ಭಾರತದ ವಿಭಜನೆಯ ಅಪೂರ್ಣ ಅಜೆಂಡಾವನ್ನು ಪೂರ್ಣಗೊಳಿಸುವ ಸಮಯ ಈಗ ಬಂದಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಾಕಿಸ್ಥಾನ ಆಕ್ರಮಿತ ಭಾಗವು ಭಾರತದ ಉಳಿದ ಭಾಗಗಳೊಂದಿಗೆ ಮತ್ತೆ ಒಂದಾಗಲು ಕಾದು ಕುಳಿತಿದೆ. ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ಹಿಂತೆಗೆದು ಹಾಕಿದ ನಂತರ ಆ ರಾಜ್ಯ ಭಾರತದೊಂದಿಗೆ ಸಂಪೂರ್ಣ ಏಕೀಕರಣಗೊಂಡಿದ್ದು ಮಾತ್ರವಲ್ಲ, ಪಾಕಿಸ್ಥಾನದ ಅಕ್ರಮ ವಶದಲ್ಲಿರುವ ಪ್ರದೇಶಗಳನ್ನು ಹಿಂಪಡೆಯುವ ದಿಟ್ಟ ಹೆಜ್ಜೆಯಾಗಿಯೂ ಗೋಚರಿಸಿದೆ.
ಕೇಂದ್ರದ ಸಚಿವರುಗಳಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜಿತೇಂದ್ರ ಸಿಂಗ್ ಅವರು ನೀಡಿರುವಂತಹ ಹೇಳಿಕೆಗಳು ನಮ್ಮ ಭೂಮಿಯನ್ನು ಮರಳಿ ಪಡೆದುಕೊಳ್ಳಲು ಶೀಘ್ರದಲ್ಲೇ ಕೆಲವು ದೃಢವಾದ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಪಿಒಕೆ ಇಲ್ಲದೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅಪೂರ್ಣವಾಗಿದೆ.
ಮಹಾರಾಜ ಹರಿ ಸಿಂಗ್ ಅವರು ಭಾರತದ ಒಕ್ಕೂಟದೊಂದಿಗೆ ಸೇರಲು ಸಹಿ ಹಾಕಿದಾಗ ಇಡೀ ಜಮ್ಮು ಕಾಶ್ಮೀರವನ್ನು ನಮಗೆ ನೀಡಲು ಒಪ್ಪಿಕೊಂಡಿದ್ದರೆ ಹೊರತು ಅರ್ಧ ರಾಜ್ಯವನ್ನಲ್ಲ. ಆದರೆ ಪಾಕಿಸ್ಥಾನ ಕುಟಿಲತನದಿಂದ ಪಿಒಕೆಯನ್ನು ತನ್ನ ವಶದಲ್ಲಿ ಇರಿಸಿಕೊಂಡಿದೆ. ಮಾತ್ರವಲ್ಲ, ಇಡೀ ಜಮ್ಮು-ಕಾಶ್ಮೀರವನ್ನು ವಶಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದೆ.
ಸ್ವಾತಂತ್ರ್ಯದ ನಂತರ ಭಾರತ ಕೆಲವೊಂದು ಕಡೆ ಎಡವಿದ ಪರಿಣಾಮದಿಂದಲೇ ಇಂದು ಪಾಕಿಸ್ಥಾನ ಭಾರತದ ಮೇಲೆ ದಂಡೆತ್ತಿ ಬರುವಂತಹ ಪ್ರಸಂಗಗಳು ನಡೆಯುತ್ತಿವೆ. ಪಾಕಿಸ್ಥಾನದ ಗಿಲ್ಗಿಟ್, ಬಲೂಚಿಸ್ಥಾನಗಳು ಈಗಲೂ ಪಾಕಿಸ್ಥಾನದಿಂದ ಮುಕ್ತಿಗಾಗಿ ಹಪಹಪಿಸುತ್ತಿವೆ. ಭಾರತ ಮನಸ್ಸು ಮಾಡಿದರೆ, ಬಾಂಗ್ಲಾದೇಶದಂತೆ ಈ ಎರಡೂ ಪ್ರದೇಶಗಳಿಗೂ ಸ್ವಾತಂತ್ರ್ಯವನ್ನು ದೊರಕಿಸಿಕೊಡಬಹುದು. ವಿಶೇಷವೆಂದರೆ, ಈ ಎರಡೂ ಪ್ರದೇಶಗಳ ಹೋರಾಟಗಾರರು ಭಾರತದ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದಾರೆ. ಭಾರತದಿಂದ ನಮ್ಮ ಸ್ವಾತಂತ್ರ್ಯ ಸಾಧ್ಯ ಎಂಬುದಾಗಿ ನಂಬಿದ್ದಾರೆ. ಈ ನಿಟ್ಟಿನಲ್ಲೂ ದೃಢ ಹೆಜ್ಜೆಯನ್ನು ಭಾರತ ಮುಂದಿಡಲು ಈಗ ಸುಸಂದರ್ಭವಾಗಿದೆ.
370 ಮತ್ತು 35-ಎ ವಿಧಿಯನ್ನು ಹಿಂತೆಗೆದುಕೊಂಡ ನಂತರ, ಕಾರ್ಯತಾಂತ್ರಿಕ ದೃಷ್ಟಿಯಿಂದ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ತನ್ನ ಪ್ರದೇಶಗಳನ್ನು ಹಿಂಪಡೆಯಲು ಭಾರತ ಪ್ರಯತ್ನಿಸಬೇಕಾದ ಸಮಯ ಇದೀಗ ಬಂದಿದೆ. ಮಾತುಕತೆಗಳನ್ನು ನಡೆಸುವ ಮೂಲಕ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ. ತನ್ನ ಭೂಮಿಯನ್ನು ಪುನಃ ಪಡೆದುಕೊಳ್ಳಲು ಸಶಸ್ತ್ರ ಪಡೆಗಳನ್ನು ಕಳುಹಿಸುವುದು ಭಾರತಕ್ಕೆ ಲಭ್ಯವಿರುವ ಒಂದೇ ಒಂದು ಪರಿಹಾರವಾಗಿದೆ.
ಪ್ರಸ್ತುತ ಇರುವ ಎಲ್ಲಾ ಸನ್ನಿವೇಶಗಳು ತನ್ನ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರಲು ಭಾರತಕ್ಕೆ ಅನುಕೂಲಕರವಾಗಿವೆ. ಪಾಕಿಸ್ಥಾನದ ಸೈಬ್ರೆ ಗಲಭೆಯು ಆ ದೇಶವನ್ನು ನಲುಗಿಸಿದೆ, ಹೀಗಾಗಿ ಅದು ತನ್ನ ಕೆಳಮಟ್ಟದ ಯುದ್ಧ ಯಂತ್ರೋಪಕರಣಗಳೊಂದಿಗೆ ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧವನ್ನು ನಡೆಸುವ ಸ್ಥಿತಿಯಲ್ಲಿಲ್ಲ. ಅದರ ಆರ್ಥಿಕತೆಯು ಅಸ್ತವ್ಯಸ್ತವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಅದನ್ನು ದಿವಾಳಿಯೆಂದು ಘೋಷಿಸುವ ಎಲ್ಲ ಸಾಧ್ಯತೆಗಳಿವೆ. ಈ ಸಂಘರ್ಷದಲ್ಲಿ ಚೀನಾ ಮಿಲಿಟರಿ ಹಸ್ತಕ್ಷೇಪ ಮಾಡುವ ಯಾವುದೇ ಸನ್ನಿವೇಶಗಳನ್ನು ವಿಶ್ಲೇಷಕರು ನಿರಾಕರಿಸಿದ್ದಾರೆ. ಯಾಕೆಂದರೆ ಆ ರಾಷ್ಟ್ರ ಯುಎಸ್ಎ ಜೊತೆಗಿನ ವ್ಯಾಪಾರ ಯುದ್ಧಗಳಲ್ಲಿ ಬ್ಯುಸಿಯಾಗಿದೆ.
ಆದ್ದರಿಂದ, ಕಬ್ಬಿಣವು ಬಿಸಿಯಾಗಿರುವಾಗಲೇ ಅದನ್ನು ಹೊಡೆದು ತನಗೆ ಬೇಕಾದ ಆಕಾರಕ್ಕೆ ತರುವ ಸಮಯ ಈಗ ಭಾರತಕ್ಕೆ ಬಂದಿದೆ. ವಿಳಂಬ ಕ್ರಮವು ಶತ್ರುಗಳಿಗೆ ಹೆಚ್ಚಿನ ಶಕ್ತಿಯನ್ನು ಪಡೆಯಲು ದಾರಿ ಮಾಡಿಕೊಡುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.