ಚಿತ್ರದುರ್ಗದ ಹಿರಿಯೂರು ಮೂಲದ 22 ವರ್ಷದ ಲಲಿತಾ ಆರ್. ಅವಲಿ ಅವರು ಏರೋ ಎಂಜಿನಿಯರಿಂಗ್ನಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತರಕಾರಿ ವ್ಯಾಪಾರಿಯ ಮಗಳಾಗಿರುವ ಅವರು ಮಾಡಿದ ಸಾಧನೆ ಎಲ್ಲರ ಮನ್ನಣೆಗೆ ಪಾತ್ರವಾಗಿದೆ. ಜ್ಞಾನಾರ್ಜನೆಯ ಬಗೆಗಿನ ಆಕೆಯ ಅಪರಿಮಿತವಾದ ಉತ್ಸಾಹ, ಗುರಿ ತಲುಪುವ ನಿಟ್ಟಿನಲ್ಲಿ ಆಕೆ ಪಟ್ಟ ಪರಿಶ್ರಮ ಇಂದು ಫಲ ನೀಡಿದೆ. ಇಸ್ರೋ ಸೇರಿಕೊಳ್ಳಬೇಕೆಂಬ ಅದಮ್ಯ ಆಶಯ ಆಕೆಯದ್ದಾಗಿದೆ.
“ನನ್ನ ಪೋಷಕರು ತುಂಬಾ ಸಂತೋಷಗೊಂಡಿದ್ದಾರೆ. ನನ್ನ ಕುಟುಂಬದಲ್ಲಿ ನಾನು ಮೊದಲ ಪದವೀಧರೆ. ವಾಸ್ತವವಾಗಿ, ನಮ್ಮ ಇಡೀ ಜಿಲ್ಲೆಯು ಆಚರಣೆಯಲ್ಲಿ ತೊಡಗಿಕೊಂಡಿದೆ. ನನಗೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ರೋಲ್ ಮಾಡೆಲ್ ಆಗಿದ್ದಾರೆ” ಎಂದು ಲಲಿತಾ ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ನಿತ್ಯ ಮುಂಜಾನೆ 4 ಗಂಟೆಗೆ ಎದ್ದು ಅವರು ತಮ್ಮ ಪೋಷಕರು ತರಕಾರಿ ಮಾರುತ್ತಿದ್ದ ಹಿರಿಯೂರು ನೆಹರೂ ಮಾರುಕಟ್ಟೆಗೆ ತೆರಳುತ್ತಿದ್ದರು. ಪುಸ್ತಕದ ಜೊತೆಯೇ ಅಲ್ಲಿಗೆ ತೆರಳುತ್ತಿದ್ದ ಅವರು ಪೋಷಕರಿಗೆ ತರಕಾರಿ ಮಾರಲು ಸಹಾಯ ಮಾಡುವ ಜೊತೆಜೊತೆಗೆಯೇ ಓದುತ್ತಿದ್ದರು.
“ನಾನು ಬೆಳಿಗ್ಗೆ 4 ಗಂಟೆ ಸುಮಾರಿಗೆ ಹಿರಿಯೂರಿನ ನೆಹರೂ ಮಾರುಕಟ್ಟೆಗೆ ಹೋಗುತ್ತಿದ್ದೆ, ಅಲ್ಲಿ ನನ್ನ ಪೋಷಕರು ತರಕಾರಿಗಳನ್ನು ಮಾರುತ್ತಾರೆ. ನಾನು ನನ್ನ ಪುಸ್ತಕಗಳನ್ನು ಕೂಡ ಅಲ್ಲಿಗೆ ಕೊಂಡೊಯ್ಯುತ್ತಿದ್ದೆ, ಮಾರಾಟಕ್ಕೆ ಸಹಾಯ ಮಾಡುವ ನಡುವೆ ನಾನು ಅಧ್ಯಯನ ಕೂಡ ಮಾಡುತ್ತಿದ್ದೆ” ಎಂದು ಆಕೆ ಹೇಳುತ್ತಾರೆ.
ತರಕಾರಿ ಮಾರಾಟ ಮಾಡಿ ಅಲ್ಲಿಂದ ಅವರು ಬೆಂಗಳೂರಿನ ಯಲಹಂಕದಲ್ಲಿರುವ ಈಸ್ಟ್ ವೆಸ್ಟ್ ಕಾಲೇಜ್ ಆಫ್ ಎಂಜಿನಿಯರಿಂಗ್ಗೆ ತೆರಳುತ್ತಿದ್ದರು, ಅಲ್ಲಿ ಅವರು ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಬಿಇ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಬೆಳಗಾವಿಯ ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಧೀನದಲ್ಲಿ ಬರುತ್ತದೆ.
ದೈನಂದಿನ ಬಿಡುವಿಲ್ಲದ ಚಟುವಟಿಕೆ ಲಲಿತಾ ಅವರನ್ನು ಬಸವಳಿಸುತ್ತಿದ್ದವು, ಆದರೆ ಲಲಿತಾ ಜ್ಞಾನದ ಅನ್ವೇಷಣೆಯಲ್ಲಿ ದಣಿವರಿಯದವಳಾಗಿದ್ದಳು ಮತ್ತು ತನ್ನ ಎಲ್ಲಾ ಪರೀಕ್ಷೆಗಳನ್ನು ನಿರಂತರವಾಗಿ ಅತ್ಯಧಿಕ ಅಂಕಗಳ ಮೂಲಕವೇ ತೇರ್ಗಡೆಯಾಗುತ್ತಿದ್ದಳು.
2020ರ ಫೆಬ್ರವರಿ 1ರಂದು ಪ್ರಕಟವಾದ ಏರೋ ಎಂಜಿನಿಯರಿಂಗ್ ಅಂತಿಮ ಫಲಿತಾಂಶ ಲಲಿತಾ ಅವರಿಗೆ ದೊಡ್ಡ ಅಚ್ಚರಿಯನ್ನು ತಂದಿತ್ತು, ಇಡೀ ಕರ್ನಾಟಕಕ್ಕೆ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರು. ಮಾತ್ರವಲ್ಲದೇ GATE ಪರೀಕ್ಷೆಯಲ್ಲಿ 707 ಅಂಕಗಳನ್ನು ಪಡೆದುಕೊಂಡಿದ್ದರು.
ಫೆಬ್ರವರಿ 8 ರ ಶನಿವಾರ, ಬೆಂಗಳೂರಿನ ವಿಟಿಯು ಕ್ಯಾಂಪಸ್ನಲ್ಲಿ ರಾಜ್ಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡವರನ್ನು ಚಿನ್ನದ ಪದಕದೊಂದಿಗೆ ಸನ್ಮಾನಿಸಲಾಯಿತು. ಲಲಿತಾ ಅವರು ಮೊದಲಿಗರಾಗಿ ಸನ್ಮಾನ ಸ್ವೀಕರಿಸಿದರು.
“ಈ ಕ್ಷಣ ಅದ್ಭುತವಾಗಿದೆ. ನನ್ನ ಕುಟುಂಬವು ಸಂತೋಷದಲ್ಲಿ ತೇಲುತ್ತಿದೆ. ನಮ್ಮ ಇಡೀ ಜಿಲ್ಲೆಯು ಆಚರಿಸುತ್ತಿದೆ” ಎಂದು ಲಲಿತಾ ಹೇಳುತ್ತಾರೆ. ತನ್ನ ಸಾಧನೆಯ ಶ್ರೇಯಸ್ಸನ್ನು ಅವರು ಪೋಷಕರಿಗೆ ಸಮರ್ಪಿಸುತ್ತಾರೆ.
“ನಮ್ಮ ಜೀವನದಲ್ಲಿ ಯಾವುದೇ ಹೋರಾಟಗಳಿಗೆ ಕೊರತೆಯಿಲ್ಲ. ಕುಟುಂಬವನ್ನು ಪೋಷಿಸಲು ನನ್ನ ಪೋಷಕರು ಹಗಲು ರಾತ್ರಿ ಶ್ರಮಿಸುತ್ತಿರುವುದನ್ನು ನಾನು ನೋಡಿದ್ದೇನೆ. ಆದರೂ, ಅವರು ನಮಗೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವಲ್ಲಿ ಯಶಸ್ವಿಯಾದರು” ಎನ್ನುತ್ತಾರೆ.
ನಿರೀಕ್ಷೆಯಂತೆ, ಅವರ ಹೆತ್ತವರಾದ ರಾಜೇಂದ್ರ ಮತ್ತು ಚಿತ್ರಾ ಅವರು ತಮ್ಮ ಹಿರಿಯ ಮಗಳ ಫಲಿತಾಂಶದಿಂದ ಸಂತೋಷಗೊಂಡಿದ್ದಾರೆ. ಹಣಕಾಸಿನ ತೊಂದರೆಯಿಂದಾಗಿ ಅವರಿಗೆ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ಸಿಗಲಿಲ್ಲ, ಆದರೆ ಮಗಳನ್ನು ಎಂಜಿನಿಯರಿಂಗ್ ಓದಿಸಿದ್ದಾರೆ. ಕಳೆದ 40 ವರ್ಷಗಳಿಂದ ತರಕಾರಿಗಳನ್ನು ಮಾರಾಟ ಮಾಡುವ ತಮ್ಮ ಪೂರ್ವಜರ ವೃತ್ತಿಯನ್ನು ಅವರು ಮುಂದುವರೆಸಿದ್ದಾರೆ. ತಮ್ಮ ಮೂವರು ಹೆಣ್ಣುಮಕ್ಕಳಿಗೂ ಯೋಗ್ಯ ಶಿಕ್ಷಣವನ್ನು ಅವರು ನೀಡಿದ್ದಾರೆ ಮತ್ತು ಅವರು ಉತ್ತಮ ವೃತ್ತಿಜೀವನವನ್ನು ಹೊಂದುವಂತೆ ಮಾಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಸ್ತುತ ಮುಖ್ಯಸ್ಥ ಕೆ.ಶಿವನ್ ಅವರನ್ನು ತನ್ನ ಆದರ್ಶಪ್ರಾಯವಾಗಿ ಪರಿಗಣಿಸುವ ಲಲಿತಾ, ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಐಐಟಿ, ಐಐಸಿಯಂತಹ ಯಾವುದಾದರು ಪ್ರಮುಖ ಶಿಕ್ಷಣ ಸಂಸ್ಥೆಯಿಂದ ಪಡೆಯಲು ಬಯಸುತ್ತಿದ್ದಾಳೆ.
“ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನಿಯಾಗಿ ಕೆಲಸ ಮಾಡುವುದು ನನ್ನ ಕನಸು. ನಾನು ಇಸ್ರೋ ಅಥವಾ ಡಿಆರ್ಡಿಒಗೆ ಸೇರಲು ಬಯಸುತ್ತೇನೆ” ಎಂದು ನಗುವಿನೊಂದಿಗೆ ಲಲಿತಾ ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ವಿವರಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.