ಪ್ರತಿ ಬಾರಿ ವೇದಿಕೆ ಹತ್ತಿದಾಗಲೂ ಅವರೆಲ್ಲೇನೋ ದೈವೀಕ ಶಕ್ತಿ ಪಸರಿಸುತ್ತದೆ, ಅವರ ಉಜ್ವಲವಾದ ಬಣ್ಣದ ಧಿರಿಸು, ನವಿಲು ಗರಿಗಳಿಂದ ಅಲಂಕರಿಸಿದ ಕಿರೀಟ, ಎದ್ದು ಕಾಣುವಂತೆ ಹಸಿರು, ಕೆಂಪು, ಹಳದಿ ಬಣ್ಣ ಲೇಪಿತ ಅವರ ಮುಖ, ಲಾಸ್ಯ ಭರಿತ ಕಣ್ಣುಗಳು ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ತುಂಬುತ್ತವೆ. ಕೃಷ್ಣನೇ ಅವರಲ್ಲಿ ಅವತರಿಸುತ್ತಾನೆ ಎಂಬಂತೆ ಅವರು ಭಾಸವಾಗುತ್ತಾರೆ.
ಕೇರಳದ ಚೆಮ್ಮನ್ಚೇರಿ ಕುನ್ಹಿರಾಮನ್ ನಾಯರ್ ಭಾರತದ ಖ್ಯಾತ, ಅದ್ಭುತ ಕಥಕ್ಕಳಿ ನೃತ್ಯಪಟು. ಜೂನ್ 26, 1916ರಲ್ಲಿ ಜನಿಸಿದ ಅವರಿಗೀಗ 99 ವರ್ಷ. ಆದರೆ ವಯಸ್ಸು ಅವರ ನೃತ್ಯವನ್ನು ಕಳಾಹೀನಗೊಳಿಸಿಲ್ಲ. ವೇದಿಕೆ ಹತ್ತಿದರೆ ಈಗಲೂ ಅವರು ತರುಣ. ಮೂರು ತಿಂಗಳ ಹಿಂದೆಯಷ್ಟೇ ಅವರು ವಲ್ಲೋರ ಕಾವು ದೇಗುಲದಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ.
15ನೇ ವರ್ಷದಲ್ಲಿ ಮೊದಲ ನೃತ್ಯ ಪ್ರದರ್ಶನ ನೀಡಿದ್ದ ಇವರು, ದ್ರೌಪದಿಯ ಪಾತ್ರವನ್ನು ಮಾಡಿದ್ದರು. ಬಳಿಕ ಕೃಷ್ಣನ ಪಾತ್ರ ಸೇರಿದಂತೆ ಹಲವಾರು ಪಾತ್ರಗಳನ್ನು ನಿಭಾಯಿಸಿದ್ದಾರೆ. ಹೆಚ್ಚು ಪ್ರಸಿದ್ಧಿ ಮತ್ತು ಖ್ಯಾತಿಯನ್ನು ತಂದುಕೊಟ್ಟದ್ದು ಕೃಷ್ಣನ ಪಾತ್ರ. ನನ್ನ ಗುರುಗಳ ಸಲಹೆಯಂತೆ ಕೃಷ್ಣನ ಪಾತ್ರ ಮಾಡಿದೆ. ನನ್ನ ಮುಖ, ಎತ್ತರ, ಆಕಾರ ಕೃಷ್ಣನನ್ನು ಹೋಲುತ್ತದೆ ಎಂಬ ಅರಿವು ಬಳಿಕ ನನಗಾಯಿತು ಎನ್ನುತ್ತಾರೆ ಕುನ್ಹಿರಾಮನ್.
ಅಪಘಾತದಿಂದಾಗಿ ಕಾಲಲ್ಲಿ ಸ್ಟೀಲ್ ರಾಡ್ಗಳನ್ನು ಹಾಕಿದರೂ, ವಯಸ್ಸು 90 ದಾಟಿದರೂ 30ಕೆ.ಜಿ ತೂಕದ ಧಿರಿಸು ತೊಟ್ಟು, ಅದಕ್ಕೆ 64 ಗಂಟುಗಳನ್ನು ಹಾಕಿ ಸರಾಗವಾಗಿ ನೃತ್ಯ ಮಾಡುತ್ತಿರುವ ಇವರ ನೃತ್ಯ ಆರಾಧನೆ ನಿಜಕ್ಕೂ ಅಪ್ರತಿಮ. ನಿತ್ಯ ಮಾಡುವ ವ್ಯಾಯಾಮ, ಪ್ರಾರ್ಥನೆ ಅವರನ್ನು ಸದಾ ಚಟುವಟಿಕೆಯಿಂದ ಇರಿಸಿದೆ. ಈಗಲೂ ಸಭೆ, ಸಮಾರಂಭಕ್ಕೆ ಹೋಗುವ ಅವರು ಕಥಕ್ಕಳಿ ವಿದ್ಯಾಲಯಂಗೆ ನಿತ್ಯ ಭೇಟಿ ನೀಡುತ್ತಾರೆ. ಆರೋಗ್ಯ ಸಮಸ್ಯೆಗಳು ಇಂದಿಗೂ ಅವರ ಹತ್ತಿರ ಸುಳಿದಿಲ್ಲ.
ಕುನ್ಹಿರಾಮನ್ ಭಾರತದ ಅತ್ಯಂತ ಗೌರವಯುತ ಕಥಕ್ಕಳಿ ನೃತ್ಯಗಾರ. ತಮ್ಮ ಇಳಿ ವಯಸ್ಸಿನಲ್ಲೂ ನಮ್ಮ ಅಪೂರ್ವ ನೃತ್ಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಅಂತಹ ಸಾಧಕನಿಗೆ ನಮ್ಮದೊಂದು ನಮನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.