ಉಡುಪಿ : ಸಮುದ್ರದ ನಂಟು, ಉಪ್ಪಿಗೆ ಬರ’ ಎಂಬ ಮಾತಿನಂತಾಗಿದೆ ಕರ್ನಾಟಕ ಕರಾವಳಿ ಬಂದರುಗಳ ಸ್ಥಿತಿ. ಕರ್ನಾಟಕ ಕರಾವಳಿಯ 320 ಕಿ. ಮೀ. ವ್ಯಾಪ್ತಿಯಲ್ಲಿ ಒಟ್ಟು 12 ಮೀನುಗಾರಿಕಾ ಬಂದರುಗಳಿದ್ದರೂ ಕೇವಲ ಮಂಗಳೂರು ಮತ್ತು ಮಲ್ಪೆ ಬಂದರುಗಳಲ್ಲಿ ಮಾತ್ರ ಪೂರ್ಣಪ್ರಮಾಣದ ಮೀನುಗಾರಿಕಾ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿದೆ. ಹೆಜಮಾಡಿ, ಹಂಗಾರಕಟ್ಟೆ, ಗಂಗೊಳ್ಳಿ, ಶೀರೂರು, ಭಟ್ಕಳ, ತೆಂಗಿನಗುಂಡಿ, ಹೊನ್ನಾವರ, ತದಡಿ, ಬೇಲಿಕೇರೆ, ಬೆಳಂಬಾರ್, ಕಾರವಾರ, ಮಾಜಳ್ಳಿಯಲ್ಲಿ ಉತ್ತಮ ಬಂದರುಗಳಿದ್ದರೂ ಆ ಭಾಗದ ಮೀನುಗಾರರು ಮಲ್ಪೆ ಬಂದರನ್ನೇ ಆಶ್ರಯಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಪರಿಣಾಮ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟ್ಗಳ ನಿಲುಗಡೆಯಿಂದ ಹಿಡಿದು ಮೀನು ಮಾರಾಟ ಪ್ರಕ್ರಿಯೆವರೆಗೂ ಸಂಘರ್ಷ-ಅವ್ಯವಸ್ಥೆಯ ಸ್ಥಿತಿ ಉಂಟಾಗಿದೆ. ಇದು ಇಲ್ಲಿನ ಮೀನುಗಾರಿಕಾ ಚಟುವಟಿಕೆಯ ಮೇಲೆ ದುಷ್ಪರಿಣಾಮ ಉಂಟು ಮಾಡುವ ಆತಂಕ ಮೀನುಗಾರರಲ್ಲಿ ಮೂಡಿದೆ.
ಬ್ರೇಕ್ ವಾಟರ್ ಇಲ್ಲ
ಕರ್ನಾಟಕ ಕರಾವಳಿಯ ಇಡೀ ಮೀನುಗಾರಿಕಾ ಚಟುವಟಿಕೆಯ ಶೇ. 75 ಭಾಗ ಕೇವಲ ಎರಡೇ ಬಂದರುಗಳಲ್ಲಿ (ಮಲ್ಪೆ ಮತ್ತು ಮಂಗಳೂರು) ನಡೆಯುತ್ತಿದೆ !. ಇದಕ್ಕೆ ಕಾರಣ ಉಳಿದೆಲ್ಲ ಬಂದರುಗಳಲ್ಲಿ ಮೀನುಗಾರಿಕಾ ಬೋಟ್ಗಳು ಬಂದರಿನ ಒಳಗೆ ಪ್ರವೇಶಿಸುವ ಸ್ಥಳವಾದ ಅಳಿವೆ ಬಾಗಿಲಿನಲ್ಲಿ ಬ್ರೇಕ್ ವಾಟರ್ಗಳ ನಿರ್ಮಾಣ ಆಗದಿರುವುದು. ಬಂದರಿನೊಳಗೆ ತಂಗುದಾಣವಿದ್ದರೂ ಅಳಿವೆಬಾಗಿಲಿನಲ್ಲಿ ಬ್ರೇಕ್ ವಾಟರ್ ಇಲ್ಲದೆ ಬೋಟ್ಗಳು ತಂಗುದಾಣ ಪ್ರವೇಶಿಸಲು ಸಾಧ್ಯವಿಲ್ಲ. ಅಳಿವೆಬಾಗಿಲಿನಲ್ಲಿ ಹೂಳು ತುಂಬಿ ಹೋಗುವುದರಿಂದ ಬೋಟ್ಗಳು ಅಪಾಯಕ್ಕೆ ಸಿಲುಕುತ್ತಿವೆ. ಮಂಗಳೂರಿನಲ್ಲಿ ಮಲ್ಪೆಯಷ್ಟು ಪರಿಪೂರ್ಣವಾದ ಬ್ರೇಕ್ವಾಟರ್ ಇಲ್ಲದೆ ಅಪಾಯಕಾರಿ ಎನಿಸಿದರೂ ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ.
ಮಲ್ಪೆ ಮಾದರಿ ಅನುಸರಿಸಿ
ಮಲ್ಪೆ ಬಂದರಿನಲ್ಲಿ ಪ್ರಸ್ತುತ 1,750 ಬೋಟ್ಗಳು ತಂಗುತ್ತಿವೆ. ವಾಸ್ತವವಾಗಿ ಈ ಬಂದರಿನ ಸಾಮರ್ಥ್ಯ 500 ಬೋಟ್ಗಳು ಮಾತ್ರ!. ಇಷ್ಟೊಂದು ಬೋಟ್ಗಳು ಇಲ್ಲೇ ತಂಗಲು ಕಾರಣ ಇಲ್ಲಿನ ಸುವ್ಯವಸ್ಥಿತ ಬ್ರೇಕ್ ವಾಟರ್. ಆದರೆ ಕಾರವಾರದ ವರೆಗಿನ ಮೀನುಗಾರರು ಕೂಡ ಮಲ್ಪೆ ಬಂದರಿನಲ್ಲೇ ಬೋಟ್ ನಿಲ್ಲಿಸಿ ಮೀನು ಇಳಿಸುತ್ತಿದ್ದಾರೆ. ಇದರಿಂದ ಇದೀಗ ಸಮಸ್ಯೆ ಸೃಷ್ಟಿಯಾಗಿದೆ. ಬೋಟ್ಗಳಿಗೆ ಹಾನಿ ಮಾತ್ರವಲ್ಲದೆ ವ್ಯಾಪಾರ ಪ್ರಮಾಣವೂ ಕುಸಿಯುತ್ತಿದೆ. ಬೆಲೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಮೀನು ಖರೀದಿದಾರರಿಗೂ ತೊಂದರೆ. ಒಟ್ಟಿನಲ್ಲಿ ಇದೊಂದು ರೀತಿಯ ಅವ್ಯವಸ್ಥೆ ಹುಟ್ಟುಹಾಕಿದೆ.
ಮಲ್ಪೆ ಮತ್ತು ಕಾರವಾರ ಬಂದರು ಪ್ರಕೃತಿದತ್ತ ಸರ್ವಋತು ಬಂದರುಗಳೆಂದು ಗುರುತಿಸಿಕೊಂಡಿವೆ. ಮಲ್ಪೆ ಯೋಜಿತ ಅಭಿವೃದ್ಧಿ ಕಂಡಿತಾದರೂ ಕಾರವಾರ ನಿರ್ಲಕ್ಷಿಸಲ್ಪಟ್ಟಿತು. ಮಲ್ಪೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಬ್ರೇಕ್ವಾಟರ್ ನಿರ್ಮಾಣವಾಗಿರುವುದು ಮತ್ತು ಈ ನಿರ್ಮಾಣ ಕಾರ್ಯ ಸ್ಥಳೀಯ ಮೀನುಗಾರ ಸಂಘಟನೆಗಳ ಮಾರ್ಗದರ್ಶನದಂತೆ ನಡೆದಿರುವುದು ಗಮನಾರ್ಹ. 25-30 ವರ್ಷಗಳ ಹಿಂದೆ ಮಲ್ಪೆ ಬಂದರಿನಲ್ಲಿಯೂ ಅಳಿವೆ ಬಾಗಿಲಿನ ಸಮಸ್ಯೆ ಇತ್ತು. ಒಮ್ಮೆ ಸಮುದ್ರ ಕೊರೆತಕ್ಕೆ ಸಿಲುಕಿ ಅಳಿವೆಬಾಗಿಲಿನ ಎರಡೂ ದಡವೂ ಕೊಚ್ಚಿ ಹೋಗಿ 1 ಕಿ.ಮೀ. ವಿಸ್ತಾರವಾಯಿತು. ಆಗ ಮೀನುಗಾರಿಕಾ ಬಂದರನ್ನು ಲೋಕೋಪಯೋಗಿ ಇಲಾಖೆಯ ಎಂಜಿನಿಯರಿಂಗ್ ವಿಭಾಗ ನಿರ್ವಹಿಸುತ್ತಿತ್ತು. ಅದರ ಎಂಜಿನಿಯರ್ಗಳು ಸ್ಥಳೀಯ ಸಂಘಟನೆಗಳ ಮಾರ್ಗದರ್ಶನದಂತೆ ಎರಡು ದಡಕ್ಕೂ ಕಲ್ಲು ಕಟ್ಟಿ 150 ಮೀಟರ್ ಅಗಲ ಬ್ರೇಕ್ವಾಟರ್ ನಿರ್ಮಿಸಿದರು. ಅದನ್ನು ಪಶ್ಚಿಮಕ್ಕೆ 200 ಮೀಟರ್ ದೂರಕ್ಕೆ ಮುಂದುವರೆಸಿದರು. ಸಮುದ್ರದ ಇಳಿತ ಇರುವ ಸಮಯದಲ್ಲಿ ಎರಡು ಮೀಟರ್ ಆಳ ಎಲ್ಲಿ ವರೆಗೆ ಇರುತ್ತದೋ ಅಲ್ಲಿ ವರೆಗೂ ಬ್ರೇಕ್ವಾಟರ್ ಮುಂದುವರೆಸಿದರು ಎನ್ನುತ್ತಾರೆ ಇಲ್ಲಿನ ಹಿರಿಯ ಮೀನುಗಾರರು.
ನೀರಿನ ಸೆಳೆತ ಒತ್ತಡ ಗಮನಿಸಿ
ಮಲ್ಪೆ ಹೊರತುಪಡಿಸಿ ಗಂಗೊಳ್ಳಿ ಮತ್ತಿತರ ಒಂದೆರಡು ಕಡೆಗಳಲ್ಲಿ ಬ್ರೇಕ್ವಾಟರ್ ನಿರ್ಮಿಸಲಾಗಿದೆ. ಆದರೆ ಅಲ್ಲಿ ನದಿ ನೀರಿನ (ಅಳಿವೆ ಬಾಗಿಲು ಎಂಬುದು ನದಿ ಮತ್ತು ಸಮುದ್ರ ಸೇರುವ ಸ್ಥಳ) ಸೆಳೆತ ಮತ್ತು ಒತ್ತಡಕ್ಕೆ ತಕ್ಕಹಾಗೆ ಬ್ರೇಕ್ವಾಟರ್ ದಂಡೆ ನಿರ್ಮಾಣ ಮಾಡಿಲ್ಲ. ಹಾಗಾಗಿ ಅದು ಪ್ರಯೋಜನಕ್ಕೆ ಬಂದಿಲ್ಲ. ಮಲ್ಪೆಯಲ್ಲಿ ನದಿ ನೀರಿನ ಸೆಳೆತಕ್ಕೆ ಸರಿಯಾಗಿ ನಿರ್ಮಿಸಲಾಗಿದೆ. ಇಲ್ಲಿ ನದಿನೀರು ಪೂರ್ವ ದಕ್ಷಿಣ ಕಡೆಯಿಂದ ಬಂದು ಬ್ರೇಕ್ ವಾಟರ್ಗೆ ಉತ್ತರ ಪಶ್ಚಿಮ ಭಾಗದಲ್ಲಿ ಅಪ್ಪಳಿಸುತ್ತದೆ. ನದಿ ನೀರಿನ ಸೆಳೆತಕ್ಕೆ ತಕ್ಕಂತೆ ಇದನ್ನು ರಚಿಸಲಾಗಿದೆ. ಮಾತ್ರವಲ್ಲದೆ ಅದಕ್ಕೆ ಸರಿಯಾಗಿ ಅದರ ಪ್ರವೇಶ ಭಾಗ ನಿರ್ಮಿಸಲಾಗಿದೆ. ಇದರಿಂದ ಬ್ರೇಕ್ವಾಟರ್ಗೆ ಹಾನಿಯಾಗುವ ಅಪಾಯವೂ ಇಲ್ಲ. ಹಾಗಾಗಿಯೇ ಮಲ್ಪೆ ಬಂದರಿನಲ್ಲಿ ಇಂದಿಗೂ ಅಳಿವೆ ಬಾಗಿಲಿನಲ್ಲಿ ಹೂಳಿನ ಸಮಸ್ಯೆ ಎದುರಾಗಿಲ್ಲ. ಇದು ಇತರ ಬಂದರುಗಳಿಗೂ ಮಾದರಿ. ಆದರೆ ಇಂಜಿನಿಯರ್ಗಳು ಇದೇ ಮಾದರಿ ಅನುಸರಿಸಲು ಮನಸ್ಸು ಮಾಡುತ್ತಿಲ್ಲ. ಅವರು ಇದರ ಬಗ್ಗೆ ಪೂರ್ಣ ಮಾಹಿತಿ ಪಡೆಯುವಂತೆ ಮೀನುಗಾರಿಕಾ ಸಚಿವರು, ಹಿರಿಯ ಅಧಿಕಾರಿಗಳು ಇಂಜಿನಿಯರ್ಗಳ ಗಮನ ಸೆಳೆಯುವುದು ಅಗತ್ಯವಾಗಿದೆ. ಇದೊಂದು ಸರಳ ವಿಧಾನ. ಬಂದರು ಅಭಿವೃದ್ಧಿಗೆ ಕೋಟ್ಯಂತರ ರೂ. ವ್ಯಯಿಸುತ್ತಿರುವ ಈ ದಿನಗಳಲ್ಲಿ ಯೋಜನಾಬದ್ಧವಾದ ಬ್ರೇಕ್ವಾಟರ್ಗೆ ಗಮನ ನೀಡದೇ ಹೋದರೆ ಎಲ್ಲ ಯೋಜನೆಗಳು ಕೂಡ ನೀರು ಪಾಲಾದಂತೆಯೇ. ಇದರಿಂದ ಯಾವುದೇ ಪ್ರಯೋಜನವಾಗದು ಎನ್ನುತ್ತಾರೆ ಮೀನುಗಾರರು.
ಕೋಡಿಕನ್ಯಾನ, ಕೋಡಿಬೆಂಗ್ರೆ ಮತ್ತು ಹಂಗಾರಕಟ್ಟೆಯ ಬಂದರುಗಳಿಗೆ ಒಂದೇ ಅಳಿವೆಬಾಗಿಲು ಇದೆ. ಇಲ್ಲಿ ಬ್ರೇಕ್ವಾಟರ್ ಮಾಡಿದರೆ ಮೂರೂ ಬಂದರುಗಳನ್ನು ಬಳಸಬಹುದು. ಇದನ್ನು ಪ್ರಾಯೋಗಿಕ ನೆಲೆಯಲ್ಲಿ ಕೈಗೆತ್ತಿಕೊಂಡು ಉಳಿದ ಎಲ್ಲ ಬಂದರುಗಳಿಗೂ ಇದೇ ರೀತಿಯ ಬ್ರೇಕ್ವಾಟರ್ ನಿರ್ಮಿಸಬಹುದು ಎನ್ನುವ ಸಲಹೆ ಮೀನುಗಾರರ ಸಂಘಟನೆಗಳದ್ದು.
ಮಲ್ಪೆ, ಮಂಗಳೂರು ಬಂದರಲ್ಲಿ ಒತ್ತಡ
ಸಮುದ್ರದ ತೀರ ಭಾಗದಲ್ಲಿ ಮೀನುಗಳ ಸಂತತಿ ಕಡಿಮೆಯಾಗಿದೆ. ನಾಡದೋಣಿ ಮೀನುಗಾರಿಕೆಯನ್ನಿಟ್ಟುಕೊಂಡು ಮೀನುಗಾರಿಕೆ ಮಾಡಿದರೆ ಲಾಭದಾಯಕವಾಗುತ್ತಿಲ್ಲ. ಆಳ ಸಮುದ್ರ ಮೀನುಗಾರಿಕೆ ಅನಿವಾರ್ಯವಾಗಿದೆ. ಆದರೆ ಮಂಗಳೂರು ಮತ್ತು ಮಲ್ಪೆ ಬಂದರುಗಳನ್ನು ಹೊರತುಪಡಿಸಿದರೆ ಕರ್ನಾಟಕ ಕರಾವಳಿಯ ಉಳಿದ ಬಂದರುಗಳಲ್ಲಿ ಬ್ರೇಕ್ವಾಟರ್ ಇಲ್ಲದ ಕಾರಣ ಆಳ ಸಮುದ್ರ ಮೀನುಗಾರಿಕೆಯ ಬೋಟ್ಗಳು ಬಂದರಿನೊಳಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಲ್ಪೆ ಮತ್ತು ಮಂಗಳೂರು ಬಂದರುಗಳಲ್ಲಿ ಒತ್ತಡವಾಗಿದೆ. ಮಾತ್ರವಲ್ಲದೆ ಮೀನುಗಾರಿಕೆಯ ಅಭಿವೃದ್ಧಿ ಸ್ಥಗಿತಗೊಳಿಸುವ ಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಂದರ್ಭ ಉಳಿದ ಬಂದರುಗಳಲ್ಲಿ ಬ್ರೇಕ್ವಾಟರ್ ನಿರ್ಮಿಸುವುದು ಅನಿವಾರ್ಯ ಎನ್ನುತ್ತಾರೆ ಮಲ್ಪೆ ಆಳಸಮುದ್ರ ಟ್ರಾಲ್ಬೋಟ್ ಮೀನುಗಾರರ ಸಂಘದ ಗೌರವಾಧ್ಯಕ್ಷ ಗೋಪಾಲ ಕುಂದರ್ ಕೊಡವೂರು ಅವರು.
ಬ್ರೇಕ್ ವಾಟರ್ ನಿರ್ಮಾಣ ವೇಗವಾಗಲಿ
ಕರ್ನಾಟಕ ಕರಾವಳಿಯ ಬಂದರುಗಳಲ್ಲಿ ಬ್ರೇಕ್ವಾಟರ್ ನಿರ್ಮಾಣಕ್ಕೆ ಪುಣೆಯ ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್(ಎಸ್ಡಬ್ಲ್ಯುಪಿಆರ್ಎಸ್
ಮಲ್ಪೆ ಬಂದರನ್ನು ಮಾದರಿಯಾಗಿಟ್ಟುಕೊಂಡು ಉಳಿದ ಬಂದರುಗಳಲ್ಲೂ ಬ್ರೇಕ್ವಾಟರ್ ನಿರ್ಮಿಸಬೇಕಿದೆ. ಮಲ್ಪೆ ಬಂದರಿನಲ್ಲಿ ಕಳೆದ 20-25 ವರ್ಷಗಳಲ್ಲೂ ಹೂಳಿನ ಸಮಸ್ಯೆ ಉಂಟಾಗಿಲ್ಲ. ಇಲ್ಲಿ ಯಾವ ಸಮಯದಲ್ಲೂ ಬೋಟ್ಗಳನ್ನು ಬಂದರಿನೊಳಕ್ಕೆ ತರಲು ಅವಕಾಶವಿದೆ. ಇದೇ ರೀತಿ ಇತರ ಬಂದರುಗಳ ಅಭಿವೃದ್ಧಿ ಕಷ್ಟವೇನಲ್ಲ. ಅದಕ್ಕೆ ಮುಖ್ಯವಾಗಿ ಬೇಕಿರುವುದು ಸುವ್ಯವಸ್ಥಿತ ಬ್ರೇಕ್ ವಾಟರ್. ಈ ಬಗ್ಗೆ ಎಂಜಿನಿಯರ್ಗಳು, ಜನಪ್ರತಿನಿಧಿಗಳು ಆದ್ಯತೆ ನೀಡಬೇಕು.
– ಗೋಪಾಲ ಕುಂದರ್, ಗೌರವಾಧ್ಯಕ್ಷರು, ಮಲ್ಪೆ ಆಳಸಮುದ್ರ ಟ್ರಾಲ್ಬೋಟ್ ಮೀನುಗಾರರ ಸಂಘ
ಪುಣೆಯ ಸಂಸ್ಥೆಯ ಅಧ್ಯಯನ ವರದಿಯ ಆಧಾರದಲ್ಲೇ ಬ್ರೇಕ್ವಾಟರ್ಗಳ ನಿರ್ಮಾಣ ನಡೆಯುತ್ತದೆ. ನದಿ ನೀರಿನ ಒತ್ತಡವನ್ನು ಅನುಸರಿಸಿಯೇ ವಿನ್ಯಾಸಗೊಳಿಸಲಾಗುತ್ತದೆ. ಹೊಸ ಬ್ರೇಕ್ವಾಟರ್ಗಳನ್ನು ನಿರ್ಮಿಸುವಾಗ ಅಧ್ಯಯನ ಸಂಸ್ಥೆ ಸ್ಥಳೀಯರಿಂದ ಮಾಹಿತಿ ಪಡೆದುಕೊಳ್ಳುತ್ತದೆ. ಮೀನುಗಾರರ ಸಂಘಟನೆಗಳ ಸಲಹೆ ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈಗಾಗಲೇ ಪ್ರಸ್ತಾವನೆ ಮಾಡಲಾಗಿರುವ ಯೋಜನೆಗಳು ಅನುಷ್ಠಾನವಾದರೆ ಹೆಚ್ಚಿನ ಬಂದರುಗಳಿಗೆ ಬ್ರೇಕ್ವಾಟರ್ ನಿರ್ಮಾಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.