ಅದು 2010ರ ವರ್ಷ. ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ಥಾನಿ ಪ್ರಜೆಗಳ ಕೆಲವು ಗುಂಪುಗಳಿಗೆ ಪಾಸ್ಪೋರ್ಟ್ ಕಾಯ್ದೆಯಿಂದ ವಿನಾಯಿತಿ ನೀಡಲು ನಿರ್ಧರಿಸಿತ್ತು.
ಹಾಗಾದರೆ ಅದು ಯಾವ ಗುಂಪು? ಉತ್ತರ ಬಹಳ ಸ್ಪಷ್ಟವಾಗಿದೆ, ಪಾಕಿಸ್ಥಾನದ ಅಲ್ಪಸಂಖ್ಯಾತ ಸಮುದಾಯಗಳ (ಹಿಂದೂಗಳು ಮತ್ತು ಸಿಖ್ಖರು)ಗುಂಪು.
ಈ ನಿರ್ಧಾರವನ್ನು 2010ರಲ್ಲಿ ತೆಗೆದುಕೊಂಡಿದ್ದರ ಬಗ್ಗೆ ಯಾರಿಗಾದರೂ ನೆನಪಿದೆಯೇ? ಇದು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಯಾರಾದರೂ ಆ ವೇಳೆ ಹಾರಾಟ, ಚೀರಾಟವನ್ನು ಪ್ರಾರಂಭಿಸಿದ್ದರಾ? ಖಂಡಿತ ಇಲ್ಲ. ಏಕೆಂದರೆ ಅದು ದೈನಂದಿನ ಕಾನೂನು ಪರಿಭಾಷೆಯಲ್ಲಿ ಬರೆಯಲ್ಪಟ್ಟ, ಸರ್ಕಾರದ ದೈನಂದಿನ ಸಾಮಾನ್ಯ ನಿರ್ಧಾರವಾಗಿತ್ತು. ಭಾರತದಲ್ಲಿ, ಸರ್ಕಾರವು ವಾಡಿಕೆಯಂತೆ ಕೆಲವು ರೀತಿಯಲ್ಲಿ ಅನಾನುಕೂಲ ಸ್ಥಿತಿಯಲ್ಲಿವೆ ಎಂದು ಕಂಡುಬರುವ ನಿರ್ದಿಷ್ಟ ಗುಂಪುಗಳಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತದೆ. ಮಹಿಳೆಯರು, ಹಿಂದುಳಿದ ಜಾತಿಗಳು, ಬುಡಕಟ್ಟು ಜನಾಂಗದವರು, ದೈಹಿಕವಾಗಿ ಸವಾಲುಗಳನ್ನು ಎದುರಿಸುತ್ತಿರುವವರು, ಧಾರ್ಮಿಕ ಅಲ್ಪಸಂಖ್ಯಾತರು ಮುಂತಾದವರು ಈ ವಿಶೇಷ ಸವಲತ್ತುಗಳಿಗೆ ಅರ್ಹರು. ಪಾಕಿಸ್ಥಾನದ ಹಿಂದೂಗಳು ಮತ್ತು ಸಿಖ್ಖರು ಕೂಡ ಈ ವಿಶೇಷ ಸವಲತ್ತಿಗೆ ಅರ್ಹರಾಗಿದ್ದಾರೆ. ಇದನ್ನು ಯಾವತ್ತೂ ಕೂಡ ಸಂವಿಧಾನದ ಉಲ್ಲಂಘನೆ ಎಂದು ನೋಡಲಾಗಿಲ್ಲ. ಬದಲಾಗಿ, ಇದನ್ನು ಸಂವಿಧಾನದ ಹೃದಯವಾಗಿ ನೋಡಲಾಗುತ್ತದೆ.
ಹಾಗಾದರೆ 2019-20ರಲ್ಲಿ ಸಿಎಎ ಏಕೆ ಅಷ್ಟು ದೊಡ್ಡ ವಿಷಯವಾಯಿತು?
2010ರ ನಿರ್ಧಾರವನ್ನು ಎಚ್ಚರಿಕೆಯಿಂದ ವೀಕ್ಷಿಸಿ. ಇದು ದೀರ್ಘಾವಧಿಯ ವೀಸಾಗಳನ್ನು ಮಾತ್ರ ನೀಡಿತ್ತು ಮತ್ತು ಪೌರತ್ವದ ಬಗ್ಗೆ ಏನನ್ನೂ ಹೇಳಿರಲಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ನಿರಾಶ್ರಿತರಿಗೆ ಅರ್ಧ ನಿರಾಳತೆಯನ್ನಷ್ಟೇ ನೀಡಿತ್ತು, ಅಂದರೆ ಅವರನ್ನು ಮೂಲಭೂತವಾಗಿ ಆತಂಕದಲ್ಲೇ ಇರಿಸಿತ್ತು. ಹಾಗಾದರೆ ಈ ಜನರು ತಮ್ಮ ಇಡೀ ಜೀವನವನ್ನು ದೀರ್ಘಾವಧಿಯ ವೀಸಾಗಳಲ್ಲಿಯೇ ಬದುಕಬೇಕೇ?
ವ್ಯತ್ಯಾಸವೆಂದರೆ ಮೋದಿ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ಅವರ ಆತಂಕವನ್ನು ದೂರ ಮಾಡುವ ಕಾರ್ಯವನ್ನು ಮಾಡಿ ಮುಗಿಸಿತು, ಪೌರತ್ವಕ್ಕೆ ಸ್ಪಷ್ಟ ಮಾರ್ಗವನ್ನು ಒದಗಿಸಿತು. ಕಾಂಗ್ರೆಸ್ ಯಾವ ಕಾರ್ಯವನ್ನು ಮಾಡಲು ಹೆದರಿತೋ ಮೋದಿ ಸರ್ಕಾರ ಅದನ್ನು ಮಾಡಿ ತೋರಿಸಿತು! ಇದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಹಿಂದೂಫೋಬಿಗಳ ಗಮನವನ್ನು ಸೆಳೆಯಿತು.
2014 ರಿಂದ ಸಂಭವಿಸಿದ ಎಲ್ಲಾ ವಿಷಯಗಳಲ್ಲೂ ನಾವು ಇದೇ ಮಾದರಿಯ ಫೋಬಿಯಾವನ್ನು ಕಾಣುತ್ತಾ ಬರುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಯಾವ ಕೆಲಸವನ್ನು ಮಾಡದೆ ತೆರಿಗೆದಾರರ ಹಣವನ್ನು ಕೇವಲ ಚರ್ಚೆಗಳಿಗೇ ವ್ಯಯಿಸಿತೋ, ಅಥವಾ ಅರ್ಧ ಕಾರ್ಯವನ್ನು ಮಾತ್ರ ಮಾಡಿ ಬಾಕಿ ಉಳಿಸಿತೋ ಅದು ಮೋದಿ ಸರ್ಕಾರ ಬಂದ ಮೇಲೆ ಪೂರ್ಣಗೊಂಡಿದೆ. ಆದರೆ ಇದು ಕಾಂಗ್ರೆಸ್ ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅದು ಫೋಬಿಯಾವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ.
ಎನ್ಆರ್ಸಿ ಅನ್ನೇ ನೋಡಿ. 1985 ರಲ್ಲಿ ಅಸ್ಸಾಂನಲ್ಲಿ ಎನ್ಆರ್ಸಿ ಬಗ್ಗೆ ಭರವಸೆ ನೀಡಿದವರೇ ರಾಜೀವ್ ಗಾಂಧಿಯವರು. 1985 ರಲ್ಲಿ ಅವರು ಅದನ್ನು ನಿಜವಾಗಿ ಮಾಡಿದ್ದರೆ, ಈಶಾನ್ಯದಲ್ಲಿ ನಮಗೆ ಈ ಎಲ್ಲ ಸಮಸ್ಯೆಗಳು ಬರುತ್ತಲೇ ಇರುತ್ತಿರಲಿಲ್ಲ. ಆದರೆ 1985 ರಿಂದ 2015 ರವರೆಗೆ ಈ ವಿಷಯದಲ್ಲಿ ಸಾಧಿಸಿದ್ದು ಮಾತ್ರ ಶೂನ್ಯ. ಮೂವತ್ತು ವರ್ಷ ಪೂರ್ಣಗೊಂಡರು ಈ ವಿಷಯದಲ್ಲಿ ಏನೂ ಆಗಿರಲೇ ಇಲ್ಲ.
ನಂತರ 2016 ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು ಮತ್ತು ಅದು ಪ್ರಕ್ರಿಯೆಯನ್ನು ಪ್ರಾರಂಭಿಸಿತು. ದಶಕಗಳು ಕಳೆದ ಕಾರಣ ನಾಗರಿಕರಲ್ಲದವರನ್ನು ಗುರುತಿಸುವುದು ಕಷ್ಟಕರವಾಗಿದೆ. ಹೀಗಾಗಿ ಅಲ್ಲಿ ಪ್ರಕ್ರಿಯೆಗೆ ಸಾಕಷ್ಟು ಅಡ್ಡಿಗಳು ಉಂಟಾಗುತ್ತಿದೆ. ಆದರೆ ಈಗ ಎಲ್ಲವೂ ಮೋದಿಯ ಸಮಸ್ಯೆ ಎಂಬಂತಾಗಿದೆ. ಇದು ಅವರ ತಪ್ಪೇ? ಅವರು ವಿಷಯವನ್ನು ಪೂರೈಸಿದರು. ಭಾರತ ಸರ್ಕಾರ ಹಲವು ದಶಕಗಳ ಹಿಂದೆ ನೀಡಿದ ಭರವಸೆಯನ್ನು ಈಡೇರಿಸಿದರು. ಆದರೂ ತೆಗುಳುವಿಕೆಯನ್ನು ಅವರು ನಿರಂತರವಾಗಿ ಕೇಳಿಕೊಂಡು ಬರುತ್ತಿದ್ದಾರೆ.
ಈ ಪ್ರತಿಭಟನಾಕಾರರು ಆಗ ಎಲ್ಲಿದ್ದರು? ಅವರಿಗೆ ಯಾವ ಭರವಸೆಯೂ ಈಡೇರಬೇಕಾದ ಅಗತ್ಯವಿರಲಿಲ್ಲ. ಸಿಎಎ, ಎನ್ ಆರ್ ಸಿ ಅಥವಾ ಎನ್ಪಿಆರ್ಗೂ ಮೀರಿದ್ದಾಗಿದೆ ಅವರ ಸಮಸ್ಯೆ.
ಜಿಎಸ್ಟಿ ವಿಷಯದಲ್ಲೂ ಆಗಿದ್ದು ಇದೆ.
ಜುಲೈ 2010 ರವರೆಗೂ ಭಾರತೀಯ ವ್ಯವಹಾರಗಳು ಜಿಎಸ್ಟಿಗೆ ಸಿದ್ಧವಾಗಿವೆ ಎಂಬ ವಿಚಾರವನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿ ಹೇಳುತ್ತಾ ಬಂದಿದ್ದರು. ಅಲ್ಲದೆ, ಅವರು ಭಾರತದ ಆರ್ಥಿಕತೆ ಮತ್ತು ಸಮಾಜದ ನೈಜತೆಯನ್ನು ಗುರುತಿಸಿದ್ದರು, ಹೀಗಾಗಿ ಅನೇಕ ತೆರಿಗೆ ದರಗಳೊಂದಿಗೆ “ಜಿಎಸ್ಟಿ”ಯನ್ನು ಪ್ರಸ್ತಾಪಿಸಿದ್ದರು. ಆದರೆ ಕಾಂಗ್ರೆಸ್ ಅದನ್ನು ಅನುಷ್ಠಾನಗೊಳಿಸಲೇ ಇಲ್ಲ.
ಮೋದಿ ಸರ್ಕಾರ ಜಿಎಸ್ಟಿ ಅನ್ನು ಜಾರಿಗೆ ತಂದಿತು. ಇದರ ಅಧಿಕೃತ ಆರಂಭಕ್ಕಾಗಿ ಸಂಸತ್ತಿಗೆ ಮನಮೋಹನ್ ಸಿಂಗ್ ಅವರಿಗೂ ಆಹ್ವಾನ ನೀಡಲಾಯಿತು. ಆದರೆ ಅವರು ಹೋಗಲಿಲ್ಲ. ಜಿಎಸ್ಟಿ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲೇ ಅಪಸ್ವರವನ್ನು ಎತ್ತಿತು. ಈಗಲೂ ಜಿಎಸ್ಟಿ ವಿರುದ್ಧ ಕೊಂಕು ನುಡಿಯುತ್ತಲೇ ಇದೆ. ತಾನು ಮಾಡದ ಕಾರ್ಯವನ್ನು ಮೋದಿ ಮಾಡಿದರು ಎಂಬುದೇ ಅದರ ಕೋಪಕ್ಕೆ ಮೂಲ ಕಾರಣ.
ಕಾಂಗ್ರೆಸ್ ಪಕ್ಷ ಯಾವತ್ತೂ ರಿಸ್ಕ್ ತೆಗೆದುಕೊಳ್ಳುವ ಕಾರ್ಯಕ್ಕೆ ಮುಂದಾಗಲೇ ಇಲ್ಲ, ತೆಗಳುವಿಕೆ ಕೇಳಲು, ವೋಟ್ ಬ್ಯಾಂಕ್ ಬಿಟ್ಟು ಕೊಡಲು ಅದಕ್ಕೆ ಸಾಧ್ಯವಾಗಲೇ ಇಲ್ಲ. ಚುನಾವಣೆಯಲ್ಲಿ ಜಯಗಳಿಸುವುದು ಒಂದೇ ಅದರ ಧ್ಯೇಯವಾಗಿತ್ತು. ಕುಟುಂಬ ರಾಜಕಾರಣವನ್ನು ಮುನ್ನಡೆಸುವುದು ಅದರ ಗುರಿಯಾಗಿತ್ತು.
1991ರವರೆಗೆ ಭಾರತ ಒಂದು ಹೆಜ್ಜೆ ಕೂಡ ಮುಂದಿಟ್ಟಿರಲಿಲ್ಲ. ಭಾರತದಲ್ಲಿ ಶೌಚಾಲಯಗಳ ವ್ಯಾಪ್ತಿ ಶೇ.40ಕ್ಕಿಂತಲೂ ಕಡಿಮೆ ಇತ್ತು. ಯುಪಿಎ ಆಡಳಿತ ಮುಗಿಯವರೆಗೂ ಭಾರತದ ಶೌಚಾಲಯ ವ್ಯಾಪ್ತಿ ಸುಧಾರಣೆಯಾಗಿರಲೇ ಇಲ್ಲ. ಆದರೀಗ ಶೇ.100ರಷ್ಟು ಬಯಲು ಶೌಚ ಮುಕ್ತ ದೇಶವಾಗಿ ಭಾರತ ಹೊರಹೊಮ್ಮುತ್ತಿದೆ.
ಆಧಾರ್ ವಿಷಯಕ್ಕೆ ಬಂದರೂ ಕಾಂಗ್ರೆಸ್ಸಿನ ಪರಿಸ್ಥಿತಿ ಇದೇ. ಆಧಾರ್ ಅನ್ನು ವಿನ್ಯಾಸಪಡಿಸಿದ್ದೇ ಕಾಂಗ್ರೆಸ್. ಅದನ್ನು ಜಾರಿಗೆ ಕೂಡ ತಂದಿತ್ತು. ಆದರೆ ಆಧಾರ್ ಜಾರಿಗೊಳಿಸಿ ಅದು ಮಾಡಿದ್ದು ಮಾತ್ರ ಶೂನ್ಯ. ವಾಸ್ತವವಾಗಿ ಆಧಾರ್ ಅನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂಬ ಚಿಂತನೆಯನ್ನು ಅದು ಮಾಡಲೇ ಇಲ್ಲ. ಆದರೀಗ ಮೋದಿ ಸರ್ಕಾರ ಆಧಾರ್ ಬಳಸಿ ಇಡೀ ಆಡಳಿತ ವ್ಯವಸ್ಥೆಯನ್ನೇ ಪಾರದರ್ಶಕಗೊಳಿಸುತ್ತಿದೆ. ಭ್ರಷ್ಟಾಚಾರವನ್ನು ತಗ್ಗಿಸುತ್ತಿದೆ.
ಕಾಂಗ್ರೆಸ್ ಪಕ್ಷ ಹಲವು ಯೋಜನೆಗಳನ್ನು, ಹಲವು ಚಿಂತನೆಗಳನ್ನು ಹೊರಹೊಮ್ಮಿಸಿತ್ತು. ಕೆಟ್ಟದ್ದೋ ಒಳ್ಳೆಯದ್ದೋ ಅದು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಮಾಡಿದ್ದು ಮಾತ್ರ ಎಲ್ಲಾ ಅರ್ಧಂಬರ್ಧ. ರಿಸ್ಕ್ ತೆಗೆದುಕೊಳ್ಳಲು ಅದು ಹೆದರಿತ್ತು, ಟೀಕೆಗೊಳಪಡಲು ಅದು ಹಿಂಜರಿದಿತ್ತು. ಅಧಿಕಾರ ಎಂಬುದು ಅದಕ್ಕೆ ಸಲೀಸಾಗಿ ಒದಗಿ ಬಂದುಬಿಟ್ಟ ಕಾರಣ ಪೂರ್ಣ ಕೆಲಸ ಮಾಡುವ ಹುಮ್ಮಸ್ಸನ್ನು ಅದು ಕಳೆದುಕೊಂಡಿತ್ತು. ಹೀಗಾಗಿ ಅದು ಮಾಡಿದ ಅರ್ಧಂಬರ್ಧ ಕಾರ್ಯವನ್ನು ಮೋದಿ ಪೂರ್ಣ ಮಾಡಿದ್ದಾರೆ.
2014ರಲ್ಲಿ ಅಧಿಕಾರಕ್ಕೇರಿದ ಬಳಿಕ ಇದುವರೆಗೂ ಮೋದಿ ತೆಗೆದುಕೊಂಡ ಪ್ರತಿ ನಿರ್ಧಾರ ಹಿಂದೆಯೂ ಅವರ ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತದೆ. ವೋಟ್ ಬ್ಯಾಂಕಿಗೆ ಅವರು ಭಯಪಡುವವರಲ್ಲ ಎಂಬುದನ್ನು ಅವರ ಕಾರ್ಯವೈಖರಿಯೇ ಹೇಳುತ್ತದೆ. ಟೀಕೆಯನ್ನು ಕೇಳಲು ಅವರೆಂದೂ ಹಿಂಜರಿಯುವುದಿಲ್ಲ, ಅದು ಅವರ ಜಾಯಮಾನವೂ ಅಲ್ಲ. ಜನಪರವಾಗಿದ್ದರೆ ಎಂತಹ ಕಠಿಣ ನಿರ್ಧಾರಕ್ಕೂ ಸೈ ಎನ್ನುವವರು ಮೋದಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.