“ಮಗು ಸಾಮಾನ್ಯನಲ್ಲ, ಧರ್ಮ ಸಿಂಹಾಸನದ ಮೇಲೆ ವಿರಾಜಮಾನವಾಗಬಲ್ಲ ಲಕ್ಷಣಗಳು ಈ ಮಗುವಿಗಿವೆ. ಹಿಂದು, ಮುಸ್ಲಿಂ ಎರಡೂ ಜನಾಂಗದವರು ಇವನನ್ನು ಪೂಜಿಸುತ್ತಾರೆ”.
ನಾನಕನ ಮನೆತನದ ಪುರೋಹಿತ, ಜ್ಯೊತಿಷಿ ಹರದಯಾಲ ತೆಗೆದ ಉದ್ಗಾರ ಇದು. ನಾನಕನ ಜನನ, ಪಂಜಾಬ ಪ್ರಾಂತದ ತಲವಂಡಿ (ಈಗ ನಾನಕಸಾಹಿಬ್) ಗ್ರಾಮದಲ್ಲಿ, 1469 ಏಪ್ರಿಲ್ ತಿಂಗಳ 15 ರಂದು. (ಆದರೆ ಇವರ ಜನ್ಮ ದಿನವನ್ನು ನವೆಂಬರ್ನಲ್ಲಿ ಆಚರಿಸುವುದು ವಾಡಿಕೆಯಾಗಿದೆ); ಅವನ ತಂದೆಯ ಹೆಸರು ಮೆಹ್ತಾ ಕಾಲೂ. ತಾಯಿಯ ಹೆಸರು ತೃಪ್ತಾ. ಅವರು ಹಿಂದು ಕ್ಷತ್ರೀಯ ಬೇಡಿ ಮನೆತನಕ್ಕೆ ಸೇರಿದವರು. ತಂದೆ ಆ ಹಳ್ಳಿಯ ಕಂದಾಯಾಧಿಕಾರಿ ನಾನಕನಿಗೆ ಒಬ್ಬ ಅಕ್ಕ, ಒಬ್ಬ ಅಣ್ಣ ಇದ್ದರು.
ಬಾಲ್ಯ–ವಿದ್ಯಾಭ್ಯಾಸ
“ಬೆಳೆಯಸಿರಿ ಮೊಳಕೆಯಲ್ಲಿ ” ಎಂಬ ಅನುಭವ ವಾಣಿ ಸತ್ಯ. ನಾನಕನು ಬಾಲಕನಾಗಿದ್ದಾಗ, ತನ್ನ ಆಟಿಕೆಯ ಸಾಮಾನು, ತನಿಸುಗಳನ್ನು ಜೊತೆಗಾರರಿಗೆ ಕೊಟ್ಟು ಕುಣಿದದ್ದೇ. ಅದನ್ನು ಕಂಡು ತಾಯಿಗೆ ಬಹಳ ಸಂತೋಷ. ತಂದೆ ಮಾತ್ರ ಕಸಿವಿಸಿ. ಒಮ್ಮೊಮ್ಮ ಬಾಲಕ ನಾನಕನು ಆಡುವುದನ್ನು ಬಿಟ್ಟು ಏನನ್ನೋ ಯೋಚಿಸುತ್ತಾ ಕುಳಿತುಬಿಡುತ್ತಿದ್ದನು. ಅವನ ರೀತಿ, ವಿನಯಪೂರ್ಣ ಮುಗ್ಧ ಮಾತು ಮೊದಲಾದುವನ್ನು ಕಂಡು, ಕೇಳಿ ಊರಿನ ಹಿರಿಯರು ಬೆರಗಾಗುತ್ತಿದ್ದರು. ಒಟ್ಟಿನಲ್ಲಿ ಇಡೀ ಊರಿಗೇ ಅವನು ಅಚ್ಚುಮೆಚ್ಚು.
ಶಾಲೆಗೆ ಸೇರಿದಾಗ ನಾನಕನಿಗೆ ಏಳು ವರ್ಷ, ಗೋಪಾಲನೆಂಬ ಗುರುವಿನ ಬಳಿ ಪಂಜಬಿ ಮೂಲಕಾಕ್ಷರಗಳನ್ನು ಕಲಿಯುತ್ತಿರುವಾಗಲೇ, ಅವನ್ನು ಬಗೆಬಗೆಯಾಗಿ ಬಳಸಿ ದೇವರ ಸಂಸ್ಕೃತವನ್ನು , ಕುತ್ತೂಬುದ್ದಿನ್ ಎಂಬ ಮುಸ್ಲಿಂ ಮೌಲ್ವಿಯ ಬಳೀ ತಕ್ಕ ಮಟ್ಟಿಗೆ ಪಾರ್ಸಿ, ಅರಬ್ಬೀ ಭಾಷೆಗಳನ್ನೂ ಕಲಿತನು.
ಆದರೂ ನಾನಕನಿಗೆ ಶಾಲೆಯಲ್ಲಿ ಕಲಿಸುವ ವಿದ್ಯೆಯ ಕಡೆಗೆ ಹೆಚ್ಚು ಲಕ್ಷ್ಯವಿರಲಿಲ್ಲ. ಊರಿನ ಸಮೀಪದ ಕಾಡಿನಲ್ಲಿ ಸಾಧುಸಂತರು ಬಂದಾಗ, ಅವರನ್ನು ಕಾಣಲು ಹೋಗುತ್ತಿದ್ದನು. ಅವರಂತೆ ತಾನೂ ಧ್ಯಾನದಲ್ಲಿ ತೊಡಗುತ್ತಿದ್ದರು. ಬೇರೆ ಬೇರೆ ಧರ್ಮಗಳ ಮೂಲಭೂತ ಸತ್ಯಗಳನ್ನು ಅವರಿಂದ ತಿಳಿದುಕೊಂಡನು.
ಲೆಕ್ಕ ಪತ್ರಗಳನ್ನಿಡುವ ವಿದ್ಯೆಯನ್ನು ಮಗ ಕಲಿಯಬೇಕು ಎಂದು ತಂದೆಯ ಆಸೆ. ನಾನಕನಿಗೆ ಈ ವಿದ್ಯೆ ತಲೆಗೆ ಹತ್ತಲೇ ಇಲ್ಲ. ಇದರಿಂದ ಬೇಸರಗೊಂಡ ತಂದೆಯು ನಾನಕನನ್ನು ದನಕಾಯಲು ನೇಮಿಸಿದ. ಅದು ನಾನಕನಿಗೆ ಒಂದು ವರವೇ ಆಯಿತು. ಅಡವಿಯಲ್ಲಿ ದನಗಳನ್ನು ಮೇಯಲುಬಿಟ್ಟು, ತಾನೂ ಒಂದು ಮರದ ಕೆಳಗೆ ಏನನ್ನೋ ಧ್ಯಾನಿಸುತ್ತ ಕುಳಿತುಬಿಡುತ್ತಿದ್ದನು.
ಒಂದು ದಿನ ನಾನಕನು ಮೈಮರೆತು ಕುಳೀತ. ದನಗಳು ಒಬ್ಬನ ಹೊಲವನ್ನು ಹೊಕ್ಕು, ಬೆಳೆ ಹಾಳು ಮಾಡಿದವು. ಹೊಲದವನು ನಾನಕನ ತಂದೆಗೆ ದೂರು ಕೊಟ್ಟನು. ಅದರಿಂದ ಸಿಟ್ಟಿಗೆದ್ದ ತಂದೆಯನ್ನು ಸಮಾಧಾನಪಡಿಸಲು ಊರಿನ ಮುಖ್ಯಸ್ಥನಾದ ರಾಯಬೂಲರನ್ನೇ ಬರಬೇಕಾಯಿತು.
ಸಂಪ್ರದಾಯ ಪ್ರಿಯಾದ ತಂದೆ ನಾನಕನ ಉಪನಯನವನ್ನು ಏರ್ಪಡಿಸಿದನು. ಬಂಧುಬಳಗವೆಲ್ಲ ನೆರೆದಿತ್ತು.
ಇನ್ನೇನು, ನಾನಕನಿಗೆ ಜನಿವಾರ ಧರಿಸಬೇಕು. ಅಷ್ಟರಲ್ಲಿ ” ಈ ಅವನು ” ಈ ನೂಲಿನೆಳೆಗಳು ನನಗೆ ಬೇಕಾಗಿಲ್ಲ. ಇದು ಹರಿದು ಹೋಗುತ್ತದೆ. ಸುಟ್ಟು ಹೋಗುತ್ತದೆ, ಮಣ್ಣುಗೂಡಿ ಹೋಗುತ್ತದೆ. ಪರಲೋಕದಲ್ಲಿ ನನ್ನ ಜೊತೆಗೆ ಬರುವುದು ಇಲ್ಲ” ಎಂದು ನಿರಾಕರಿಸಿಬಿಟ್ಟ. ಎಲ್ಲರಿಗೂ ಗರ ಹೊಡೆದಂತಾಯಿತು.
“ನಿನಗೆ ಒಪ್ಪುವ ಜನಿವಾರ ಯಾವುದು ?” ಹಿರಿಯರೊಬ್ಬರು ಕೇಳೀದರು.
ನಾನಕ್ ಹೇಳಿದ: ಕರುಣೆಯೆಂಬ ಹತ್ತಿಯಿಂದ, ತೃಪ್ತಿಯೆಂಬ ನೂಲು ತೆಗೆದ, ಸತ್ಯವೆಂಬ ಹುರಿ ಹಾಕಿ, ಸಂಯಮವೆಂಬ ಗಂಟು ಕಟ್ಟಿ ಸಿದ್ಧಪಡಿಸಿದ ಜನಿವಾರವೇ ನನ್ನ ಜನಿವಾರ. ಈಗಾಗಲೇ ನನ್ನ ಆತ್ಮ ಆ ಜನಿವಾರ ಧರಿಸಿದೆ. ಅಂತಹ ಜನಿವಾರವನ್ನು ಧರಿಸಿದವನೇ ದೇವರ ಪ್ರೀತಿಗೆ ಪಾತ್ರನಾಗುತ್ತಾನೆ.
ಮಗನ ಬಗೆಗೆ ತಂದೆಯು ಕಟ್ಟಿದ ಆಶಾಗೋಪುರ ಕುಸಿದು ಬಿದ್ದಿತ್ತು. ಅವನ ವಿಚಿತ್ರ ನಡಿಗೆ ಬಿಡಿಸಲಾಗದ ಸಮಸ್ಯೆಯಾಯಿತು.
ಕಾಲೂನ ಹಿತಚಿಂತಕರು, ಹಿರಿಯರು ಅವನಿಗೆ ಸಲಹೆ ಮಾಡಿದರು: “ಮಗನಿಗೆ ಮದುವೆ ಮಾಡಿಬಿಡು. ತಾನೇ ಸರಿಹೋಗುತ್ತಾನೆ. “ತಂದೆಗೂ ಅದು ಸರಿ ಎಂದು ತೋರಿತು. ಸುಲಖನಿ ಎಂಬ ಹುಡುಗಿಯೊಡನೆ ನಾನಕನ ವಿವಾಹ ವಿಜೃಂಭಣೆಯಿಂದ ನಡೆದು ಹೋಯಿತು. ನಾನಕನು ಸಂಸಾರಿಯಾದ, ಕಾಲ ಕ್ರಮದಲ್ಲಿ ಇಬ್ಬರು ಗಂಡು ಮಕ್ಕಳ ತಂದೆಯೂ ಆದ.
ಆದರೂ ಅವನಿಗೆ ಲೋಕ ವ್ಯವಹಾರದಲ್ಲಿ ಆಸಕ್ತಿ ಬರಲೇ ಇಲ್ಲ.
ಮದುವೆಯಾಗಿ ಮಕ್ಕಳನ್ನು ಪಡೆದ ನಂತರವೂ, ನಾನಕನು ಯಾವ ಉದ್ಯೋಗವನ್ನು ಹುಡುಕಲಿಲ್ಲ. ಧ್ಯಾನ ಚಿಂತನೆಗಳಲ್ಲಿಯೇ ಕಾಲ ಕಳೆಯಲಾರಂಭಿಸಿದ. ತಂದೆಗೆ ಯೋಚನೆಯಾಯಿತು. ವ್ಯಾಪಾರದಲ್ಲಾದರೂ ಅವನು ಮನಸ್ಸು ಹಾಕಬಹುದೆಂದು ಅವನ ಆಸೆ. ಸ್ವಲ್ಪ ಹಣ ಕೊಟ್ಟು, ಹತ್ತಿರದ ಪಟ್ಟಣಕ್ಕೆ ಸಾಮಾನುಗಳನ್ನು ತರಲು ಕಳುಹಿಸಿದ. ಹಾದಿಯಲ್ಲಿ ನಾನಕನು ಕೆಲವು ಸಾಮಾನುಗಳನ್ನು ತರಲು ಕಳುಹಿಸಿದ. ಹಾದಿಯಲ್ಲಿ ನಾನಕನು ಕೆಲವರು ಸಾಧುಗಳನ್ನು ಕಂಡರು. ಹಲವು ದಿನದಿಂದ ಉಪವಾಸವಿದ್ದ ಅವರ ಮೇಲೆ ನಾನಕನಿಗೆ ಕರುಣೆ ಉಕ್ಕಿ, ಪೇಟೆಗೆ ಹೋಗಿ ತಂದೆ ಕೊಟ್ಟ ಹಣದಿಂದ ಹಣ್ಣು ಹಂಪಲುಗಳನ್ನು ಕೊಂಡು, ಅವೆಲ್ಲವನ್ನೂ ಸಾಧುಗಳಿಗೆ ಕೊಟ್ಟು ಬಿಟ್ಟ. ಬರಿಗೈಯಿಂದ ಊರಿಗೆ ಬಂದ. ಅದನ್ನು ಕೇಳಿ ಸಹಜವಾಗಿ ತಂದೆಯ ಸಿಟ್ಟು ಬೆಂಕಿಯಾಯಿತು. ನಾನಕನು, “ಪವಿತ್ರಾತ್ಮರಾದ ಹಸಿದ ಸಾಧುಗಳಿಗೆ ಉಣಲಿಟ್ಟ, ಇಹಲೊಕ ಪರಲೋಕಗಳೆರಡಲ್ಲೂ ನನಗೊಬ್ಬನಿಗೆ ಅಲ್ಲ, ನಿನಗೂ ಸಹ ಅಪಾರ ಲಾಭವಾಗುವಂತೆ ಮಾಡಿದ್ದೇನೆ. ಇದಕ್ಕಿಂತ ಲಾಭದಾಯಕ ವ್ಯವಹಾರ ಯಾವುದು ?” ಎಂದು ಪ್ರಶ್ನೆ ಹಾಕಿದ. ಮಗನ ಈ ಪ್ರಶ್ನೆಯಿಂದ ಮತ್ತಷ್ಟು ರೊಚ್ಚಿಗೆದ್ದ ತಂದೆ ನಾನಕನನ್ನು ಚೆನ್ನಾಗಿ ಥಳಿಸಿದನಂತೆ.
ಈ ಮಗ ವ್ಯಾಪಾರಿಯಾಗಲಾರ ಎಂದು ತಂದೆ ನಿಶ್ಚಯಿಸಿದ. ವ್ಯವಸಾಯವನ್ನಾದರೂ ಮಾಡು ಎಂದು ಹೇಳಿದ. ನಾನಕನು, “ನನ್ನ ದೇಹವೇ ಒಂದು ಹೊಲ. ಮನಸ್ಸೆ ಹೊಲವನ್ನು ಊಳುವವ. ವಿನಯವೆಂಬ ನೀರುಣಿಸಿ, ದೈವಿಸತ್ವದ ಬೀಜ ಬಿತ್ತಿದಾಗ, ನಾನು ಪಡೆಯುವ ಬೆಳೆ ನನಗೆ, ನನ್ನ ಕುಟುಂಬಕ್ಕಷ್ಟೆ ಅಲ್ಲ,ಇಡೀ ಪ್ರಪಂಚಕ್ಕೆ ಸಾಕಾಗುತ್ತದೆ. ಈ ಹೊಲದ ಒಡೆಯ ಪರಮಾತ್ಮ. ನಾನು ಅವನ ಗೇಣಿದಾರ. ನನಗೆ ಅನಾವೃಷ್ಟಿ, ಅತಿವೃಷ್ಟಿಗಳ ಭಯವಿಲ್ಲ. ನಾನು ಬೇಡಿದಷ್ಟನ್ನು ಅವನು ಕೊಡುತ್ತಾನೆ. ಹೆಚ್ಚಿಲ್ಲ ಕಡಿಮೆಯಿಲ್ಲ” ಎಂದು ಉತ್ತರಿಸಿದ.
ಮಗನ ವಿಚಿತ್ರ ಮಾತುಗಳನ್ನು ಕೇಳಿ ತಂದೆ-ತಾಯಿಗಳಿಬ್ಬರಿಗೂ ದುಃಖವಾಯಿತು. “ನೀನು ಹುಚ್ಚನ ಹಾಗೆ ವರ್ತಿಸಿ ಸಮಾಜದಲ್ಲಿ ನಮ್ಮನ್ನು ನಗೆಗೀಡು ಮಾಡಬೇಡ” ಎಂದು ಕಣ್ತುಂಬ ನೀರು ತಂದು ಬೇಡಿಕೊಂಡರು. ಆಗ ನಾನಕನು “ನನಗೆ ಕರೆ ಬಂದಿದೆ ದುಃಖವೆಂಬ ಬೆಂಕಿಯಲ್ಲಿ ಸುಡುತ್ತಿರುವ ಜಗತ್ತನ್ನು ನಾನು ರಕ್ಷಿಸಬೇಕಾಗಿದೆ. ಅದರ ನಿರ್ವಹಣೆ ಎಂತೆಂಬುವುದನ್ನೇ ನಾನು ಯೋಚಿಸುತ್ತಿದ್ದೇನೆ” ಎಂದು ಹೇಳಿದ.
ನನಗೆ ದೇವರ ಕರೆ ಬಂದಿದೆ. ನಾನು ಜಗತ್ತನ್ನು ರಕ್ಷಿಸಬೇಕಾಗಿದೆ “
ಊರ ಜನರಿಗೂ ಈ ಸಂಗತಿಗಳು ತಿಳಿದವು. ನಾನಕನ ತಲೆ ಕೆಟ್ಟಿದೆ ಎಂದು ಖಂಡಿತವಾಯಿತು.
ವೈದ್ಯರು ಬಂದರು. “ಹುಚ್ಚ” ಎನಿಸಿಕೊಂಡ ನಾನಕನಿಗೆ ಪ್ರಶ್ನೆಗಳನ್ನು ಹಾಕಿದರು. ಅವರ ಉತ್ತರಗಳನ್ನು ಕೇಳಿ, ಅವನ ಪ್ರಶ್ನೆಗಳಿಗೆ ಉತ್ತರ ಕೊಡಲಾರದೆ ಸುಮ್ಮನಾದರು.
ಸುಲ್ತಾನಪುರದಲ್ಲಿ
ಇನ್ನೆನು ಮಾಡಬೇಕು ? ತಂದೆಗೆ ಯೋಚನೆಗಿಟ್ಟಿತ್ತು. ಸ್ಥಳ ಬದಲಾವಣೆಯಿಂದಾದರೂ ನಾನಕನು ಸುಧಾರಿಸಬಹುದು ಎಂಬ ಆಸೆಯಿಂದ ತಂದೆಯು ಅವನನ್ನು ಅವನ ಪ್ರೀತಿಯ ಅಕ್ಕ ನಾನಕಿಯ ಊರಾದ ಸುಲ್ತಾನಪುರಕ್ಕೆ ಕಳುಹಿಸಿದ. ನೌಕರಿಯೂ ಸಿಕ್ಕಿತು. ನವಾಬನ ನೌಕರರಿಗೆ ಪಡಿತರ ಕೊಡುವ ಅಧಿಕಾರಿಯಾದ ನಾನಕ. ನಾನಕನು ಹೆಂಡತಿ ಮಕ್ಕಳೊಡನೆ ಸಂಸಾರ ಹೂಡಿದ. ಅವನ ಬಾಲ್ಯ ಸಂಗಾತಿ ಮರ್ದಾನೆಂಬ ಮುಸ್ಲಿಂ ವಾದ್ಯಗಾರನು ಬಂದು ಸುಲ್ತಾನಪುರದಲ್ಲೇ ನೆಲೆಸಿದ.
ಅತ್ಯಂತ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸದಲ್ಲಿ ನಿರತನಾದ ನಾನಕನಿಗೆ ಬಡವರನ್ನು, ದೀನದಲಿತರನ್ನು ಕಂಡರೆ ಕರುಣೆ. ಎಷ್ಟೋ ಸಲ ತನಗೆ ಸಂಬಳದ ರೂಪದಲ್ಲಿ ಬರುತ್ತಿದ್ದ ಧವಸ ಧಾನ್ಯಗಳನ್ನು ಬಡವರಿಗೆ ಸಾಧು ಸಂತರಿಗೆ ಹಂಚಿದ್ದೂ ಉಂಟು. ಜೊತೆಗೆ ಅಧ್ಯಾತ್ಮದಲ್ಲಿಯೂ ಪ್ರಗತಿ ನಡೆದೇ ಇತ್ತು. ಕಾಳು ಅಳೆಯುತ್ತಿರುವಾಗ “ತೇರಾ” (ಹದಿಮೂರು) ಅಂಕಿಯನ್ನು ಮುಟ್ಟಿದರೆ ಸಾಕು, ಮುಂದೆ ಎಣಿಸುವುದು ಬಿಟ್ಟು, ಮತ್ತೇ ಮತ್ತೇ “ತೇರಾ, ಮೈ ತೇರಾ, ಮೈ ತೇರಾ” (ನಾನು ನಿನ್ನವನು, ನಾನು ನಿನ್ನವನು) ಎನ್ನುತ್ತ ಮೈಮರೆತು ಬಿಡುತ್ತಿದ್ದನು. ಅವನನ್ನು ಕಂಡರೆ ಆಗದ ಕೆಲವರು, ನಾನಕನು ಕೆಲಸವನ್ನೇ ಮಾಡುವುದಿಲ್ಲವೆಂದೂ, ಧವಸ ಧಾನ್ಯಗಳನ್ನು ಯಾರ್ಯಾರಿಗೋ ಕೊಟ್ಟು ಪೋಲು ಮಾಡುತ್ತಾನೆಂದೂ ನವಾಬನಿಗೆ ದೂರು ಕೊಟ್ಟರು. ಸ್ವತಃ ನವಾಬನೇ ಬಂದು ಪರೀಕ್ಷಿಸಿದಾಗ ಎಲ್ಲವೂ ಸರಿಯಾಗಿದ್ದುದು ಕಂಡುಬಂತು.
ಸುಲ್ತಾನಪುರದಲ್ಲಿ ನಾನಕನ ಜೀವನ ಕ್ರಮಬದ್ಧವಾಗಿತ್ತು. ಪ್ರತಿ ದಿನ ನಸುಕಿನಲ್ಲಿ ಎದ್ದು, ಸಮೀಪದ ಸಣ್ಣ ಕೆರೆಗೆ ಹೋಗಿ ಸ್ನಾನ ಮಾಡಿ, ಅಲ್ಲಿಯೆ ದಂಡೆಯ ಮೇಲೆ ಇದ್ದ ಬೋರೆಯ ಗಿಡದ ಕೆಳಗೆ ಪರಮಾತ್ಮನ ಮನನ ಧ್ಯಾನಗಳಲ್ಲಿ ಕೆಲವು ಹೊತ್ತು ತಲ್ಲೀನನಾಗಿರುತ್ತಿದ್ದನು. ದಿನದ ಕೆಲಸ ಮುಗಿದ ಮೇಲೆ ಸಾಯಂಕಾಲ, ತಾನೇ ರಚಿಸಿದ ದೇವರ ಸ್ತೋತ್ರಗಳನ್ನು ಮಧುರ ಕಂಠದಿಂದ, ಮರ್ದಾನನ ವಾದ್ಯ ಸಂಗೀತದ ಜೊತೆಗೆ ಹಾಡುತ್ತ ಕುಳಿತುಕೊಳ್ಳುತ್ತಿದ್ದನು. ಆಗ ಒಂದು ಬಗೆಯ ಭಕ್ತಿಯ ವಾತಾವರಣವೇ ನಿರ್ಮಿತವಾಗುತ್ತಿತ್ತು. ನಾನಕನ ಸರಳ ಮತ್ತು ನಿರಾಡಂಬರ ಪ್ರಾರ್ಥನೆಗೆ ಆಕರ್ಷಿತರಾದ ಅನೇಕ ಜನ ಪ್ರಾರ್ಥನೆಯಲ್ಲಿ ಭಾಗವಹಿಸಲಾರಂಭಿಸಿದರು.
ಗುರುನಾನಕ
ಒಂದು ಸಲ, ಎಂದಿನಂತೆ ನಾನಕನೂ ಸ್ನಾನಕ್ಕೆ ಹೋದ. ಸಂಜೆಯಾಯಿತು, ಹಿಂದಿರುಗಲಿಲ್ಲ.
ದಿನವೇ ಸಾಗಿಹೋಯಿತು, ನಾನಕ್ ಹಿಂದಕ್ಕೆ ಬರಲಿಲ್ಲ.
ಹಳ್ಳಿಯೆಲ್ಲೆಲ್ಲ ಗಲಿಬಿಲಿ, ಆತಂಕ. ಊಹಾಪೋಹ. ನದಿಯಲ್ಲಿ ಮುಳೂಗಿ, ಇಲ್ಲವೇ ಜಲಚರಗಳು ತಿಂದು ಸತ್ತು ಹೋಗಿರಬೇಕೆಂದು ಬಹುಜನ ಭಾವಿಸಿದರು. ಆದರೆ ನಡೆದುದೇ ಬೇರೆ. ನಿತ್ಯದಂತೆ ಸ್ನಾನಾನಂತರ ನಾನಕನು ಗಿಡದ ಕೆಳಗೆ ತದೇಕ ಚಿತ್ತನಾಗಿ ಪರಮಾತ್ಮನ ಧ್ಯಾನದಲ್ಲಿ ನಿಮಗ್ನನಾಗುವುದೇ ತಡ, ಅವನು ಹೊರ ಜಗತ್ತನ್ನು ಮರೆತೆ ಬಿಟ್ಟನು. ಸ್ಥಿತಿ ಮೂರು ದಿನಗಳವರೆಗೆ ಮುಂದುವರೆಯಿತು. ಆಗಲೇ ಅವನಿಗೆ ದೈವಾಸಾಕ್ಷಾತ್ಕಾರವಾಯಿತು ಎಂದು ಹೇಳುತ್ತಾರೆ. ಭಕ್ತರು ಹೇಳುವ ಈ ವೃತ್ತಾಂತವೂ ವಿಶಿಷ್ಟವಾಗಿದೆ. ದೈವಸಾಕ್ಷಾತ್ಕರವಾಗಿ, ತನ್ನ ಮುಂದಿನ ಕರ್ತವ್ಯದ ಸೂಚನೆ ಸಿಕ್ಕಿದ ಮೇಲೆಯೆ ಅವನಿಗೆ ಎಚ್ಚರ ಬಂದುದು ಎಂದು ಹೇಳುತ್ತಾರೆ. ಅವನಿಗೆ ಒಂದು ದಿವ್ಯ ವಾಣಿ ಕೇಳಿಸಿತು. ನನ್ನ ಸಂಪೂರ್ಣ ಆಶಿರ್ವಾದ ನಿನಗಿದೆ… ಹೋಗು, ಇನ್ನು ದೇಶ ಸಂಚಾರ ಕೈಗೊಂಡು ನನ್ನ ಸಂಕಲ್ಪವನ್ನು ಜನರಿಗೆ ತಿಳಿಸಿಕೊಡು…ಇಂದಿನಿಂದ ನೀನು ಕೇವಲ ನಾನಕನಲ್ಲ, “ಗುರುನಾನಕ”. ಎಂದು ಆ ವಾಣಿ ನುಡಿಯಿತು. ಇದನ್ನು ಕೇಳಿ ನಾನಕನಿಗೆ ರೋಮಾಂಚನವಾಯಿತು. ಭಗವಂತನು ನಾನಕನಿಗೆ ಒಂದು ಬಟ್ಟಲಿನಲ್ಲಿ ಅಮೃತವನ್ನು ಕೊಟ್ಟ, ಅದನ್ನು ಕುಡಿದುದರಿಂದ ನಾನಕನಿಗೆ ಭಕ್ತಿ, ಸತ್ಯ ಸಂಯಮಗಳು ಲಭಿಸಿದವು ಎಂದು ಹೇಳುತ್ತಾರೆ. ಅವನ ಮುಖದಿಂದ ದೈವೀಪ್ರಭೇ ಚಿಮ್ಮಲಾರಂಭಿಸಿತು ಎಂದು ವರ್ಣಿಸುತ್ತಾರೆ.
ಊರಿಗೆ ಹಿಂದಿರುಗಿ ಬಂದ ನಾನಕ ಬೇರೆ ಮಾತೇ ಆಡಲಿಲ್ಲ; ಅವನು ಆಡುತ್ತಿದ್ದುದು ಇಷ್ಟೇ: “ನಾನು ಇಲ್ಲಿ ಕಾಣುತ್ತಿರುವುದು ಹಿಂದುವನ್ನೂ ಅಲ್ಲ, ಮುಸಲ್ಮಾನನ್ನೂ ಅಲ್ಲ. ಕೇವಲ ಮನುಷ್ಯನನ್ನು “ಇದಾದದ್ದು 1507 :ಆಗ ನಾನಕನಿಗೆ 38 ವರ್ಷ ವಯಸ್ಸು.
ತಮ್ಮ ಮತಗಳಲ್ಲಿ ಜನಕ್ಕೆ ಬಹು ಅಭಿಮಾನವಿದ್ದ ಕಾಲ ಆದು. ಗುರುನಾನಕನ ಈ ದಿಟ್ಟ ಆದರೆ ಸತ್ಯವಾಣಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತು. ಅಲ್ಲಿಯ ಓರ್ವ ಖಾಜಿಯಂತೂ ನಬಾಬನ ಹತ್ತಿರವೇ ಹೋದ: “ಇಂತಹ ಭೋಧನೆ ಜನತೆಯನ್ನು ತಪ್ಪು ಮಾರ್ಗಕ್ಕೆಳೆಯುತ್ತದೆ. ಸಮಾಜದಲ್ಲಿ ಗಲಭೆ- ಗೊಂದಲಗಳೇಳುತ್ತವೆ. ಆದುದರಿಂದ ನಾನಕನನ್ನು ಕರೆಸಿ ಎಚ್ಚರಿಕೆ ಕೊಡಲೇಬೇಕು” ಎಂದು ಒತ್ತಾಯ ಮಾಡಿದ. ನವಾಬನೇನೋ ನಾನಕನ ಹಿರಿಮೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದ. ಖಾಜಿಯನ್ನು ತಡೆಯಲು ಪ್ರಯತ್ನಿಸಿದ. ಖಾಜಿ ತನ್ನ ಪಟ್ಟು ಬಿಡಲಿಲ್ಲ. ಸರಿ ನಾನಕನಿಗೆ ಹೇಳಿ ಕಳಸಿದದರು. ಖಾಜಿಯು ಅವನಿಗೆ “ನೀನು ತಲೆ ಕೆಟ್ಟವನೆಂದೂ, ಹಿಂದು ಯಾರೂ ಹೇಳದಂತಹ ಮಾತುಗಳನ್ನು ಆಡುತ್ತಿರುವೆಯೆಂದು ಜನ ಹೇಳುತ್ತಿದ್ದರು. ಇದಕ್ಕೆ ನಿನ್ನ ಉತ್ತರವೇನು?” ಎಂದು ಪ್ರಶ್ನಿಸಿದನು.
ಆಗ ನಾನಕನು ಶಾಂತ ಚಿತ್ತನಾಗಿಯೂ ಉತ್ತರಿಸಿದ :” ಹೌದು ನನಗೆ ತಲೆ ಕೆಟ್ಟಿದೆ. ಹುಚ್ಚು ಹಿಡಿದಿದೆ. ಯಾರ ಹುಚ್ಚು ? ಪರಮಾತ್ಮನ ಹುಚ್ಚು. ಅವನನ್ನು ಬಿಟ್ಟು ಮತ್ತಾರೂ ನನಗೆ ಕಾಣುತ್ತಿಲ್ಲ.” ನಿಜವಾದ ಮುಸಲ್ಮಾನನಾರು?” ಎಂದು ಖಾಜಿ ಪ್ರಶ್ನಿಸಿದ.
ನಾನಕನು ಉತ್ತರಿಸಿದ: ಮುಸಲ್ಮಾನನೆಂದು ಕರೆದುಕೊಳ್ಳುವುದು ಬಹಳ ಸುಲಭ. ಆದರೆ ಮುಸಲ್ಮಾನನಾಗುವುದು ಬಹಳ ಕಷ್ಟ. ಯಾವನಿಗೆ ಕರುಣೆಯೇ ಮಸೀದಿಯಾಗಿದೆಯೋ, ಶ್ರದ್ಧೆಯೇ ಪ್ರಾರ್ಥನಾ ಚಾಪೆಯಾಗಿದೆಯೋ, ಪ್ರಾಮಾಣಿಕ ಜೀವನವೇ ಪವಿತ್ರ ಕುರಾನ್ ಗ್ರಂಥವಾಗಿದೆಯೋ, ಸಂಯಮವೇ ಉಪವಾಸವಾಗಿದೆಯೋ ಅವನೇ ನಿಜವಾದ ಮುಸಲ್ಮಾನ.”
ಖಾಜಿಗೆ ಸಿಟ್ಟು ಬಂತು. “ನಿನಗೆ ನಮ್ಮ ಮತದ ಮೇಲೆ ಗೌರವವಿದ್ದರೆ ನನ್ನ ಜೊತೆಗೆ ಮಸೀದಿಗೆ ಬಾ, ಪ್ರಾರ್ಥನೆ ಮಾಡು ಎಂದ.
ನಾನಕ್ ಅವನೊಡನೆ ನಡೆದ.
ಎಲ್ಲರೂ ನಮಾಜು ಮಾಡುತ್ತಿದ್ದಾಗ, ನಾನಕನು ಮಾತ್ರ ಒಂದು ಕಡೆ ಸುಮ್ಮನೆ ಮುಗುಳ್ನಗೆ ನಗುತ್ತಾ ನಿಂತನು. ಖಾಜಿಯು ಸಿಟ್ಟಿನಿಂದ , “ನೀನೇಕೆ ಪ್ರಾರ್ಥನೆ ಮಾಡಲಿಲ್ಲ?” ಎಂದು ಕೇಳೀದ.
“ನೀನು ಪ್ರಾರ್ಥನೆ ಮಾಡುತ್ತಿದ್ದೆ ಎಂದು ಹೇಳಿದೆಯಲ್ಲ ? ನಿಜವಾಗಿ ಪ್ರಾರ್ಥನೆ ಮಾಡುತ್ತಿರಲಿಲ್ಲ. ನಿನ್ನ ದೇಹ ಮಾತ್ರ ಇಲ್ಲಿ ಬಾಗುತ್ತಿತ್ತು. ಆದರೆ ಮನಸ್ಸು, ನಿನ್ನ ಮನೆಯಲ್ಲಿರುವ ಕುದುರೆಯ ಮರಿಯ ಮೇಲಿತ್ತು. ಹಗ್ಗ ಬಿಚ್ಚಿಕೊಂಡು ಅದು ಎಲ್ಲಿ ಬಾವಿಯಲ್ಲಿ ಬೀಳುತ್ತೋ ಎಂದು ಅದರ ಹಿಂದೆಯೇ ಓಡುತ್ತಿತ್ತು” ಎಂದು ನಾನಕ್ ನುಡಿದನು.
ಖಾಜಿಗೆ ನಾಚಿಕೆಯಾಯಿತು. ಅನಂತರ ಮಾತನಾಡಲಿಲ್ಲ. ನವಾಬನು ನಾನಕನನ್ನು ಬಹು ಮೆಚ್ಚಿದ. ಅವನನ್ನು ತನ್ನಲ್ಲಿಯೇ ಉಳಿಯುವಂತೆ ಪ್ರಾರ್ಥಿಸಿದ. “ನೀನು ಬಯಸಿದ್ದನ್ನು ಕೊಡುವೆ” ಎಂದ. ಆದರೆ ನಾನಕನು, ಪರಮಾತ್ಮನು ಕೊಟ್ಟಿರುವುದೇ ಸಾಕು, ಅವನ ಕರೆ ಬಂದಿದೆ ಎಂದು ಹೇಳಿ ಮರ್ದಾನನ್ನು ಜೊತೆಗೆ ಕರೆದುಕೊಂಡು ಹೊರಟನು. 1507 ರಿಂದ ಎಂಟು ವರ್ಷ ಕಾಲ ಅವನು ಊರಿಂದ ಊರಿಗೆ, ಹಳ್ಳಿಯಿಂದ ಹಳ್ಳಿಗೆ ನಡೆದು ತಾನು ಕಂಡ ಸತ್ಯವನ್ನು ಜನರಿಗೆ ಹೇಳಿಕೊಟ್ಟ.
ಲೋಕಸಂಚಾರ
ಕಾಡಿನಲ್ಲಿ ಪ್ರವಾಸ ಮಾಡುತ್ತಿದ್ದಾಗ, ಅಲ್ಲಿಯ ಹಣ್ಣು ಹಂಪಲುಗಳೇ ಗುರುನಾನಕರಿಗೆ ಆಹಾರ. ಮರ್ಧಾನನಿಗೆ ಅದು ಸೇರದು. ಭಿಕ್ಷೆ ಬೇಡಿ ಹೊಟ್ಟೆ ತುಂಬ ಉಣ್ಣಬೇಕೆಂಬ ಆಸೆ ಅವನಿಗೆ. “ದೇವರ ಹಾದಿಯನ್ನು ಆಯ್ದುಕೊಂಡವನು ತನ್ನನ್ನೇ ನೆಚ್ಚಿಕೊಳ್ಳಬೇಕು. ಮತ್ತೊಬ್ಬನ ದಾನವನ್ನಾಗಲಿ, ಭಿಕ್ಷೆಯನ್ನಾಗಲಿ, ಅಪೇಕ್ಷಿಸಬಾರದು” ಎಂದು ಗುರು ಹೇಳಿದರೂ ಅವನಿಗೆ ಮನವರಿಕೆಯಾಗಲಿಲ್ಲ. ಒಂದು ಸಲ, ಹಳ್ಳಿಯೊಂದಕ್ಕೆ ಹೋಗಿ ಬರಲು ನಾನಕರು ಮರ್ದಾನನಿಗೆ ಅಪ್ಪಣೆ ಕೊಟ್ಟರು. ಸಂತೋಷದಿಂದ ಮರ್ದಾನನು ಹಳ್ಳಿಗೆ ಹೋದ. ಹಳ್ಳಿಯವರು ಅವನು ಗುರುನಾನಕರ ಶಿಷ್ಯನೆಂದು ತಿಳಿದು, ಯಥೇಚ್ಛೇ ಊಟ ಮಾಡಿಸಿದರು. ಅಲ್ಲದೇ ಬಟ್ಟೆಗಳನ್ನು ಕಾಣಿಕೆಯಾಗಿ ಅರ್ಪಿಸಿದರು. ಅವೆಲ್ಲವನ್ನೂ ಸಂತೋಷದಿಂದ ಹೊತ್ತು ತಂದ ಮರ್ದಾನ. ಆದರೆ ನಾನಕರು ಎಲ್ಲವನ್ನೂ ಬಿಸಾಡಲು ತಿಳಿಸಿದರು. ಮನಸ್ಸಿನಿಂದ ಮರ್ದಾನನ್ನು ಹಾಗೆಯೇ ಮಾಡಿ, “ಗುರುವೇ, ನಿಜವಾಗಿಯೂ ಅವಶ್ಯಕತೆಯುಳ್ಳವನಿಗೆ ಮಾಡಿದ ದಾನವು ದೇವರಿಗೆ ಸಂತೋಷ ನೀಡುವುದಿಲ್ಲವೇ?” ಎಂದು ಕೇಳಿದನು. ಅದಕ್ಕೆ ನಾನಕರು, “ಹೌದು, ಹಸಿದವನಿಗೆ ಉಣ್ಣಿಸುವವನು, ಬಟ್ಟೆಯಿಲ್ಲದ ಬಡವರಿಗೆ ಬಟ್ಟೆ ಕೊಡುವವನು ನಿಜವಾಗಿಯೂ ದೇವರ ಪ್ರೀತಿಗೆ ಪಾತ್ರನಾಗುತ್ತಾನೆ. ಆದರೆ ದಾನ ಕೊಡುವವನು ಅದನ್ನು ಪ್ರಾಮಾಣಿಕನಾಗಿ ಗಳಿಸಿರಬೇಕು ಮತ್ತು ದಾನ ಪಡೆಯುವವನು ತನಗೆ ಅವಶ್ಯವಿದ್ದಷ್ಟನ್ನು ಮಾತ್ರ ಸ್ವೀಖರಿಸಬೇಕು” ಎಂದು ದಾನದ ಮರ್ಮವನ್ನು ವಿವರಿಸಿದರು.
ಲೋಕಸಂಚಾರವನ್ನು ಕೈಗೊಂಡ ಗುರುನಾನಕರು, ಅನೇಕ ಜನ ದುಷ್ಟರ ಕೈಗೆ ಸಿಕ್ಕಿಬಿದ್ದುದ್ದು ಉಂಟು. ತಮ್ಮ ಸಂಯಮ, ಶಾಂತ, ಸರಳ ಮತ್ತು ಅರ್ಥಪೂರ್ಣ ಉಪದೇಶ ಹಾಗೂ ಹಾಡುಗಳಿಂದ ಅವರ ಮನಸ್ಸನ್ನೆಲ್ಲ ಎಷ್ಟೋ ಬಾರಿ ಬದಲಾಯಿಸಿಬಿಟ್ಟರು. ಸಜ್ಜನರೆಂಬ ಠಕ್ಕನೊಬ್ಬನು ಪ್ರಯಾಣಿಕರಿಗೆ ಅತಿಥ್ಯನೀಡಿ, ರಾತ್ರಿ ಅವರು ನಿದ್ರೆ ಹೋದಾಗ, ತನ್ನಸೇವಕರಿಂದ ಅವರನ್ನು ಕೊಲ್ಲಿಸಿ ಅವರ ಸಂಪತ್ತನ್ನೆಲ್ಲವನ್ನೂ ದೋಚಿ ಕೊಳ್ಳುತ್ತಿದ್ದನು. ಒಂದು ದಿನ ಗುರುನಾನಕ್ ಮತ್ತು ಮರ್ಧಾನರಿಗೆ ಅವನ ಅತಿಥ್ಯಗಳಾಗುವ ಪ್ರಸಂಗ ಬಂತು. ಊಟವಾದ ಮೇಲೆ, ಆ ಠಕ್ಕನು ಇವರಿಬ್ಬರೂ ಮಲಗುವುದನ್ನೇ ಕಾಯುತ್ತಿದ್ದನು. ಆದರೆ ಮಲಗುವ ಮೊದಲು, ದೇವರ ಸ್ತೂತ್ರ ಮಾಡುವುದು ಗುರುನಾನಕರ ನಿಯಮ. ಆದುದರಿಂದ ಅವರು ಮರ್ದಾನನ ವಾದ್ಯದ ಮಧುರ ಶ್ರುತಿಗೆ ತಮ್ಮ ಶ್ರುತಿಗೂಡಿಸಿ ಹಾಡನ್ನು ಪ್ರಾರಂಭಿಸಿದರು. ಹಾಡಿನ ಅರ್ಥ ಇದು: ಹಿತ್ತಾಳೆಯು ಲಕಲಕನೆ ಹೊಳೆಯುತ್ತಿದ್ದರೂ ಒರೆಗೆ ಹಚ್ಚಿದಾಗ ಅದರ ಬಣ್ಣ ಬಯಲಿಗೆ ಬರುತ್ತದೆ. ಗೆಳೆಯರಂತೆ ವರ್ತಿಸುವವರ ಹೂರಣ ದೇವರೆದುರಿಗೆ ಲೆಕ್ಕ ಒಪ್ಪಿಸುವಾಗ ಹೊರಬೀಳುತ್ತದೆ. ಒಳಗೆಲ್ಲ ಹೊಲಸಿದ್ದು ಆಮೇಲೆ ಮಾತ್ರ ಹೊಳಪಿದ್ದರೇನು ಪ್ರಯೋಜನ? ನದಿಯ ದಂಡೆಯ ಮೇಲೆ ಕೊಕ್ಕರೆಯೊಂದು ಮಹಾಧ್ಯಾನಿಯಂತೆ ನಿಂತಿದ್ದರೂ, ಅದರ ಲಕ್ಷ್ಯೆವಲ್ಲ ತನ್ನ ಆಹಾರದ ಕಡೆಗೇ… ನಮ್ಮ ಜಾಣತನ ಮತ್ತು ತೋರಿಕೆಯ ಒಳ್ಳೆಯತನ ದೇವರೆದುರು ವ್ಯರ್ಥ”. ಈ ಹಾಡನ್ನು ಕೇಳಿದಂತೆ ಠಕ್ಕನ ಮನಸ್ಸೆಲ್ಲ ಬದಲಾಯಿತು. ಎಷ್ಟು ಪಾಪ ಮಾಡಿದ್ದೇನೆ ಎಂದು ದುಃಖವಾಯಿತು. ಗುರುವಿನಲ್ಲಿ ತನ್ನ ಸಂಕಟವನ್ನು ತೋಡಿಕೊಂಡ. ಪ್ರಾಯಶ್ಚಿತ ರೂಪವಾಗಿ ನಾನಕರ ಆಜ್ಞೆಯ ಮೇರೆಗೆ, ತಾನು ಕೂಡಿಟ್ಟ ಸಂಪತ್ತೆಲ್ಲವನ್ನೂ ಬಡವರಲ್ಲಿ ಹಂಚಿ, ನಾನಕರ ಶಿಷ್ಯನಾದ.
ಗುರುನಾನಕರು ಕುಷ್ಠರೋಗಿಯ ಸೇವೆ ಮಾಡಿದರು.
ಅರ್ಥ ಯೋಚಿಸಿದವರ ನಡುವೆ
ಸಂಪ್ರದಾಯಗಳ, ಧಾರ್ಮಿಕ ಆಚರಣೆಗಳ ನಿಜವಾದ ಅಂತರಾರ್ಥ ತಿಳಿಯದೆ, ಅಂಧಶ್ರದ್ದೆಯಿಂದ ಅವುಗಳನ್ನು ಪಾಲಿಸುವವರನ್ನು ಕಂಡರೆ ಗುರುನಾನಕರಿಗೆ ಆಗದು. ಅಂಥವರನ್ನು ಅವರು ತಿದ್ದದ್ದೇ ಬಿಡುತ್ತಿರಲಿಲ್ಲ. ಹರಿದ್ವಾರದಲ್ಲಿ ಅಂತಹ ಒಂದು ಘಟನೆ ನಡೆಯಿತು.
ಗಂಗಾನದಿಯ ದಡದ ಮೇಲೆ ನಿಂತುಕೊಂಡು ಅನೇಕರು ಪೂರ್ವ ದಿಕ್ಕಿನ ಕಡೆಗೆ ಮುಖಮಾಡಿ ನೀರು ಚೆಲ್ಲುವುದನ್ನು ಗುರುನಾನಕರು ನೋಡಿದರು.
“ಇದೇಕೇ?” ಎಂದು ಅವರನ್ನು ಪ್ರಶ್ನಿಸಿದರು.
ಅವರು ಹೇಳಿದರು, “ಪರಲೋಕದಲ್ಲಿ ನಮ್ಮ ಹಿರಿಯರಿದ್ದಾರೆ, ಅವರಿಗೆ ಇದು ಮುಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆ”.
ನಾನಕರು ನಕ್ಕರು. ತಾವು ಪಶ್ಚಿಮ ದಿಕ್ಕಿನತ್ತ ನೀರು ಚೆಲ್ಲಲಾರಂಭಿಸಿದರು.
“ಇದೇನು ಮಾಡುತ್ತಿರುವಿರಿ ?” ಅದನ್ನು ನೋಡುತ್ತಿದ್ದವರು ಕೇಳಿದರು.
“ನಾನು ಪಶ್ಚಿಮದಿಂದ ಬಂದವನು. ನನ್ನ ಹುಟ್ಟೂರಲ್ಲಿ ನನ್ನದೊಂದು ಹೊಲವಿದೆ. ನಾನು ಇತ್ತ ಬಂದ ಮೇಲೆ ಅಲ್ಲಿ ಸಾಕಷ್ಟು ಮಳೆಯಾಗಿದೆಯೋ ಇಲ್ಲವೋ. ಈ ನೀರಾದರೂ ಮುಟ್ಟಲೆಂದು ಚೆಲ್ಲುತ್ತಿದ್ದೇನೆ” ಎಂದು ಉತ್ತರಿಸಿದರು.
ಅವರು ನಗುತ್ತ “ನಿನಗೆಂಥ ಹುಚ್ಚು ? ನೀನು ಇಲ್ಲಿ ಚೆಲ್ಲಿದ ನೀರು ದೂರದಲ್ಲಿರುವ ನಿನ್ನ ಹೊಲಕ್ಕೆ ಮುಟ್ಟುವುದಾದರೂ ಹೇಗೆ ?” ಎಂದು ಪ್ರಶ್ನಿಸಿದರು.
ಕೂಡಲೇ ಗುರುನಾನಕರು “ನೀವು ಇಲ್ಲಿ ಚೆಲ್ಲಿದ ನೀರು ಬೇರೊಂದು ಲೋಕದಲ್ಲಿರುವ ನಿಮ್ಮ ಹಿರಿಯರಿಗೆ ಮುಟ್ಟುವುದಾದರೆ, ನಾನು ಚೆಲ್ಲಿದ ನೀರು ಇದೇ ಲೋಕದಲ್ಲಿರುವ ನನ್ನ ಹೊಲಕ್ಕೇಕೆ ಮುಟ್ಟಬಾರದು ?” ಎಂದು ಪ್ರಶ್ನಿಸಿದರು. ಅವರಿಗೆ ನಾಚಿಕೆಯಾಯಿತು.
ಜಗನ್ನಾಥಪುರಿಯಲ್ಲಿ ನಡೆದ ಮತ್ತೊಂದು ಪ್ರಸಂಗ ಸ್ವಾರಸ್ಯವಾಗಿದೆ. ಅಲ್ಲಿ ಒಬ್ಬ ಬ್ರಾಹ್ಮಣ ಕಣ್ಣು ಮುಚ್ಚಿ, ಮೂಗು ಹಿಡಿದುಕೊಂಡು ಕುಳಿತು, ತಾನೊಬ್ಬ ದೊಡ್ಡ ಯೋಗಿಯೆಂದೂ, ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಂಡವನೆಂದೂ, ಭೂತ ಭವಿಷ್ಯಗಳನ್ನು ಬಲ್ಲವನೆಂದೂ ಕೊಚ್ಚಿಕೊಳ್ಳುತ್ತಿದ್ದ. ನಾನಕರು ಮೆಲ್ಲನೆ ಅವನ ಬಳಿ ಹೋಗಿ ಅವನಿಗೆ ತಿಳಿಯದಂತೆ ಅವನ ನೀರಿನ ಪಾತ್ರೆಯನ್ನು ಅವನ ಬೆನ್ನ ಹಿಂದಿಟ್ಟುಬಿಟ್ಟರು. “ನಿನ್ನ ನೀರಿನ ಪಾತ್ರೆ ಎಲ್ಲಿದೆ?” ಎಂದು ಕೇಳಿದರು. ಬ್ರಾಹ್ಮಣನ ಎಷ್ಟು ಯೋಚಿಸಿದರೂ ಹೊಳೆಯದೆ ಹೋಯಿತು. ಆಗ ಗುರುನಾನಕರು “ಜನರು ವ್ಯರ್ಥವಾಗಿ ಕಣ್ಣು ಮುಚ್ಚಿಮೂಗು ಹಿಡಿದು, ಎಲ್ಲವನ್ನೂ ಬಲ್ಲವೆಂದು ಹೇಳುತ್ತಾರೆ. ಆದರೆ ತಮ್ಮ ಹಿಂದೆ ಏನಿದೆಯೆಂಬುವುದೇ ಅವರಿಗೆ ತಿಳಿಯದು ” ಎಂದು ನುಡಿದಾಗ ಬ್ರಾಹ್ಮಣನು ನಾಚಿಕೆಯಿಂದ ತಲೆ ತಗ್ಗಿಸಬೇಕಾಯಿತು.
ಲಾಹೋರಿನಲ್ಲಿ ದುನಿವಿಚಾಂದನೆಂಬ ಲಕ್ಷಾಧೀಶನು, ತನ್ನ ತಂದೆಯ ಶ್ರಾಧದ ದಿನ ಅನೇಕ ಜನರನ್ನು ಊಟಕ್ಕೆ ಕರೆದ. ಅದಕ್ಕೆ ಗುರುನಾನಕರನ್ನೂ ಆಮಂತ್ರಿಸಿದ. ಆದರೆ ನಾನಕರು ತಮ್ಮ ಒಂದು ಪ್ರಶ್ನೆಗೆ ಉತ್ತರ ಕೊಟ್ಟರೆ ಮಾತ್ರ ಬರುವುದಾಗಿ ತಿಳಿಸಿದರು. ಶ್ರೀಮಂತನಿಗೆ ಕುತೂಹಲವಾಯಿತು. “ನೀನು ಪ್ರಶ್ನೆಯನ್ನು ಕೇಳಿ” ಎಂದ. ನಾನಕ್ ಹೇಳಿದರು: “ನನ್ನ ಬಳಿ ಒಂದು ಸೂಚಿಯಿದೆ. ಬಹಳ ದಿನಗಳಿಂದ ನಾನು ಅದನ್ನು ಕಾಪಾಡಿಕೊಂಡು ಬಂದಿದ್ದೇನೆ. ಈಗ ಅದನ್ನು ನಿನಗೆ ಒಪ್ಪಿಸುತ್ತೇನೆ. ನೀನು ಸ್ವರ್ಗದಲ್ಲಿ ಅದನ್ನು ನನಗೆ ಕೊಡಬೇಕು”. ಶ್ರೀಮಂತನಿಗೆ ಅಚ್ಚರಿಯಾಯಿತು. ನಗೆ ಬಂದಿತು. ” ಸ್ವರ್ಗಕ್ಕೆ ಅದನ್ನು ಒಯ್ಯುವುದು ಹೇಗೆ?” ಎಂದು ಕೇಳಿದ. ಗುರುನಾನಕರು ಪ್ರಶ್ನಿಸಿದರು. “ನನ್ನ ಒಂದು ಚಿಕ್ಕಸೂಚಿಯನ್ನೆ ಬೇರೆ ಲೋಕಕ್ಕೆ ಒಯ್ಯಲು ಅಶಕ್ತನಾದ ನೀನು, ಇಲ್ಲಿತೋರಿಸಿಕೊಳ್ಳುತ್ತಿರುವ ಸಂಪತ್ತೆಲ್ಲವನ್ನೂ ಹೇಗೆ ತೆಗೆದುಕೊಂಡು ಹೋಗಬಲ್ಲೆ?” ಶ್ರೀಮಂತನಿಗೆ ಅರ್ಥವಾಯಿತು. ತನ್ನ ಸಂಪತ್ತು ತಾನು ಸತ್ತಾಗ ಜೊತೆಗೆ ಬರುವುದಿಲ್ಲವೆಂದು. ಸಂಪತ್ತೆಲ್ಲವನ್ನೂ ಬಡವರಲ್ಲಿ ಹಂಚಿ, ದೀನದಲಿತರ ಸೇವೆಗೆ ತನ್ನ ಜೀವನವನ್ನು ಮುಡಿಪು ಮಾಡಿದ.
ಲೋಕಸಂಚಾರವನ್ನು ಕೈಗೊಂಡ ಗುರುನಾನಕರು ಮರ್ದಾನನೊಡನೆ ಸಯ್ಯದಪುರವನ್ನು ತಲುಪಿದರು. ಅಲ್ಲಿ ಲಾಲೂ ಎಂಬ ಬಡಗಿಯೊಬ್ಬನು ಪ್ರಾಮಾಣಿಕ ಜೀವನ ನಡೆಸುತ್ತಿದ್ದ. ನಾನಕರು ಅವನ ಮನೆಯಲ್ಲಿಯೆ ಉಳಿದುಕೊಂಡು,ಅವನ ಜೊತೆಯಲ್ಲಿಯೇ ಊಟ ಮಾಡಿ ಸಂತೋಷಪಟ್ಟರು.
ಕ್ಷತ್ರಿಯ ಕುಲದ ಸಂತರೊಬ್ಬರು ಕೀಳು ಕುಲದವನ ಮನೆಯಲ್ಲಿ ಊಟಮಾಡಿದ ಸುದ್ಧಿ ಊರಲ್ಲೆಲ್ಲ ಕೋಲಾಹಲವನ್ನೇ ಎಬ್ಬಿಸಿತು. ಅದೇ ಊರಲ್ಲಿ ಮೇಲಿನ ಕುಲದ ಶ್ರೀಮಂತ ಅಧಿಕಾರಿಯೊಬ್ಬನ ಒಂದು ದಿನ ಊರ ಸುತ್ತಮುತ್ತಣ ಸಾಧುಸಂತರಿಗೆಲ್ಲ ಔತಣ ಕೂಟವೇರ್ಪಡಿಸಿದ. ನಾನಕರನ್ನೂ ಆಮಂತ್ರಿಸಿದ. ಆದರೆ ನಾನಕರು “ಕೀಳೂ ಕುಲದವರಲ್ಲಿಯೆ ಕೀಳಾದ ಇನ್ನೂ ಅನೇಕರಿದ್ದಾರೆ. ನಾನು ಅಂಥವರ ಸಂಗಾತಿ. ಆದರೆ ಅಧಿಕಾರಿಯ ಕಡೆಯ ಜನರು ಅವರನ್ನು ಬಿಡಲಿಲ್ಲ. ಊಟಕ್ಕೆ ಬರಲೇಬೇಕು ಎಂದು ಬಹಳ ಒತ್ತಾಯ ಮಾಡಿದರು. ಆ ಅಧಿಕಾರಿಗೆ ಪಾಠ ಕಲಿಸಲು ಯೋಚಿಸಿ ನಾನಕ್ ಅವರ ಮನೆಗೆ ಹೋದರು. ಆದರೆ ಊಟಮಾಡಲು ಒಪ್ಪಲಿಲ್ಲ. ಅಲ್ಲಿದ್ದವರಿಗೆ ಕೋಪ ಬಂತು. ಕೆಲವರು “ಅಧಿಕಾರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ನೀನು ಇಲ್ಲಿಗೆ ಬಂದಂತೆ ತೋರುತ್ತದೆ. ಕೀಳು ಕುಲದ ಬಡಿಗನ ಮನೆಯಲ್ಲಿ ಊಟ ಮಾಡಲು ಬೇಸರವಾಗದ ನಿನಗೆ ಇಲ್ಲಿ ಊಟಮಾಡಲು ಕಸಿವಿಸಿಯಾಗುತ್ತದೆಯ?” ಎಂದು ಪ್ರಶ್ನಿಸಿದರು.
ಗುರುನಾನಕರು ಹೇಳಿದರು :”ಈ ಅಧಿಕಾರಿ ಬಡಿಸುವ ಊಟದಲ್ಲಿ ರಕ್ತದ ವಾಸನೆ ಬರುತ್ತದೆ. ಆದರೆ ಆ ಬಡವನ ಊಟ ನನಗೆ ಹಾಲು ಜೇನಿನಂತೆ ರುಚಿಕರವಾಗಿತ್ತು”. ಅಲ್ಲಿದ್ದವರಿಗೆ ಆಶ್ಚರ್ಯವಾಯಿತು. ಕೋಪಬಂದಿತು.ದೊಡ್ಡ ಅಧಿಕಾರಿಯ ಮನೆಯ ಊಟದಲ್ಲಿ ರಕ್ತದ ವಾಸನೆಯೇ? “ಅದು ಹೇಗೆ ?” ಎಂದು ಕೇಳಿದಾಗ “ಬಡವನು ಬೆವರು ಸುರಿಸಿ ದುಡಿಯುತ್ತನೆ. ಬಂದುದರಲ್ಲಿ ತನಗೆ ಸಾಧ್ಯವಾದಷ್ಟನ್ನು ಮನಃಪೂರ್ವಕ ಮನೆಗೆ ಬಂದ ಅತಿಥಿಗಳಿಗೆ ನೀಡುತ್ತಾನೆ. ಆದುದರಿಂದಲೇ ಅವನು ಕೊಟ ಊಟ ಹಾಲು ಜೇನಿನಂತೆ ರುಚಿಕರ. ದೇಹಕ್ಕೆ ಹಿತಕರ. ಈ ಅಧಿಕಾರಿಯು, ತನ್ನ ಅಧಿಕಾರ ಬಲದಿಂದ ಜನರನ್ನು ಹಿಂಸಿಸಿ, ಅವರ ರಕ್ತ ಹೀರಿ ಹಣ ಸಂಪಾದನೆ ಮಾಡುತ್ತಾನೆ. ಬೆವರು ಸುರಿಸುವುದಂತೂ ದೂರವೇ ಉಳಿಯಿತು. ಅಂಥ ಹಣದಿಂದ ಸಿದ್ಧಪಡಿಸಿದ ಈ ಬಿಸಿಯೂಟದ ಮೇಲೆ ಬಡವರ ರಕ್ತದ ಕಲೆಗಳು ನನಗೆ ಕಾಣುತ್ತಿವೆ” ಎಂದರು ಗುರು.
“ಬಡದೇಹದಿಂದ ದೇವರನ್ನು ಒಲಿಸಲು ಸಾಧ್ಯವಿಲ್ಲ “
ಗುರುನಾನಕರು ಸನ್ಯಾಸಿನಿಯ ಉಡುಪು ಧರಿಸಿರಲಿಲ್ಲ. ಗೃಹಸ್ಥನ ಉಡುಪನ್ನೇ ಧರಿಸುತ್ತಿದ್ದರು. ಒಂದುಸಲ ಒಬ್ಬ ಮುಸ್ಲಿಂ ಗುರು “ಒಬ್ಬ ಮನುಷ್ಯ ಪ್ರಾಂಚಿಕನಂತಿರಬೇಕು ಅಥವಾ ಸಂತನಂತಿರಬೇಕು. ಎರಡೂ ಒಮ್ಮೆಲೆ ಆಗಬಯಸುವವನು,ಎರಡು ದೋಣಿಗಳಲ್ಲಿ ಒಂದೊಂದು ಕಾಲಿಟ್ಟು ನದಿಯನ್ನು ದಾಟುವವನಂತೆ ದಡ ಕಾಣದೆ ಮುಳುಗಿಹೋಗುತ್ತಾನೆ.” ಎಂದ ವ್ಯಂಗವಾಗಿ ಹೇಳೀದ. ಅದಕ್ಕೆ ನಾನಕರು “ಎರಡೂ ದೋಣಿಗಳ ಉಪಯೋಗವೇಕೆ ಮಾಡಬಾರದು? ಸಾಮಾನುಗಳನ್ನು ಒಂದು ದೋಣಿಯಲ್ಲಿ, ಆತ್ಮವನ್ನು ಮತ್ತೊಂದು ದೋಣಿಯಲ್ಲಿರಿಸಿ ನದಿ ದಾಟುವ ಜಾಣನಿಗೆ ದುರಂತದ ಭಯವಿರುವುದಿಲ್ಲ” ಎಂದು ಶಾಂತವಾಗಿಯೇ ಉತ್ತರಿಸಿದರು. ಹೀಗೆ ಅವರ ಚರ್ಚೆ ನಡೆಯುತ್ತಿದ್ದಗ ಆ ಮುಸ್ಲಿಂ ಗುರುವಿನ ಭಕ್ತನೊಬ್ಬನುಅವನಿಗೆ ಆಹಾರ ತಂದ. ಆದರೆ ಆ ಗುರು ಉಪವಾಸ ಮಾಡುತ್ತಿದ್ದ: ಆದ್ದರಿಂದ ಆ ಗುರು ಊಟವಾಗಿದೆಯೆಂದು ಹೇಳಿ ಕಳೂಹಿಸಿದ. ಆಗ ಗುರುನಾನಕರು “ಜೀವನದ ಅವಶ್ಯಕತೆಗಳನ್ನು ನಿರಾಕರಿಸುವುದು ಪಾಪ. ಅಗತ್ಯವಿಲ್ಲದ ಸುಖವನ್ನು ನಾವು ಬಯಸಬಾರದು ನಿಜ. ಆದರೆ ತಾವಾಗಿ ಬಂದಾಗ ದೇವರ ಪ್ರಸಾದವೆಂದು ಅವನ್ನಕೃತಜ್ಞತಾಭಾವದಿಂದ ಸ್ವೀಕರಿಸಬೇಕು. ಅನಾರೋಗ್ಯಕರವಾದ ಬಡದೇಹದಿಂದ ಪರಮಾತ್ಮನನ್ನು ಒಲಿಸುವುದು ಸಾಧ್ಯವಿಲ್ಲ” ಎಂದು ವಿವರಿಸಿದರು.
‘ಕೂಡಿಡಬೇಡ’
ಒಮ್ಮೆ ಗುರುನಾನಕರು ಮರ್ದಾನನ ಜೊತೆಗೆ ಕಾಡಿನಲ್ಲಿ ಹೋಗುತ್ತಿದ್ದಾಗ ಮರ್ದಾನನಿಗೆ ಹಸಿವೆಯಾಯಿತು. ಆಗ ನಾನಕರು ಒಂದು ಬೋರೆಯ ಗಿಡವನ್ನು ತೋರಿಸಿ, ಅದರ ಹಣ್ಣುಗಳನ್ನು ಹೊಟ್ಟೆ ತುಂಬಾ ತಿಂದುಬಾ. ಆದರೆ ಒಂದು ಹಣ್ಣನ್ನೂ ಜೊತೆಗೆ ತರಬೇಡ” ಎಂದು ಹೇಳೀ ಕಳುಹಿಸಿದ. ಮರ್ದಾನನು, ಗುರುವಿನ ಮಾತನ್ನು ಮೀರಿ, ಹೊಟೆಯ ತುಂಬ ಹಣ್ಣುಗಳನ್ನು ತಿಂದುದಲ್ಲದೆ, ಕೆಲವನ್ನುಜೇಬಿನಲ್ಲಿ ಮುಚ್ಚಿಟ್ಟುಕೊಂಡು ಬಂದ. ಮರುದಿನ ಮುಂಜಾನೆ ನಾನಕರಿಗೆ ತಿಳಿಯದೆ ಅವನ್ನು ತಿಂದ. ಅವನಿಗೆ ಹೊಟ್ಟೆ ಶೂಲೆ ಆರಂಭವಾಯಿತು. ನಾನಕರು ಅವನಿಗೆ “ಮಗು, ಮನುಷ್ಯನು ಕಷ್ಟಕೀಡಾಗುವುದು ಹೀಗೆಯೆ. ಅವನು ದೇವರ ಮೇಲೆ ಭರವಸೆಯಿಟ್ಟು,ಸಧ್ಯಕ್ಕೆ ಅವಶ್ಯುಕವಾದಷ್ಟನ್ನು ಮಾತ್ರ ಬಯಸುವುದಿಲ್ಲ. ನಾಳೆಗಾಗಿಯೂ ಕೂಡಿಡುತ್ತಾನೆ. ಹಾಗೆ ಸಂಗ್ರಹಿಸಿದ್ದು ದುರಾಲೋಚನೆಯನ್ನು ಹುಟ್ಟಿಸುತ್ತದೆ. ಕಳವು,ದರೋಡೆ, ಆರಂಭವಾಗಿ ಸಮಾಜದ ಶಾಂತಿ ಕೆಟ್ಟು ಹೋಗುತ್ತದೆ. ಆದುದರಿಂದ ಸಂಗ್ರಹತರವಲ್ಲ” ಎಂದು ಉಪದೇಶಿಸಿದರು.
ಕುಷ್ಠರೋಗಿಯ ಸೇವೆ
ಗೋಯಿಂದ್ವಾಲ್ ಎಂಬ ಊರಲ್ಲಿ ನಾನಕರು ಕುಷ್ಠರೋಗಿಯೊಬ್ಬನನ್ನು ಕಂಡರು. ಊರಿನವರೆಲ್ಲ ಅವನನ್ನು ಊರ ಹೊರಗೆ ಅಟ್ಟಿದ್ದರು. ಸರಿಯಾಗಿ ಊಟಕ್ಕೆ ಕೂಡುವುದಿರಲಿ, ಅವನ ಹತ್ತಿರವು ಸಹ ಯಾರೂ ಸುಳಿಯುತ್ತಿರಲಿಲ್ಲ. ಅವನ ಸ್ಥಿತಿಯನ್ನು ಕಂಡ ನಾನಕರಿಗೆ ಕರುಣೆಯುಕ್ಕಿ ಅವನ ಆರೈಕೆ ಮಾಡುತ್ತ ಕೆಲವು ದಿನ ಅಲ್ಲಿಯೇ ಉಳಿದರು. ಸ್ವಲ್ಪವೂ ಅಸಹ್ಯಪಟ್ಟುಕೊಳ್ಳದೇ ಅವನ್ನು ಉಪಚರಿಸಿದರು. ಒಂದು ದಿನ ಕುಷ್ಠರೋಗಿಯೂ ನಾನಕರಿಗೆ ಗುರುವೆ, ಮನುಷ್ಯನನ್ನು ಇಂತ ರೋಗಗಳು ಏಕೆ ಕಾಡುತ್ತವೆ? ಎಂದು ಕೇಳಿದ. ನಾನಕರು “ಪರಮಾತ್ಮನನ್ನು ಮುರೆತುದಕ್ಕಾಗಿ” ಎಂದು ಉತ್ತರಿಸಿ, ತಮ್ಮ ಮಾತನ್ನು ವಿವರಿಸಿದರು: “ಮಗು, ನಾವು ನಿಜವಾಗಿಯೂ ಬಳಲುತ್ತಿರುವುದು ದೇಹಕ್ಕಂಟಿದ ಬೇನೆಯಿಂದಲ್ಲ. ಆತ್ಮಕ್ಕಂಟಿದ ಬೇನೆಯಿಂದ. ದೇಹದ ಬೇನೆಯನ್ನು ವೈದ್ಯರು ಗುಣಪಡಿಸಬಹುದು. ಆದರೆ ಆತ್ಮದ ಬೇನೆಯನ್ನು ಪರಿಹರಿಸಲು ಪರಮಾತ್ಮನೇಬೇಕು. ಆತ್ಮ ಆರೋಗ್ಯವಾಗಿದ್ದರೆ ಮನುಷ್ಯ ದೇಹದ ಅನಾರೋಗ್ಯಕ್ಕೆ ಚಿಂತಿಸಬೇಕಾಗಿಲ್ಲ.” ರೋಗಿ ನಾನಕನ ಶಿಷ್ಯನಾದ.
ಬಾಬರನ ಸೆರೆಯಾಳು
ಎರಡನೆಯ ಸಲ ನಾನಕರು ಸಯ್ಯದಪುರಕ್ಕೆ ಬಂದಾಗ, ಅದನ್ನು ಮೊಗಲ್ ಅರಸ ಬಾಬರನ ಸೈನಿಕರು ಮುತ್ತಿದರು. ಅವರು ಅನೇಕರನ್ನು ಕೊಂದು, ಸಂಪತ್ತನ್ನು ಲೂಟಿ ಮಾಡಿ, ಹಲವಾರು ಜನರನ್ನು ಸೆರೆಹಿಡಿದರು. ಆ ಸೆರೆಯಾಳುಗಳಲ್ಲಿ ನಾನಕರು ಒಬ್ಬರು.
ಸೈನಿಕರು ನಾನಕರ ತಲೆಯ ಮೇಲೆ ಭಾರವಾದ ಕಲ್ಲು ಹೊರಿಸಿದರು. ಅವರು ಸ್ವಲ್ಪವೂ ಗೊಣಗಲಿಲ್ಲ. ಸೈನಿಕರನ್ನು ಬಯ್ಯಲಿಲ್ಲ. ಎಲ್ಲವೂ ಪರಮಾತ್ಮನ ಇಚ್ಛೆ ಎಂದು ಭಾವಿಸಿದರು. ಅವನ ಬಗ್ಗೆ ಗೀತೆಗಳನ್ನು ಭಕ್ತಪೂರ್ವಕವಾಗಿ ಹಾಡುತ್ತ, ಒಮ್ಮೊಮ್ಮೆ ಕುಣಿಯುತ್ತ ಕೆಲಸದಲ್ಲಿ ನಿರತರಾದರು.
ಸೈನಿಕರು ಬೆರಗಾದರು. ಉಳಿದವರೆಲ್ಲ ಅಳುತ್ತ, ಬೇಸರಿಸುತ್ತ ಗೊಣಗುತ್ತ ಇರುವಾಗ ಹಾಡುತ್ತ ಕುಣಿಯುತ್ತ ದುಡಿಯುವ ಈತ ಯಾರು ?
ಬಾಬರನಿಗೆ ಈ ವಿಚಿತ್ರ ಸೆರೆಯಾಳಿನ ಸುದ್ದಿ ಮುಟ್ಟಿತು. ನಾನಕರನ್ನು ಕರೆಸಿದ. ಅವನ ಮುಖದಲ್ಲಿ ಲಾಸ್ಯವಾಡುತ್ತಿದ್ದ ದೈವಿ ತೇಜಸ್ಸನ್ನು ಕಂಡ ಬಾಬರನಿಗೆ ಈತ ಅಸಾಮಾನ್ಯ ವ್ಯಕ್ತಿ. ಪೂಜ್ಯನಾದವನು ಎಂದು ಅರಿವಾಯಿತು. ಅವರನ್ನು ಸೆರೆ ಹಿಡಿದು ದುಡಿಸಿದುದಕ್ಕಾಗಿ ಕ್ಷಮೆ ಬೇಡಿದ. ಅನಂತರ ಗುರುವೆ, ಪಠಾಣರ ದಬ್ಬಾಳಿಕೆಯಿಂದ ಭಾರತೀಯರನ್ನು ರಕ್ಷಿಸಲು ನಾನು ಬಂದಿದ್ದೇನೆ. ನನಗೆ ಆಶಿರ್ವದಿಸಬೇಕು” ಎಂದು ಬೇಡಿಕೊಂಡ. ಗುರುವು ಹೇಳಿದರು:” ಅದೇನೋ ನಿಜ. ಆದರೆ ನಿನ್ನ ಮುಂದೆ ಪ್ರಜೆಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾದರೆ, ಪಠಾಣರ ಹಾದಿಯನ್ನೇ ಹಿಡಿಯಬೇಕಾಗುತ್ತದೆ. ಸಂಪತ್ತಿನ ದಾಹ, ಅಧಿಕಾರ ಲಾಲಸೆ, ಅನೇಕರನ್ನು ಹಾಳೂ ಮಾಡಿದೆ. ಪಾಪಮಾಡದೆ ಅವು ದೊರೆಯುವುದಿಲ್ಲ. ಆದರೆ ಅವು ಯಾರ ಜೊತೆಯಲ್ಲಿಯೂ ಬರುವುದಿಲ್ಲ. ಒಳ್ಳೆಯತನವನ್ನು ಕಳೆದುಕೊಂಡವನನ್ನು ದೇವರೇ ನಾಶಮಾಡುತ್ತಾನೆ”. ಬಾಬರನು ತಾನು ಬಡವರನ್ನೂ ದೀನ ದಲಿತರನ್ನೂ ಪೀಡಿಸುವುದಿಲ್ಲವೆಂಬ ವಚನ ಕೊಟ್ಟು, “ತಮಗೆ ಏನಾದರೂ ಅರ್ಪಿಸಬೇಕೆಂಬ ಬಯಕೆ ನನಗುಂಟಾಗಿದೆ. ತಾವು ಏನನ್ನಾದರೂ ಕೇಳಬೇಕು”: ಎಂದು ಪ್ರಾರ್ಥಿಸಿದ. ಆಗ ಗುರು ನಾನಕರು ಹೇಳಿದರು” ಬೇಡುವುದು ಮೂರ್ಖತನ. ಆದರು ಬಾಬರನು ಮತ್ತೆ ವಿನಪೂರ್ವಕ ಒತ್ತಾಯ ಪಡಿಸಿದಾಗ ಎಲ್ಲ ಕೈದಿಗಳನ್ನೂ ಬಿಡುಗಡೆ ಮಾಡುವಂತೆ ತಿಳಿಸಿ ಅಲ್ಲಿಂದ ಹೊರಟು ಹೋದರು.
ತಪ್ಪು ಒಬ್ಬನದು : ಶಿಕ್ಷೆ ಹಲವರಿಗೆ
ಬಾಬರನನ್ನು ಕಂಡ ಮೇಲೆ, ಗುರುನಾನಕರು ಮರ್ದಾನನೊಡನೆ ಸಯ್ಯದಪುರಕ್ಕೆ ಬಂದರು. ಅಲ್ಲಿ ಬಾಬರನ ಸೈನಿಕರಿಂದ ಗಾಯಗೊಂಡ ಅನೇಕರು ನರಳುತ್ತಿದ್ದರು. ಅವರನ್ನು ಕಂಡು ಮರ್ಧಾನನು “ಗುರುವೇ ಒಬ್ಬಿಬ್ಬರು ತಪ್ಪಿಗಾಗಿ, ಅನೇಕ ಜನ ನಿರಾಪರಾಧಿಗಳಿಗೇಕೆ ಶಿಕ್ಷೆ ? ಎಂದು ಪ್ರಶ್ನಿಸಿದ. ಗುರುನಾನಕರು ಅದಕ್ಕೆ ಯಾವ ಉತ್ತರವನ್ನೂ ಕೊಡಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮರ್ದಾನನಿಗೆ ನಿದ್ರೆ ಬಂದಿತು. ಸುಖವಾಗಿ ನಿದ್ರಿಸುತ್ತಿರುವಾಗ, ಇರುವೆಯೊಂದು ಅವನನ್ನು ಕಚ್ಚಿತು. ನಿದ್ರೆಗೆ ಅಡ್ಡಿಯುಂಟಾಯಿತು ಎಂದು ಇರುವೆಯ ಮೇಲೆ ಸಿಟ್ಟು ಬಂದು, ಅಲ್ಲಿದ್ದ ಎಲ್ಲ ಇರುವೆಗಳನ್ನೂ ತಿಕ್ಕಿ ಕೊಂದು ಹಾಕಿದ. ನಾನಕರು “ಮರ್ದಾನ, ಈಗ ನಿನಗೆ ತಿಳಿಯತೆ? ಒಬ್ಬನ ತಪ್ಪಿಗೆ ಅನೇಕ ನಿರಾಪರಾಧಿಗಳು ಹೇಗೆ ಶಿಕ್ಷೆಗೆ ಒಳಗಾಗುತ್ತಾರೆಂಬುವುದು ?” ಎಂದು ಪ್ರಶ್ನಿಸಿದರು.
ಗುರುನಾನಕರು ಲೋಕಸಂಚಾರದಲ್ಲಿದ್ದಾಗ ಬಗೆಬಗೆಯ ವೇಷ ಭೂಷಣಗಳನ್ನು ಹಾಕಿಕೊಳ್ಳುತ್ತಿದ್ದರು. ಒಮ್ಮೆ ಗೃಹಸ್ಥನಂತೆ ವೇಷ ಧರಿಸಿದರೆ, ಒಮ್ಮೆ ಹಿಂದೂ ಸಾಧು ಸಂತರಂತೆ ಮತ್ತೊಮ್ಮೆ ಮುಸ್ಲಿಂ ಫಕೀರನಂತೆ, ಮಗದೊಮ್ಮೆ ಹಿಂದು ಮುಸ್ಲಿಂ ಇಬ್ಬರಂತೆ ವೇಷ ಧರಿಸುತ್ತಿದ್ದರು. ಬಾಹ್ಯ ವೇಷಭೂಷಣಗಳಿಗೆ ಮಹತ್ವವಿಲ್ಲವೆಂಬುವುದನ್ನು ಸಾರುವುದೇ ಅವರು ಹಾಗೆ ಮಾಡುವುದಕ್ಕೆ ಕಾರಣ. ಒಮ್ಮೆ ಮುಸ್ಲಿಂ ಗುರುವೊಬ್ಬನು “ನೀನು ಗೃಹಸ್ಥರಂತೇಕೆ ಬಟ್ಟೇ ಧರಿಸಿರುವಿ ? ಇದು ಫಕೀರನಿಗೆ ಸರಿಯಲ್ಲ, ಮತ್ತು ನಿನ್ನ ತಲೆಯನ್ನೇಕೆ ಬೋಳಿಸಿಕೊಂಡಿಲ್ಲ?” ಎಂದು ನಾನಕರನ್ನು ಪ್ರಶ್ನಿಸಿದನು. ಅದಕ್ಕೆ ನಾವು ನಿಜವಾಗಿಯೂ ಬೋಳಿಸಿಕೊಳ್ಳಬೇಕಾದುದು ಬುದ್ಧಿಯನ್ನು, ತಲೆಯನ್ನಲ್ಲ. ಪ್ರಪಂಚದ ಸುಖ-ಸಂತೋಷಗಳನ್ನೂ , ಸ್ವಾರ್ಥವನ್ನು ಬಿಟ್ಟು, ಪರಮಾತ್ಮನಿಗೆ ತನ್ನನ್ನು ಅರ್ಪಿಸಿಕೊಂಡವನು ಎಂತಹ ಬಟ್ಟೆ ಧರಿಸಿದರೇನು?” ಎಂದು ಉತ್ತರಿಸಿದರು. ಮತ್ತೊಂದು ಸಲ ಚತರ್ದಾಸನೆಂಬ ಪಂಡಿತನು “ನೀನೆಂತಹಸಂತ ? ನಿನ್ನ ಕೊರಳಿನಲ್ಲಿ ತುಳಸಿ ಮಾಲೆಯಿಲ್ಲ.ಕೈಯಲ್ಲಿ ಜಪಮಣಯಿಲ್ಲ,ಅಥವ ಸಾಲಿಗ್ರಾಮವಾದರೂ ಇಲ್ಲ. ಎಂದ ಮೇಲೆ ನಿನಗೆ ಮುಕ್ತಿ ಹೇಗೆ ?” ಎಂದು ಕೇಳಿದ. ನಾನಕರು ಅವುಗಳಿಂದ ಪ್ರಯೋಜನವೇನು? ಅವಕ್ಕೇ ಮಹತ್ವ ಕೊಡುವವನ ಜೀವನ, ಬಂಜರು ಭೂಮಿಗೆ ನೀರುಣಿಸುವವನ ಜೀವನದಂತೆ ವ್ಯರ್ಥ. ಪರಮಾತ್ಮನೊಬ್ಬನೇ ಪೂಜೆಗೆ ಯೋಗ್ಯ, ನಿರ್ಮಲ ಚಾರಿತ್ರವೇ ಕೊರಳ ತುಲಸೀಮಾಲೆ. ದೈವಭಕ್ತಿಯೆಂಬ ದೋಣಿಯನ್ನೇರಿ, ಪರಮಾತ್ಮನ ಕೃಪೆಗಾಗಿ ಮನಃಪೂರ್ವಕವಾಗಿ ಪ್ರಾರ್ಥಿಸುವವನು ಯಾವ ಆತಂಕವಿಲ್ಲದೆ ದಡ ಸೇರುತ್ತಾನೆ ಎಂದು ಉತ್ತರ ಕೊಟ್ಟರು.
ಭಾರತ ಸಂಚಾರ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಪಶ್ಚಿಮ ಸಮುದ್ರದಿಂದ ಪೂರ್ವ ಸಮುದ್ರದವರೆಗೆ, ಭಾರತದ ಹಲವು ಹಿಂದೂ, ಮುಸ್ಲಿಂ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿರುವ ಧರ್ಮಾಧಿಕಾರಿಗಳೊಡನೆ, ಯೋಗಿಗಳೊಡನೆ, ಸಿದ್ಧರೊಡನೆ, ಪಂಡಿತರೊಡನೆ, ಸನ್ಯಾಸಿಗಳೊಡನೆ, ಮೌಲ್ವಿಗಳೊಡನೆ ನಾನಾ ವಿಷಯಗಳನ್ನು ಕುರಿತು ನಾನಕರು ಚರ್ಚಿಸಿದರು. ದಕ್ಷಿಣದಲ್ಲಿ ಸಿಂಹಳದವರೆಗೆ ಹೋಗಿ, ಅಲ್ಲಿನ ದೊರೆಯಿಂದ ಮನ್ನಣೆ ಪಡೆದರು. ಕರ್ನಾಟಕದಲ್ಲಿ ಬೀದರ ಮತ್ತು ಧಾರವಾಡಗಳಿಗೆ ಗುರು ನಾನಕರು ಭೇಟಿ ಕೊಟ್ಟಿದ್ದರೆಂದು ಕೆಲವು ಗ್ರಂಥಗಳು ತಿಳಿಸುತ್ತವೆ. ಬೀದರಿನಲ್ಲಿ ಈಗಲೂ ಸಿಖ್ಖರ ಒಂದು ಪುಣ್ಯಕ್ಷೇತ್ರವಿದೆ. ಇಲ್ಲಿ ಒಂದು ನೀರಿನ ತೊರೆಗೆ “ಗುರುನಾನಕ್ ಝರಾ” ಎಂದು ಹೆಸರು. ಬೀದರಿನಲ್ಲಿ ನೀರಿನ ಕೊರತೆ ಇತ್ತಂತೆ. ನಾನಕರ ಮನಸ್ಸು ಕರಗಿತು. ಅವರು ದೇವರನ್ನು ಪ್ರಾರ್ಥಿಸಿ ಒಂದು ಗುಡ್ಡದ ಬುಡದಲ್ಲಿದ್ದ ಕಲ್ಲನ್ನು ತಮ್ಮ ಕಾಲಿನಿಂದ ಸರಿಸಿದರು, ಕೂಡಲೇ ನಿರ್ಮಲವಾದ ನೀರಿನ ಧಾರೆ ಚಿಮ್ಮಿತು ಎಂದು ಈ ತೊರೆಯ ವಿಷಯ ಕಥೆ ಇದೆ.
ಮಕ್ಕಾ ಪ್ರವಾಸ
ಮುಸ್ಲಿಂ ಪವಿತ್ರಸ್ಥಳಗಳೆಂದು ಪ್ರಸಿದ್ಧವಾಗಿರುವ ಮಕ್ಕಾ, ಮದೀನಾ, ಭಾಗದಾದಗಳನ್ನು ಕಂಡು ಬರಬೇಕೆಂದು ನಾನಕರ ಬಯಕೆ. ಆದುದರಿಂದ ಮರ್ದಾನನ್ನು ಕರೆದುಕೊಂಡು ಮುಸ್ಲಿಂ ಯಾತ್ರಿಕರ ಜೊತೆಗೆ ಹೊರಟರು. ಆಗ ಅವರು ತೊಟ್ಟಿದ್ದು ಮುಸ್ಲಿಂ ಯಾತ್ರಿಕನ ಉಡುಪು, ಸ್ನಾನ ಮಾಡುವುದಕ್ಕಾಗಿ ಒಂದು ಕೈಯಲ್ಲಿ ಮಣ್ಣಿನಪಾತ್ರೆ, ಕಂಕುಳದಲ್ಲಿ ಕುರಾನ್ ಗ್ರಂಥ ಮತ್ತು ಪ್ರಾರ್ಥನಾಚಾಪೆಯನ್ನು ಹಿಡಿದ ಅವರು, ಹಾದಿಯಲ್ಲಿ ಮುಸಲ್ಮಾನನಂತೆಯೇ ಪ್ರಾರ್ಥನೆ ಸಲ್ಲಿಸುತ್ತ ಹೊರಟರು.
ನಾನಕರ ಮಕ್ಕಾ ಪ್ರವಾಸದ ವಿಷಯವಾಗಿ ಒಂದು ಕುತೂಹಲಕರವಾದ ಕಥೆ ಇದೆ.
ಬಹು ದಿನಗಳ ಪ್ರವಾಸದಿಂದ ಬಹಳ ಬಳಲಿದ ನಾನಕರು ಮಕ್ಕಾದಲ್ಲಿ, ಒಮ್ಮೆ ಗಾಢ ನಿದ್ರೆಯಲ್ಲಿದ್ದಾಗ ಅವರ ಕಾಲುಗಳು ಪವಿತ್ರ “ಕಾಬಾ”ದ ಕಡೆಗೆ ಇದ್ದವು. ಹಾಗೆ ಮಲಗುವುದನ್ನು ಮುಸ್ಲಿಮರು ದೈವದ್ರೋಹವೆಂದು ತಿಳಿಯುತ್ತಾರೆ. ಆದರೆ ನಾನಕರಿಗೆ ಅದು ತಿಳಿದಿರರಲಿಲ್ಲ. ಒಬ್ಬಾತ ಸಿಟ್ಟಿನಿಂದ,” ಎಲೇ ಧರ್ಮದ್ರೋಹಿಯೆ, ನೀನು ಕಾಲು ಮಾಡಿರುವ ಕಡೆ ಅಲ್ಲಾನ ಪವಿತ್ರ ಮಂದಿರವಿರುವುದು ತಿಳಿಯದೆ?” ಎಂದು ಗದರಿಸಿದ. ಗುರುನಾನಕರು “ಯಾವ ದಿಕ್ಕಿನಲ್ಲಿ ದೇವರಿಲ್ಲವೋ ಆ ದಿಕ್ಕಿಗೆ ನನ್ನ ಕಾಲುಗಳನ್ನು ಹೊರಳಿಸು ” ಎಂದರು. ಅವರನ್ನು ಆಕ್ಷೇಪಿಸಿದವನಿಗೆ ಕೋಪ ಇನ್ನೂ ಹೆಚ್ಚಾಯಿತು. ಅವನು ನಾನಕರ ಕಾಲುಗಳನ್ನು ಬೇರೆ ದಿಕ್ಕಿಗೆ ತಿರುಗಿಸಿದ. ಅಲ್ಲಿ ಅವನಿಗೆ ಅಲ್ಲಾನು ಕಾಣಿಸಿದನಂತೆ. ಯಾವ ಯಾವ ದಿಕ್ಕಿಗೆ ನಾನಕರ ಕಾಲುಗಳನ್ನು ತಿರುಗಿಸಿದರೂ ಅಲ್ಲೆಲ್ಲ ದೇವರ ದರ್ಶನವೇ ಅವನಿಗಾಯಿತಂತೆ. (ಕಾಬಾ ಕಾಣಿಸಿತು ಎಂದೂ ಹೇಳುತ್ತಾರೆ) ಆಗ ಅವನು “ಇಲ್ಲೊಬ್ಬ ಪವಾಡ ಪುರುಷ ಬಂದಿದ್ದಾನೆ ಎಂದು ಬೆರಗಾದ.
ಮಕ್ಕಾದಿಂದ ಗುರು ನಾನಕರು ಮದೀನಾಕ್ಕೆ ಹೋಗಿ, ಅಲ್ಲಿ, ಬಾಗದಾದಿಗೆ ಬಂದರು. ನಾನಕರು ಬಾಗದಾದಿಗೆ ಕೊಟ್ಟ ಭೇಟಿಯ ನೆನಪಿಗಾಗಿ ನಿರ್ಮಿಸಿದ ಸ್ಮಾರಕವೊಂದು ಈಗಲೂ ಸಹ ಆ ನಗರದಲ್ಲಿದೆ.
ಗುರುನಾನಕರ ಕಡೆಯ ದಿನಗಳು
ಲೋಕಸಂಚಾರವನ್ನು ಮುಗಿಸಿ ಗುರುನಾನಕರು ಭಾರತಕ್ಕೆ ಹಿಂದಿರುಗಿದರು. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಕರ್ತಾರಪುರದಲ್ಲಿಯೇ ಕಳೆಯಬಯಸಿದರು. ಆಗ ಅವರಿಗೆ 57 ವರ್ಷ. ಅಲ್ಲಿ ಅವರದೇ ಆದ ಹೊಲವೂ ಇದ್ದಿತು. ಅವರ ಹೆಂಡತಿ, ಮಕ್ಕಳು, ತಂದೆ, ತಾಯಿ ಎಲ್ಲರೂ ಅಲ್ಲಿಯೇ ನೆಲೆಸಿದ್ದರು. ನಾನಕರ ದರ್ಶನ ಪಡೆಯಲು ಬಂದವರಲ್ಲಿ ಅನೇಕರು ಆ ಊರಿನಲ್ಲೇ ನಿಂತರು. ಪ್ರತಿ ಮುಂಜಾನೆ ಮತ್ತು ಸಂಜೆ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. ಗುರುಗಲ ದರ್ಶನಪಡೆದು, ಅವರ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಪವಿತ್ರರಾಗಬೇಕೆಂಬ ಬಯಕೆಯಿಂದ, ಅನೇಕ ಜನರು ಕರ್ತಾರಪುರಕ್ಕೆ ಬರುತ್ತಿದ್ದರು. ಅವರೆಲ್ಲರ ಊಟ, ನಾನಕರ ಮನೆಯಲ್ಲಿಯೇ. ಬಡವ, ಬಲ್ಲಿದ ಎನ್ನದೆ, ಜಾತಿ ಮತ, ಪಂಥಗಳು ಎಣಿಸದೇ, ಎಲ್ಲರಿಗೂ ಒಟ್ಟಿಗೆ ಊಟ. ಆಗಾಗ ನಾನಕರು ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದರು. ಅವರ ಉಪದೇಶ ಕೇಳಲು ನೂರಾರು ಮಂದಿ ಸೇರುತ್ತಿದ್ದರು.
ಹೀಗೆಯೇ ದಿನಗಳುರುಳಿದವು. ತಮ್ಮ ಅಂತ್ಯ ಸಮೀಪಿಸಿದ್ದನ್ನು ತಿಳಿದ ಗುರು ನಾನಕರು, ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬಲ್ಲ ಸಮರ್ಥರೊಬ್ಬರನ್ನು ಆರಿಸಿದರು. ಒಂದು ದಿನ ಭಕ್ತರೆಲ್ಲರೂ ಸೇರಿ ಭಕ್ತಿ ಗೀಗೆಯನ್ನು ಮಧುರ ಕಂಠದಿಂದ ಹಾಡುತ್ತಿರಲು, ಅದನ್ನೇ ಕೇಳುತ್ತಲೇ ಗುರುನಾನಕರು ಸಮಾಧಿಸ್ಥರಾಗಿ ಹೋದರು. ಅಂದು 1539 ನೇಯ ವರ್ಷದ ಸೆಪ್ಟೆಂಬರ 22.
ಗುರುವಿನ ಅಂತ್ಯಕ್ರಿಯೆಯನ್ನು ಕುರಿತು ಹಿಂದೂ ಪದ್ಧತಿಯಂತೆ ನಡೆಯಬೇಕೆ? ಮುಸ್ಲಿಂ ಪದ್ಧತಿಯಂತೆ ಎಂಬ ವಾದ ಪ್ರಾರಂಭವಾಯಿತು. ಹಿರಿಯರೆಲ್ಲರೂ ಸೇರಿ, ಚರ್ಚೆ ಮಾಡಿದರು. ಗುರುನಾನಕರ ದೇಹದ ಮೇಲೆ ಹಿಂದೂಗಳೂ ಮುಸ್ಲಿಮರೂ ಹೂಗಳನ್ನಿಡಬೇಕು, ಯಾರ ಹೂಗಳು ಮೊದಲು ಬಾಡುತ್ತವೆಯೋ ಅವರು ಮತ್ತೊಬ್ಬರಿಗೆ ಗುರುವಿನ ದೇಹವನ್ನು ಬಿಟ್ಟುಕೊಡಬೇಕು ಎಂದು ತೀರ್ಮಾನಿಸಿದರು. ಎರಡು ಪಂಗಡಗಳವರೂ ಗುರುವಿನ ದೇಹದ ಮೇಲೆ ಹೂಗಳನ್ನು ಇರಿಸಿದರು.
ಮುಂಜಾನೆ ನೋಡಿದಾಗ ಯಾರ ಹೂಗಳೂ ಬಾಡಿರಲಿಲ್ಲ.
ಆಶ್ಚರ್ಯಚಕಿತರಾದ ಅವರು, ಬಟ್ಟೆಯನ್ನು ತೆಗೆದಾಗ, ಗುರುವಿನ ದೇಹವೂ ಮಾಯವಾಗಿ ಕೆಲವು ಹೂಗಳು ಮಾತ್ರ ಕಂಡವು.
ಆ ಬಟ್ಟೆಯನ್ನೇ ಹರಿದು ಸರಿಯಾದ ಎರಡು ಭಾಗ ಮಾಡಿ, ಒಂದು ಭಾಗವನ್ನು ಹಿಂದೂಗಳು ಮತ್ತೊಂದು ಭಾಗವನ್ನು ಮುಸ್ಲಿಮರು ಒಯ್ದು ತಮ್ಮ ಪದ್ಧತಿಯಂತೆ ಅಂತ್ಯಕ್ರಿಯೆ ನಡೆಸಿದರು.
“ದೇವರು ಒಬ್ಬನೇ, ಮಾನವ ಕುಲ ಒಂದೇ”
ಗುರುನಾನಕರ ಬೋಧನೆಗೆ “ಸಿಖ್ ಮತ” ಎಂದೇ ಹೆಸರು ಬಂದಿತು. (‘ಸಿಖ್’ ಎಂದರೆ ಶಿಷ್ಯ.) ಭಾರತದ ಒಂದು ಪ್ರಮುಖ ಮತದ ಸ್ಥಾಪಕರು ಎನಿಸಿದರು ಗುರು ನಾನಕರು. ಭರತಖಂಡದಲ್ಲಷ್ಟೇ ಅಲ್ಲ, ಭಾರತದ ಹೊರಗೂ ಹೋಗಿ ತಾವು ಕಂಡ ಸತ್ಯವನ್ನು ಉಪದೇಶಿಸಿದವರಲ್ಲಿ ಗುರುನಾನಕರು ಪ್ರಮುಖರು.
ಅವರು ಹೇಳಿದರು: “ದೇವರು ಒಬ್ಬನೇ, ಮಾನವ ಕುಲ ಒಂದೇ. ದೇವರನ್ನು ಮೆಚ್ಚಿಸಲು ಪ್ರಪಂಚವನ್ನು ಬಿಟ್ಟು ಸನ್ಯಾಸಿಯೇ ಆಗಬೇಕೆಂದಿಲ್ಲ. ಕೆಟ್ಟ ಕೆಲಸ ಮಾಡದಿರುವುದರಿಂದ, ಪ್ರಾಮಾಣಿಕ ಜೀವನದಿಂದ ಮಾನವನು ದೇವರ ಪ್ರೀತಿಗೆ ಪಾತ್ರನಾಗುತ್ತಾನೆ. ಮನುಷ್ಯ ಮನುಷ್ಯರಲ್ಲಿ ಮೇಲು-ಕೀಳು, ಮುಟ್ಟಬಹುದಾದವರು- ಮುಟ್ಟಬಾರದವರು ಎಂಬ ಭಾವನೆಗಳಿರಕೂಡದು. ಹಿಂದೂಗಳೂ, ಮುಸ್ಲಿಮರು, ಉಳಿದ ಧರ್ಮದವರು ಎಲ್ಲವೂ ಒಬ್ಬ ದೇವನ ಮಕ್ಕಳೆ, ಪರಸ್ಪರರಲ್ಲಿ ಪ್ರೀತಿ, ಸಹೋದರ ಭಾವನೆಗಳು ನೆಲೆಗೊಳ್ಳಬೇಕು. ಬಾಹ್ಯ ವೇಷಭೂಷಣಗಳು, ಚಿಹ್ನೆಗಳು ಮುಖ್ಯವಲ್ಲ. ಅಂಧಶೃದ್ಧೆ, ಮೂಢನಂಬಿಕೆಗಳೂ ತನ್ನನ್ನು ತಾನರಿಯಲು ಅಡ್ಡ ಬರುತ್ತವೆ. ಸಂಗ್ರಹಿಸಿಡುವುದು ಒಳ್ಳೆಯದಲ್ಲ. ಎಲ್ಲಕಿಂತ ಮುಖ್ಯ ನಿರ್ಮಲ ಜೀವನ, ಕರುಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.