2018ರ ಫೆಬ್ರವರಿ 13ರಂದು ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ನರೇಶ್ ಕುಮಾರ್ ಅವರು ಶ್ರೀನಗರ ವಿಮಾನನಿಲ್ದಾಣಕ್ಕೆ ಬಂದಿಳಿದರು ಮತ್ತು ನೇರವಾಗಿ ವಿಮಾನನಿಲ್ದಾಣದ ಭದ್ರತೆಯನ್ನು ನಿರ್ವಹಿಸುತ್ತಿರುವ ಅಧಿಕಾರಿಯ ಬಳಿ ಹೋದರು. ಅಧಿಕಾರಿಯಾದ ಅಸಿಸ್ಟೆಂಟ್ ಕಮಾಂಡೆಂಟ್ ಶೀತಲ್ ರಾವತ್ ಅವರಿಗೆ ಸುಂದರವಾಗಿ ಅಲಂಕರಿಸಲಾದ ಹೂವಿನ ಬೊಕ್ಕೆ ನೀಡಿದರು ಮತ್ತು ಒಂದು ವೇಳೆ ತಾನು ಸಂಜೆಯ ವೇಳೆಗೆ ಹಿಂದಿರುಗಿ ಬಾರದೇ ಹೋದರೆ ಇದನ್ನೇ ನಾನು ಮುಂಗಡವಾಗಿ ನೀಡಿದ ‘ವ್ಯಾಲೆಂಟೈನ್ಸ್ ಡೇ’ ಗಿಫ್ಟ್ ಎಂದು ಪರಿಗಣಿಸುವಂತೆ ಆಕೆಗೆ ತಿಳಿಸಿದರು.
ನರೇಶ್ ಕುಮಾರ್, ಕಾಶ್ಮೀರದ ಸಿಆರ್ಪಿಎಫ್ನ ಕ್ರ್ಯಾಕ್ ಕಮಾಂಡೋ ಯುನಿಟ್ ಕ್ವಿಕ್ ಆ್ಯಕ್ಷನ್ ಟೀಮ್(ಕ್ಯೂಎಟಿ)ನ ಮುಖ್ಯಸ್ಥ. ತುರ್ತು ಕಾರ್ಯಾಚರಣೆಗಾಗಿ ಅವರನ್ನು ದೆಹಲಿಯಿಂದ ಕಾಶ್ಮೀರಕ್ಕೆ ಕರೆಸಲಾಗಿತ್ತು. ಆರು ಯೋಧರನ್ನು ಬಲಿ ಪಡೆದುಕೊಂಡ ಸಂಜುವಾನ್ ಕ್ಯಾಂಪ್ ಅಟ್ಯಾಕ್ ನಡೆದ ಎರಡು ದಿನಗಳ ಬಳಿಕ ಸಿಆರ್ಪಿಎಫ್ನ ಕರಣ್ ನಗರ್ ಕ್ಯಾಂಪ್ ದಾಳಿಗೊಳಗಾಗಿತ್ತು. ಉಗ್ರವಾದಿಗಳು ಪಾಳು ಬಿದ್ದ ಕಟ್ಟಡದೊಳಗೆ ಅಡಗಿ ಕುಳಿತಿದ್ದರು ಮತ್ತು ಕಾರ್ಯಾಚರಣೆ 24 ಗಂಟೆಗಳ ಕಾಲ ಮುಂದುವರೆದಿತ್ತು. ಕುಮಾರ್ ಅವರಿಗೆ ತನ್ನ ಬದುಕು ಸಂದಿಗ್ಧ ಸ್ಥಿತಿಯಲ್ಲಿದೆ ಎಂಬ ಅರಿವಿತ್ತು. ಪತ್ನಿ ಶೀತಲ್ ತುಸುವೂ ಭಾವುಕರಾಗದೆ ಅವರನ್ನು ವಿಮಾನನಿಲ್ದಾಣದಿಂದ ಬೀಳ್ಕೊಟ್ಟರು.
ಕರಣ್ ನಗರ ಎನ್ಕೌಂಟರ್ನಲ್ಲಿ, ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ಫಲ ನೀಡದಿದ್ದಾಗ, ಕುಮಾರ್ ಆರು ಸದಸ್ಯರ ತಂಡವನ್ನು ರಚಿಸಿ ಕಟ್ಟಡಕ್ಕೆ ನುಗ್ಗಿ, ಬದುಕುಳಿದಿದ್ದ ಏಕೈಕ ಉಗ್ರನನ್ನು ಕೊಂದು ಹಾಕಿದರು.
ಪಂಜಾಬ್ನ ಹೋಶಿಯಾರ್ಪುರದಲ್ಲಿ ಸೇನಾಧಿಕಾರಿಯ ಮಗನಾಗಿ ಜನಿಸಿದ ಕುಮಾರ್, ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಿಂದ ಬಿಟೆಕ್ ಮುಗಿಸಿ, ನಂತರ ಸಶಸ್ತ್ರ ಪಡೆಗಳ ಪ್ರವೇಶ ಪರೀಕ್ಷೆಗೆ ಹಾಜರಾಗಲು ಪ್ರಾರಂಭಿಸಿದರು.
“ಸಶಸ್ತ್ರ ಪಡೆಗಳ ಹಿನ್ನೆಲೆಯಿಂದ ಬಂದ ನಾನು ಯಾವಾಗಲೂ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದೇನೆ. ಈ ಸಮವಸ್ತ್ರ ಸದಾ ನನ್ನನ್ನು ಆಕರ್ಷಿಸಿತ್ತು. ನೀವು ಬಿಟ್ಟ ಸ್ಥಳದಿಂದ ನಾನು ಪ್ರಾರಂಭಿಸುತ್ತೇನೆ ಎಂದು ನಾನು ನನ್ನ ತಂದೆಗೆ ಭರವಸೆ ನೀಡಿದ್ದೆ. ವಾಸ್ತವವಾಗಿ, ನಾನು ಸೇನಾಪಡೆಗಳಿಗೆ ಪ್ರವೇಶ ಪಡೆಯುವ ಇನ್ನೊಂದು ಆಯ್ಕೆಯಾಗಿ ಬಿಟೆಕ್ ಪೂರ್ಣಗೊಳಿಸಿದೆ ”ಎಂದು ಕುಮಾರ್ ಹೇಳುತ್ತಾರೆ.
ಕುಮಾರ್ ಅವರು ಮಾರ್ಚ್ 2013 ರಲ್ಲಿ ಸಿಆರ್ಪಿಎಫ್ಗೆ ಸೇರಿದರು. ತರಬೇತಿಯ ನಂತರ, ಅವರ ಮೊದಲ ಪೋಸ್ಟ್ನಲ್ಲಿ ಅವರನ್ನು ಏಪ್ರಿಲ್ 2015 ರಲ್ಲಿ ಕಾಶ್ಮೀರಕ್ಕೆ ಕಳುಹಿಸಲಾಯಿತು. 2016 ರಲ್ಲಿನ ಎನ್ಕೌಂಟರ್ನ ನಂತರ ಸಿಆರ್ಪಿಎಫ್ ಕಮಾಂಡೋಗಳ ಕ್ವಿಕ್ ಆ್ಯಕ್ಷನ್ ತಂಡವನ್ನು ರಚಿಸಲು ನಿರ್ಧರಿಸಿತು ಮತ್ತು ಅದನ್ನು ಮುನ್ನಡೆಸಲು ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ನಿಯೋಜನೆಗೊಂಡ ಕೆಲವೇ ತಿಂಗಳಲ್ಲಿ, ನೌಹಟ್ಟಾ ಚೌಕ್ನಲ್ಲಿ ಶಸ್ತ್ರಸಜ್ಜಿತ ಉಗ್ರರು ಪೊಲೀಸ್ ಪಿಕೆಟ್ ಮೇಲೆ ದಾಳಿ ಮಾಡಿದಾಗ ವೃತ್ತಿ ಜೀವನದ ಮೊದಲ ಅಗ್ನಿ ಪರೀಕ್ಷೆ ಎದುರಾಗಿತ್ತು. “ನಾವು ಅವರನ್ನು ನಿಮಿಷಗಳೊಳಗೆ ಕೊಂದು ಹಾಕಿದೆವು ಮತ್ತು ನಗರ ಯುದ್ಧದಲ್ಲಿ ಸಿಆರ್ಪಿಎಫ್ ಹೋರಾಟದ ಸಾಮರ್ಥ್ಯವು ಉತ್ತಮ ಗುಣಮಟ್ಟದ್ದಾಗಿದೆ ಎಂಬುದನ್ನು ಸಾಬೀತುಪಡಿಸಿದೆವು. ಅಂದಿನಿಂದ, ನಾವು ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಅನೇಕ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ, ” ಎಂದು ಕುಮಾರ್ ಹೇಳುತ್ತಾರೆ. ಅವರ ಈ ಕಾರ್ಯಾಚರಣೆಗೆ ಅವರಿಗೆ ಮೊದಲ ಶೌರ್ಯ ಪ್ರಶಸ್ತಿ ಒದಗಿ ಬಂತು.
ಕುಮಾರ್ ಭಾಗವಹಿಸಿದ ಮತ್ತೊಂದು ಪ್ರಮುಖ ಕಾರ್ಯಾಚರಣೆಯೆಂದರೆ, 2016ರ ಡಿಸೆಂಬರ್ 7-9 ರಂದು ಬಿಜ್ಬೆಹರಾದ ಅರ್ವಾನಿಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ಗಳು ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ.
“ಅದೊಂದು ದ್ವೇಷ ಕಾರುವ ಊರಾಗಿತ್ತು. ಅಲ್ಲಿ ಸಾಕಷ್ಟು ಕಲ್ಲು ತೂರಾಟ ನಡೆದಿತ್ತು. ಹೀಗಾಗಿ ಎನ್ಕೌಂಟರ್ ಮೂರು ದಿನಗಳವರೆಗೆ ಮುಂದುವರೆಯಿತು. ಒಬ್ಬ ಅರೆಸೈನಿಕ ಸಿಬ್ಬಂದಿ ಇದರಲ್ಲಿ ಗಾಯಗೊಂಡಿದ್ದಾರೆ. ಮೊದಲಿಗೆ, ಮನೆಯನ್ನು ಸ್ಫೋಟಗೊಳಿಸುವುದು ಎಂದು ಯೋಜಿಸಲಾಗಿತ್ತು. ಆದರೆ ಆ ಜಾಗದಲ್ಲಿ ಸಾವಿರಾರು ಜನರು ಇದ್ದರು ಮತ್ತು ಅವರ ಮೇಲೆ ಹಾನಿಯಾಗುವ ಅಪಾಯವಿತ್ತು. ನಂತರ ರೂಮ್ ಇಂಟರ್ವೆನ್ಶನ್ಗೆ ನಿರ್ಧರಿಸಲಾಯಿತು ಮತ್ತು QAT ಅನ್ನು ಆಯ್ಕೆ ಮಾಡಲಾಯಿತು. ಕೆಲವೇ ನಿಮಿಷಗಳಲ್ಲಿ, ನಾವು ಮನೆಗೆ ನುಗ್ಗಿ ಉಗ್ರರನ್ನು ನೆಲಕ್ಕುರುಳಿಸಿದೆವು” ಎಂದು ಕುಮಾರ್ ಹೇಳುತ್ತಾರೆ. ಈ ಕಾರ್ಯಾಚರಣೆಗಾಗಿ ಕುಮಾರ್ ಅವರಿಗೆ ಎರಡನೇ ಶೌರ್ಯ ಪದಕ ದೊರೆಯಿತು.
ಅವರ ಇತರ ಕಾರ್ಯಾಚರಣೆಗಳೆಂದರೆ ಜುಲೈ 2017 ರಲ್ಲಿ ಬುದ್ಗಾಂನಲ್ಲಿ ಉಗ್ರರೊಂದಿಗೆ ಹೋರಾಟ, ಡಿಸೆಂಬರ್ 31, 2018ರಲ್ಲಿ ಲೆಥ್ಪೊರಾದಲ್ಲಿ ಉಗ್ರರ ವಿರುದ್ಧ ಹೋರಾಟ ಮತ್ತು ಮೇ 5, 2019 ರಂದು ಚಟ್ಟಬಲ್ನಲ್ಲಿ ಉಗ್ರರೊಂದಿಗೆ ಸೆಣಸಾಟ. ವಿಶೇಷವೆಂದರೆ, ಅವರ ತಂಡವು 2015 ರಿಂದ 50 ಉಗ್ರರನ್ನು ನೆಲಕ್ಕುರುಳಿಸಿದೆ.
ಕುಮಾರ್ ಅವರು ಶೌರ್ಯ ಪದಕವನ್ನು ಜಯಿಸದ ವರ್ಷವೇ ಇಲ್ಲ.
ತನ್ನ ಪತ್ನಿಯೇ ತನಗೆ ಶಕ್ತಿಯ ಆಧಾರಸ್ತಂಭ ಎಂದು ಕುಮಾರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
“ಅವಳು ಅಧಿಕಾರಿಯೂ ಆಗಿರುವುದರಿಂದ, ನಾನು ಏನು ಮಾಡುತ್ತೇನೆಂದು ಆಕೆಗೆ ವಿವರಿಸಬೇಕಾಗಿ ಬರುವುದಿಲ್ಲ. ಶಾಂತಿಯುತವಾದ ಸ್ಥಳಕ್ಕೆ ಪೋಸ್ಟಿಂಗ್ ಪಡೆಯುವ ಒತ್ತಡವೂ ನನ್ನ ಮೇಲೆ ಇಲ್ಲ” ಎಂದು ಅವರು ಹೇಳುತ್ತಾರೆ.
ನಾಲ್ಕು ವರ್ಷಗಳ ಅಲ್ಪ ಕಾರ್ಯಾಚರಣೆಯ ವೃತ್ತಿಜೀವನದಲ್ಲಿ, ಕುಮಾರ್ ಅವರು ಶೌರ್ಯ (ಪಿಎಂಜಿ)ಕ್ಕಾಗಿ ಆರು ಪೊಲೀಸ್ ಪದಕಗಳನ್ನು ಗೆದ್ದಿದ್ದಾರೆ, ಈ ಗಣರಾಜ್ಯೋತ್ಸವದಂದು ಅವರು ಆರನೇಯ ಪದಕವನ್ನು ಗೆದ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.