ಸುಳ್ಯ : ಘನತ್ಯಾಜ್ಯ ವಿಲೇವಾರಿ ಮತ್ತು ದಾರಿದೀಪ ನಿರ್ವಹಣೆಗೆ ಕೂಡಲೇ ಟೆಂಡರ್ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದ ಘಟನೆ ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಾರಿ ದೀಪ ನಿರ್ವಹಣೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಮುಂದಿನ ತಿಂಗಳಲ್ಲಿ 2013-14ನೇ ಸಾಲಿನ ಟೆಂಡರು ದರದಂತೆ ನಿರ್ವಹಣಾ ವೆಚ್ಚ ಪಾವತಿಸುವ ಬಗ್ಗೆ ಜಿಲ್ಲಾಧಿಕಾರಿಯವರ ಘಟನೋತ್ತರ ಮಂಜೂರಾತಿ ಪಡೆಯುವ ವಿಷಯ ಚರ್ಚೆಗೆ ಬಂದಾಗ ಹಿಂದಿನ ದರದಂತೆ ಪಾವತಿ ಮಾಡಿ ಹಿಂದಿನ ಗುತ್ತಿಗೆದಾರರನ್ನೇ ಮುಂದುವರಿಸುವುದು ಬೇಡ, ಕೂಡಲೇ ಹೊಸ ಟೆಂಡರ್ ನಡೆಸುವಂತೆ ಸದಸ್ಯರು ಒತ್ತಾಯಿಸಿದರು.
ಟೆಂಡರ್ ನಡೆಸದೆ ಗುತ್ತಿಗೆ ನೀಡಿದರೆ ಸರಿಯಾಗಿ ಕೆಲಸ ನಡೆಯುತ್ತಿಲ್ಲ. ಘನತ್ಯಾಜ್ಯ ವಿಲೇವಾರಿ ಮತ್ತು ದಾರಿದೀಪ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಆದುದರಿಂದ ಟೆಂಡರ್ ನಡೆಸಿ ಕೂಡಲೇ ಹೊಸ ಗುತ್ತಿಗೆದಾರರನ್ನು ನೇಮಿಸುವಂತೆ ಸದಸ್ಯರಾದ ಕೆ.ಎಸ್.ಉಮ್ಮರ್, ಗೋಪಾಲ ನಡುಬೈಲು, ಗೋಕುಲ್ದಾಸ್ ಮತ್ತಿತರರು ಒತ್ತಾಯಿಸಿದರು. 10 ದಿನದೊಳಗೆ ಟೆಂಡರ್ ಪ್ರಕ್ರಿಯೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕ ಇದೆ ಅದನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಕೈಗೊಳ್ಳಲು ಸದಸ್ಯರು ಒತ್ತಾಯಿಸಿದರು. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಸಗೀ ವಿನ್ಯಾಸಗಳ ಮತ್ತು ಏಕನಿವೇಶನಗಳಿಗೆ ಅಭಿವೃದ್ಧಿ ಶುಲ್ಕವನ್ನು ವಿಧಿಸುವ ಕುರಿತು ಚರ್ಚೆ ನಡೆಯಿತು. ಏಕನಿವೇಶನಗಳಿಗೆ ಅಭಿವೃದ್ಧಿ ಶುಲ್ಕ ವಿಧಿಸುವುದು ಸದ್ಯಕ್ಕೆ ಬೇಡ ಎಂದು ಅಧ್ಯಕ್ಷರು ಸಲಹೆ ನೀಡಿದರು. ಬಹುನಿವೇಶನಗಳಲ್ಲಿ 30 ಸೆಂಟ್ಸ್ಗಳಿಗಿಂತ ಮೇಲಿನ ಲೇಔಟ್ಗಳಿಗೆ ಶುಲ್ಕ ವಿಧಿಸಲು ನಿರ್ಧರಿಸಲಾಯಿತು.
ನಗರದಲ್ಲಿ ಕೋಳಿ ಅಂಗಡಿಗಳ ಪರವಾನಗಿ ನವೀಕರಿಸದಿರಲು ನಿರ್ಧರಿಸಲಾಯಿತು. ಕೆಎಫ್ಡಿಸಿ ವತಿಯಿಂದ ನಿರ್ಮಿಸುತ್ತಿರುವ ಹೊಸ ಕಟ್ಟಡ ನಿರ್ಮಾಣ ಪೂರ್ತಿಗೊಂಡ ಕೂಡಲೇ ಮೀನು ಮಾರುಕಟ್ಟೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಕೋಳಿ ಮಾರುಕಟ್ಟೆಯನ್ನು ಹಳೆ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು.
ಅಂಗವಿಕಲರ ಕಲ್ಯಾಣಕ್ಕಾಗಿ ಕಾದಿರಿಸಿದ ಶೇ.ಮೂರರ ಅನುದಾನ ಬಳಸಿ ಅಂಗವಿಕಲರಿಗೆ ಸಹಾಯ ಮಾಡಲು ನಗರ ಪಂಚಾಯಿತಿಯಲ್ಲಿಯೇ ಸೇವಾ ಕೇಂದ್ರವನ್ನು ತೆರೆಯಲು ನಿರ್ಧರಿಸಲಾಯಿತು. ಸೇವಾ ಕೇಂದ್ರ ತೆರೆದು ಅರ್ಹ ಫಲಾನುಭವಿಗಳನ್ನೇ ಅಯ್ಕೆ ಮಾಡಿ ಅಂಗವಿಕಲ ಅನುದಾನದ ವಿತರಣೆಗೆ ವ್ಯವಸ್ಥೆ ಮಾಡಲು ಸದಸ್ಯರು ಸೂಚಿಸಿದರು. ಅಂಗವಿಕಲ ಮತ್ತು ಬುದ್ಧಿ ಮಾಂದ್ಯರಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಸಹಾಯ ಧನವನ್ನು ವಿತರಿಸಲು ನಿರ್ಧರಿಸಲಾಯಿತು. ನಗರದಲ್ಲಿ ಆಸ್ತಿ ತೆರಿಗೆ ಆದಾಯ ಕೇವಲ 64 ಲಕ್ಷ ಎಂದು ಬಜೆಟ್ನಲ್ಲಿ ನಮೂದಿಸಿರುವುದನ್ನು ಸದಸ್ಯರು ಟೀಕಿಸಿದರು. ಸುಳ್ಯ ನಗರದಲ್ಲಿ ಮೂರು ಕೋಟಿಗಿಂತಲೂ ಅಧಿಕ ತೆರಿಗೆ ಬರಬೇಕಾದಷ್ಟು ಕಟ್ಟಡಗಳೂ, ವಾಣೀಜ್ಯ ಸಂಸ್ಥೆಗಳೂ ಇವೆ. ಆದರೆ ಸರಿಯಾದ ತೆರಿಗೆ ಸಂಗ್ರಹ ನಡೆಸದೇ ಇರುವುದರಿಂದ ನಗರ ಪಂಚಾಯಿತಿಗೆ ನಷ್ಟ ಉಂಟಾಗುತಿದೆ ಎಂದು ಸದಸ್ಯರಾದ ಕೆ.ಎಂ.ಮುಸ್ತಫಾ ಮತ್ತು ಗೋಕುಲ್ದಾಸ್ ದೂರಿದರು.
ನಗರೋತ್ಥಾನ ಯೋಜನೆಯಡಿಯಲ್ಲಿ ನಡೆಯುತ್ತಿರುವ ರಥಬೀದಿ ರಸ್ತೆ ಕಾಮಗಾರಿಯಲ್ಲಿ ರಸ್ತೆ ಬದಿಯಲ್ಲಿ ಇಂಟರ್ಲಾಕ್ ಹಾಕುವ ಕಾಮಗಾರಿ ಕೂಡಲೇ ಆರಂಭಿಸುವುದಾಗಿ ಇಂಜಿನಿಯರ್ಗಳು ತಿಳಿಸಿದರು. ರಸ್ತೆ ಬದಿಯಲ್ಲಿ 60 ಎಂ.ಎಂ.ನ ಇಂಟರ್ಲಾಕ್ನ ಬದಲು 80 ಎಂ.ಎಂ.ನ ಇಂಟರ್ಲಾಕ್ ಅಳವಡಿಸಲು ಹೊಸ ಕ್ರಿಯಾ ಯೋಜನೆ ತಯಾರಿಸಲಾಗಿದ್ದು ಅದಕ್ಕೆ ಅನುಮೋದನೆ ದೊರೆತಿದೆ. ರಸ್ತೆ ಬದಿಯ ಚರಂಡಿಯ ಮೇಲೆ ಅಳವಡಿಸಲಾದ ಸಿಮೆಂಟ್ ಸ್ಲಾಬ್ ಕೆಲವು ಕುಸಿದಿದ್ದು ಅದನ್ನು ಬದಲಿಸಿ ಹೊಸ ಸ್ಲಾಬ್ಗಳನ್ನು ಅಳವಡಿಸಲಾಗುವುದು. ಈ ಕಾಮಗಾರಿಯನ್ನು ಕೂಡಲೇ ನಡೆಸಿ ರಸ್ತೆ ಅಭಿವೃದ್ಧಿಯನ್ನು ಪೂರ್ತಿಗೊಳಿಸಲಾಗವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತೇಜಮೂರ್ತಿ ತಿಳಿಸಿದ್ದಾರೆ.ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.