಯಲ್ಲಿ 352 ಸ್ಥಾನಗಳನ್ನು ಗಳಿಸಿ ಸರಕಾರ ರಚಿಸಿದ್ದರು. ಅದೇ ವರ್ಷ ಭಾರತದ ಸೇನೆಯ ಸಹಾಯದಿಂದ ಬಾಂಗ್ಲಾ ದೇಶ ಹುಟ್ಟುವುದಕ್ಕೆ ಕಾರಣವಾಗಿದ್ದರು. ಭಾರತದ ಸಂಸತ್ತಿನಲ್ಲಿ ಅವರನ್ನು ದುರ್ಗೆ ಎಂದು ಹೊಗಳಲಾಗಿತ್ತು. ಎಕನಮಿಸ್ಟ್ ಪತ್ರಿಕೆ ಅವರನ್ನು ಭಾರತದ ಸಾಮ್ರಾಜ್ಞಿ ಎಂದು ಸಂಬೋಧಿಸಿತ್ತು.
ಆದರೆ ನಂತರ ಅವರು ಎಲ್ಲಾ ಅಧಿಕಾರವನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳಲು ಪ್ರಾರಂಭಿಸಿದರು. ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ನಾಮಕರಣ ಮಾಡಲು ಪ್ರಾರಂಭಿಸಿದರು. 1973ರ ಹೊತ್ತಿಗೆ ಆಂಧ್ರ ಪ್ರದೇಶ ಹಾಗೂ ಉತ್ತರ ಪ್ರದೇಶಗಳು ರಾಷ್ಟ್ರಪತಿಗಳ ಆಡಳಿತಕ್ಕೆ ಒಳಗಾಗಿದ್ದವು. 1973ರ ಎಪ್ರಿಲ್ನಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂರು ನ್ಯಾಯಾಧೀಶರ ಹಿರಿತನವನ್ನು ಮೀರಿ ಅಜಿತ ನಾಥ ರೇ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸುವ ಮೂಲಕ ನ್ಯಾಯಾಂಗದ ಮೇಲೂ ತಮ್ಮ ಅಧಿಕಾರವನ್ನು ಸ್ಥಾಪಿಸಿದರು. ದೇಶದಲ್ಲಿ ಸರ್ವಾಧಿಕಾರ ಮೂಗು ತೂರಿಸಲು ಪ್ರಾರಂಭಿಸಿತ್ತು.
ಸಂಸತ್ತಿನ ಲೋಕಸಭೆ-ರಾಜ್ಯಸಭೆಗಳು ಒಂದು ರೀತಿ ಆಟದ ವಸ್ತುಗಳಾಗಿ ಬಿಟ್ಟವು. ಶ್ರೀಮತಿ ಇಂದಿರಾ ಗಾಂಧಿ ಅವರ ಚುನಾವಣಾ ಫಲಿತಾಂಶ ನೀಡಿದ್ದ ನ್ಯಾಯಾಲಯದ ತೀರ್ಪುಗಳನ್ನು ಸಂವಿಧಾನದ ತಿದ್ದುಪಡಿಗಳ ಮೂಲಕ ನಗಣ್ಯ ಮಾಡಲಾಯಿತು. ಪ್ರಧಾನಮಂತ್ರಿ ಸ್ಥಾನವನ್ನು ರಾಷ್ಟ್ರಪತಿ-ಉಪರಾಷ್ಟ್ರಪತಿ ಸ್ಥಾನಗಳ ಜೊತೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಾಧಿಸದಂತೆ ತಿದ್ದುಪಡಿ ತರಲಾಯಿತು. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಅವಧಿಯನ್ನು 5 ವರ್ಷಗಳಿಂದ 6 ವರ್ಷಗಳಿಗೆ ಹೆಚ್ಚಿಸಲಾಯಿತು. ರಾಜಕೀಯ ಖೈದಿಗಳನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಯಿತು.
ಹೀಗೆ ಇಂದು ನಾವು ಊಹೆ ಮಾಡಲಿಕ್ಕೂ ಸಾಧ್ಯವಾಗದ ಸಂಗತಿಗಳು ಜರುಗಿ ಹೋದವು. ಓರ್ವ ನಾಯಕಿಗೆ ತನ್ನ ಸ್ಥಾನದ ಬಗ್ಗೆ ಉಂಟಾಗಿದ್ದ ಆತಂಕ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಬೀಗುತ್ತಿದ್ದ ಭಾರತದಲ್ಲಿ ಏನೆಲ್ಲ ಘಟನೆಗಳನ್ನು ಜರುಗಿಸಿ ಬಿಟ್ಟಿತು. ಇಂತಹ ಕರಾಳ ಅಧ್ಯಾಯದ ನಡುವೆಯೂ ಅನೇಕ ಉತ್ಸಾಹಿ ಸಂಗತಿಗಳೂ ಉಗಮಿಸಿದವು.
ಇಡೀ ದೇಶವನ್ನೇ ಒಂದು ಕಾರಾಗಹವನ್ನಾಗಿ ಮಾರ್ಪಾಟು ಮಾಡಿದ ಕೀರ್ತಿ ಅಂದಿನ ಪ್ರಧಾನಮಂತ್ರಿಯದಾದರೆ, ರಾಜಕೀಯ ಖೈದಿಗಳಿಂದ ತುಂಬಿ ತುಳುಕುತ್ತಿದ್ದ ದೇಶದ ಬಂಧಿಖಾನೆಗಳು ರಾಜಕೀಯ ಶಾಸ್ತ್ರದ ವಿಶ್ವವಿದ್ಯಾಲಯಗಳಾಗಿದ್ದೂ ಸಹ ಅದೇ ತುರ್ತು ಪರಿಸ್ಥಿತಿಯ ದೊಡ್ಡ ಕೊಡುಗೆ.
1975 ಜೂ.25ರಂದು ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. 21 ತಿಂಗಳ ನಂತರ, 1977 ಮಾ.21ರಂದು ತುರ್ತು ಪರಿಸ್ಥಿತಿಯನ್ನು ಹಿಂದೆ ತೆಗೆದುಕೊಳ್ಳಲಾಯಿತು. ಹಿಂದೆ ಬ್ರಿಟಿಷರಿಂದ ಹರಣವಾಗಿದ್ದ ಭಾರತದ ಸ್ವಾತಂತ್ರ ಇಂದಿರಾ ಗಾಂಧಿಯವರಿಂದ ಮತ್ತೆ ಹರಣವಾಯಿತು. ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ ಹೋರಾಟದ ನಂತರ ಭಾರತದಲ್ಲಿ ಆದ ಮತ್ತೂಂದು ಬಹುದೊಡ್ಡ ಸ್ವಾತಂತ್ರ ಹೋರಾಟ ಇದಾಯಿತು. ದೇಶದ ಪ್ರಜಾಪ್ರಭುತ್ವ ಹಿರಿಮೆಯೇ ತಲೆತಗ್ಗಿಸಿದ ಈ ಪರಿಸ್ಥಿತಿ ನಡೆದು ಇಂದಿಗೆ 45 ವರ್ಷ ತುಂಬಿದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಪ್ರಧಾನಿ ಇಂದಿರಾ ನಿರ್ಧಾರಕ್ಕೆ “ಇಲ್ಲ’ ಎಂದು ಹೇಳಲು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅವರಿಗೆ ಸಾಧ್ಯವೇ ಇರಲಿಲ್ಲ. ತುರ್ತು ಪರಿಸ್ಥಿತಿ ಆದೇಶಕ್ಕೆ 1975 ಜೂ.25ರ ರಾತ್ರಿ ಸಹಿಹಾಕಿಸಲಾಯ್ತು. ಈ ಬಗ್ಗೆ ಸಾಕಷ್ಟು ವ್ಯಂಗ್ಯಚಿತ್ರಗಳು ಗೇಲಿ ಮಾಡಿದ್ದವು. ಪ್ರಮುಖವಾಗಿ – ರಾಷ್ಟ್ರಪತಿಯವರು ಬಾತ್ರೂಂನಿಂದಲೇ ತುರ್ತು ಪರಿಸ್ಥಿತಿ ಘೋಷಣೆ ಆದೇಶಕ್ಕೆ ಸಹಿ ಮಾಡಿದರು ಎಂಬ ವ್ಯಂಗ್ಯಚಿತ್ರ ಬಹಳ ಪ್ರಸಿದ್ಧವಾದುದು.
ಇಡೀ ದೇಶವೇ ಒಂದು ಜೈಲಾಯಿತು ಆಂತರಿಕ ತುರ್ತು ಪರಿಸ್ಥಿತಿ (ಸಂವಿಧಾನದ 352ನೇ ಕಲಂ) ಅನ್ವಯ ಆಡಳಿತವಾದ್ದರಿಂದ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಭಾರೀ ಸಂವಿಧಾನಾತ್ಮಕ ಅಧಿಕಾರಿಗಳು ಪ್ರಾಪ್ತವಾದವು. ಆದ್ದರಿಂದ ತಮ್ಮ ವಿರುದ್ಧ ದನಿ ಎತ್ತಿದವರನ್ನೆಲ್ಲ ಜೈಲಿಗೆ ಹಾಕಲು ಆದೇಶಿಸಿದರು. ಪ್ರಮುಖ ರಾಜಕೀಯ ನಾಯಕಾರ ಜಯಪ್ರಕಾಶ್ ನಾರಾಯಣ್, ವಿಜಯರಾಜೇ ಸಿಂಧಿಯಾ, ಮೊರಾರ್ಜಿ ದೇಸಾಯಿ, ಜೀವತ್ರಾಮ್ ಕೃಪಲಾನಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವಾರು ಬಂಧನಕ್ಕೊಳಗಾದರು. ಮೊದಲನೇ ಪಂಕ್ತಿಯ ರಾಜಕೀಯ ನಾಯಕರನ್ನು ಹತ್ತಿಕ್ಕಿ ಸರ್ಕಾರ ವಿರುದ್ಧ ಪ್ರತಿಭಟನೆ ಹತ್ತಿಕ್ಕುವುದು ಇಂದಿರಾ ಅವರ ಉದ್ದೇಶವಾಗಿತ್ತು. ಆದಾಗ್ಯೂ ದೇಶದ ವಿವಿಧೆಡೆಗಳಲ್ಲಿ ಸರ್ಕಾರದ ವಿರುದ್ಧ ದನಿ ಮೊಳಗುತ್ತಿದ್ದವು. ಈ ಸಂದರ್ಭ ಒಬ್ಬರನ್ನೂ ಬಿಡದಂತೆ ಬಂಧಿಸುವಂತೆ ಇಂದಿರಾ ಅವರು ಆದೇಶಿಸಿದರು. ಸರ್ಕಾರದ ವಿರುದ್ಧ ಪ್ರತಿಭಟನೆ ರೂಪಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು, ಹಲವು ದೇಶಭಕ್ತ ಮಾಧ್ಯಮ ಕಾರ್ಯಕರ್ತರೂ ಜೈಲುಪಾಲಾದರು.
ಬಲವಂತದ ಸಂತಾನ ಹರಣ ಶಸ್ತ್ರಚಿಕಿತ್ಸೆ ತುರ್ತು ಪರಿಸ್ಥಿತಿಯ ವೇಳೆ ಸರ್ಕಾರದ ಮಹತ್ತರ ನಿರ್ಧಾರಗಳಲ್ಲಿ ಅವರ ಪುತ್ರ ಸಂಜಯ ಗಾಂಧಿ ಕೂಡ ಪ್ರಭಾವ ಹೊಂದಿದ್ದರು. ಅವರು ದೇಶದ ಜನಸಂಖ್ಯೆ ನಿಯಂತ್ರಣ ಬಗ್ಗೆ ಈ ವೇಳೆ ಸಂತಾನ ನಿಯಂತ್ರಿಸುವ ಕಡ್ಡಾಯ ಶಸ್ತ್ರಚಿಕಿತ್ಸೆ ಜಾರಿಗೆ ಕಾರಣವಾದರು. ಪರಿಣಾಮ ಬಲವಂತವಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಯಿತು. ಕಂಡ ಕಂಡವರಿಗೆಲ್ಲಾ ಶಸ್ತ್ರಚಿಕಿತ್ಸೆ ನೆರವೇರಿತು ಎಂದು ಹೇಳಲಾಗುತ್ತದೆ. 27 ಲಕ್ಷದಷ್ಟಿದ್ದ ಸಂತಾನಹರಣ ತುರ್ತು ಪರಿಸ್ಥಿತಿ ಸಂದರ್ಭ 83 ಲಕ್ಷಕ್ಕೇರಿತು. ಸಂಜಯ ಗಾಂಧಿಯವರ ಸಂತಾನ ಹರಣ ಚಿಕಿತ್ಸೆ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಯಿತು.
1.5 ಲಕ್ಷ ಜನರ ಬಂಧನ ತುರ್ತು ಪರಿಸ್ಥಿತಿಯ ವೇಳೆ ಸರ್ಕಾರದ ವಿರುದ್ಧ ನಿಂತವರನ್ನೆಲ್ಲಾ ಜೈಲಿಗಟ್ಟಲಾಯ್ತು. ಒಟ್ಟು 1.5 ಲಕ್ಷಕ್ಕೂ ಮಿಕ್ಕಿ ಜನ ಜೈಲು ಪಾಲಾದರು. ಇಂದಿರಾ ವಿರೋಧಿಸಿ ಜಾರ್ಜ್ ಫೆರ್ನಾಂಡೀಸ್ ಅವರು ನಡೆಸಿದ ರ್ಯಾಲಿಯಲ್ಲಿ ಭಾಗಿಯಾಗಿದ್ದ 30 ಸಾವಿರಕ್ಕೂ ಹೆಚ್ಚು ಮಂದಿ ಬಂಧನವಾಗಿದ್ದು ಒಂದು ದಾಖಲೆ. ಇಂದಿರಾ ಹಾಗೂ ಸಂಜಯ್ಗಾಂಧಿ ಅಕ್ಷರಶಃ ಸರ್ವಾಧಿಕಾರಿಗಳಾದರು. ತುರ್ತು ಪರಿಸ್ಥಿತಿ ಹೇರಿಕೆಯಿಂದಾಗಿ ಕಾನೂನು ಸಂಪೂರ್ಣ ಕೇಂದ್ರದ ಅಧೀನದಲ್ಲಿತ್ತು. ಚುನಾವಣೆಗಳು ಮುಂದೂಡಿಕೆಯಾದವು. ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಮೂರನೇ ಎರಡರಷ್ಟು ಬಹುಮತವೂ ಇತ್ತು. ಇದರಿಂದ ಹಲವು ಸುಗ್ರೀವಾಜ್ಞೆಗಳನ್ನು ಕೇಂದ್ರ ಸರ್ಕಾರ ಹೊರಡಿಸಿತು. ಇದರಲ್ಲಿ ಪ್ರಧಾನಿ ಇಂದಿರಾ ಅವರನ್ನು ಚುನಾವಣೆ ಅಕ್ರಮದಿಂದ ಹೊರಗಿಡುವ ಸುಗ್ರೀವಾಜ್ಞೆಯೂ ಸೇರಿತ್ತು. ಅಲ್ಲದೇ ಕಾಂಗ್ರೆಸ್ಸೇತರ ಆಡಳಿತವಿದ್ದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಯ್ತು. ತಮಿಳುನಾಡು, ಗುಜರಾತ್ಗಳಲ್ಲಿ ಈ ಆಡಳಿತ ಜಾರಿಗೆ ಬಂತು. ತುರ್ತು ಪರಿಸ್ಥಿತಿ ಸಂದರ್ಭ ಇಡೀ ಆಡಳಿತವನ್ನು ಹದ್ದುಬಸ್ತಿನಲ್ಲಿಡಲು ಇಂದಿರಾ ಅವರು 42 ಸಂವಿಧಾನ ತಿದ್ದುಪಡಿಗಳನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಹಾಗೂ ಪುತ್ರ ಸಂಜಯ್ ಗಾಂಧಿ ಅಕ್ಷರಶಃ ಸರ್ವಾಧಿಕಾರಿಗಳಾದರು.
ಅಕ್ಷರಶಃ ಪ್ರಜಾಪ್ರಭುತ್ವದ ಕಗ್ಗೋಲೆ ಆಗಿದ್ದು ಈ ಅವಧಿಯಲ್ಲಿ. ಪ್ರಜೆಗಳ ಮೂಲಭೂತ ಹಕ್ಕುಗಳೆಲ್ಲವನ್ನೂ ಅಮಾನತುಗೊಳಿಸಲಾಗಿತ್ತು. ಕಾಂಗ್ರೆಸ್ ವಿರೋಧಿಗಳನ್ನು, ಟೀಕಾಕಾರರನ್ನು ಜೈಲಿಗಟ್ಟಲಾಗಿತ್ತು. ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿತ್ತು. ಪತ್ರಿಕೆಗಳ ಮೇಲೆ ನಿರ್ಬಂಧ (ಸೆನ್ಸಾರ್) ಹೇರಲಾಗಿತ್ತು. ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಲಕ್ಷಾಂತರ ದೇಶಭಕ್ತರು ನಾನಾ ತೆರದ ಹಿಂಸೆಗಳನ್ನು ಸಹಿಸಿಕೊಂಡು ಹೋರಾಡಿದರು. ತುರ್ತು ಪರಿಸ್ಥಿತಿ ವಿರುದ್ಧ ಮುಂಚೂಣಿ ಹೋರಾಟ ನಡೆಸಿದ ಭಾರತೀಯ ಜನಸಂಘ ಮತ್ತು ಆರೆಸ್ಸೆಸ್ ಸ್ವಯಂಸೇವಕರು.
1975 ರ ತುರ್ತು ಪರಿಸ್ಥಿತಿ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ್ದ ಮಹಾಕಳಂಕ! ಅಕ್ಷರಶಃ ಸರ್ವಾಧಿಕಾರಿಯ ಅಟ್ಟಹಾಸ! ಅದೆಷ್ಟು ಜನರು ಪ್ರಾಣ ಕಳೆದುಕೊಂಡರೋ, ಅದೆಷ್ಟು ಜನರ ಜೀವನವೇ ನರಕವಾಯಿತೋ, ಅದೆಷ್ಟು ಜನರು ಅಂಗವಿಕಲರಾದರೋ ಗೊತ್ತಿಲ್ಲ.
ಆ ದಿನಗಳ ಬಗ್ಗೆ ಓದುತ್ತಿದ್ದರೆ ರಕ್ತ ಕುದಿಯುತ್ತದೆ
ನಮ್ಮಂತಹ ತರುಣರಿಗೆ ಎಮರ್ಜೆನ್ಸಿ ಗೊತ್ತೇ ಇಲ್ಲ. ಗೊತ್ತಿರುವ ಹಿರಿಯರು ಅದೇಕೋ ಏನೋ ಮರೆತು ಹೋಗಿದ್ದಾರೆ. ಅನ್ಯಾಯಕ್ಕೆ ತಲೆ ಬಾಗದೆ, ನ್ಯಾಯಕ್ಕಾಗಿ ಬದುಕಬೇಕೆಂಬ ಛಲವನ್ನು ತರುಣರಲ್ಲಿ ಬೆಳೆಸಬಲ್ಲ ಪ್ರೇರಣಾದಾಯಿ ಘಟನೆಗಳನ್ನು ಕಾಣಬಹುದು. ದೇಶ ನನಗಾಗಿ ಅಲ್ಲ, ನಾನು ದೇಶಕ್ಕಾಗಿ ಎಂಬ ಜೀವನ ರಚನೆ ನಮ್ಮದಾಗಬೇಕಾಗಿದೆ. ಯುವಜನಾಂಗಕ್ಕೆ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡುವ ಪ್ರೇರಣೆ ಮೂಡಿಸದೇ ಇರಲಾರದು.
ಆ 1975-77 ರ ನಡುವೆ ದೇಶಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗವಹಿಸಿದ ಸ್ವಾತಂತ್ರ್ಯ ನಂತರದ ಸ್ವಾತಂತ್ರ್ಯ ಯೋಧರಿಗೆ ನಮ್ಮ ಕುಶಲೋಪರಿಯ ಜೊತೆಗೆ ಅವರ ಕಾಲದಲ್ಲಿನ ಹೋರಾಟದ ಬಗೆಗೆ ಮೆಲುಕು ಹಾಕೋಣ. ಈ ಪೀಳಿಗೆಯ ತರುಣರಿಗೆ ಆ ಎಲ್ಲ ಘಟನೆಗಳು ಸಮಾಜಕಾರ್ಯ, ದೇಶಕಾರ್ಯಕ್ಕೆ ಪ್ರೇರಣೆಯನ್ನಂತು ನೀಡುವುದು ಸುಳ್ಳಲ್ಲ. ಆ ಎಲ್ಲ ಕಲಿಗಳಿಗೆ ನಮನಗಳೊಂದಿಗಿನ ಆಶಯ. ಸಾಕಷ್ಟು ಕಷ್ಟ ನಷ್ಟಗಳನ್ನು ಈ ದೇಶದ ನಾಗರಿಕ ಅನುಭವಿಸಿ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿರುವುದನ್ನು ನಾವೆಲ್ಲರೂ ಮರೆಯಬಾರದು. ಪ್ರತಿ ಮನೆ ಪ್ರತಿ ಮನಗಳಿಗೆ ಸತ್ಯದ ದರ್ಶನವಾಗಬೇಕು. ಎಂದೆಂದಿಗೂ ಮರೆಯಬಾರದ ಎಮರ್ಜೆನ್ಸಿ 1975.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.