ಪಾಶ್ಚಿಮಾತ್ಯರು ಭಾರತವನ್ನು ಮೂಢನಂಬಿಕೆಗಳ ಭೂಮಿ ಎಂದು ಪರಿಗಣಿಸಿದ್ದ ಸಮಯದಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು ಅವರು. ಹಿಂದೂ ಧರ್ಮ ಬಡತನಕ್ಕೆ ಪ್ರಮುಖ ಕಾರಣವೆಂದು ಜಗತ್ತು ಅಪಹಾಸ್ಯ ಮಾಡಿದಾಗ, ಅವರು ಧಾರ್ಮಿಕ ಮೌಲ್ಯಗಳ ಮೂಲಕ, ತತ್ವಗಳು, ವೇದಾಂತ ಮತ್ತು ಪ್ರಾಚೀನ ಭಾರತದ ಸಾಂಸ್ಕೃತಿಕ ಮೌಲ್ಯಗಳ ಮೂಲಕ ಬಡ ಜನರಿಗೆ ಸಹಾಯವನ್ನು ಮಾಡಲು ಮುಂದಾದವರು ಅವರು.
ಭಾರತದ ನೈಜ ಇತಿಹಾಸವನ್ನು ಪತ್ತೆ ಹಚ್ಚಿದಾಗ ಧಾರ್ಮಿಕ ಮೌಲ್ಯಗಳಂತೆ ಲಲಿತಕಲೆಗಳಲ್ಲೂ ಭಾರತವು ಇಡೀ ಪ್ರಪಂಚದ ಮೊದಲ ಗುರು ಎಂದು ಸಾಬೀತಾಗುತ್ತದೆ ಎಂದು ಹೇಳಿದ ವ್ಯಕ್ತಿ ಅವರು. ಅವರು ಹಿಂದೂ ಧರ್ಮವನ್ನು ಎತ್ತಿಹಿಡಿದದ್ದು ಮಾತ್ರವಲ್ಲ, ಏಕತೆಗೆ ಕರೆ ನೀಡಿದರು ಮತ್ತು ಈ ದೇಶವು ನಿಜವಾಗಿಯೂ ಏನು ಬಯಸುತ್ತಿದೆ ಎಂಬುದನ್ನು ಅರಿತುಕೊಂಡಿದ್ದರು. ಈ ರಾಷ್ಟ್ರದ ರಕ್ತನಾಳಗಳಲ್ಲಿ ಹೊಸ ಚೈತನ್ಯವನ್ನು ಉಂಟುಮಾಡಬಲ್ಲ ಹೊಸ ವಿದ್ಯುತ್ ಪ್ರವಹಿಸುತ್ತದೆ ಎಂಬ ಭರವಸೆಯಲ್ಲಿ ಅವರು ಇದ್ದರು. ಹೌದು! ಅವರು ಬೇರೆ ಯಾರೂ ಅಲ್ಲ ಸ್ವಾಮಿ ವಿವೇಕಾನಂದರು.
ಇತ್ತೀಚಿನ ವರ್ಷಗಳಲ್ಲಿ ಹೊರಹೊಮ್ಮಿರುವ ಹೊಸ ಭಾರತದ ಪರಿಕಲ್ಪನೆಯು ಹೊಸದೇನಲ್ಲ. ವಿವೇಕಾನಂದರು ಈ ಕಲ್ಪನೆಯನ್ನು ದಶಕಗಳ ಹಿಂದೆಯೇ ಅರಿತುಕೊಂಡಿದ್ದರು ಮತ್ತು ಅದನ್ನು ಜಗತ್ತಿಗೆ ಪಸರಿಸಲು ಪ್ರಯತ್ನಿಸಿದರು. ಇದರ ಮೂಲಕ ಅವರು ಸಾಮಾಜಿಕ ಸೇವೆ ಮತ್ತು ವೈಜ್ಞಾನಿಕ ಚಿಂತನೆಯ ಪುನರ್ನಿರ್ಮಾಣದ ಅಗತ್ಯವನ್ನು ಅರ್ಥಮಾಡಿಕೊಂಡರು.
ಅವರು ಒತ್ತಿಹೇಳಿದ ಇನ್ನೊಂದು ಪ್ರಮುಖ ಅಂಶವೆಂದರೆ ಯುವ ಶಕ್ತಿ. ಆದ್ದರಿಂದ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿನವಾಗಿಯೂ ಆಚರಿಸಲಾಗುತ್ತದೆ. ರಾಷ್ಟ್ರದ ಯುವಕರು ವಿವಿಧ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖರು ಎಂದು ಅವರು ನಂಬಿದ್ದರು. ರಾಷ್ಟ್ರ ಮತ್ತು ಜನರಿಗಾಗಿ ಎಚ್ಚರಗೊಳ್ಳುವಂತೆ, ಜಾಗೃತರಾಗುವಂತೆ, ಕಾರ್ಯೋನ್ಮುಖರಾಗುವಂತೆ ಯುವ ಜನತೆಗೆ ಅವರು ಕರೆ ನೀಡಿದರು. ಯುವಕರು ಮತ್ತು ರಾಷ್ಟ್ರದ ಅಭಿವೃದ್ಧಿಯ ನಡುವೆ ಸಂಪರ್ಕವನ್ನು ಅವರು ಪ್ರತಿಪಾದಿಸಿದ್ದರು.
ಆದರೆ ಸಮಕಾಲೀನ ಭಾರತದ ಯುವಕರಿಗೆ ಈ ಕನಸನ್ನು ಸಾಧಿಸುವ ಸಾಮರ್ಥ್ಯವಿದೆಯೇ? ಅಥವಾ ಅವರು ಈ ವಿಷಯದಲ್ಲಿ ಹಿಂದುಳಿಯುತ್ತಿದ್ದಾರೆಯೇ? ಹೌದು, ದೇಶದ ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಉದ್ಭವಿಸಿರುವ ಪ್ರಶ್ನೆಗಳು ಇವು.
ಭಾರತದ ಯುವಕರ ಕೊರತೆ ಏನು?
ಶಿಕ್ಷಣವು ಮನುಷ್ಯನನ್ನು ಹೆಚ್ಚು ಶಾಂತ ಮತ್ತು ಸಭ್ಯನನ್ನಾಗಿ ಮಾಡುತ್ತದೆ ಎಂದು ಹೆಚ್ಚಾಗಿ ಹೇಳಲಾಗುತ್ತದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸವೆಂದರೆ ವೈಚಾರಿಕತೆ. ಶಿಕ್ಷಣ ಮತ್ತು ಸಾಮಾಜಿಕ ಆತ್ಮಸಾಕ್ಷಿಯ ಮೂಲಕ ವೈಚಾರಿಕತೆಯನ್ನು ಸಾಧಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ದೇಶದ ‘ವಿದ್ಯಾವಂತ’ ಯುವಕರು ಏನು ಮಾಡುತ್ತಿದ್ದಾರೆ? ಕಲ್ಲುಗಳ ತೂರಾಟ! ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚುವುದು! ಅಥವಾ ಹಿಂದುತ್ವವನ್ನು ನಾಶಮಾಡಿ ಎಂದು ಹೇಳುವ ಫಲಕಗಳನ್ನು ಹಿಡಿದುಕೊಳ್ಳುವುದು! ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅವರನ್ನು ಹುಚ್ಚರನ್ನಾಗಿ ಮಾಡಿದೆ ಎಂದು ಅವರೇ ಹೇಳುತ್ತಾರೆ!. ಇನ್ನೂ ದುರಾದೃಷ್ಟವೆಂದರೆ ರಾಜಕೀಯ ಪಕ್ಷ ಒಂದರ ‘ಯುವ ಐಕಾನ್’ ಇಂತಹ ಕೆಟ್ಟ ಕೃತ್ಯಗಳನ್ನು ಸಮರ್ಥಿಸುತ್ತಿದೆ! ನಮಗೆ ತಿಳಿದಿರುವ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಿಎಎ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತವು ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತವಲ್ಲ ಮತ್ತು ಬಹುಸಂಖ್ಯಾತ ಹಿಂದೂಗಳು ಅವರಿಗೆ ಅಪಾಯವಾಗಿದ್ದಾರೆ ಎಂಬ ಅಭಿಪ್ರಾಯಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ದುಃಖಕರವೆಂದರೆ, ಕೆಲವು ಹಿಂದೂಗಳೂ ಸಹ ಇಂತಹ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದು.
ಪಾಕಿಸ್ಥಾನ ಮತ್ತು ಇತರ ನೆರೆಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರು ಯಾವ ರೀತಿಯಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಎಂಬ ಬಗ್ಗೆ ಅವರಿಗೆ ಯಾವುದೇ ಕಲ್ಪನೆ ಇಲ್ಲ. ಕಾಶ್ಮೀರಿ ಪಂಡಿತರಿಗೆ ಏನಾಯಿತು ಎಂದು ಅವರಿಗೆ ತಿಳಿದಿಲ್ಲ. ಪಾಕಿಸ್ಥಾನದಂತಹ ದೇಶದಲ್ಲಿ ಹಿಂದೂಗಳನ್ನು ಗೌರವದಿಂದ ಕಾಣಲಾಗುತ್ತದೆ ಎಂದು ಅವರು ನಂಬುತ್ತಾರೆ. ಆ ರಾಷ್ಟ್ರದಲ್ಲಿ ಹಿಂದೂ ಮತ್ತು ಸಿಖ್ ಧಾರ್ಮಿಕ ದೇವಾಲಯಗಳ ಅಸ್ತಿತ್ವವು ಸಹನೆಯ ಉದಾಹರಣೆಯಾಗಿದೆ ಎಂಬುದು ಅವರ ವಾದ. ಅವರ ಈ ವಾದ ನಮ್ಮ ದೇಶಕ್ಕೆ ಮಾಡುವ ಅಪಮಾನವಲ್ಲದೆ ಮತ್ತೇನು? ಇವರುಗಳು ಭಾರತದ ಉಜ್ವಲ ಭವಿಷ್ಯವೇ? ಅಥವಾ ವಿವೇಕಾನಂದ ಅಥವಾ ಮಹಾತ್ಮ ಗಾಂಧಿಯವರ ಕನಸನ್ನು ಪುನರುಜ್ಜೀವನಗೊಳಿಸುವವರು ಇವರು ಎಂಬುದನ್ನು ನಾವು ನಂಬಬಹುದೇ? ರಾಷ್ಟ್ರ ವಿರೋಧಿ ಎಂಬ ಪದವು ಅವರ ಕೃತ್ಯವನ್ನು ವಿವರಿಸಲು ಚಿಕ್ಕ ಪದವೇ ಆಗಿದೆ.
ಈ ರಾಷ್ಟ್ರದ ಇತಿಹಾಸವನ್ನು ಅದರ ನಿಜವಾದ ಸಾರದಿಂದ ಹೇಗೆ ಮರೆಮಾಡಲಾಗಿದೆ ಎಂಬುದು ನಮಗೆ ಈಗ ಅರ್ಥವಾಗುತ್ತದೆ. ಶಿಕ್ಷಣದ ಉದ್ದೇಶವು ನೆರವೇರಿಲ್ಲ ಎಂಬುದೂ ತಿಳಿದು ಬರುತ್ತದೆ. ಅಧಿಕಾರದಲ್ಲಿದ್ದ ಹಿಂದಿನ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರಲ್ಲಿ ಭಯವನ್ನು ಹುಟ್ಟುಹಾಕುವಲ್ಲಿ ಹೇಗೆ ಯಶಸ್ವಿಯಾಗಿವೆ ಮತ್ತು ದೇಶದ ಯುವಜನಾಂಗದ ಒಂದು ವರ್ಗದಲ್ಲಿ ಹಿಂದೂ ವಿರೋಧಿ ಭಾವನೆಯನ್ನು ಅವರು ಎಷ್ಟು ವ್ಯವಸ್ಥಿತವಾಗಿ ಹರಿಬಿಟ್ಟಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ನಿಜವಾದ ಭಾರತವನ್ನು ಅರಿತುಕೊಳ್ಳುವುದು ಮುಖ್ಯ
ಗೌರವ ಮತ್ತು ಘನತೆಯುತ ಜೀವನವನ್ನು ನೀಡಿದ್ದರೆ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರು ಭಾರತಕ್ಕೆ ವಲಸೆ ಬರುತ್ತಿರಲಿಲ್ಲ ಎಂದು ದಾರಿ ತಪ್ಪಿದ ಯುವಕರು ಏಕೆ ಅರಿತುಕೊಳ್ಳುವುದಿಲ್ಲ? ಭಾರತದ ನೈಜ ಇತಿಹಾಸವನ್ನು ಯುವಕರು ಏಕೆ ಅರಿಯಲು ಪ್ರಯತ್ನಿಸಬಾರದು ಮತ್ತು ಅರ್ಥಮಾಡಿಕೊಳ್ಳಬಾರದು? ಲಕ್ಷಾಂತರ ಹಿಂದೂಗಳನ್ನು ದುರುಪಯೋಗಪಡಿಸಲಾಯಿತು, ಬಲವಂತವಾಗಿ ಮತಾಂತರಗೊಳಿಸಲಾಯಿತು ಮತ್ತು ಲಕ್ಷಾಂತರ ದೇವಾಲಯಗಳನ್ನು ಈ ಭೂಮಿಯಲ್ಲೇ ನೆಲಸಮ ಮಾಡಲಾಯಿತು ಮತ್ತು ಬ್ಯಾಪ್ಟೈಜ್ ಮಾಡಲಾಯಿತು ಎಂಬುದು ನಿಜ. ಇಷ್ಟಾದರೂ, ಈ ಭೂಮಿ ಇನ್ನೂ ಜಾತ್ಯತೀತವಾಗಿದೆ. ಹಿಂದೂಗಳು ಇನ್ನೂ ಸಹಿಷ್ಣುಗಳಾಗಿದ್ದಾರೆ. ವಿವಿಧ ಧರ್ಮಗಳು ಇಲ್ಲಿ ಶಾಂತಿಯುತವಾಗಿ ಅಭಿವೃದ್ಧಿ ಹೊಂದುತ್ತಿವೆ ಮತ್ತು ಎಲ್ಲಾ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುತ್ತಿದೆ.
ಯುವಕರು ಈ ಸತ್ಯವನ್ನು ಒಪ್ಪಿಕೊಳ್ಳಬೇಕು. ಅವರು ವಿರೋಧ ಪಕ್ಷದ ಅಸಹ್ಯ ರಾಜಕೀಯ ಅಜೆಂಡಾಗೆ ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಇತರ ಎಲ್ಲ ಹಿತಾಸಕ್ತಿಗಳಿಗಿಂತ ಮೊದಲು ರಾಷ್ಟ್ರವನ್ನು ಉಳಿಸಿಕೊಳ್ಳಲು ಇದು ನಿರ್ಣಾಯಕ ಸಮಯ. ಆದರೆ ದಾರಿ ತಪ್ಪಿದ ಯುವಕರ ಅವಸ್ಥೆ ಎಂದರೆ ಅವರು ಗಲಭೆ ಮತ್ತು ಸಾರ್ವಜನಿಕ ಆಸ್ತಿಯನ್ನು ಸುಟ್ಟುಹಾಕುತ್ತಿರುವುದು, ಅವರ ಈ ಕೃತ್ಯ ನಮ್ಮ ಶತ್ರು ದೇಶಕ್ಕೆ ನಮ್ಮನ್ನು ಅಪಹಾಸ್ಯ ಮಾಡಲು ಅವಕಾಶವನ್ನು ನೀಡುತ್ತಿದೆ. ‘ರೇಪ್ ಇನ್ ಇಂಡಿಯಾ’ ಹೇಳಿಕೆಗೆ ತಲೆ ತಗ್ಗಿಸುವಂತೆ ಮಾಡಿದೆ, ವೀರ್ ಸಾವರ್ಕರ್ ರಾಷ್ಟ್ರದ ನಿಜವಾದ ಭಾರತ ರತ್ನವಾಗಿದ್ದರು, ಆದರೆ ಅವರಿಗೆ ಕೆಲವರು ಭಾರತ ರತ್ನ ನೀಡಲು ಆಕ್ಷೇಪಿಸಿದರು. ಜೆಎನ್ಯು ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಹಾಳುಗೆಡವಿದ್ದಾರೆ. ಸ್ವಾಮಿ ವಿವೇಕಾನಂದರು ಅವರಿಗೆ ಉಂಟು ಮಾಡಿದ ನಷ್ಟವಾದರೂ ಏನು?
ಇದಲ್ಲದೆ, ತಮ್ಮ ಕೃತ್ಯದ ಮೂಲಕ ಅವರು ಆಶ್ರಯ, ಗುರುತು ಮತ್ತು ಶಿಕ್ಷಣವನ್ನು ನೀಡಿರುವ ಭೂಮಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಅವರಿಗೇ ತಿಳಿದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಯುವಕರು ರಾಷ್ಟ್ರ ಮತ್ತು ಜನರಿಗಾಗಿ ಜಾಗೃತರಾಗಲು ಮತ್ತು ಕಾರ್ಯೋನ್ಮುಖರಾಗಲು ಇದು ಸರಿಯಾದ ಸಮಯ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಕನಸನ್ನು ಪುನರುಚ್ಚರಿಸಲು ಮತ್ತು ವಿವೇಕಾನಂದರ ಸಾರ್ವತ್ರಿಕ ಸಹೋದರತ್ವದ ದೃಷ್ಟಿಕೋನವನ್ನು ಎತ್ತಿಹಿಡಿಯಲು ಮತ್ತು ಪರಸ್ಪರರ ಧರ್ಮ, ಜಾತಿ ಮತ್ತು ಜನಾಂಗವನ್ನು ಗೌರವಿಸಲು ಇದು ಸಕಾಲ. ನಿಜವಾದ ಗುರಿ ನಿರ್ಮಾಣ ಮಾಡುವುದೇ ಹೊರತು ಸುಡುವುದಾಗಿರಬಾರದು. ಎಲ್ಲಾ ಸಂಪನ್ಮೂಲಗಳು ಲಭ್ಯತೆಯನ್ನು ಬಳಸಿಕೊಂಡು, ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಕಡಿಮೆಯಿಲ್ಲದಂತೆ ಭಾರತವನ್ನು ನಿರ್ಮಿಸಲು ಯುವಕರು ನಿರ್ಧರಿಸಬೇಕು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಾಣ ಮಾಡುವತ್ತ ಯುವಕರು ಪ್ರಯಾಣವನ್ನು ಪ್ರಾರಂಭಿಸಬೇಕು. ಸ್ವಾಮಿ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ, ನಾವು ಮೊದಲು ಭಾರತವನ್ನು ಬಡತನದ ಭೂಮಿ ಎಂಬ ವ್ಯಾಖ್ಯಾನದಿಂದ ಮುಕ್ತಗೊಳಿಸೋಣ ಮತ್ತು ಹೊಸ ಭಾರತವನ್ನು ಮರು ವ್ಯಾಖ್ಯಾನಿಸಲು ಮತ್ತು ಜಗತ್ತಿಗೆ ಹೊಸ ಮೈಲಿಗಲ್ಲನ್ನು ಹಾಕಲು ಪ್ರಯತ್ನಿಸೋಣ. ನಮ್ಮ ಪೂರ್ವಜರ ದೂರದೃಷ್ಟಿಯನ್ನು ಸಾಧಿಸಲು ನಾವು ಹೆಚ್ಚು ಸಂವೇದನಾಶೀಲ, ಜಾಗರೂಕ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸೋಣ.
ಮೂಲ: ಆರ್ಗನೈಝರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.