ಹೆಮ್ಮಾಡಿ : ಭಾರೀ ಮಳೆಗೆ ತುಂಬಿ ಹರಿಯತ್ತಿದ್ದ ಸೌಪರ್ಣಿಕಾ ನದಿಯಲ್ಲಿ ಕಾಲುಜಾರಿ ಬಿದ್ದು ತಂಗಿಯನ್ನು ಪ್ರಾಣಾಪಾಯ ಲೆಕ್ಕಿಸದೆ ಬಾಲಕಿ ರಕ್ಷಿಸಿದ ಘಟನೆ ಕೊಡಚಾದ್ರಿ ತಪ್ಪಲಿನ ಸೌಪರ್ಣಿಕಾ ನದಿತೀರದ ಗ್ರಾಮವಾದ ಸಲಗೇರಿಯಲ್ಲಿ ನಡೆದಿದೆ. ಜುಲೈ 19ರಂದು ಭಾರೀ ಮಳೆ ಸುರಿದಿದ್ದರಿಂದ ಸೌಪರ್ಣಿಕಾ ನದಿ ತುಂಬಿಹರಿದಿತ್ತು. ಎಲ್ಲೆಡೆ ಮಳೆ ಹೆಚ್ಚಿದ್ದರಿಂದ ಜುಲೈ 20ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಸಲಗೇರಿಯ ಗ್ರಾಮದ ಅಕ್ಕ-ತಂಗಿ ಜ್ಯೋತಿ ಮರಾಠಿ ಹಾಗೂ ಮಮತಾ ಮರಾಠಿ ಈ ಬಗ್ಗೆ ಮಾಹಿತಿ ಇಲ್ಲದೆ ಮನೆಯಿಂದ ಹೊರಟು ನದಿದಡದಲ್ಲಿ ನಡೆದು ಶಾಲೆಯತ್ತ ಸಾಗಿದ್ದರು. ಅವರೊಂದಿಗೆ ಇತರ ಮೂವರು ಗೆಳತಿಯರಿದ್ದರು. ನದಿ ದಾಟಿ ಬರುವಷ್ಟರಲ್ಲಿ ರಜೆ ನೀಡಿದ ವಿಷಯ ತಿಳಿದು ಮನೆಗೆ ಮರಳುತ್ತಿದ್ದರು. ಗೆಳತಿಯರು ಬೇಗನೆ ಮನೆ ತಲುಪಿಯಾಗಿತ್ತು.
ಆಕಸ್ಮಿಕ ಕಾಲುಜಾರಿ ಬಿದ್ದ ತಂಗಿ : ಅಕ್ಕ-ತಂಗಿಯರು ಮನೆಗೆ ಮರಳುತ್ತಿದ್ದಾಗ ತಂಗಿ ಮಮತಾ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದಿದ್ದಳು. ಮನೆ ಹೆಚ್ಚು ದೂರದಲ್ಲಿ ಇರಲಿಲ್ಲವಾದರೂ ಅರಣ್ಯ ಪ್ರದೇಶವಾದ್ದರಿಂದ ಸಹಾಯಕ್ಕೆ ಕೂಗಿದರೂ ಯಾರಿಗೂ ಕೇಳುವಂತಿರಲಿಲ್ಲ. ರಕ್ಷಣೆಯ ಕೂಗು ಮರೆತು ಅಕ್ಕ ಜ್ಯೋತಿ ಹಿಂದೆ ಮುಂದೆ ನೋಡದೇ ನದಿಗೆ ಧುಮುಕಿದ್ದಳು. ನೀರಿನ ಭಾರೀ ರಭಸಕ್ಕೆ ಇನ್ನೂರು ಮೀ. ತೇಲಿಕೊಂಡೇ ಸಾಗಿದ ಅವರಿಬ್ಬರ ಅದೃಷ್ಟ ಗಟ್ಟಿಯಿತ್ತೋ ಏನೋ ನದಿ ನೀರಿನ ಆಳ ಮತ್ತು ಸೆಳೆವು ಕಡಿಮೆಯಾಗಿದ್ದ ಪ್ರದೇಶಕ್ಕೆ ಬಂದಿದ್ದರು. ಕಣ್ಣು, ಕೈ ಮತ್ತು ತಲೆಗೆ ಗಾಯಗೊಂಡಿದ್ದರೂ ಜ್ಯೋತಿ ತಂಗಿಯನ್ನು ಎತ್ತಿಕೊಂಡು ದಡ ತಲುಪಿ, ಅಲ್ಲಿಂದ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ಬಳಿಕ ಮನೆಯವರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು.
ಒಂದೇ ಶಾಲೆಯ ವಿದ್ಯಾರ್ಥಿನಿಯರು : ಜ್ಯೋತಿಯ ಚಿಕ್ಕಪ್ಪನ ಮಗಳು ಮಮತಾ. ಕೆಲವೇ ಸಮಯದ ಹಿಂದೆ ಮಮತಾಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು. ಇವರಿಬ್ಬರೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಪ್ರೌಢಶಾಲೆಯ ವಿದ್ಯಾರ್ಥಿಗಳು. ಜ್ಯೋತಿ 10ನೇ ತರಗತಿ ಮತ್ತು ಮಮತಾ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಪ್ರಾಣಾಪಾಯಕ್ಕೆ ಸಿಲುಕಿದ್ದರೂ ಧೈರ್ಯ ಕಳೆದುಕೊಳ್ಳದೇ ತಂಗಿಯ ಪ್ರಾಣ ಕಾಪಾಡಿದ ಜ್ಯೋತಿಯ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.