ಲೋಕಸಭೆಯಲ್ಲಿ ಕೊನೆಗೂ ಪೌರತ್ವ (ತಿದ್ದುಪಡಿ) ಮಸೂದೆ ಅನುಮೋದನೆಗೊಂಡಿದೆ. ಮಸೂದೆಯ ಪರವಾಗಿ 311 ಮತ್ತು ವಿರುದ್ಧವಾಗಿ 80 ಮತಗಳು ಬಿದ್ದಿವೆ. ಮತದಾನದ ಸಂದರ್ಭದಲ್ಲಿ ಒಟ್ಟು 391 ಸದಸ್ಯರು ಹಾಜರಿದ್ದರು. ಕಾಂಗ್ರೆಸ್, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳು ಈ ಮಸೂದೆಗೆ ತೀವ್ರತರನಾದ ವಿರೋಧವನ್ನು ವ್ಯಕ್ತಪಡಿಸಿದವು. ಆದರೂ ಬಿಜೆಪಿ ಸರ್ಕಾರದ ಚುನಾವಣಾ ಪ್ರಣಾಳಿಕೆಯ ಅತಿ ಮುಖ್ಯ ಭಾಗವಾಗಿದ್ದ ಈ ಮಸೂದೆಯನ್ನು ಅನುಷ್ಠಾನಗೊಳಿಸಲು ನರೇಂದ್ರ ಮೋದಿ ಸರ್ಕಾರ ಅತ್ಯಂತ ಬದ್ಧತೆಯನ್ನು ಪ್ರದರ್ಶಿಸಿದೆ. ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ನಿರಾಶ್ರಿತ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ತರಲಾದ ಅಂತಹ ಅತ್ಯಂತ ಮಹತ್ವದ ಮಸೂದೆ ಇದಾಗಿದೆ. ತಾವು ಹುಟ್ಟಿದ ಧರ್ಮವನ್ನು ಪಾಲಿಸಿದ ಕಾರಣದಿಂದಾಗಿ ದೌರ್ಜನ್ಯಕ್ಕೀಡಾಗಿ ಪಲಾಯನ ಮಾಡಿ ಭಾರತದ ಆಶ್ರಯವನ್ನು ಬಯಸುತ್ತಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ, ಪಾರ್ಸಿ ಧರ್ಮೀಯರಿಗೆ ಭಾರತದ ಪೌರತ್ವವನ್ನು ಒದಗಿಸುವ ಉದ್ದೇಶವನ್ನು ಈ ಮಸೂದೆ ಒಳಗೊಂಡಿದೆ.
ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತು ಮತ್ತು ಸಂಸತ್ತಿನ ಹೊರಗಡೆಯೂ ಭಾರೀ ಚರ್ಚೆಗಳು ನಡೆದಿವೆ ಮತ್ತು ನಡೆಯುತ್ತಲೇ ಇದೆ. ಈ ಮಸೂದೆಯಿಂದ ಯಾಕೆ ಮುಸ್ಲಿಮರನ್ನು ಹೊರಗಿಡಲಾಗಿದೆ ಎಂಬುದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಮುಸ್ಲಿಮರನ್ನು ಗುರಿಯಾಗಿಸಿ ಈ ಮಸೂದೆಯನ್ನು ತರಲಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಇನ್ನೂ ಕೆಲವರು ನಿರ್ದಿಷ್ಟ ಧರ್ಮಕ್ಕೆ ಮೀಸಲಾಗಿ ಮಸೂದೆಯನ್ನು ತರುವುದು ಸಂವಿಧಾನ ಬಾಹಿರ ಎಂಬ ವಾದವನ್ನು ಮಂಡಿಸಿದ್ದಾರೆ. ಇಂತಹ ಪ್ರಶ್ನೆಗಳನ್ನು ಎತ್ತಿದವರಲ್ಲಿ ಕಾಂಗ್ರೆಸ್ಸಿಗರು ಮತ್ತು ಟಿಎಂಸಿ ಪಕ್ಷದವರೇ ಹೆಚ್ಚಿದ್ದಾರೆ ಎಂಬುದು ಉಲ್ಲೇಖನೀಯ. ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಮಸೂದೆಗೆ ವಿರೋಧ ವ್ಯಕ್ತಪಡಿಸುವವರು ಮೊದಲು ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನಗಳ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಈ ಮೂರು ರಾಷ್ಟ್ರಗಳು ಕಟ್ಟರ್ ಇಸ್ಲಾಮಿಕ್ ರಾಷ್ಟ್ರಗಳಾಗಿವೆ. ಇಲ್ಲಿನ ರಾಷ್ಟ್ರ ಧರ್ಮ ಇಸ್ಲಾಂ. ಇತರ ಧರ್ಮದ ನಾಗರಿಕರನ್ನು ಇಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತದೆ. ಈ ರಾಷ್ಟ್ರಗಳಲ್ಲಿ ಮುಸ್ಲಿಮರು ತಮ್ಮ ಧರ್ಮದ ಕಾರಣಕ್ಕಾಗಿ ಎಂದಿಗೂ ಕಿರುಕುಳ ಅಥವಾ ದೌರ್ಜನ್ಯವನ್ನು ಎದುರಿಸುವುದಿಲ್ಲ. ಅವರ ವಿರುದ್ಧ ಯಾವುದೇ ರೀತಿಯ ಜನಾಂಗೀಯ ದಾಳಿಗಳು ನಡೆಯುವುದಿಲ್ಲ. ಅವರ ಧಾರ್ಮಿಕ ರಕ್ಷಣೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಮತ್ತು ಸೌಲಭ್ಯಗಳನ್ನು ಆ ರಾಷ್ಟ್ರ ಅವರಿಗೆ ನೀಡಿದೆ. ಆದರೆ ಇಲ್ಲಿ ನೆಲೆಸಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ, ಪಾರ್ಸಿ ಧರ್ಮೀಯರು ಹಲವು ರೀತಿಯ ಧಾರ್ಮಿಕ ದೌರ್ಜನ್ಯಗಳನ್ನು, ನಿಂದನೆಗಳನ್ನು ಅನುಭವಿಸುತ್ತಿದ್ದಾರೆ. ಅಮಿತ್ ಶಾ ಅವರು ಹೇಳಿದಂತೆ, ಈ ಮೂರು ರಾಷ್ಟ್ರಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ತೀವ್ರಗತಿಯಲ್ಲಿ ಕುಸಿಯುತ್ತಿದೆ. ಇವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ, ದೌರ್ಜನ್ಯಕ್ಕೆ ಈಡು ಮಾಡಲಾಗುತ್ತಿದೆ, ಅಪಹರಿಸಿ ಹತ್ಯೆ ಮಾಡಲಾಗುತ್ತಿದೆ. ಅದರಲ್ಲೂ ಇಸ್ಲಾಂ ಉಗ್ರವಾದ ತೀವ್ರ ಸ್ವರೂಪದಲ್ಲಿರುವ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನಗಳಲ್ಲಿ ಹಿಂದೂಗಳ ಪರಿಸ್ಥಿತಿ ಅತ್ಯಂತ ಶೋಚನೀಯ ಮಟ್ಟದಲ್ಲಿ ಇದೆ. ಈ ಮೂರು ರಾಷ್ಟ್ರಗಳಿಂದ ಅನೇಕ ಸಂಖ್ಯೆಯ ಅಲ್ಪಸಂಖ್ಯಾತರು ಭಾರತಕ್ಕೆ ಬಂದು ಆಶ್ರಯವನ್ನು ಬಯಸುತ್ತಿದ್ದಾರೆ. ನಮ್ಮ ದೇಶಕ್ಕೆ ನಾವು ಎಂದಿಗೂ ಮರಳಲಾರೆವು, ಅಲ್ಲಿನ ದೌರ್ಜನ್ಯಗಳನ್ನು ಸಹಿಸಲು ನಮಗೆ ಸಾಧ್ಯವಿಲ್ಲ, ನಮಗೆ ಆಶ್ರಯ ನೀಡಿ ಎಂದು ಭಾರತವನ್ನು ಇವರುಗಳು ಪರಿಪರಿಯಾಗಿ ಅಂಗಲಾಚುತ್ತಿದ್ದಾರೆ. ಹೀಗಿರುವಾಗ ಮಾನವೀಯ ಆಧಾರದಲ್ಲಿ ಅವರಿಗೆ ಆಶ್ರಯ ನೀಡಿ ಪೋಷಿಸಬೇಕಾದ ಹೊಣೆ ಭಾರತದ್ದಾಗಿದೆ.
1947ರಲ್ಲಿ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಯಿತು. ಮುಸ್ಲಿಮರು ಧರ್ಮದ ಹೆಸರಿನಲ್ಲಿ ಪಾಕಿಸ್ಥಾನವನ್ನು ಸೃಷ್ಟಿಸಿದರು. ಆದರೆ ಈ ವೇಳೆ ಭಾರತ ಧರ್ಮ ನಿರ್ಲಿಪ್ತ ರಾಷ್ಟ್ರವಾಗಿ ಇರುವ ನಿರ್ಧಾರವನ್ನು ಕೈಗೊಂಡಿತು. ಹೀಗಾಗಿ ಹಿಂದುಗಳಿಗೆ ತಮ್ಮದೇ ಆದ ರಾಷ್ಟ್ರವನ್ನು ಹೊಂದುವ ಅವಕಾಶ ತಪ್ಪಿಹೋಯಿತು. 1951 ರಲ್ಲಿ ಭಾರತದಲ್ಲಿ ಇದ್ದ ಮುಸ್ಲಿಂ ಜನಸಂಖ್ಯೆ ಶೇಕಡಾ 9, ಆದರಿಂದು ಅದು ಶೇಕಡ 16 ಕ್ಕೆ ಏರಿಕೆಯಾಗಿದೆ. ಅದೇ ಪಾಕಿಸ್ಥಾನದಲ್ಲಿ 1947 ರಲ್ಲಿ ಇದ್ದ ಹಿಂದೂ ಜನಸಂಖ್ಯೆ ಶೇ.16, ಈಗ ಅಲ್ಲಿರುವುದು ಶೇ.1.6ರಷ್ಟು ಹಿಂದೂಗಳು ಮಾತ್ರ. ಹಿಂದೂಗಳ ಜನಸಂಖ್ಯೆ ಅಲ್ಲಿ ಕ್ಷಿಪ್ರಗತಿಯಲ್ಲಿ ಇಳಿಮುಖವಾಗುತ್ತಾ ಬಂದಿದೆ. ಬಾಂಗ್ಲಾದೇಶದಲ್ಲಿ 1974 ರಲ್ಲಿ ಶೇ. 15 ರಷ್ಟು ಹಿಂದೂಗಳು ಇದ್ದರು, ಆದರೆ ಈಗ ಅಲ್ಲಿ ಇರುವುದು ಕೇವಲ ಶೇ. 8ರಷ್ಟು ಹಿಂದೂಗಳು ಮಾತ್ರ.
70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಪಾಕಿಸ್ಥಾನದಿಂದ ದೌರ್ಜನ್ಯಕ್ಕೊಳಗಾಗಿ ಓಡಿ ಬಂದ ಲಕ್ಷಾಂತರ ಹಿಂದುಗಳ ಬಗ್ಗೆ ಮೌನವನ್ನು ವಹಿಸಿತ್ತು. ಅವರ ಘನತೆಯುತ ಬದುಕಿಗೆ ಬೇಕಾದ ಯಾವುದೇ ಸೌಕರ್ಯವನ್ನು ಅದು ನೀಡಲಿಲ್ಲ. ಆದರೀಗ ಆ ಪಕ್ಷ ಪೌರತ್ವ ತಿದ್ದುಪಡಿ ಮಸೂದೆಯನ್ನು ಧರ್ಮದ ವಿಷಯವಾಗಿ ಪರಿವರ್ತಿಸಿ ದೊಡ್ಡಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ. ಮಸೂದೆಗೆ ಮುಸ್ಲಿಂ ವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಆದರೆ ಇಸ್ಲಾಮ್ ರಾಷ್ಟ್ರದ ಅಲ್ಪಸಂಖ್ಯಾತ ಧರ್ಮೀಯರನ್ನು ರಕ್ಷಣೆ ಮಾಡುವ ಸಲುವಾಗಿ ತರಲಾದ ಮಸೂದೆ ಇದು ಎಂಬುದನ್ನು ಆ ಪಕ್ಷಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಮುಸ್ಲಿಂ ರಾಷ್ಟ್ರದಲ್ಲಿ ಮುಸ್ಲಿಮರೇ ಹೇಗೆ ನಿರಾಶ್ರಿತರಾಗುತ್ತಾರೆ ಎಂಬ ಸಾಮಾನ್ಯ ವಿಷಯವು ಅದಕ್ಕೆ ಅರ್ಥವಾಗುತ್ತಿಲ್ಲ, ಅರ್ಥವಾದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಆ ಪಕ್ಷ ಇಲ್ಲ. ಸದಾ ಓಲೈಕೆ ರಾಜಕಾರಣದ ಮೂಲಕವೇ ಅಧಿಕಾರದ ಹೆಬ್ಬಾಗಿಲನ್ನು ಪ್ರವೇಶಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗ ದೇಶವ್ಯಾಪಿಯಾಗಿ ಕಡೆಗಣನೆಗೆ ಒಳಗಾಗಿರುವುದಕ್ಕೆ ಅದರ ಈ ಮನಸ್ಥಿತಿಯೇ ಕಾರಣ.
ಆದರೆ ನರೇಂದ್ರ ಮೋದಿ ಸರ್ಕಾರ ನಿರಾಶ್ರಿತರ ಸಬಲೀಕರಣದ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನಿಟ್ಟಿದೆ. ಕಾಂಗ್ರೆಸ್ ಪಕ್ಷದ ಯಾವುದೇ ಆರೋಪ ಕುತಂತ್ರಗಳಿಗೆ ಅದು ಜಗ್ಗುತ್ತಿಲ್ಲ ಎಂಬುದು ಸಮಾಧಾನಕರವಾದ ಸಂಗತಿಯಾಗಿದೆ. ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ನಿರ್ಗತಿಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ನರೇಂದ್ರ ಮೋದಿ ಸರ್ಕಾರದ ದೃಢ ಹೆಜ್ಜೆಯ ಫಲವಾಗಿ ಶೀಘ್ರದಲ್ಲೇ ನಿರಾಶ್ರಿತ ಜನರು ಭಾರತದ ಪೌರತ್ವವನ್ನು ಪಡೆದುಕೊಳ್ಳಲಿದ್ದಾರೆ. ಅವರಿಗೆ ಇತರರಂತೆ ಉದ್ಯೋಗ, ಆರೋಗ್ಯ ಸೇವೆ, ಸಕಲ ಸವಲತ್ತುಗಳು ಸಿಗಲಿದೆ. ತಮ್ಮ ಧರ್ಮದ ಕಾರಣದಿಂದಾಗಿ ಅವರಿನ್ನು ಕಷ್ಟಪಡಬೇಕಾದ ಅನಿವಾರ್ಯತೆ ಇರುವುದಿಲ್ಲ. ಭಾರತದ ಇತರ ಪ್ರಜೆಗಳಂತೆ ತಮ್ಮ ಧರ್ಮವನ್ನು ಅನುಸರಿಸುವ ಅವಕಾಶ ಅವರಿಗೆ ಸಿಗಲಿದೆ. ಮಾನವೀಯ ನೆಲೆಗಟ್ಟಿನಲ್ಲಿ ಭಾರತ ತೆಗೆದುಕೊಂಡ ನಿರ್ಧಾರ ಭವಿಷ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೊಸ ಪರಿಭಾಷೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.