ನವದೆಹಲಿ : ಫ್ರಧಾನಿ ಮೋದಿ ಅವರು ಘೋಷಿಸಿದ್ದ ಆತ್ಮಶನಿರ್ಭರ ಭಾರತದ 20 ಲಕ್ಷ ಕೋಟಿ ರೂ. ಗಳಲ್ಲಿ ಉಳಿದಿದ್ದ 3,52,000 ಕೋಟಿ ರೂ. ಗಳನ್ನು ರೈತರ ಅಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಬಳಕೆ ಮಾಡಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಇಂದು ಸುದ್ದಿಗೊಷ್ಟಿ ನಡೆಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಕೃಸಮಷಿ ಕ್ಷೇತ್ರಕ್ಕೆ ಬಂಪರ್ ನೀಡಿರುವ ಕೇಂದ್ರ 11 ಘಟಕಗಳಾಗಿ ವಿಂಗಡಣೆ ಮಾಡಿದ್ದು, ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ, ರೈತರ ಅಭಿವೃದ್ಧಿಗೆ ತೆಗೆದುಕೊಳ್ಳಲಾಗಿರುವ ಪೂರಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೃಷಿ ಕ್ಷೇತ್ರವನ್ನು ಒಟ್ಟು 11 ವಲಯವಾಗಿ ಗುರುತಿಸಿಕೊಂಡಿರುವ ಕೇಂದ್ರ ಸರ್ಕಾರ, ಅವುಗಳ ಮೂಲಕ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸಹಾಯ ಮಾಡಲು ಮುಂದಾಗಿದೆ. ಆ ಪ್ರಕಾರ
1. ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ.
2. ಆಹಾರೋದ್ಯಮಕ್ಕೆ ಸಂಬಂಧಿಸಿದಂತೆ 10 ಸಾವಿರ ಕೋಟಿ ರೂ.
3. ಈಗಾಗಲೇ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಮೀನುಗಾರರಿಗೆ ಸಹಾಯವಾಗುವಂತೆ 20 ಸಾವಿರ ಕೋಟಿ ರೂ.
4. ಪ್ರಾಣಿಗಳ ರೋಗ ನಿಯಂತ್ರಣ ಕ್ಕೆ ಸಂಬಂಧಿಸಿದಂತೆ 13,343 ಕೋಟಿ ರೂ.
5. ಹೈನುಗಾರಿಕೆ, ಪಶುಸಂಗೋಪನೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಗೆ 15 ಸಾವಿರ ಕೋಟಿ ರೂ.
6. ಔಷಧೀಯ ಸಸ್ಯಗಳ ಅಭಿವೃದ್ಧಿಗೆ 4 ಸಾವಿರ ಕೋಟಿ ರೂ.
7. ಜೇನು ಸಾಕಾಣಿಕೆಗೆ ಪ್ರೋತ್ಸಾಹ ನೀಡಲು 5 ಸಾವಿರ ಕೋಟಿ ರೂ.
8. ಆಪರೇಶನ್ ಗ್ರೀನ್ಗೆ ಸಂಬಂಧಿಸಿದಂತೆ ತರಕಾರಿ ಬೆಳೆಗಾರರಿಗೆ ನೆರವನ್ನು ಘೋಷಿಸಿದ್ದಾರೆ.
ಜೊತೆಗೆ ಆಡಳಿತಾತ್ಮಕ ವಿಚಾರವಾಗಿ 1. 1955 ರ ಅಗತ್ಯ ವಸ್ತುಗಳ ಕಾಯ್ದೆಯ ತಿದ್ದುಪಡಿ, 2. ರೈತರಿಗೆ ಆಕರ್ಷಕ ಬೆಲೆಗೆ ಬೆಳೆ ಮಾರಾಟಕ್ಕೆ ಅವಕಾಶ, ಇ-ಟ್ರೇಡಿಂಗ್ ವ್ಯವಸ್ಥೆ, ಅಂತರಾಜ್ಯ ಮಾರಾಟಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಮತ್ತು 3. ರೈತರಿಗೆ ಸೂಕ್ತ ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲವಾಗುವಂತೆ ನ್ಯಾಯಯುತ ಬೆಲೆ ಒದಗಿಸಲು ಕೇಂದ್ರದ ವತಿಯಿಂದ ಕಾನೂನು ಜಾರಿಗೊಳಿಸುವುದಾಗಿಯೂ ಸಚಿವೆ ಮಾಹಿತಿ ನೀಡಿದ್ದಾರೆ.
ಕೃಷಿಗೆ ಸಂಬಂಧಿಸಿದಂತೆ ಹೈನುಗಾರಿಕೆ, ಪಶುಸಂಗೋಪನೆ, ಹಾಲು ಉತ್ಪಾದನೆ ಮಾರಾಟಕ್ಕೆ, ಹಾಲಿನ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಮಾರಾಟಕ್ಕೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಆಸಕ್ತಿ ವಹಿಸಿದೆ. ಅಲ್ಲದೆ ಆಹಾರೋದ್ಯಮಕ್ಕೆ ಸಂಬಂಧಿಸಿದಂತೆ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಕಾರ್ಯ ನಿರ್ವಹಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಆಯುರ್ವೇದ ಉತ್ಪನ್ನಗಳ ಬಗೆಗೂ ಕಾಳಜಿ ವಹಿಸಿದ್ದಾರೆ. ಪ್ರದೇಶವಾರು ಆಹಾರ ಬೆಳೆಗಳಿಗೆ ಸಂಬಂಧಿಸಿದಂತೆ ಆಧ್ಯತೆ ನೀಡುವುದಾಗಿಯೂ ಕೇಂದ್ರ ತಿಳಿಸಿದೆ. ಮತ್ಸೋದ್ಯಮಕ್ಕೆ ಸಂಬಂಧಿಸಿದಂತೆ, ಮೀನುಗಾರಿಕಾ ಬಂದರು ನಿರ್ಮಾಣ, 55 ಲಕ್ಷ ಮೀನುಗಾರರಿಗೆ ಉದ್ಯೋಗಕ್ಕೆ ಅವಕಾಶವಾಗುವಂತೆ ಕ್ರಮ, ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು, ಹೊಸ ಬೋಟ್ಗಳ ಪೂರೈಕೆ ಮತ್ತು ಅವುಗಳಿಗೂ ವಿಮೆ ಸೌಲಭ್ಯ ನೀಡುವುದಾಗಿ ತಿಳಿಸಿದೆ.
ಜಾನುವಾರುಗಳಿಗೆ 100% ಲಸಿಕೆ ಲಭ್ಯತೆ, ರೋಗ ನಿಯಂತ್ರಣಕ್ಕೆ ಪೂರಕ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ತಿಳಿಸಿದೆ. ಜೊತೆಗೆ ಹಸು, ಹಂದಿ, ಕುರಿ ಗಳಿಗೆ ಲಸಿಕೆ, ಪಶುಸಂಗೋಪನೆ, ಹೈನುಗಾರಿಕೆಗೂ ಪ್ರೋತ್ಸಾಹ, ಡೈರಿಗಳ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ರೂ. ಗಳನ್ನು ಮೋದಿ ಸರ್ಕಾರ ನೀಡಿದ್ದು, ಆ ಮೂಲಕ ದೇಶದ ಆರ್ಥಿಕತೆಯಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಿಕೊಂಡಿದೆ. ಆ ಮೂಲಕ ಹೈನುಗಾರಿಕೆಯ ಮೂಲಕವೇ ಜೀವನ ಕಟ್ಟಿಕೊಂಡವರಿಗೂ ನೆರವಾಗಲು ಕ್ರಮ ಕೈಗೊಂಡಿದೆ. ಜೊತೆಗೆ ಔಷಧೀಯ ಸಸ್ಯಗಳ ಪ್ರಾಮುಖ್ಯತೆ ತಿಳಿದುಕೊಂಡಿರುವ ಕೇಂದ್ರ ಸರ್ಕಾರ, ಆ ನಿಟ್ಟಿನಲ್ಲಿ ಅದನ್ನು ಬೆಳೆಯುವುದಕ್ಕೂ ರೈತರಿಗೆ ಪ್ರೋತ್ಸಾಹ ನೀಡಿದೆ. ಅದಕ್ಕಾಗಿ ಗಂಗಾ ತಟದಲ್ಲಿಯೂ ಸ್ಥಳಾವಕಾಶ ಮೀಸಲಿಟ್ಟಿದೆ. ಅಲ್ಲದೆ ಸ್ಥಳೀಯವಾಗಿ ಬೆಳೆಯುವುದಕ್ಕೂ ಪ್ರೋತ್ಸಾಹ ನೀಡಿದೆ. ಈ ಔಷಧೀಯ ಸಸ್ಯಗಳಿಂದಾಗಿ ಸುಮಾರು 5000 ಕೋಟಿ ರೂ. ಗಳಷ್ಟು ಲಾಭವನ್ನು ಪಡೆಯಬಹುದು ಎಂಬುದನ್ನು ಸರ್ಕಾರವೇ ತಿಳಿಸಿದೆ.
2 ಲಕ್ಷ ಜೇನು ಸಾಕಾಣೆದಾರರಿಗೆ ಅನುಕೂಲವಾಗುವಂತೆ ಮತ್ತು ಗ್ರಾಮೀಣ ಉದ್ಯೋಗಕ್ಕೆ ಜೇನು ಸಾಕಾಣೆಯಿಂದ ಹೆಚ್ಚು ಅವಕಾಶಗಳಿವೆ ಎಂಬುದನ್ನು ಮನಗಂಡಿರುವ ಕೇಂದ್ರ ಜೇನು ಸಾಕಾಣಿಕೆಗೂ ಆದ್ಯತೆ ನೀಡಿದೆ. ಅಲ್ಲದೆ ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಸಾಗಾಟಕ್ಕೆ ಮತ್ತು ಶೇಖರಣೆಗೆ 50% ಸಬ್ಸಿಡಿ ನೀಡುವ ಭರವಸೆಯನ್ನೂ ನೀಡಿದೆ.
ಇನ್ನು ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆಯೂ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿದೆ. ಎಣ್ಣೆಕಾಳು, ಬೇಳೆ ಕಾಳು, ಈರುಳ್ಳಿ, ಆಲೂಗಡ್ಡೆಗಳ ಶೇಖರಣೆಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿದೆ. ಬೆಳೆ ಸಂಗ್ರಹ, ಶೀಥಲೀಕರಣಕ್ಕೂ ಅವಕಾಶ ನೀಡುವುದಾಗಿ ಕೇಂದ್ರ ತಿಳಿಸಿದೆ. ಅಲ್ಲದೆ ರೈತರಿಗೆ ತಮ್ಮ ಬೆಳೆಯನ್ನು ಎಪಿಎಂಸಿ ಯಲ್ಲಲ್ಲದೆ, ಅದರ ಹೊರತಾಗಿಯೂ ಆಕರ್ಷಕ ಬೆಲೆಗೆ ಮಾರಲು ಅವಕಾಶ, ಇ-ಟ್ರೇಡಿಂಗ್ಗೆ ಅವಕಾಶ ನೀಡಿರುವುದಾಗಿಯೂ ತಿಳಿಸಿದ್ದಾರೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಒದಗಿಸುವಂತೆ ಕಾನೂನು ವ್ಯವಸ್ಥೆ ತರುವುದಾಗಿಯೂ ಕೇಂದ್ರ ಸರ್ಕಾರ ಭರವಸೆ ನೀಡಿದ್ದು, ಆ ಮೂಲಕ ಕೊರೋನಾದಿಂದ ಬದುಕು ಕಳೆದುಕೊಂಡಿರುವ ರೈತರಿಗೆ ಭರವಸೆ ತುಂಬುವ ಕೆಲಸ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.