ಜನಸಾಮಾನ್ಯರ ಏಳಿಗೆಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಅಭಿವೃದ್ಧಿಯನ್ನೇ ಮುಖ್ಯ ಗುರಿಯನ್ನಾಗಿಸಿರುವ ನಮೋ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳಿಗೆ ರೂಪ ನೀಡಿ ಕಾರ್ಯಗತಗಳಿಸಿದೆ. ಇದಕ್ಕಾಗಿ ಅನೇಕ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಸಮರ್ಥವಾಗಿ ದೇಶ ಕಟ್ಟುವ, ಮುನ್ನಡೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅನುಭವವನ್ನು ನೀಡಲು ಮತ್ತು ಸರ್ಕಾರಿ ಇಲಾಖೆಗಳು ಯಾವ ರೀತಿಯ ಕೆಲಸವನ್ನು ಮಾಡುತ್ತವೆ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ನೀತಿ ಆಯೋಗ ಮತ್ತು ಆರ್ಬಿಐಗಳು ಹಲವು ಇಂಟರ್ನ್ಶಿಪ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಂತಹ ಕೆಲವು ಇಂಟರ್ನ್ಶಿಪ್ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.
1. ವಿದೇಶಾಂಗ ಸಚಿವಾಲಯ
ವಿದೇಶಾಂಗ ಸಚಿವಾಲಯದ ವತಿಯಿಂದಲೂ ವಿದ್ಯಾರ್ಥಿಗಳಿಗಾಗಿ ಇಂತಹ ಇಂಟರ್ನ್ಶಿಪ್ಗಳನ್ನು ಹಮ್ಮಿಕೊಳ್ಳಲಾಗಿದೆ. ಆನ್ಸೈಟ್ ಮತ್ತು ಆಫ್ಸೈಟ್ ಇಂಟರ್ನ್ಶಿಪ್ಗಳನ್ನು ನೀಡುವುದಕ್ಕಾಗಿ ನಿರ್ಧರಿಸಿರುವ ಸಂಸ್ಥೆ, ಮೂವತ್ತು ವರ್ಷದೊಳಗಿನ ಪದವಿ ಪಡೆದ ವಿದ್ಯಾರ್ಥಿಗಳಿಂದ ಆನ್ಸೈಟ್ಗೆ ಮತ್ತು ಸ್ನಾತಕೋತ್ತರ ಪದವೀಧರರಿಂದ ಆಫ್ಸೈಟ್ ಇಂಟರ್ನ್ಶಿಪ್ಗೆ ವ್ಯವಸ್ಥೆ ಮಾಡಿದೆ. 6 ತಿಂಗಳುಗಳ ಕಾಲ ನಡೆಯಲಿರುವ ಈ ಇಂಟರ್ನ್ಶಿಪ್ಗೆ ಅರ್ಹತೆ ಪಡೆದ ಅಭ್ಯರ್ಥಿಗೆ ವೇತನ ನೀಡಲಾಗುವುದಿಲ್ಲ. ಆಯ್ಕೆಯಾದ ವಿದ್ಯಾರ್ಥಿಗಳು ಸಂಶೋಧನೆಗಳನ್ನು ಮಾಡುವುದು, ವರದಿಗಳನ್ನು ಬರೆಯುವುದು, ವಿಮರ್ಶಾತ್ಮಕ ವರದಿಗಳನ್ನು ತಯಾರಿಸುವ ಕೆಲಸವನ್ನು ಮಾಡಬೇಕಾಗುತ್ತದೆ.
ವರ್ಷಪೂರ್ತಿ ಈ ಇಂಟರ್ನ್ಶಿಪ್ಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವನ್ನು ನೀಡಲಾಗಿದ್ದು, ಸೂಚಿಸಲಾದ ಅಗತ್ಯ ದಾಖಲೆಗಳ ಮೂರು ಪ್ರತಿಯನ್ನು ಲಗತ್ತಿಸಿ, ವಿದೇಶಾಂಗ ಸಚಿವಾಲಯದ ಪ್ರಧಾನ ಕಛೇರಿಗೆ ಮತ್ತು ಸಹಾಯಕ ಕಾರ್ಯದರ್ಶಿಗಳ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. (ರೆಸ್ಯೂಮ್, ಪ್ರಸ್ತುತ ಅಧ್ಯಯನ ನಡೆಸುತ್ತಿರುವ ವಿಶ್ವವಿದ್ಯಾಲಯದ ಎನ್ಒಸಿ ಪ್ರಮಾಣಪತ್ರ, ಸಂಸ್ಥೆಯ ಮುಖ್ಯಸ್ಥರಿಂದ ಅಭ್ಯರ್ಥಿಯ ಪರಿಚಯ ಪತ್ರ, ಸೆಲ್ಫ್ ಅಟೆಸ್ಟೆಡ್ ಮಾರ್ಕ್ ಕಾರ್ಡ್ಸ್, ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡ್ಗಳ ನಕಲು) ಅಥವಾ ಈ ಎಲ್ಲವುಗಳನ್ನೂ jsad@mea.gov.in or usfsp@mea.gov.in.ಗೆ ಇ- ಮೇಲ್ ಮಾಡುವಂತೆ ಸೂಚಿಸಲಾಗಿದೆ.
2. ಲೋಕ ಸಭೆ
ಪಾರ್ಲಿಮೆಂಟ್ನ ಕಾರ್ಯ ವೈಖರಿಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಇಂಟರ್ನ್ಶಿಪ್ ವ್ಯವಸ್ಥೆಯನ್ನು ರೂಪುಗೊಳಿಸಲಾಗಿದೆ. ಒಂದು ವರ್ಷ ಅವಧಿಯ ಈ ಇಂಟರ್ನ್ಶಿಪ್ನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಲೋಕಸಭೆಯ ಆಗುಹೋಗುಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಕಾನೂನು ನಿರ್ವಹಣೆ, ಶಾಸನಗಳ ರಚನೆ, ಆರ್ಥಿಕ ಹೊಣೆಗಾರಿಕೆಗಳ ನಿರ್ವಹಣೆ ಮೊದಲಾದ ವಿಚಾರಗಳ ಜೊತೆಗೆ ಇನ್ನೂ ಅನೇಕ ಸಾಂವಿಧಾನಿಕ ಕಾರ್ಯಗಳ ಬಗ್ಗೆಯೂ ಅಧ್ಯಯನ ನಡೆಸಬಹುದಾಗಿದೆ. 21 ರಿಂದ 28 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಈ ಯೋಜನೆಯಲ್ಲಿ ಪಾಲುದಾರರಾಗುವ ಅವಕಾಶವನ್ನು ಸರ್ಕಾರ ನೀಡಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನದ ಜೊತೆಗೆ ಒಂದು ಬಾರಿ ಸ್ಟೇಷನರಿ ಅಲೋವೆನ್ಸ್ ಅನ್ನು ನೀಡಲಾಗುತ್ತದೆ.
ವರ್ಷಕ್ಕೆ 5 ಜನ ಅಭ್ಯರ್ಥಿಗಳಿಗೆ ಈ ಇಂಟರ್ನ್ಶಿಪ್ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಲೋಕ ಸಭೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆಗಳನ್ನು ನೀಡುತ್ತದೆ.
3. ಭಾರತೀಯ ರಿಸರ್ವ್ ಬ್ಯಾಂಕ್
ಆರ್ಬಿಐ ಎರಡು ಬಗೆಯ ಇಂಟರ್ನ್ಶಿಪ್ಗಳನ್ನು ನಡೆಸುತ್ತದೆ. ಸಮ್ಮರ್ ಪ್ಲೇಸ್ಮೆಂಟ್ ಮತ್ತು ರಿಸರ್ಚ್ ಇಂಟರ್ನ್ಶಿಪ್ ಹೆಸರಿನಲ್ಲಿ ಈ ಇಂಟರ್ನ್ಶಿಪ್ಗಳು ನಡೆಯುತ್ತವೆ.
ಸಮ್ಮರ್ ಪ್ಲೇಸ್ಮೆಂಟ್ : ಬ್ಯಾಚುಲರ್ ಆಫ್ ಲಾ, ಮಾಸ್ಟರ್ಸ್ ಇನ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಎಕನಾಮಿಕ್ಸ್, ಎಕನಾಮೆಟ್ರಿಕ್ಸ್, ಫಿನಾನ್ಸ್, ಬ್ಯಾಂಕಿಂಗ್, ಸ್ಯಾಟಿಸ್ಟಿಕ್ಸ್, ಕಾಮರ್ಸ್ ನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು. ಈ ಇಂಟರ್ನ್ಶಿಪ್ 3 ತಿಂಗಳುಗಳ ಕಾಲ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 20000 ಮಾಸಿಕ ವೇತನವನ್ನೂ ನೀಡಲಾಗುತ್ತದೆ. ಅಕ್ಟೋಬರ್ 15 ರಿಂದ ನವೆಂಬರ್ 30 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಪ್ರಿಲ್ ತಿಂಗಳಿನಲ್ಲಿ ಈ ಇಂಟರ್ನ್ಶಿಪ್ ಆರಂಭವಾಗುತ್ತದೆ.
ರಿಸರ್ಚ್ ಇಂಟರ್ನ್ಶಿಪ್ : ಇದರ ಅವಧಿ ಆರು ತಿಂಗಳಾಗಿದ್ದು, ಸ್ನಾತಕೋತ್ತರ ಪದವಿ ಮುಗಿಸಿ ಬ್ಯಾಂಕಿಂಗ್, ಫಿನಾನ್ಶಿಯಲ್, ಎಕನಾಮಿಕ್ಸ್ ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪಿಎಚ್ಡಿ ಮಾಡುವವರು ಅರ್ಜಿ ಗುಜರಾಯಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 45000 ರೂ. ಮಾಸಿಕ ವೆತನವನ್ನೂ ನೀಡಲಾಗುವುದು. ಆಯ್ಕೆ ಪ್ರಕ್ರಿಯೆ ವರ್ಷದಲ್ಲಿ ಎರಡು ಬಾರಿ ನಡೆಯುತ್ತಿದ್ದು, ಜನವರಿ 1 ಮತ್ತು ಜುಲೈ 1 ರಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
4. ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ
ಎಕನಾಮಿಕ್ಸ್, ಮ್ಯಾನೇಜ್ಮೆಂಟ್, ಫಿನಾನ್ಶಿಯಲ್ ಮತ್ತು ಕಾನೂನು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಕೇಸ್ ರೀಡಿಂಗ್, ಅನಾಲಿಸಿಸ್ (ವಿಶ್ಲೇಷಣೆ), ಆರ್ಟಿಕಲ್ ಮತ್ತು ಸಂಶೋಧನಾ ಬರಹಗಳನ್ನು ರಚಿಸುವ ಕೆಲಸವನ್ನು ಈ ಇಂಟರ್ನ್ಶಿಪ್ ಮೂಲಕ ಕಲಿಸಲಾಗುತ್ತದೆ. ಅಭ್ಯರ್ಥಿಯು ತಾವು ವ್ಯಾಸಂಗ ಮಾಡುತ್ತಿರುವ ಸಂಸ್ಥೆಯಿಂದ ಶಿಫಾರಸ್ಸು ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ವರ್ಷಪೂರ್ತಿ ಸಂಸ್ಥೆ ಅರ್ಜಿಗಳನ್ನು ಸ್ವೀಕರಿಸುತ್ತದೆ.
5. ನೀತಿ ಆಯೋಗ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಆಯೋಗವು ಸರ್ಕಾರಿ ಇಂಟರ್ನ್ಶಿಪ್ ವ್ಯವಸ್ಥೆಯನ್ನು 2015 ರಿಂದ ಆರಂಭಿಸಿದೆ. ಮಾನ್ಯತೆ ಪಡೆದ ದೇಶೀಯ ಅಥವಾ ವಿದೇಶೀ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ವ/ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ರಿಸರ್ಚ್ ಸ್ಕಾಲರ್ಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಆರಂಭಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯೋಗದ ವರ್ಟಿಕಲ್/ ಡಿವಿಷನ್ ಮತ್ತು ಪ್ರತಿಯೊಂದು ಘಟಕಗಳ ಕುರಿತಾಗಿಯೂ ಇಲ್ಲಿ ತಿಳಿಸಿಕೊಡಲಾಗುತ್ತದೆ. ಜೊತೆಗೆ ಸರ್ಕಾರಿ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ. ಅಲ್ಲದೆ ರೀತಿ ನೀತಿ, ನಿರ್ವಹಣೆಗಳ ಬಗ್ಗೆ ತಮ್ಮ ನಿಲುವುಗಳನ್ನು ಪ್ರಸ್ತುತ ಪಡಿಸುವ ಅವಕಾಶವನ್ನೂ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
ಪ್ರತಿ ತಿಂಗಳ 1 ರಿಂದ 10 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.