ಕಾಸರಗೋಡು: ಮುಕ್ತ ಮನಸ್ಸಿನ ಆಸಕ್ತಿದಾಯಕ ಕಲಿಕೆ, ಸತತ ಪರಿಶ್ರಮ ಹಾಗೂ ಎಂದೂ ಕುಗ್ಗದ ಆತ್ಮವಿಶ್ವಾಸದ ಅಧ್ಯಯನದ ಹವ್ಯಾಸ ರೂಢಿಸಿಕೊಂಡ ಬದಿಯಡ್ಕ ಬಳಿಯ ಮಾರ್ಪನಡ್ಕದ ತರಕಾರಿ ವ್ಯಾಪಾರಿಯ ಮಗಳಿಗೆ ಇದೀಗ ಮಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ.
ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅನ್ವಯಿಕ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುವ ಶೋಭಿತಾ ಪದ್ಮಾರ್ ಹೆತ್ತವರಿಗೆ, ಶ್ರಮದಾಯಕ ಕುಟುಂಬಕ್ಕೆ ಹೆಮ್ಮೆ ತಂದಿದ್ದಾರೆ.
ಮಾರ್ಪನಡ್ಕದ ತರಕಾರಿ ವ್ಯಾಪಾರಿ ಅಚ್ಯುತ ಮಣಿಯಾಣಿ ಪದ್ಮಾರ್ ಹಾಗೂ ಹೇಮಲತಾ ದಂಪತಿಗಳ ಪುತ್ರಿ ಶೋಭಿತಾ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಪದವಿಪೂರ್ವ ಶಿಕ್ಷಣವನ್ನು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲೆಯಲ್ಲಿ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಇದೀಗ ಮಂಗಳೂರಿನ ಹಂಪನಕಟ್ಟೆಯ ಸರ್ಕಾರಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯದಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.
ಕಾಸರಗೋಡಿನ ಹೆಸರಾಂತ ಕೃಷಿಕರೂ, ತರಕಾರಿ ವ್ಯಾಪಾರಿಗಳೂ ಆಗಿದ್ದ ಪದ್ಮಾರ್ ಕುಂಞಿಕೃಷ್ಣ ಮಣಿಯಾಣಿಯವರ ಮೊಮ್ಮಗಳಾದ ಶೋಭಿತಾ, ಶಿಕ್ಷಕ ವೃತ್ತಿಯನ್ನು ಇಷ್ಟಪಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.