ಸುಳ್ಯ : ಆಲೆಟ್ಟಿ-ಬಡ್ಡಡ್ಕ ರಸ್ತೆಯ ಗುಂಡ್ಯ ಎಂಬಲ್ಲಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು ಪ್ರಯಾಣಿಕರ ಜೀವಕ್ಕೆ ಸಂಚಕಾರವನ್ನು ತಂದೊಡ್ಡುತಿದೆ. ಇಲ್ಲಿ ದಿನಾಲು ಒಂದೆರಡು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಮಂಗಳವಾರ ರಾತ್ರಿ ಕಾಂಕ್ರೀಟ್ ಹಲಗೆಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು ಮಗುಚಿ ಬಿದ್ದು ವಾಹನ ಜಖಂಗೊಂಡಿದೆ.
ಕಳೆದ ವರ್ಷ ಆಲೆಟ್ಟಿ-ಬಡ್ಡಡ್ಕ ರಸ್ತೆ ಎರಡು ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿಯಾಗಿತ್ತು. ಆದರೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಸುಮಾರು 200 ಮೀಟರ್ಗೂ ಹೆಚ್ಚು ಕಡಿದಾದ ತಿರುವು ರಸ್ತೆಯನ್ನು ಅಭಿವೃದ್ಧಿ ಪಡಿಸದೆ ಹಾಗೆಯೇ ಬಿಟ್ಟಿದ್ದಾರೆ.ಗುಂಡ್ಯ ಎಂಬಲ್ಲಿ ಸುಮಾರು 200 ಮೀಟರ್ಗಳಷ್ಟು ರಸ್ತೆ ಡಾಮರೀಕರಣ ಮಾಡದೇ ಹಾಗೆಯೇ ಬಿಡಲಾಗಿದೆ. ತೀರಾ ಇಕ್ಕಟ್ಟಾದ ತಿರುವಿನ ಈ ಸ್ಥಳದಲ್ಲಿ ಡಾಮರು ಎದ್ದು ಹೋಗಿ ಪಾತಾಳ ಸದೃಶ್ಯ ಹೊಂಡಗಳು ನಿರ್ಮಾಣವಾಗಿದೆ.
ಒಂದು ಕಡೆಯಲ್ಲಿ ಕಡಿದಾದ ತಿರುವಿನಲ್ಲಿ ಡಾಮರು ಪೂರ್ತಿಯಾದ ರಸ್ತೆಯಿಂದ ಡಾಮರೀಕರಣ ನಡೆಸದ ರಸ್ತೆಗೆ ವಾಹನಗಳು ಇಳಿಯುವಾಗ ಭಾರೀ ದೊಡ್ಡ ಪ್ರಪಾತಕ್ಕೆ ಇಳಿದಂತೆ ಭಾಸವಾಗುತ್ತದೆ. ಇಲ್ಲಿ ರಸ್ತೆ ಪೂರ್ತಿ ಧೂಳು ಮತ್ತು ಕಲ್ಲುಗಳು ತುಂಬಿದ್ದು ವಾನಗಳು ಜಾರಿಕೊಂಡು ಹೋಗುವ ಸ್ಥಿತಿ ಇದೆ. ಅಲ್ಲದೆ ಏರಿಕೊಂಡು ಹೋಗುವ ವಾಹನಗಳು ಡಾಮರು ರಸ್ತೆಗೆ ಏರಲಾಗದೆ ಬಾಕಿಯಾಗುತಿದೆ. ಅದರಂತೆ ಮತ್ತೊಂದು ಬದಿಯಲ್ಲಿ ಅಭಿವೃದ್ಧಿಯಾಗದ ರಸ್ತೆಯಿಂದ ಕಾಂಕ್ರೀಟು ರಸ್ತೆಗೆ ಏರಬೇಕಾದರೆ ವಾಹನಗಳು ಹರ ಸಾಹಸ ಪಡಬೇಕಾಗಿದೆ. ಹೀಗೆ ದಿನಾಲು ಹರಸಾಹಸಪಟ್ಟು ವಾಹನಗಳ ಸಂಚಾರದ ಪರಿಣಾಮವಾಗಿ ನಿಯಂತ್ರಣ ತಪ್ಪುವ ವಾಹನಗಳು ಅಪಘಾತಕ್ಕೀಡಾಗುತ್ತದೆ.
ಕಳೆದ ಒಂದು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಇಲ್ಲಿ ಇದೇ ಪರಿಸ್ಥಿತಿಯಿದ್ದು ವಾಹನ ಸಂಚಾರಕ್ಕೆ ತೀವ್ರ ತೊಡಕಾಗಿದೆ. ಧೂಳು ತುಂಬಿ ಹರಿದು ನಾಮಾವಶೇಷವಾಗಿರುವ ಈ 200 ಮೀಟರ್ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ. ಅಪಘಾತಗಳು ಮಾಮೂಲಿಯಾಗಿರುವ ಇಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.