ನವದೆಹಲಿ : ಕೊರೋನಾ ಭಾರತ ದೇಶವನ್ನು ಲಾಕ್ಡೌನ್ ಸ್ಥಿತಿಗೆ ತಲುಪಿಸಿದೆ. ಇಂತಹ ಸಂದರ್ಭದಲ್ಲಿ ದೇಶದ ವೈದ್ಯಕೀಯ ತುರ್ತು ಅವಶ್ಯಕತೆಗಳನ್ನು ಒಂದು ಪ್ರದೇಶದಿಂದ ಮತ್ತೊಂದೆಡೆಗೆ ತಲುಪಿಸು ಕೆಲಸವನ್ನು ಲೈಫ್ಲೈನ್ ಉಡಾನ್ ವಿಮಾನಗಳು ಮಾಡಿದ್ದು, ಈ ವರೆಗೆ ಸುಮಾರು 507 ಟನ್ಗಳಷ್ಟು ವೈದ್ಯಕೀಯ ಸಲಕರಣೆಗಳನ್ನು ಸಾಗಿಸುವ ಮೂಲಕ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸಿದೆ.
ಇಂತಹ ಗಂಭೀರ ಸಂದರ್ಭದಲ್ಲಿ 301 ಲೈಫ್ಲೈನ್ ಉಡಾನ್ ವಿಮಾನಗಳು 507 ಟನ್ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, 184 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲಯನ್ಸ್ ಏರ್ ಸಂಸ್ಥೆಗಳು ನೀಡಿದ್ದಾಗಿ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಇನ್ನು ಪವನ್ ಹ್ಯಾನ್ ಸೇರಿದಂತೆ ಇನ್ನಿತರ ಹೆಲಿಕಾಪ್ಟರ್ಗಳನ್ನು ಬಳಸಿ ಜಮ್ಮು ಕಾಶ್ಮೀರ, ಲಡಾಕ್ ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ವೈದ್ಯಕೀಯ ಮತ್ತು ರೋಗಿಗಳನ್ನು ಹೊತ್ತೊಯ್ಯುವ ಸೇವೆ ಒದಗಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಏರ್ ಇಂಡಿಯಾ ಮತ್ತು ಭಾರತೀಯ ವಾಯು ಪಡೆಗಳು ಜಮ್ಮು ಕಾಶ್ಮೀರ, ಲಡಾಕ್, ಈಶಾನ್ಯ ಪ್ರದೇಶಗಳ ಬಗ್ಗೆ ಗಮನ ಹರಿಸಿದ್ದು, ಅಲ್ಲಿನ ಗುಡ್ಡಗಾಡು ಪ್ರದೇಶ, ದ್ವೀಪ ಪ್ರದೇಶಗಳ ಮೇಲೆ ವಿಶೇಷ ಗಮನವನ್ನು ಹರಿಸಿವೆ. ಈ ವರೆಗೆ ಇಂತಹ ತುರ್ತು ಅಗತ್ಯವನ್ನು ನೀಡುವ ಸಲುವಾಗಿ ಲೈಫ್ಲೈನ್ ಉಡಾನ್ಗಳು ಮೂರು ಲಕ್ಷಗಳಷ್ಟು ವೈಮಾನಿಕ ದೂರವನ್ನು ಕ್ರಮಿಸಿದೆ ಎಂದೂ ಸರ್ಕಾರ ಮಾಹಿತಿ ನೀಡಿದೆ.
ಭಾರತದ ಕಾರ್ಗೋ ಆಪರೇಟರ್ ವಿಮಾನಗಳಾದ ಸ್ಪೈಸ್ ಜೆಟ್, ಬ್ಲೂ ಡಾರ್ಟ್, ಇಂಡಿಗೋ ವಿಮಾನಗಳು ವಾಣಿಜ್ಯ ಆಧಾರಿತ ಸೇವೆಗಳನ್ನು ನೀಡುತ್ತಿವೆ. ಮಾಸ್ಕ್, ಕೈಗವಸು ಮೊದಲಾದ ವಸ್ತುಗಳನ್ನು ಸಾಗಿಸುವ ಕಾರ್ಯವನ್ನು ಈ ವಿಮಾನಗಳು ಮಾಡುತ್ತಿವೆ. ಇನ್ನು ಲೈಫ್ಲೈನ್ ಉಡಾನ್ಗಳ ತಡೆರಹಿತ ಸೇವೆಗಾಗಿ ಪೋರ್ಟಲ್ ಒಂದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ದೇಶಕ್ಕೆ ದೇಶವೇ ಲಾಕ್ಡೌನ್ ಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಲೈಫ್ಲೈನ್ ಉಡಾನ್ ವಿಮಾನಗಳು ಜನರ ಜೀವ, ಜೀವನವನ್ನು ಉಳಿಸುವ ಮಹತ್ಕಾರ್ಯ ಮಾಡಿವೆ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.