ಸ್ವತಂತ್ರ ಭಾರತದ ಇತಿಹಾಸ ಕಂಡ ಅತ್ಯಂತ ಕರಾಳ ಘಟನೆಯೆಂದರೆ ಅದು ತುರ್ತು ಪರಿಸ್ಥಿತಿ. ನಮ್ಮನ್ನು ಆಳುವವರು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಭಯಾನಕ ಉದಾಹರಣೆಯೂ ಹೌದು. 1975 ರ ಜೂನ್ 25 ರಂದು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯು ಸ್ವತಂತ್ರವಾಗಿ ಬದುಕುವ ಭಾರತೀಯರ ಹಕ್ಕನ್ನೇ ಕಸಿದುಕೊಂಡಿತು. ರಾತೋರಾತ್ರಿ ಕಸಿದುಕೊಳ್ಳಲಾದ ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳ ಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ ಭಾರತೀಯರ ಆತ್ಮಾಭಿಮಾನಕ್ಕೆ ದೊಡ್ಡ ಮಟ್ಟದ ಘಾಸಿಯನ್ನುಂಟು ಮಾಡಿತ್ತು. ಚಲನಶೀಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರ್ವಾಧಿಕಾರದ ವ್ಯಾಪ್ತಿಗೆ ತಂದು ಭಾರತದ ಭವಿಷ್ಯವನ್ನೇ ಕರಾಳತೆಗೆ ದೂಡುವ ಪ್ರಯತ್ನ ಮಾಡಿದ್ದ ಇಂದಿರಾ ವಿರುದ್ಧ ಸಿಡಲ ಮರಿಗಳಂತೆ ಸಿಡಿದೆದ್ದು ಹೋರಾಡಿದ ಪ್ರತಿಯೊಬ್ಬ ಭಾರತೀಯನೂ ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾನೆ.
ಆಳುವವನು ಸರ್ವಾಧಿಕಾರಿ ಮನಃಸ್ಥಿಯನ್ನು ಹೊಂದಿದರೆ ಏನಾಗುತ್ತದೆ ಎಂಬುದಕ್ಕೆ ಇಂದಿರಾ ಗಾಂಧಿಯೇ ಸ್ಪಷ್ಟ ಉದಾಹರಣೆ. ಭಾರತೀಯ ಹಿತಾಸಕ್ತಿಗಿಂತ ತನ್ನ ಸ್ವಾರ್ಥಕ್ಕೆ ಆಕೆ ಹೆಚ್ಚು ಬೆಲೆ ನೀಡಿದರು. ಇಡೀ ಭಾರತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನಗೆ ಬೇಕಾದಂತೆ ಆಡಳಿತ ನಡೆಸಲು ಮುಂದಾಗಿದ್ದ ಅವರಿಗೆ ಭಾರತವನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಇತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ಪುತ್ರಿಗೆ ಜನ್ಮದತ್ತವಾಗಿಯೇ ಇಂತಹದೊಂದು ಮಹತ್ವಾಕಾಂಕ್ಷೆ ಬಂದಿದ್ದಿರಬಹುದು. ಆದರೆ ಭಾರತೀಯನ ಆತ್ಮಾಭಿಮಾನದ ಎದುರು ಆಕೆಯ ಮಹತ್ವಾಕಾಂಕ್ಷೆ ಮಣ್ಣು ಮುಕ್ಕಿದೆ. ಕುಟುಂಬ ರಾಜಕಾರಣದ ಸಂಕೋಲೆಯಿಂದ ಭಾರತೀಯ ತನ್ನನ್ನು ತಾನು ಬಿಡಿಸಿಕೊಂಡಿದ್ದಾನೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಸಿರಾಗಿಸಿಕೊಳ್ಳುವ ಆಡಳಿತಗಾರ ಎಷ್ಟು ಪರಿಣಾಮಕಾರಿಯಾಗಿ ಆಡಳಿತ ನಡೆಸಬಲ್ಲ ಎಂಬುದಕ್ಕೆ ಇಂದಿನ ಪ್ರಧಾನಿ ನರೇಂದ್ರ ಮೋದಿಯವರೇ ಉದಾಹರಣೆ. ಆಡಳಿತದ ನಿರ್ಧಾರಗಳಲ್ಲಿ ಜನರ ಸಲಹೆ ಸೂಚನೆಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪ್ರಧಾನಿಯಾದ ಬಳಿಕ 2014ರ ಅಕ್ಟೋಬರ್ನಿಂದ ಅವರು ಆರಂಭಿಸಿದ ಮನ್ ಕೀ ಬಾತ್ ಕಾರ್ಯಕ್ರಮ ಜನರನ್ನು ಬೆಸೆಯುವ ನಿಟ್ಟಿನಲ್ಲಿನ ಒಂದು ದೊಡ್ಡ ಕ್ರಮವಾಗಿದೆ. ಪ್ರತಿ ತಿಂಗಳು ಮನ್ ಕೀ ಬಾತ್ ಪ್ರಸಾರಗೊಳ್ಳುವುದಕ್ಕೂ ಮುನ್ನ ಅವರು ಜನರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಲಹೆ ಸೂಚನೆಗಳು ಅವರ ಮಾತುಗಳಲ್ಲಿ ಪ್ರತಿಫಲನಗೊಳ್ಳುತ್ತದೆ. ಅವರು ನಡೆಸಿದಷ್ಟು ಸಂವಾದ ಕಾರ್ಯಕ್ರಮಗಳನ್ನು ಬೇರೊಬ್ಬ ಜನನಾಯಕ ನಡೆಸಿರಲು ಸಾಧ್ಯವೇ ಇಲ್ಲ. ಅದು ಪರೀಕ್ಷಾ ಪೆ ಚರ್ಚಾ ಇರಬಹುದು, ಶಿಕ್ಷಕರ ದಿನದಂದು ಅವರು ನಡೆಸುವ ಸಂವಾದ ಆಗಿರಬಹುದು, ತಂತ್ರಜ್ಞರೊಂದಿಗಿನ ಅವರ ಸಂವಾದ ಆಗಿರಬಹುದು, ಐಎಎಸ್ ಅಧಿಕಾರಿಗಳೊಂದಿಗಿನ ಅವರ ಸಂವಾದ ಆಗಿರಬಹುದು, ಮನ್ ಕೀ ಬಾತ್ ಆಗಿರಬಹುದು ಅಥವಾ ಅವರ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ನಡೆಸುವ ಸಂವಾದವೇ ಆಗಿರಬಹುದು ಇವೆಲ್ಲವೂ ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿನ ದೊಡ್ಡ ಹೆಜ್ಜೆಗಳಾಗಿವೆ.
ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ನಿಂತು ಅವರು ಮಾಡುವ ಭಾಷಣದಲ್ಲೂ ಜನಸಾಮಾನ್ಯರ ಚಿಂತನೆಗಳು ಪ್ರತಿಫಲನಗೊಳ್ಳುತ್ತವೆ. ಭಾಷಣಕ್ಕೂ ಹಲವು ದಿನಗಳ ಮುಂಚಿತವಾಗಿ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಭಾಷಣಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಜನರಿಗೆ ಮನವಿ ಮಾಡುತ್ತಾರೆ. ಅದರ ಆಧಾರದ ಮೇಲೆಯೇ ಅವರು ಭಾಷಣದಲ್ಲಿ ವಿಷಯಗಳಿಗೆ ಒತ್ತು ನೀಡುತ್ತಾರೆ. ಅವರ ಹಲವು ನಿರ್ಧಾರ, ಯೋಜನೆಗಳ ಹಿಂದೆಯೂ ಜನಸಾಮಾನ್ಯರ ಕಾಳಜಿಗಳು ಅಭಿವ್ಯಕ್ತಗೊಂಡಿದೆ ಎಂದರೆ ಅದಕ್ಕೆ ಅವರು ಜನಸಾಮಾನ್ಯರೊಂದಿಗೆ ಸಾಧಿಸಿರುವ ಬೆಸುಗೆಯೇ ಕಾರಣ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆಡಳಿತಗಾರ ಪ್ರಜೆಗಳಿಂದಲೇ ಆಯ್ಕೆಯಾಗಿರುತ್ತಾನೆ. ಆಡಳಿತದಲ್ಲೂ ಪ್ರಜೆಗಳ ಹಿತಾಸಕ್ತಿ ಸರ್ವೋಚ್ಛವಾಗಿರುತ್ತದೆ. ಸರ್ಕಾರದ ಪ್ರತಿ ನಡೆ, ನಿರ್ಧಾರ, ನೀತಿಗಳಲ್ಲಿ ಪ್ರಜೆಗಳನ್ನು ಒಳಪಡಿಸಿಕೊಂಡು ಮುನ್ನಡೆಯುವವನು ಮಾತ್ರ ಉತ್ತಮ ಆಡಳಿತಗಾರನಾಗುತ್ತಾನೆ. ತನ್ನನ್ನು ತಾನು ʼಪ್ರಧಾನ ಸೇವಕʼ ಎಂದು ಕರೆದುಕೊಳ್ಳುವ ಮೋದಿ, ತಮ್ಮ ಕಾರ್ಯದ ಮೂಲಕವು ತಾನೊಬ್ಬ ಪ್ರಧಾನ ಸೇವಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕೊರೋನಾವೈರಸ್ ದೇಶದಲ್ಲಿ ಕಾಲಿಟ್ಟ ಕೂಡಲೇ ಮೋದಿ ʼಜನತಾ ಕರ್ಫ್ಯೂʼ ಅನ್ನು ಘೋಷಣೆ ಮಾಡಿದ್ದರು. ಜನರಿಂದಲೇ ನಡೆಸಲ್ಪಟ್ಟ ಕರ್ಫ್ಯೂ ಇದಾಗಿತ್ತು. ಇಂತಹದೊಂದು ಅದ್ಭುತ ಪರಿಕಲ್ಪನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಲೆಬಾಗಿದ ಪ್ರಧಾನಿಗೆ ಮಾತ್ರ ಮೂಡಿಬರಲು ಸಾಧ್ಯ. ಮೋದಿಗೆ ಭಾರತೀಯರ ನಾಡಿಮಿಡಿತದ ಬಗ್ಗೆ ಸ್ಪಷ್ಟ ಅರಿವಿದೆ. ಅವರು ನೀಡುವ ಕರೆಯನ್ನು ಜನಸಾಮಾನ್ಯರು ಪ್ರೀತಿಯಿಂದ ಆಚರಣೆಗೆ ತರುತ್ತಾರೆ. ಜನತಾ ಕರ್ಫ್ಯೂ, ಕೊರೋನಾ ಯೋಧರಿಗೆ ಗೌರವ ಸಲ್ಲಿಸಲು ನೀಡಿದ ಕರೆ ಇದಕ್ಕೆಲ್ಲಾ ಜನರು ಸ್ಪಂದಿಸಿದ ರೀತಿ ಒಬ್ಬ ಪ್ರಧಾನಿ ಮತ್ತು ನಾಗರಿಕರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯಿಂದ ದೇಶದಲ್ಲಿ ಸೃಷ್ಟಿಯಾದ ಅಸ್ಥಿರತೆ, ಅರಾಜಕತೆಯನ್ನು ಈ ದೇಶ ನೋಡಿದೆ ಮತ್ತು ಅದನ್ನು ಹಿಮ್ಮೆಟ್ಟಿ ನಿಂತಿದೆ. ಈಗ ದೇಶದಲ್ಲಿ ಜನ ಸೇವಕ ಪ್ರಧಾನಿ ಇದ್ದಾರೆ. ಜನಸಾಮಾನ್ಯರ ಸಲಹೆ ಸೂಚನೆಗಳನ್ನು ಆಲಿಸುವ, ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ, ಹಿರಿಯರ ಅನುಭವಗಳನ್ನು ಕೇಳಿ ತಿಳಿದುಕೊಳ್ಳುವ, ಪುಟಾಣಿ ಮಕ್ಕಳ ಅನಿಸಿಕೆಗಳನ್ನೂ ಗೌರವಿಸುವ ಪ್ರಧಾನಿ ಇದ್ದಾರೆ. ಹೀಗಾಗಿಯೇ ವಿಶ್ವ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಭಾರತ ಈಗ ವಿಶ್ವಮನ್ನಣೆಯನ್ನು ಗಳಿಸುತ್ತಿದೆ. ಎಂತಹ ಸವಾಲುಗಳನ್ನೂ ಎದೆಗೊಟ್ಟು ಎದುರಿಸಬಲ್ಲ ಸಾಮರ್ಥ್ಯ ಇಂದು ಭಾರತಕ್ಕೆ ಬಂದಿದೆ. ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ಈಗ ತನ್ನ ಮೌಲ್ಯಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠತೆಯೊಂದಿಗೆ ಮುನ್ನಡೆಯುತ್ತಿದೆ.
✍️ ಶರಣ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.