ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕೇಂದ್ರ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹುತಾತ್ಮರ ಕುಟುಂಬಗಳ ಮೂಲ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಡಾಟಾಬೇಸ್ ಅನ್ನು ನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು.
“ಹಿರಿಯ ಅಧಿಕಾರಿಗಳು ಹುತಾತ್ಮರ ಕುಟುಂಬಗಳಿಗೆ ಭೇಟಿ ನೀಡಬೇಕು ಮತ್ತು ಅವರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಅವರೊಂದಿಗೆ ಸಮಯ ಕಳೆಯಬೇಕು. ಈ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಗೃಹ ಸಚಿವರು ನಿರ್ದೇಶನ ನೀಡಿದರು.
“ಹುತಾತ್ಮರ ಕುಟುಂಬಗಳ ಡಾಟಾಬೇಸ್ ಅನ್ನು ಮಾಡಬೇಕು, ಇದರಿಂದ ಅವರ ಮೂಲ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ” ಎಂದು ಶಾ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಯೋಧರನ್ನು ಕಷ್ಟಕರವಾದ ಭೂ ಪ್ರದೇಶಗಳಲ್ಲಿ ಸುದೀರ್ಘ ಕಾಲದವರೆಗೆ ನಿಯೋಜಿಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು, ಯೋಧರಿಗೆ ಕುಟುಂಬದವರೊಂದಿಗೆ ಕಾಲ ಕಳೆಯಲು ನೀಡಬೇಕಾದ ಹಲವು ಅವಕಾಶಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಿಆರ್ಪಿಎಫ್ ಮತ್ತು ಅದರ ನಿವಾಸ ಕ್ವಾಟ್ರಸ್ಗಳಲ್ಲಿ ಮೂಲಸೌಕರ್ಯ ನಿರ್ಮಾಣ ಮಾಡುವ ಬಗ್ಗೆ, ಅವುಗಳನ್ನು ಸುಧಾರಣೆಗೊಳಿಸು ಬಗ್ಗೆ, ಕರ್ತವ್ಯದ ಸ್ಥಳಗಳಲ್ಲಿ ಕ್ವಾಟ್ರಸ್ ನಿರ್ಮಾಣ ಮಾಡುವ ಬಗ್ಗೆ ಅವರು ಚರ್ಚೆಗಳನ್ನು ನಡೆಸಿದರು.
ಕಾರ್ಯಾಚರಣೆಯ ಉದ್ದೇಶಗಳಿಗೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಗುರುತಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಅಲ್ಲದೇ ಮೇಕ್-ಇನ್-ಇಂಡಿಯಾ ಪ್ರಯತ್ನದ ಬಗ್ಗೆಯೂ ಒತ್ತಿ ಹೇಳಿದ ಅವರು, ಖಾದಿ ಮತ್ತು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಬಳಸಲು ಸೇನಾಪಡೆಗೆ ಕರೆಯನ್ನು ನೀಡಿದರು.
ಮುಂದಿನ ಆರು ತಿಂಗಳಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧ ಪರಿಣಾಮಕಾರಿ ಮತ್ತು ನಿರ್ಣಾಯಕ ಅಭಿಯಾನವನ್ನು ಕೈಗೊಳ್ಳುವಂತೆ ಗೃಹ ಸಚಿವರು ಸಿಆರ್ಪಿಎಫ್ಗೆ ನಿರ್ದೇಶನ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದೂ ಅವರು ನಿರ್ದೇಶನ ನೀಡಿದರು.
ಗೃಹ ಸಚಿವರಿಗೆ ಸಿಆರ್ಪಿಎಫ್ ಮಹಾನಿರ್ದೇಶಕ ರಾಜೀವ್ ರಾಯ್ ಭಟ್ನಾಗರ್ ವಿವರವಾದ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸಚಿವಾಲಯದ ಉನ್ನತ ಅಧಿಕಾರಿಗಳು, ಸಿಆರ್ಪಿಎಫ್ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.