ಔಪಚಾರಿಕ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ, ವಿಶೇಷವಾಗಿ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ‘ಒಂದು ರಾಷ್ಟ್ರ, ಒಂದು ವೇತನ ದಿನ’ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರವು ಯೋಜಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಸೆಂಟ್ರಲ್ ಅಸೋಸಿಯೇಷನ್ ಆಫ್ ಪ್ರೈವೇಟ್ ಸೆಕ್ಯುರಿಟಿ ಇಂಡಸ್ಟ್ರಿ (ಸಿಎಪಿಎಸ್ಐ) ಆಯೋಜಿಸಿದ ‘ಸೆಕ್ಯುರಿಟಿ ಲೀಡರ್ಶಿಪ್ ಸಮಿಟ್ 2019’ ಅನ್ನು ಉದ್ದೇಶಿಸಿ ಮಾತನಾಡಿದ ಗಂಗ್ವಾರ್, “ಕಾರ್ಮಿಕರಿಗೆ ವೇತನವು ಪ್ರತಿ ತಿಂಗಳು ಸಕಾಲಿಕವಾಗಿ ಪಾವತಿಯಾಗುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ಕ್ಷೇತ್ರಗಳಲ್ಲಿ ದೇಶವ್ಯಾಪಿಯಾಗಿ ಏಕ ವೇತನ ದಿನವನ್ನು ಜಾರಿಗೆ ತರಬೇಕು. ಈ ಕಾನೂನನ್ನು ಶೀಘ್ರದಲ್ಲೇ ಅಂಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ. ಅಂತೆಯೇ, ನಾವು ಕಾರ್ಮಿಕರ ಉತ್ತಮ ಜೀವನೋಪಾಯವನ್ನು ಕಾಪಾಡುವ ಕ್ಷೇತ್ರಗಳಾದ್ಯಂತ ಏಕರೂಪದ ಕನಿಷ್ಠ ವೇತನವನ್ನು ಸಹ ಜಾರಿಗೆ ತರುವತ್ತ ಚಿಂತನೆ ನಡೆಸುತ್ತಿದ್ದೇವೆ” ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೋದಿ ಸರ್ಕಾರವು ಕಾರ್ಮಿಕ ಸುಧಾರಣೆಗಳ ವಿಷಯವನ್ನು ಕೈಗೆತ್ತಿಕೊಂಡಿದೆ ಎಂಬುದು ಗಮನಾರ್ಹವಾಗಿ ಉಲ್ಲೇಖಿಸಲ್ಪಡುವ ವಿಷಯವಾಗಿದೆ. ಭಾರತವು ಹಲವಾರು ಕಾರ್ಮಿಕ ಕಾನೂನುಗಳ ಸಂಕೀರ್ಣತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಈಗ ಸರಳವಾದ ಕಾರ್ಮಿಕ ಕಾನೂನುಗಳು ಮತ್ತು ನಿಯಮಗಳನ್ನು ಖಚಿತಪಡಿಸಿಕೊಳ್ಳಲು, ಸಮಗ್ರ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ಕಾನೂನುಗಳನ್ನು ಏಕೀಕರಿಸಲು ಕೇಂದ್ರವು ಪ್ರಯತ್ನಿಸುತ್ತಿದೆ. ಈಗಿನಂತೆ, ಸರ್ಕಾರವು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ (OSH) ಸಂಹಿತೆ ಮತ್ತು ವೇತನಗಳ ಸಂಹಿತೆಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯಲ್ಲಿದೆ. ಸಂಸತ್ತು ಈಗಾಗಲೇ ವೇತನ ಸಂಹಿತೆಯನ್ನು ಅಂಗೀಕರಿಸಿದೆ. ವೇತನಗಳ ಸಂಹಿತೆಯು ನಾಲ್ಕು ಕಾಯಿದೆಗಳನ್ನು ಬದಲಾಯಿಸಲಾಗುತ್ತಿದೆ- ವೇತನ ಪಾವತಿ ಕಾಯ್ದೆ, 1936; ಕನಿಷ್ಠ ವೇತನ ಕಾಯ್ದೆ, 1948; ಪಾವತಿ ಬೋನಸ್ ಕಾಯ್ದೆ, 1965; ಮತ್ತು ಸಮಾನ ಸಂಭಾವನೆ ಕಾಯ್ದೆ, 1976. ಈ ಕಾಯ್ದೆಗಳು ವೇತನ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಕಾರ್ಮಿಕ ಕಾರ್ಯದರ್ಶಿ ಹಿರಾಲಾಲ್ ಸಮರಿಯಾ ಅವರು ಹೇಳುವಂತೆ, “ಪ್ರಸ್ತುತ 60% ಕಾರ್ಮಿಕರು ಕನಿಷ್ಠ ವೇತನ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ ತರಲಾಗುತ್ತಿರುವ ಹೊಸ ಕಾನೂನು ಇಡೀ 50 ಕೋಟಿ ಉದ್ಯೋಗಿಗಳಿಗೆ ಕನಿಷ್ಠ ವೇತನದ ಹಕ್ಕನ್ನು ನೀಡುತ್ತದೆ”. ಆದ್ದರಿಂದ ಕಾರ್ಮಿಕ ಕಾನೂನುಗಳ ಏಕೀಕರಣವು ದೇಶದ ಕಾರ್ಮಿಕ ಕಾನೂನುಗಳಲ್ಲಿ ಸರಳತೆ ಮತ್ತು ವ್ಯಾಪಕ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಇದಲ್ಲದೆ, ಒಂದು ನಿರ್ದಿಷ್ಟ ಉದ್ಯಮ ಅಥವಾ ರಾಜ್ಯಕ್ಕೆ ಕನಿಷ್ಠ ವೇತನವನ್ನು ಕುಗ್ಗಿಸಲು ಸಾಧ್ಯವಾಗದಂತಹ ಏಕರೂಪದ ವೇತನವನ್ನು ಸಹ ಸಂಹಿತೆ ಪ್ರಸ್ತಾಪಿಸುತ್ತದೆ. ಪ್ರಸ್ತುತ, ವಿವಿಧ ರಾಜ್ಯಗಳಲ್ಲಿ ನಿಗದಿಪಡಿಸಿದ ವಿಭಿನ್ನ ಕನಿಷ್ಠ ವೇತನವನ್ನು ಹೊಂದಿರುವ ಸಂಕೀರ್ಣ ಕನಿಷ್ಠ ವೇತನ ವ್ಯವಸ್ಥೆ ಇದೆ ಮತ್ತು ವಿವಿಧ ಕೈಗಾರಿಕೆಗಳಿಗೆ ಕನಿಷ್ಠ ವೇತನವನ್ನು ಮತ್ತಷ್ಟು ವಿಂಗಡಿಸಲಾಗಿದೆ.
ಅಂತೆಯೇ, OSH ಕೋಡ್ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳೊಂದಿಗೆ ವ್ಯವಹರಿಸುವ ಹಲವು ಕಾರ್ಮಿಕ ಕಾನೂನುಗಳ ಯುಗವನ್ನು ಕೊನೆಗೊಳಿಸಲಿದೆ. ಈ ಕಾನೂನುಗಳು ಕಾರ್ಯಗತಗೊಂಡ ನಂತರ, ಈ ವಿಷಯದೊಂದಿಗೆ ವ್ಯವಹರಿಸುವ 13 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಂದೇ ಸಂಹಿತೆಯಲ್ಲಿ ಏಕೀಕರಿಸಲಾಗುತ್ತದೆ. ಉದ್ಯೋಗದಾತರಿಂದ ನೇಮಕಾತಿ ಪತ್ರದ ಸಮಸ್ಯೆಗಳು, ಕಾರ್ಮಿಕರ ವಾರ್ಷಿಕ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಂಹಿತೆಯಡಿಯಲ್ಲಿ ಎಲ್ಲಾ ರೀತಿಯ ಕಾರ್ಮಿಕರ ವ್ಯಾಪ್ತಿಯನ್ನು ವಿಸ್ತರಿಸುವುದು ಮುಂತಾದ ಅನೇಕ ಹೊಸ ಉಪಕ್ರಮಗಳನ್ನು ಇದು ಒಳಗೊಂಡಿದೆ.
ಇಂತಹ ಕಾರ್ಮಿಕ ಕಾನೂನು ಸುಧಾರಣೆಗಳ ಕುರಿತು ಮಾತನಾಡಿದ ಗಂಗ್ವಾರ್, “ನಾವು ಕಾರ್ಮಿಕ ಕಾನೂನುಗಳನ್ನು ಸುಧಾರಿಸಲು 44 ಸಂಕೀರ್ಣ ಕಾರ್ಮಿಕ ಕಾನೂನುಗಳನ್ನು ಕೈಗೆತ್ತಿಕೊಂಡಿದ್ದೇವೆ. ಈ ಕಾನೂನುಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಉಪಯುಕ್ತವಾಗಿಸಲು ನಾವು ಎಲ್ಲಾ ಪಾಲುದಾರರೊಂದಿಗೆ ಮಾತನಾಡುತ್ತಿದ್ದೇವೆ. ಅದೇ ರೀತಿ, ವ್ಯವಹಾರವನ್ನು ಸುಲಭಗೊಳಿಸಲು ವಿವಿಧ ವಲಯಗಳಿಗೆ ನಾವು ‘ಏಕ ಪುಟ’ ಕಾರ್ಯವಿಧಾನವನ್ನು ಸಿದ್ಧಪಡಿಸುತ್ತಿದ್ದೇವೆ. ಯಾವುದೇ ಭೌತಿಕ ಮಧ್ಯಪ್ರವೇಶ ಇಲ್ಲದೆ ಎಲ್ಲಾ ಸಮಸ್ಯೆಗಳನ್ನು 48 ಗಂಟೆಗಳೊಳಗೆ ಪರಿಹರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಕುಂದುಕೊರತೆ ಪರಿಹಾರದ ಆನ್ಲೈನ್ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದ್ದೇವೆ” ಎಂದಿದ್ದಾರೆ.
ವೇತನ ಸಂಹಿತೆ ಮತ್ತು OSH ಕೋಡ್ ಅನ್ನು ಹೊರತುಪಡಿಸಿ, ಮೋದಿ ಸರ್ಕಾರವು ಸಾಮಾಜಿಕ ಭದ್ರತೆ ಕುರಿತ ಸಂಹಿತೆಯನ್ನೂ ತರಲು ನೋಡುತ್ತಿದೆ, ಇದು ವಿವಿಧ ಕೈಗಾರಿಕೆಗಳಲ್ಲಿರುವ ಕಾರ್ಮಿಕರ ಸಾಮಾಜಿಕ ಭದ್ರತೆ ಪ್ರಯೋಜನಗಳಿಗೆ ಸಂಬಂಧಿಸಿದ ಎಂಟು ವಿಭಿನ್ನ ಕಾನೂನುಗಳನ್ನು ಏಕೀಕರಿಸುತ್ತದೆ.
ಸಂಹಿತೆಗಳ ಜಾರಿಗೊಳಿಸುವಿಕೆಯು ಕಾರ್ಮಿಕ ಕಾನೂನುಗಳ ಅನುಸರಣೆಯನ್ನು ಹೆಚ್ಚು ಸುಲಭ ಮತ್ತು ಸರಳವಾಗಿಸುತ್ತದೆ. ಕಂಪೆನಿಗಳಿಗೆ ಇನ್ನು ಮುಂದೆ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಅನೇಕ ನೋಂದಣಿಗಳು ಅಗತ್ಯವಿರುವುದಿಲ್ಲ, ಏಕೆಂದರೆ ಮೋದಿ ಸರ್ಕಾರವು ಒಂದು ಪರವಾನಗಿ, ಒಂದು ನೋಂದಣಿ ಮತ್ತು ಸಂಸ್ಥೆಗಳಿಗೆ ಒಂದು ರಿಟರ್ನ್ ಅನ್ನು ಪ್ರಸ್ತಾಪಿಸುತ್ತಿದೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ (OSHW), 2019 ರ ಕೋಡ್ ಅನ್ನೇ ತೆಗೆದುಕೊಂಡರೂ, ಈ ವಿಷಯವನ್ನು ಅನುಸರಿಸಲು ಸಂಸ್ಥೆಗಳಿಗೆ ಒಂದೇ ನೋಂದಣಿಯ ಅಗತ್ಯವಿರುತ್ತದೆ. ಪ್ರಸ್ತುತ, ಇವುಗಳಿಗೆ ಅನುಸರಿಸಲು 13 ಕೇಂದ್ರ ಕಾರ್ಮಿಕ ಕಾನೂನುಗಳಿವೆ ಮತ್ತು ಆರು ವಿಭಿನ್ನ ನೋಂದಣಿಗಳ ಅಗತ್ಯವಿದೆ.
ಮೋದಿ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ, ಭಾರತದ ‘ಸುಲಲಿತ ವ್ಯಾಪಾರ’ ಶ್ರೇಯಾಂಕಗಳಲ್ಲಿ ನಿರಂತರ ಸುಧಾರಣೆಯಾಗಿದೆ ಎಂಬುದು ಗಮನಾರ್ಹ ವಿಷಯ. 2014ರಲ್ಲಿ ಇದ್ದ 142 ನೇ ಶ್ರೇಯಾಂಕಕ್ಕೆ ಹೋಲಿಸಿದರೆ ಈ ವರ್ಷ ಶ್ರೇಯಾಂಕ 63 ನೇ ಸ್ಥಾನಕ್ಕೆ ತಲುಪಿದೆ. ಇದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮತ್ತು ವಂಚನೆ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ನಂತಹ ಸುಧಾರಣೆಗಳ ಪರಿಣಾಮವಾಗಿದೆ. ಪ್ರಸ್ತುತ, ಭಾರತವು ಪಟ್ಟಿಯಲ್ಲಿ ಅಗ್ರ 50 ದೇಶಗಳನ್ನು ಪ್ರವೇಶಿಸುವ ಗುರಿಯನ್ನು ಹೊಂದಿದೆ, ಮತ್ತು ತನ್ನ ಹಳೆಯ ಮತ್ತು ಸಂಕೀರ್ಣ ಕಾರ್ಮಿಕ ಕಾನೂನುಗಳನ್ನು ಸುಧಾರಿಸುವುದರಿಂದ ಈ ಗುರಿಯನ್ನು ಶೀಘ್ರದಲ್ಲೇ ಸಾಧಿಸಬಹುದಾಗಿದೆ.
ಇತ್ತೀಚಿನ ತೆರಿಗೆ ಕಡಿತವು ಈಗಾಗಲೇ ಭಾರತವನ್ನು ಹೂಡಿಕೆದಾರರಿಗೆ ಬಹಳ ಪ್ರಮುಖ ಆಯ್ಕೆಯನ್ನಾಗಿ ಮಾಡಿದೆ. ಮೋದಿ ಸರ್ಕಾರವು ಜಾರಿಗೆ ತಂದ ದೊಡ್ಡ ಮಟ್ಟದ ಕಾರ್ಪೊರೇಟ್ ತೆರಿಗೆ ವಿನಾಯಿತಿಯು ಈಗಾಗಲೇ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಕಾರ್ಪೊರೇಟ್ ಆಡಳಿತಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಮೋದಿ ಸರ್ಕಾರವು ಕಾರ್ಮಿಕ ಕಾನೂನು ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ತಂದರೆ ಅದು ಭಾರತಕ್ಕೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.