ಲಾಕ್ಡೌನ್ ಆದಾಗಿನಿಂದ ರಮಾನಂದ ಸಾಗರ ಹೆಸರು ಬಹು ಚಿರಪರಿಚಿತವಾಗಿಬಿಟ್ಟಿದೆ. ಇದಕ್ಕೆ ಕಾರಣ ರಾಮಾಯಣ ಧಾರಾವಾಹಿ. ಸುಮಾರು 34 ವರ್ಷಗಳ ಹಿಂದೆ ಇಡೀ ಭಾರತೀಯರ ಮನೆ – ಮನೆಯನ್ನು ಮನ – ಮನವನ್ನು ಗೆದ್ದು, ಶ್ರೀರಾಮಚಂದ್ರನ ಜೀವನವನ್ನು ಕೋಟಿ ಕೋಟಿ ಜನರಿಗೆ ತಲುಪಿಸಿ, Limka Book of Records ನಲ್ಲಿ ದಾಖಲೆಯನ್ನು ಬರೆದ ಮಹಾನ್ ಧೃಷ್ಯ ವೈಭವ. ಇಂದಿನ ಆಧುನಿಕ, ಇಷ್ಟೊಂದು ಮುಂದುವರೆದ ತಾಂತ್ರಿಕ ಪ್ರಪಂಚದಲ್ಲೂ ಕೂಡ ಮಾಡಲು ಸಾಧ್ಯವೇ ಇಲ್ಲದಂತೆ 34 ವರ್ಷಗಳ ಹಿಂದೆಯೇ ಒಂದು ಅತ್ಯದ್ಭುತ ಧಾರಾವಾಹಿಯನ್ನು, ಅದರ ಮೂಲಕ ಒಂದೊಳ್ಳೆಯ ಮಹಾನ್ ಗ್ರಂಥವನ್ನು ಧೃಷ್ಯವನ್ನಾಗಿ ಸೃಷ್ಟಿಸಿದ ಕೀರ್ತಿ ರಮಾನಂದ ಸಾಗರರದು. ವಾಲ್ಮೀಕಿ ಬರೆದ ರಾಮಾಯಣವನ್ನು ಎಷ್ಟು ಜನ ಓದಿದ್ದರೋ ಗೊತ್ತಿಲ್ಲ. ಆದರೆ ರಾಮಾಯಣ ಧಾರಾವಾಹಿಯನ್ನು ಓದಲು ಬರುವವರು, ಓದಲು ಬಾರದವರು, ವಯಸ್ಕರು, ಮಕ್ಕಳು, ಯುವಕರು, ಯುವತಿಯರು ಹೀಗೆ ಕೋಟಿಗಟ್ಟಲೆ ಜನ ನೋಡುವಂತೆ ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟು ಸ್ವತಃ ತಾವೇ ನಿರ್ದೇಶಿಸಿ, ನಿರ್ಮಿಸಿದ್ದು ಇದೆ ರಮಾನಂದ ಸಾಗರರು. ಹೀಗೆ ಈ ಧಾರಾವಾಹಿ ಇಷ್ಟು ಸುಂದರವಾಗಿ ಮೂಡಿ ಬರಲು ಎಲ್ಲವೂ ಸುಲಭವಾಗಿ, ಸರಳವಾಗಿ ಅಂದುಕೊಂಡಂತೆ ನಡೆದಿರಬಹುದು ಎಂದು ಊಹಿಸಿದರೆ ಅದು ಖಂಡಿತ ತಪ್ಪು. ಏಕೆಂದರೆ ಈ ಧಾರಾವಾಹಿಗಾಗಿ ರಾಮಾನಂದ ಸಾಗರರು ಒಂದು ದೊಡ್ಡ ತಪಸ್ಸನ್ನೇ ಮಾಡಿದ್ದರು ಎನ್ನುವುದನ್ನು ನಾವೆಲ್ಲ ಒಪ್ಪಲೇಬೇಕು. 1917ರ ಡಿಸೆಂಬರ್ 29ರಂದು ಆಗಿನ ಅವಿಭಜಿತ ಭಾರತದ ಲಾಹೋರ್ (ಇಂದಿನ ಪಾಕಿಸ್ಥಾನ) ದಲ್ಲಿ ಜನಿಸಿದ ರಾಮಾನಂದರ ಜನ್ಮ ನಾಮ ಚಂದ್ರಮೌಳಿ ಚೋಪ್ರಾ. ಇವರು ಅಜ್ಜಿಯ ದತ್ತಕರಾಗಿ ಕಾಶ್ಮೀರಕ್ಕೆ ಬಂದ ಮೇಲೆ ರಮಾನಂದ ಸಾಗರ ಎಂಬ ಹೆಸರು ಬಂತು. ಮೊದ ಮೊದಲು ಒಬ್ಬ ಪ್ಯೂನ್ ಆಗಿ, ಟ್ರಕ್ ಕ್ಲಿನರ್ ಆಗಿ, ಸಾಬೂನು ತಯಾರಿಸುವ ವ್ಯಕ್ತಿಯಾಗಿ, ಅಕ್ಕಸಾಲಿಗರ ಹತ್ತಿರ ಸಹಾಯಕನಾಗಿ ಕೆಲಸ ಮಾಡುತ್ತಾ, ರಾತ್ರಿ ಸಮಯದಲ್ಲಿ ಅಧ್ಯಯನ ಕೈಗೊಂಡು ಪಂಜಾಬಿನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯಲ್ಲಿ ಗೋಲ್ಡ್ ಮೇಡಲ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು.
ಚಿಕ್ಕ ಪುಟ್ಟ ಕಥೆ, ಕಾದಂಬರಿ, ನಾಟಕ, ಲೇಖನಗಳನ್ನು ರಮಾನಂದ ಬೇಡಿ, ರಮಾನಂದ ಕಾಶ್ಮೀರಿ, ರಮಾನಂದ ಚೋಪ್ರಾ ಮುಂತಾದ ಬೇರೆ ಬೇರೆ ನಾಮಗಳಲ್ಲಿ ಬರೆಯುತ್ತಾ ದಿನದಿಂದ ದಿನಕ್ಕೆ ತಮ್ಮ ಬರವಣಿಗೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. 1932 ರಲ್ಲಿ ಬಾಂಬೆಗೆ ಬಂದ ರಾಮಾನಂದರು ಫಿಲ್ಮ್ ಇಂಡಸ್ಟ್ರಿಯಲ್ಲಿ ಸಿಕ್ಕ ಚಿಕ್ಕ ಪುಟ್ಟ ಅವಕಾಶಗಳನ್ನು ಬಳಸಿಕೊಂಡು ಬಹು ಬೇಗ ತಮ್ಮ ಛಾಪನ್ನು ಮೂಡಿಸಿದರು. ಮುಂದೆ ಬರಸಾತ್, ಪೈಗಂ, ಜಿಂದಗಿ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ, ಸೈ ಎನಿಸಿಕೊಂಡರು.
ಈ ಮಧ್ಯದಲ್ಲಿ ದೇಶಕ್ಕೆ ಈಗಿನ ಕೋರೊನಾದಂತೆ ಕಂಟಕವಾಗಿ ಆಕ್ರಮಿಸಿದ್ದ TB ರೋಗಕ್ಕೆ ತುತ್ತಾಗಿ ಹಾಸಿಗೆಯಲ್ಲಿದ್ದಾಗ , TB ಯ ಕುರಿತಾಗಿ ಮೌತ್ ಕೆ ಭಿಸ್ತರ್ ಸೆ (ಸಾವಿನ ಹಾಸಿಗೆಯಿಂದ) ಎನ್ನುವ ಇವರು ಬರೆದ ಲೇಖನ ಇವರನ್ನು ಮತ್ತಷ್ಟು ಉತ್ತುಂಗಕ್ಕೇರಿಸಿತು. ಅದಾದ ಮೇಲೆ ಇವರು ದೊಡ್ಡ ದೊಡ್ಡ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸುವ ಹೊತ್ತಲ್ಲಿ, ಇವರ ಗಮನಕ್ಕೆ ಬಂದಿದ್ದೇ ರಾಮಾಯಣ. ಆಗಿನ ಕಾಲಕ್ಕೆ ಅತಿ ದೊಡ್ಡ, ಅತ್ಯಂತ ದುಬಾರಿ ಧಾರಾವಾಹಿಯನ್ನು ನಿರ್ದೇಶಿಸುವ ಛಾತಿ ಇವರಿಗಲ್ಲದೇ ಮತ್ತಾರಿಗೂ ಸಾಧ್ಯವಿರಲಿಲ್ಲ. ಆದರೆ 550 ಎಪಿಸೋಡ್ಗಳನ್ನು ನಿರ್ದೇಶಿಸುವುದು ಮತ್ತು ಅದಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡುವದು ಅಷ್ಟೇನೂ ಸಲೀಸಾಗಿರಲಿಲ್ಲ. ಒಳ್ಳೆ ಕಾರ್ಯಕ್ಕೆ ನೂರೆಂಟು ವಿಘ್ನ ಎನ್ನುವಂತೆ ಪ್ರತೀ ಎಪಿಸೋಡ್ಗೆ 9 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಲೇಬೇಕಾಗಿತ್ತು. ಹೀಗೆ 9 ಲಕ್ಷ ಖರ್ಚು ಮಾಡಲು ಯಾವ ನಿರ್ಮಾಪಕರು ಮುಂದೆ ಬರಲಿಲ್ಲ. ಕಡೆಗೆ ಆ ರಘುಕುಲ ರಾಮನ ಆದೇಶವಾಯಿತೇನೋ ಗೊತ್ತಿಲ್ಲ ಸ್ವತಃ ರಮಾನಂದರೆ ಈ ಧಾರಾವಾಹಿಗಾಗಿ ದುಡ್ಡು ಹಾಕಿ ತಾವೇ ನಿರ್ದೇಶಿಸಲು ಅಣಿಯಾದರು. ಶೂಟಿಂಗ್ ಸೆಟ್ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕಲಾವಿದರೂ ಕೂಡ ಅಲ್ಲಿ ಕಟ್ಟು ನಿಟ್ಟಿನ ನಿರ್ದೇಶನಗಳನ್ನು ಪಾಲಿಸಲೇಬೇಕಿತ್ತು. ಅವರು ಶೂಟಿಂಗ್ಗೆ ಬಂದು ಹೋಗುವವರೆಗೆ ಮದ್ಯಪಾನ ಮಾಡುವಂತಿಲ್ಲ. ಸಸ್ಯಾಹಾರಿ ಭೋಜನವನ್ನೇ ಮಾಡಬೇಕು. ಯಾರು ಯಾರೊಂದಿಗೂ ಯಾವುದೇ ಕಾರಣಕ್ಕೂ ಜಗಳ ಮಾಡುವಂತಿಲ್ಲ. ಸ್ವಚ್ಛತೆ, ಮಾಡಿವಂತಿಕೆಗೆ ಮೊದಲ ಆದ್ಯತೆ, ಹೀಗೆ ಪ್ರತಿಯೊಬ್ಬರು ಸಹ ಆ ಆಚರಣೆಗಳಿಂದ ಪ್ರಭಾವಿತರಾಗಿ, ಮುಂದೆ ಧಾರಾವಾಹಿ ಮುಗಿದ ಮೇಲೂ ಕೂಡ ಈ ಎಲ್ಲ ದುಶ್ಚಟಗಳಿಂದ ದೂರವೇ ಉಳಿದು ಸಜ್ಜನರಾಗಿದ್ದನ್ನು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಸ್ವತಃ ಕೆಲವು ಕಲಾವಿದರೇ ಹೇಳಿದ್ದನ್ನು ಸ್ಮರಿಸಬಹುದು.
ಈ ಧಾರಾವಾಹಿಗಾಗಿ ರಮಾನಂದರು ಕೇವಲ ಸಂಸ್ಕೃತದ ವಾಲ್ಮೀಕಿ ರಾಮಾಯಣವನ್ನಷ್ಟೇ ಅಲ್ಲದೇ ತುಳಸಿದಾಸರ ರಾಮಚರಿತಮಾನಸ, ಕನ್ನಡದ ಪಂಪ ರಾಮಾಯಣ, ತಮಿಳಿನ ಕಂಭ ರಾಮಾಯಣ, ತೆಲುಗಿನ ರಂಗನಾಥ ರಾಮಾಯಣ, ಮಲೆಯಾಳಂನ ಆಧ್ಯಾತ್ಮ ರಾಮಾಯಣ, ಮರಾಠಿಯ ಭಾವಾರ್ಥ ರಾಮಾಯಣ, ಬಂಗಾಳಿಯ ಕೃತ್ತಿವಾಸ ರಾಮಾಯಣ, ಉರ್ದು ರಾಮಾಯಣ ಹೀಗೆ ರಾಮಾಯಣದ ಅನೇಕ ಮಗ್ಗುಲಗಳನ್ನು ಅಧ್ಯಯನ ಮಾಡಿ, ಸರ್ವಜ್ಞನೆಂಬುವನು ಘರ್ವದಿಂದಾವದವನೆ, ಸರ್ವರೊಳಗೊಂದೊಂದು ನುಡಿಗಲಿತು ವಿಧ್ಯದ ಪರ್ವತವೇ ಆದ ಸರ್ವಜ್ಞ ಎನ್ನುವ ಸರ್ವಜ್ಞನ ವಚನದಂತೆ ಸತ್ಯವಾಗಿದ್ದನ್ನ, ಸತ್ಯಕ್ಕೆ ಹತ್ತಿರವಾಗಿದ್ದನ್ನೇ ಆಯ್ದುಕೊಂಡರು. ರಾಮಾಯಣದ ಕುರಿತು ಅಧ್ಯಯನ ಕೈಗೊಂಡ ಅನೇಕ ವಿದ್ವಾಂಸರು, ವಿಧಾರ್ಥಿಗಳನ್ನು, ಹಿರಿ ಕಿರಿಯರೆನ್ನದೆ ಎಲ್ಲರಿಂದಲೂ ಹಲವಾರು ಮಾಹಿತಿಗಳನ್ನು ಪಡೆದರು. ತಾವೂ ಕೂಡ ಪ್ರತಿಯೊಂದು ಪಾತ್ರದಲ್ಲೂ ಜೀವ ತುಂಬಿ ಹೇಗೆ ಅಭಿನಯಿಸಬೇಕು ಎಂದು ಮೊದಲು ತಾವೇ ಕಲಿತು, ನಂತರ ಕಲಾವಿದರಿಗೆ ಕಲಿಸುತ್ತಾ, ನಿರ್ದೇಶಕ ಮತ್ತು ನಿರ್ಮಾಪಕನ ಜವಾಬ್ದಾರಿಯನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಿದ್ದರು. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ವೀಕ್ಷಕರನ್ನು ಹಿಡಿದಿಡುವಂತೆ ಮತ್ತು ಇದು ಕೇವಲ ಕಲಾವಿದರ ಅಭಿನಯವೋ ಅಥವಾ ಸ್ವತಃ ದೇವಾನು ದೇವತೆಯರು, ರಾಕ್ಷಸರೇ ಬಂದು ಅಭಿನಯಿಸುತ್ತಿರುವರೋ ಎಂಬ ಚಿಂತನೆಯನ್ನು ಮಾಡಲು ಹಚ್ಚುವಂತೆ ಮೂಡಿ ಬರುವಂತೆ ರಮಾನಂದರು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು.
ಮುಂದೆ ರಾಮಾಯಣ ಪ್ರಸಾರವಾದ ಮೇಲೆ ಅದನ್ನು ಪ್ರಸಾರ ಮಾಡುತ್ತಿದ್ದ ದೂರದರ್ಶನ ವಾಹಿನಿ ಪ್ರತಿಯೊಂದು ಎಪಿಸೋಡ್ನಲ್ಲೂ 40 ಲಕ್ಷ ರೂಪಾಯಿ ಲಾಭ ಪಡೆಯುವಂತಾಗಿದ್ದು ನಿಜಕ್ಕೂ ಒಂದು ದೊಡ್ಡ ಸಾಧನೆಯೇ ಸರಿ. ರಾಮಾಯಣದ ಕಲಾವಿದರು ಆಗಿನ ಕಾಲದಲ್ಲಿ, ಸುಲಭವಾಗಿ ಮಾರ್ಕೆಟ್ಗೆ, ತಮ್ಮ ಇತರೆ ಕೆಲಸಗಳಿಗೆ ಹೋಗಿ ಬರಲು ಸಾಧ್ಯವಾಗುತ್ತಿರಲಿಲ್ಲ, ಏಕೆಂದರೆ ಜನ ಇವರನ್ನು ಸ್ವತಃ ದೇವತೆಯರಂತೆ ಆರಾಧಿಸುತ್ತಿದ್ದರು. ಅವರು ಹೋದಲ್ಲಿ, ಬಂದಲ್ಲಿ ಜನಜಂಗುಳಿಯೇ ಸೇರುತ್ತಿತ್ತು. ದೊಡ್ಡ ದೊಡ್ಡ ರಾಜಕಾರಣಿಗಳಿಗೂ ಇರದಷ್ಟು ಪ್ರಚಾರ, ಹೆಸರು, ಪ್ರೀತಿ ಆಶೀರ್ವಾದ ಇವರಿಗೆ ದೊರೆಯುತ್ತಿತ್ತು ಎಂದರೆ ನಾವು ನಂಬಲೇಬೇಕು. ರಾಮಾಯಣ ಪ್ರಸಾರವಾಗುವ ಸಂಧರ್ಭದಲ್ಲಿ ದೇಶಕ್ಕೆ ದೇಶವೇ ಸ್ತಬ್ಧವಾಗುತ್ತಿತ್ತು ಎಂದು ಈಗಲೂ ನಮ್ಮ ನಿಮ್ಮ ಮನೆಯ ಹಿರಿಯರು ಈಗಲೂ ಹೇಳುತ್ತಾರೆ. ಊರಲ್ಲಿ ಎಲ್ಲೋ ಒಂದೋ ಎರಡೋ ಮನೆಯಲ್ಲಿ ಆಗ ತಾನೇ ಎಂಟ್ರಿ ಕೊಟ್ಟಿದ್ದ ಟೆಲಿವಿಷನ್ ಇದ್ದವರೇ ಆಗ ತುಂಬಾ ದೊಡ್ಡವರು ಎಂದು ಜನ ಭಾವಿಸುತ್ತಿದ್ದರಂತೆ. TV ಮನೆಗಳು ರಾಮಾಯಣ ಪ್ರಸಾರದ ಸಂದರ್ಭದಲ್ಲಿ ನೂಕುನುಗ್ಗಲಿನಿಂದ ಕೂಡಿರುತ್ತಿದ್ದವಂತೆ ಎಂದು ನಮ್ಮ ಅಜ್ಜಿ, ತಾತ, ಅಮ್ಮ ಹೇಳಿದ್ದನ್ನು ನಾನು ಅನೇಕ ಬಾರಿ ಕೇಳಿದ್ದೆ.
ಆದರೆ ನಮ್ಮ ಸೌಭಾಗ್ಯವೋ ಏನೋ, ಮತ್ತೆ ರಾಮಾಯಣವನ್ನು ವೀಕ್ಷಿಸುವ ಅವಕಾಶ ನಮ್ಮ ಪೀಳಿಗೆಗೂ ಸಿಕ್ಕಿರುವುದು ನಿಜಕ್ಕೂ ಖುಷಿಪಡುವ ವಿಚಾರ. ಇಂದು ಕೂಡ ರಾಮಾಯಣ TRP ಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಪುಡಿಮಾಡಿ, ಮತ್ತೊಂದು ಇತಿಹಾಸವನ್ನೇ ಸೃಷ್ಟಿಸಿದೆ. ಇಂದಿನ ಪೀಳಿಗೆಯವರಿಗೂ ಕೂಡ ಒಂದೇ ಒಂದು ಎಪಿಸೋಡನ್ನೂ ಮಿಸ್ ಮಾಡದೇ ನೋಡಲೇಬೇಕು ಎನ್ನುವ ತವಕ. ಶ್ರೀರಾಮಚಂದ್ರನ ಜೀವನವನ್ನು, ಸತ್ಯ, ಧರ್ಮ, ಪ್ರಾಮಾಣಿಕತೆ, ನ್ಯಾಯ, ನೀತಿ, ವಚನ ಪರಿಪಾಲನೆ ಮತ್ತು ರಾವಣನ ಅನೀತಿ, ಅಧರ್ಮ, ಅನ್ಯಾಯ, ಅತ್ಯಾಚಾರಿ ಗುಣಗಳನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಿ, ಇಂದಿನ ಜಗತ್ತಿಗೆ ನಿಜವಾಗಿಯೂ ಬೇಕಾದ ರಾಮನ ಆದರ್ಶಗಳನ್ನು, ಅವನು ಬದುಕಿನುದ್ದಕ್ಕೂ ಅನುಸರಿಸಿದ ಆಚರಣೆಗಳನ್ನು ನಮಗೆ ತಿಳಿಯಲು ಸಹಕಾರಿಯಾದ ರಾಮಾಯಣ ಧಾರಾವಾಹಿಯ ಕರ್ತೃವಿಗೆ ಹೃದಯಾಂತರಾಳದ ಅನಂತ ಅನಂತ ಧನ್ಯವಾದಗಳು ಸಮರ್ಪಣೆಯಾಗಲೇಬೇಕು. ಇಂದು ರಮಾನಂದರು ದೈಹಿಕವಾಗಿ ನಮ್ಮ ಜೊತೆಗಿಲ್ಲದಿರಬಹುದು. ಆದರೆ ಅವರು ಕೊಟ್ಟ ರಾಮಾಯಣದ ಅಸಾಧಾರಣ ದೃಶ್ಯವೈಭವ ಯಾವತ್ತಿಗೂ ನಮ್ಮ ಸ್ಮೃತಿಪಠಲದಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ಜೈಶ್ರೀರಾಮ್
✍️ ಗುರು ಬನ್ನಿಕೊಪ್ಪ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.